ಬಂಗಾಳ ಫಲಿತಾಂಶ: ಯಚೂರಿ ಲೆಕ್ಕಾಚಾರ

Update: 2016-05-07 17:19 GMT

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಅವರಿಗೆ ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾಗ ಅಚ್ಚರಿ ಕಾದಿತ್ತು. ಕೊಲ್ಕತ್ತಾ ಹೊರವಲಯದ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಲು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಸಶಸ್ತ್ರ ಪೊಲೀಸರು ತಮ್ಮ ವಾಹನಕ್ಕೆ ಬೆಂಗಾವಲು ಇರುವುದು ಗಮನಕ್ಕೆ ಬಂತು. (ಕಮ್ಯುನಿಸ್ಟ್ ಪಕ್ಷದ ಮುಖಂಡರು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವುದಿಲ್ಲ. ಏಕೆಂದರೆ ಇದು ಜನವಿರೋಧಿ ಎನ್ನುವುದು ಪಕ್ಷದ ನಿಲುವು). ಯಚೂರಿ ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ರಕ್ಷಣೆ ಸ್ವೀಕರಿಸಿದ್ದು ವಿರಳ. ಹಾಗಾದರೆ ಮಮತಾ ಬ್ಯಾನರ್ಜಿ ತಮ್ಮ ಕಟ್ಟಾ ಎದುರಾಳಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೇ? ಒಂದು ಚಹಾ ಅಂಗಡಿಯಲ್ಲಿ ಯಚೂರಿ ಬೆಂಗಾವಲು ಪೊಲೀಸರನ್ನು ಚಹಾಗೆ ಆಹ್ವಾನಿಸಿ, ಸಶಸ್ತ್ರ ಬೆಂಗಾವಲು ನೀಡಿದ್ದಕ್ಕೆ ಕಾರಣ ಕೇಳಿದರು. ತಕ್ಷಣ ಪೊಲೀಸರಿಂದ ದೊರಕಿದ ಉತ್ತರ, ನಮಗೆ ಆದೇಶ ಬಂದಿರುವುದು ಮಮತಾ ಅವರಿಂದ ಅಲ್ಲ; ನಮ್ಮ ಮೇಲಧಿಕಾರಿಗಳಿಂದ ಎನ್ನುವುದು. ತಕ್ಷಣ ಈ ಹಿರಿಯ ಕಾಮ್ರೇಡ್‌ಗೆ ಒಂದು ಯೋಚನೆ ಹೊಳೆಯಿತು. ಪೊಲೀಸರ ನಡವಳಿಕೆಯಲ್ಲಿ ಆದ ಬದಲಾವಣೆ, ಸರಕಾರದ ಬದಲಾವಣೆಯ ಮನ್ಸೂಚನೆ ಎನ್ನುವುದು ಆಶಾವಾದಿಯಾಗಿರುವ ಅವರ ವಿಶ್ಲೇಷಣೆ. ಆದರೆ ಮಮತಾ ಬ್ಯಾನರ್ಜಿಯವರ ಪಕ್ಷ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಯಚೂರಿ ಆಶಾವಾದ ಫಲಿತಾಂಶದಲ್ಲಿ ಬಿಂಬಿತವಾಗುವುದು ಕಷ್ಟ.

ಪುನರ್ರಚನೆ...ಯಾವಾಗ?

ದಿಲ್ಲಿಯ ಅಧಿಕಾರದ ಕಾರಿಡಾರ್‌ಗಳಲ್ಲಿ ಕೇಂದ್ರ ಸಚಿವ ಸಂಪುಟ ಪುನರ್ರಚನೆ ವಿಚಾರ ಈಗ ಕುತೂಹಲ ಸೃಷ್ಟಿಸುತ್ತಿಲ್ಲ. ಏಕೆಂದರೆ ಹಲವು ಗಡುವುಗಳು ಆಗಿ ಹೋದವು. ಆ ಮಂಗಳಕರ ಅಥವಾ ಅಮಂಗಳಕರ ದಿನದ ಬಗ್ಗೆ ಖಚಿತವಾಗಿ ಗೊತ್ತಿದೆ ಎಂದು ಹೇಳಿಕೊಂಡವರ ಹೇಳಿಕೆಗಳೆಲ್ಲ ಸುಳ್ಳಾಗಿವೆ. ಎಲ್ಲ ಲೆಕ್ಕಾಚಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಸುಳ್ಳಾಗಿಸಿದ್ದಾರೆ. ಅದರೆ ಮೋದಿ ಹಿರಿಯ ಸಚಿವರ ಜತೆ ಭೋಜನಕೂಟ ನಡೆಸಿದಾಗ, ಕೆಲವರು ತಕ್ಷಣಕ್ಕೆ ಸಂಪುಟ ಪುನರ್ರಚನೆ ಸಾಧ್ಯತೆ ಇರುವುದರ ಸೂಚನೆ ಎಂದು ವಿಶ್ಲೇಷಿಸಿದರು. ಮೋದಿಯವರು ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಮತ್ತಿತರರ ಜೊತೆ ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು. ಆದರೆ ಇದಕ್ಕೆ ಕಾರಣ ಏನು ಎನ್ನುವುದು ಯಾರಿಗೂ ತಿಳಿದಿಲ್ಲ. ಆದರೆ ಸಂಪುಟ ಪುನರ್ರಚನೆಯೇ? ಬಹುಶಃ ಆಗಿರಬಹುದು. ಇದೀಗ ಎಲ್ಲರ ದೃಷ್ಟಿ, ಮೋದಿಯವರು ಡಿನ್ನರ್‌ಗೆ ಯಾರನ್ನು ಆಹ್ವಾನಿಸುತ್ತಾರೆ ಎನ್ನುವತ್ತ ನೆಟ್ಟಿದೆ. ರಾಜಧಾನಿಯಲ್ಲಿ ಊಹಾಪೋಹಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲ!

ಸ್ವಾಮಿಯ ರಾಜ್ಯಸಭಾ ದರ್ಶನ
ಹಲವು ವರ್ಷಗಳ ಬಳಿಕ ಸುಬ್ರಮಣಿಯನ್ ಸ್ವಾಮಿ ರಾಜ್ಯಸಭೆಗೆ ವಾಪಸ್ಸಾಗಿದ್ದಾರೆ. ಆಗಮಿಸಿದ ತಕ್ಷಣವೇ ಅಹ್ಮದ್ ಪಟೇಲ್, ಸೋನಿಯಾಗಾಂಧಿ ಹಾಗೂ ಇತರರ ವಿರುದ್ಧ ಆರೋಪ ಮಾಡುವ ಮೂಲಕ ಮೇಲ್ಮನೆಯಲ್ಲಿ ಕಿಚ್ಚು ಹಚ್ಚಿದ್ದಾರೆ. ವಿರೋಧ ಪಕ್ಷಗಳ ಅಣಕವನ್ನು ಕೂಡಾ ಸ್ವಾಮಿ ಖುಷಿಯಿಂದಲೇ ಸ್ವೀಕರಿಸುತ್ತಿದ್ದಾರೆ. ಆದರೆ ಅವರು ಪ್ರಮಾಣ ವಚನ ಸ್ವೀಕರಿಸುವ ಅವಧಿಯಲ್ಲಿ ಅವರ ಸುದೀರ್ಘ ಅನುಪಸ್ಥಿತಿಯಿಂದಾಗಿ ಎಡವಿದ್ದು ಕಂಡುಬಂತು. ಅವರು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕೆಲ ಪದಗಳ ಬಳಕೆಯಲ್ಲಿ ಹಲವು ಬಾರಿ ಎಡವಿದರು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ, ನಿಗದಿತ ಪಠ್ಯದಿಂದ ವಿಮುಖವಾಗಿ ಹೆಚ್ಚುವರಿಯಾಗಿ, ಮೇನ್..ಈಶ್ವರ್ ಕೆ ಸ್ಮರಣ್ ರಖ್ ಕರ್.. ಎಂದು ಹೇಳಿದರು. ಆದರೆ ವಾಸ್ತವವಾಗಿ ನಿಯಮಾವಳಿ ಪ್ರಕಾರ ದೇವರ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸುವವರಿಗೆ ಇರುವ ಪ್ರಮಾಣದ ಪಠ್ಯವೆಂದರೆ, ಈಶ್ವರ್ ಕಿ ಶಪಥ್ ಎನ್ನುವುದು. ಪ್ರಮಾಣವಚನದ ಪಠ್ಯದಲ್ಲಿ ಇರುವುದಕ್ಕಿಂತ ಒಂದು ಹೆಚ್ಚಿನ ಶಬ್ದವನ್ನು ಹೇಳಲು ಅಥವಾ ಬದಲಿಸಿ ಹೇಳಲು ಸದಸ್ಯರಿಗೆ ಅವಕಾಶ ಇರುವುದಿಲ್ಲ. ಆದರೆ ಸ್ವಾಮಿ ಇಂಥ ನಿಯಮಗಳನ್ನು ಅನುಸರಿಸುವ ಬಗ್ಗೆ ನಂಬಿಕೆ ಇರುವವರಲ್ಲ. ಅವರ ರಾಜ್ಯಸಭಾ ಸದಸ್ಯತ್ವದ ಅವಧಿಯಲ್ಲಿ ಅವರು ಅವರಾಗಿಯೇ ಇರುತ್ತಾರೆ ಎಂದು ನಿರೀಕ್ಷಿಸಬಹುದು.

ಗರಿಗೆದರಿದ ಉಪರಾಷ್ಟ್ರಪತಿ
ಹುದ್ದೆ ನಿರೀಕ್ಷೆ

ಸಚಿವೆ ನಜ್ಮಾ ಹೆಪ್ತುಲ್ಲಾ ಅವರಲ್ಲಿ ತಾನು ಹಾಮಿದ್ ಅನ್ಸಾರಿಯವರ ಉತ್ತರಾಧಿಕಾರಿ ಎನ್ನುವ ಭಾವನೆ ದಟ್ಟವಾಗತೊಡಗಿದೆ. ರಾಜ್ಯಸಭೆಗೆ ಹೊಸದಾಗಿ ನಾಮಕರಣಗೊಂಡ ಸದಸ್ಯರನ್ನು ಅಭಿನಂದಿಸಿದ ವಿಧಾನದಲ್ಲೇ ಇದು ನಿಚ್ಚಳವಾಗಿ ಕಾಣುತ್ತಿತ್ತು. ಹೆಪ್ತುಲ್ಲಾ ವೈಯಕ್ತಿಕವಾಗಿ ಆರು ಮಂದಿಗೂ ಕರೆ ಮಾಡಿ ಅಭಿನಂದನೆ ಹೇಳಿದ್ದಾರೆ ಎನ್ನಲಾಗಿದೆ. ಅವರ ಜೊತೆಗಿನ ಸಂಭಾಷಣೆ ವೇಳೆ, ನಾಮಕರಣ ಸದಸ್ಯರಿಗೆ ರಾಜ್ಯಸಭೆಯಲ್ಲಿ ಕೆಲ ಪ್ರಮುಖ ವಿಷಯಗಳನ್ನು ಎತ್ತಲು ಸಮಯದ ಅಭಾವ ಇರುವ ಸಮಸ್ಯೆ ಬಗ್ಗೆ ಉಲ್ಲೇಖಿಸಿದರು. ಇದರ ಜತೆಗೆ, ನಾನು ಸದನದ ಸಭೆಯ ಅಧ್ಯಕ್ಷತೆ ವಹಿಸುವಂತಾದರೆ, ನಾಮಕರಣಗೊಂಡ ಸದಸ್ಯರಿಗೆ ಹಂಚಿಕೆ ಮಾಡಿದ ಸಮಯಾವಕಾಶವನ್ನು ದುಪ್ಪಟ್ಟು ಮಾಡುವುದಾಗಿಯೂ ಭರವಸೆ ನೀಡಿದರು ಎಂದು ಹೇಳಲಾಗಿದೆ. ಕಾಕತಾಳೀಯ ಎಂಬಂತೆ ನಾಮಕರಣಗೊಂಡ ಸದಸ್ಯರಿಗೆ ನೀಡುವ ಸಮಯಾವಕಾಶ ಹಾಗೂ ರಾಜಕೀಯ ಪಕ್ಷಗಳ ಸದಸ್ಯರಿಗೆ ಇರುವ ಸಮಯಾವಕಾಶದಲ್ಲಿ ವ್ಯತ್ಯಾಸವಿದೆ. ತಮ್ಮ ವಿನೂತನ ಯೋಚನೆ, ಉಪರಾಷ್ಟ್ರಪತಿ ಸ್ಥಾನದ ಉಮೇದುವಾರಿಕೆಗೆ ಪೂರಕವಾಗುತ್ತದೆ ಎನ್ನುವುದು ಹೆಪ್ತುಲ್ಲಾ ಅವರ ನಿರೀಕ್ಷೆ. ಆದರೆ ಹೆಪ್ತುಲ್ಲಾ ಆ ಅವಕಾಶ ಪಡೆಯಲು ಇಷ್ಟು ಸಾಕೇ?

ಸಿಕ್ಸರ್ ಸಿದ್ದು ಮಾಸ್ಟರ್ ಗುದ್ದು?

ಪ್ರಧಾನಿ ನರೇಂದ್ರ ಮೋದಿಯವರು ಕ್ರಿಕೆಟಿಗ- ರಾಜಕಾರಣಿ ನವಜೋತ್ ಸಿಂಗ್ ಸಿದ್ದು ಅವರನ್ನು ಸಂಸತ್ತಿನ ಮೇಲ್ಮನೆಗೆ ನಾಮಕರಣ ಮಾಡಿರುವುದು ಬಿಜೆಪಿಯ ಮಿತ್ರಪಕ್ಷವಾದ ಅಕಾಲಿದಳವನ್ನು ಪೇಚಿಗೆ ಸಿಲುಕಿಸಿದೆ. ಸಿದ್ದು ಹಿಂದಿನ ಬಾರಿ ಅಮೃತಸರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಅವಧಿಯಲ್ಲಿ ಅವರು ಏನೂ ಒಳ್ಳೆಯ ಕೆಲಸ ಮಾಡಿಲ್ಲ. ಆದ್ದರಿಂದ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಬಾರದಿತ್ತು ಎಂದು ಪಕ್ಷದ ಹಲವು ಮುಖಂಡರು ಅಭಿಪ್ರಾಯಪಡುತ್ತಾರೆ. ಆದರೆ ಕೆಲವರ ಪ್ರಕಾರ, ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಪಂಚಾಬ್‌ನಲ್ಲಿ ಉಭಯ ಪಕ್ಷಗಳ ನಡುವಿನ ಮೈತ್ರಿಯ ಭವಿಷ್ಯವನ್ನು ಬದಲಿಸುವಲ್ಲಿ ಸಿದ್ದು ಏನನ್ನೂ ಮಾಡಲಾರರು ಎನ್ನುವುದು ಬಿಜೆಪಿಯ ಲೆಕ್ಕಾಚಾರ. ಆದರೆ ಪತ್ನಿಯಂತೆ ಅವರೂ ಆಮ್ ಆದ್ಮಿ ಪಕ್ಷವನ್ನು ಸೇರಿದರೆ, ಪಕ್ಷಕ್ಕೆ ದೊಡ್ಡ ಪ್ರಮಾಣದ ಹಾನಿ ಮಾಡುವ ಸಾಧ್ಯತೆ ಇದೆ ಎನ್ನುವುದು ಬಿಜೆಪಿಯ ಲೆಕ್ಕಾಚಾರ. ಪಂಜಾಬ್‌ನಲ್ಲಿ ಸದ್ಯಕ್ಕೆ ಆಪ್ ಮುಂಚೂಣಿ ಪಕ್ಷ ಎನ್ನುವ ಚಿತ್ರಣ ಕಂಡುಬರುತ್ತಿದೆ. ಸಿದ್ದು, ತಮ್ಮ ಪತ್ನಿಯನ್ನು ಆಪ್ ಕಡೆಗೆ ವಾಲುವಂತೆ ಮಾಡುವ ಮೂಲಕ ದೊಡ್ಡ ಗುದ್ದು (ಮಾಸ್ಟರ್ ಸ್ಟ್ರೋಕ್) ನೀಡಿದ್ದಾರೆ. ಪ್ರೀತಿಯಿಂದ ಅಲ್ಲದಿದ್ದರೂ ಭೀತಿಯಿಂದಲಾದರೂ ಬಿಜೆಪಿ ತಮ್ಮನ್ನು ರಾಜ್ಯಸಭೆಗೆ ನಾಮಕರಣ ಮಾಡಲೇಬೇಕಾದ ಇಕ್ಕಟ್ಟಿನ ಸ್ಥಿತಿಗೆ ಪಕ್ಷವನ್ನು ಸಿಲುಕಿಸುವಲ್ಲಿ ಸಿಕ್ಸರ್ ಸಿದ್ದು ಯಶಸ್ವಿಯಾಗಿದ್ದಾರೆ. ಸಿದ್ದು ಕೇವಲ ಹಾಸ್ಯಾಸ್ಪದ, ಹಾಸ್ಯಗಾರನಂಥ ವ್ಯಕ್ತಿತ್ವ, ಸರಳ ಎಂದು ಯಾರು ಹೇಳಿದ್ದು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News