ಸಿಖ್-ಅಮೆರಿಕನ್ನರ ಸುರಕ್ಷತೆ ಕುರಿತು ಎಸ್‌ಜಿಪಿಸಿ ಕಳವಳ

Update: 2016-06-13 18:06 GMT

 ಚಂಡಿಗಡ,ಜೂ.13: ಫ್ಲೋರಿಡಾದ ಒರ್ಲಾಂಡೊದಲ್ಲಿ ಸಲಿಂಗಿಗಳ ನೈಟ್‌ಕ್ಲಬ್ ಮೇಲೆ ಗುಂಡಿನ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ದ್ವೇಷಾಪರಾಧಗಳು ನಡೆಯುವ ಭೀತಿಯನ್ನು ವ್ಯಕ್ತಪಡಿಸಿರುವ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ(ಎಸ್‌ಜಿಪಿಸಿ)ಯು, ಸಿಖ್-ಅಮೆರಿಕನ್ನರ ಸುರಕ್ಷತೆ ಮತ್ತು ಭದ್ರತೆಯ ವಿಷಯವನ್ನು ಅಮೆರಿಕದೊಂದಿಗೆ ಕೈಗೆತ್ತಿಕೊಳ್ಳುವಂತೆ ತಾನು ಕೇಂದ್ರ ಸರಕಾರವನ್ನು ಕೋರುವುದಾಗಿ ಹೇಳಿದೆ. ಪ್ರತಿಯೊಂದು ಪ್ರಮುಖ ಭಯೋತ್ಪಾದಕ ದಾಳಿಯ ಬಳಿಕ ದ್ವೇಷಾಪರಾಧಗಳಿಗೆ ಗುರಿಯಾಗಿರುವ ಸಿಖ್-ಅಮೆರಿಕನ್ನರು ಕ್ಲಬ್ ದಾಳಿಯ ಬಳಿಕ ತಮ್ಮ ವಿರುದ್ಧ ಪ್ರತೀಕಾರ ನಡೆಯುವ ಭೀತಿಯಲ್ಲಿದ್ದಾರೆ ಎಂದು ಅದು ಹೇಳಿದೆ.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಜಿಪಿಸಿ ಅಧ್ಯಕ್ಷ ಅವತಾರ್ ಸಿಂಗ್ ಮಕ್ಕರ್ ಅವರು, ಒರ್ಲಾಂಡೊದಲ್ಲಿ ನಡೆದಿರುವುದು ದುರದೃಷ್ಟಕರ ಘಟನೆಯಾಗಿದೆ ಮತ್ತು ಅದನ್ನು ಬಲವಾಗಿ ಖಂಡಿಸಬೇಕಾಗಿದೆ. ಈ ಹಿಂದೆ ಪ್ರತಿಯೊಂದು ದೊಡ್ಡ ದಾಳಿಯ ಬಳಿಕ ಸಿಖ್ಖರು ಅಪರಾಧ ಕೃತ್ಯಗಳಿಗೆ ಗುರಿಯಾಗಿರುವುದರಿಂದ ಅವರ ಸುರಕ್ಷತೆಯನ್ನು ಖಚಿತಪಡಿಸಲು ಈ ವಿಷಯವನ್ನು ಒಬಾಮಾ ಆಡಳಿತದೊಂದಿಗೆ ಕೈಗೆತ್ತಿಕೊಳ್ಳಲು ನಾವು ಕೇಂದ್ರ ಸರಕಾರವನ್ನು ಆಗ್ರಹಿಸುತ್ತೇವೆ. ಈ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯಲಿದ್ದೇವೆ ಎಂದರು.
ಅಮೆರಿಕದಲ್ಲಿರುವ ಸಿಖ್ ಗುರುದ್ವಾರಗಳ ಸುರಕ್ಷತೆಯ ಬಗ್ಗೆ ಗಮನ ಹರಿಸುವಂತೆ ಕೇಂದ್ರದ ಮೂಲಕ ನಾವು ಆ ರಾಷ್ಟ್ರದ ಸರಕಾರವನ್ನೂ ಆಗ್ರಹಿಸಲಿದ್ದೇವೆ ಎಂದು ಅವರು ಹೇಳಿದರು.
ಸಿಖ್ಖರು ಶಾಂತಿಪ್ರಿಯ ಸಮುದಾಯವಾಗಿದ್ದು,ಅಮೆರಿಕದ ಆರ್ಥಿಕತೆಗೆ ಗಮನಾರ್ಹ ಕೊಡುಗೆಯನ್ನು ಸಲ್ಲಿಸಿದ್ದಾರೆ ಎಂದು ಮಕ್ಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News