ಪಾರಿಕ್ಕರ್ ಇನ್ ಚಾರ್ಜ್

Update: 2016-10-02 04:38 GMT

ಪಾರಿಕ್ಕರ್ ಇನ್ ಚಾರ್ಜ್

ಭಾರತ- ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಾಚೆ ಉಗ್ರರಶಿಬಿರಗಳ ಮೇಲೆ ದಾಳಿ ಮಾಡಿದ ಭಾರತೀಯ ಸೇನೆಯ ಕಾರ್ಯಾಚರಣೆಗೆ ಸಂಬಂಧಿಸಿದ ವ್ಯವಹಾರಗಳ ಬಗ್ಗೆ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಸ್ವತಃ ಉಸ್ತುವಾರಿ ಹೊಣೆ ವಹಿಸಿಕೊಂಡಿದ್ದಾರೆ. ಭೂಸೇನೆ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೂ ಸೌತ್ ಬ್ಲಾಕ್ ರಕ್ಷಣಾ ಸಚಿವಾಲಯದಲ್ಲಿರುವ ಯುದ್ಧ ಕೊಠಡಿ ಯಲ್ಲಿದ್ದಾರೆ. ಯಾರಿಗೂ ಯಾವುದೇ ಸಂಶಯ ಬಾರದಂತೆ ಮೂವರೂ ಪ್ರತ್ಯೇಕವಾಗಿ ಹಿಂದಿನ ರಾತ್ರಿಯೇ ಅಲ್ಲಿಗೆ ಬಂದು ಸೇರಿದ್ದಾರೆ. ಉರಿ ದಾಳಿಕೋರರನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದು ಪಾರಿಕ್ಕರ್ ಪದೇ ಪದೇ ಹೇಳುತ್ತಲೇ ಬಂದಿದ್ದರು. ಇದೀಗ ಸ್ವತಃ ರಕ್ಷಣಾ ಸಚಿವರೇ ಮುಂದೆ ನಿಂತು, ನೂರಾರು ಕಿಲೋಮೀಟರ್ ದೂರದಲ್ಲಿ ನಡೆಯುವ ದಾಳಿ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ಪಾರಿಕ್ಕರ್ ಅತಿಯಾಗಿ ಮಾತನಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಾರೆ. ಆದರೆ ಈ ಬಾರಿ ಮಾತ್ರ ಅವರ ಕಾರ್ಯಾಚರಣೆ ಮಾತನಾಡಿದೆ.

ನಿಷ್ಪ್ರಯೋಜಕ ಸಂಸದ?

ಸಚಿನ್ ತೆಂಡೂಲ್ಕರ್ ಜಾಹೀರಾತು ಚಿತ್ರೀಕರಣ, ಒಲಿಂಪಿಕ್ ಪದಕ ವಿಜೇತರಿಗೆ ಬಿಎಂಡಬ್ಲ್ಯು ಕಾರು ವಿತರಿಸುವಲ್ಲಿ, ಮಗನ ಚಿತ್ರಗಳನ್ನು ಬಿಡುಗಡೆ ಮಾಡುವಲ್ಲಿ ಮತ್ತು ಸ್ವತಃ ಟ್ವಿಟ್ಟರ್‌ನಲ್ಲಿ ಬ್ಯುಸಿ. ಆದರೆ ಅವರು ರಾಜ್ಯಸಭೆಯ ನಾಮಕರಣ ಸದಸ್ಯರೂ ಹೌದು. ಆದರೆ ಸಂಸದನಾಗಿ ಮಾಡಲೇಬೇಕಾದ ಜವಾಬ್ದಾರಿ ನಿಭಾಯಿಸಲು ಒಂದು ನಿಮಿಷವೂ ಸಮಯ ಇಲ್ಲ. ಯಾವುದೇ ಚರ್ಚೆಯಲ್ಲಿ ಪಾಲ್ಗೊಂಡದ್ದು ಬಿಡಿ; ಸದನದಲ್ಲಿ ಕನಿಷ್ಠ ಹಾಜರಾತಿಯ ಕುಖ್ಯಾತಿಯೂ ಇವರದ್ದು. ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿಯ ಸದಸ್ಯರಾಗಿರುವ ಇವರು ಕಳೆದ ವರ್ಷ ನಡೆದ 12 ಸಭೆಗಳಿಗೂ ಚಕ್ಕರ್. ಇಷ್ಟಾಗಿಯೂ ಅವರನ್ನು ಸಮಿತಿಗೆ ಮರುನೇಮಕ ಮಾಡಲಾಗಿದೆ. ಪುನರ್ರಚಿತ ಸಮಿತಿಯ ಮೊದಲ ಸಭೆಯಲ್ಲೂ ಸಚಿನ್ ಭಾಗವಹಿಸಲಿಲ್ಲ. ಈ ಸಮಿತಿ ಇತ್ತೀಚೆಗೆ ಸಭೆ ಸೇರಿ, ಖಾಸಗಿತನದ ನಿಯಮ ರೂಪಿಸುವುದು ಸೇರಿದಂತೆ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಇದರ ಮೂಲಕ ಆನ್‌ಲೈನ್ ಖಾಸಗಿತನವನ್ನು ಸಾಧ್ಯವಾದಷ್ಟು ಮಟ್ಟಿಗೆ ಕಾಪಾಡಲು ಉದ್ದೇಶಿಸಿದೆ. ಆದರೆ ತೆಂಡೂಲ್ಕರ್‌ಗೆ ಪ್ರಚಾರ ಮುಖ್ಯವೇ ಹೊರತು ಭಾರತೀಯ ನಾಗರಿಕರ ಖಾಸಗಿತನವಲ್ಲ.

ಅಠವಳೆಗೂ ಒಂದು ಮನೆ

ಕೇಂದ್ರದ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ ಸಚಿವರಾಗಿ ಕೆಲ ಸಮಯ ಕಳೆದರೂ, ಅವರಿಗೆ ಅಧಿಕೃತ ಬಂಗಲೆ ಸಿಕ್ಕಿಲ್ಲ. ಸಿಕ್ಕಿದ ಬಂಗಲೆಗಳು ಅವರಿಗೆ ಇಷ್ಟವಾಗುತ್ತಿಲ್ಲ. ಆದ್ದರಿಂದ ರಾಜ್ಯಸಭಾ ಸದಸ್ಯರಾದ ಅವಧಿಯಲ್ಲಿ ಸಿಕ್ಕಿದ ಪುಟ್ಟ ಮನೆಯಲ್ಲೇ ಇನ್ನೂ ದಿನ ಕಳೆಯುತ್ತಿದ್ದಾರೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಅವರಿಗೆ ಸೂಕ್ತ ಮನೆಯ ಹುಡುಕಾಟದಲ್ಲಿದ್ದರೂ, ಸರಿಯಾದ ಮನೆ ಸಿಗುತ್ತಿಲ್ಲ. ಅಠವಳೆ ತಮ್ಮ ಸ್ಥಾನಮಾನ ಪ್ರದರ್ಶಿಸುವುದನ್ನು ಇಷ್ಟಪಡುತ್ತಾರೆ. ಅಠವಳೆಗೆ ಈಗ 72 ವರ್ಷ. ಆದರೆ ಅವರ ವಯಸ್ಸು ಹೇಳಿದರೆ ಅವರು ಸಿಡಿಮಿಡಿಗೊಳ್ಳುತ್ತಾರೆ. ಅವರು ತಮ್ಮ ಕೂದಲು ಹಾಗೂ ಗಡ್ಡಕ್ಕೆ ವಾರಕ್ಕೊಮ್ಮೆ ಡೈ ಮಾಡಿಸಿಕೊಳ್ಳುತ್ತಾರೆ. ಅವರಿಗೆ ಬೇಗ ಮನೆ ಸಿಕ್ಕಲಿ ಎಂದು ಹಾರೈಸೋಣ. ಇಲ್ಲದಿದ್ದರೆ ಅವರು ಮತ್ತೆ ಸಿಟ್ಟಾಗುತ್ತಾರೆ.

ಗೋಯಲ್ ಹೊಸ ಸಮಸ್ಯೆ

ಕೇಂದ್ರ ಜಲಸಂಪನ್ಮೂಲ ಮತ್ತು ಯುವಜನ ವ್ಯವಹಾರ ಖಾತೆ ರಾಜ್ಯ ಸಚಿವ ತಮ್ಮ ವಿವಾದಾತ್ಮಕ ರಿಯೊ ಪ್ರವಾಸದಿಂದ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದಾರೆ. ಆದರೆ ಒಲಿಂಪಿಕ್ಸ್ ಮುಗಿದರೂ ವಿವಾದಗಳು ಅವರ ಬೆನ್ನು ಬಿಡುವಂತೆ ಕಾಣುತ್ತಿಲ್ಲ. ಉದಾಹರಣೆಗೆ ಅವರ ಸಚಿವಾಲಯ ಇರುವ ಶ್ರಮಶಕ್ತಿ ಭವನದಲ್ಲಿ ಗೋಯಲ್‌ಗೆ ಕೊಠಡಿ ಇಲ್ಲ. ಇದಕ್ಕೆ ಕಾರಣ ಗೋಯಲ್ ಅವರು ಕ್ರೀಡಾ ಸಚಿವಾಲಯದ ಸ್ವತಂತ್ರ ಹೊಣೆಯನ್ನೂ ಹೊಂದಿರುವುದು. ಅದಕ್ಕೆ ಸನಿಹದಲ್ಲೇ ಇರುವ ಶಾಸ್ತ್ರಿ ಭವನದಲ್ಲಿ ಅವರಿಗೆ ವಿಶಾಲವಾದ ಕಚೇರಿ ನೀಡಲಾಗಿದೆ. ದುರದೃಷ್ಟವಶಾತ್ ಜಲ ಸಂಪನ್ಮೂಲ ಸಚಿವಾಲಯದ ಬಾಬೂಗಳು, ಪಕ್ಕದ ಕಟ್ಟಡಕ್ಕೆ ಬರುವ ಉದಾರತೆ ತೋರುತ್ತಿಲ್ಲ. ಅವರು ಅಂತರ ಕಾಪಾಡಲು ಮತ್ತೊಂದು ಕಾರಣವಿದೆ. ಪ್ರಧಾನಿ ನಡೆಸುವ ಸಚಿವಾಲಯದ ಕ್ಷಮತೆಯ ಮೌಲ್ಯಮಾಪನದಲ್ಲಿ ಗೋಯಲ್ ಅಧಿಕ ಅಂಕ ಗಳಿಸುವ ಸಾಧ್ಯತೆ ಇಲ್ಲ ಎನ್ನುವ ಲೆಕ್ಕಾಚಾರ ಅವರದ್ದು.

ನೇಪಾಳಕ್ಕೂ ರಾಮದೇವ್ ಲಗ್ಗೆ

ನೇಪಾಳದ ಪ್ರಧಾನಿ, ಬಾಬಾ ರಾಮ್‌ದೇವ್ ಅವರ ಯೋಗ ಬ್ರಾಂಡ್‌ನ ಅನುಯಾಯಿಯೇ? ಈ ಪ್ರಶ್ನೆಗೆ ಉತ್ತರ ತಿಳಿದಿಲ್ಲ. ಆದರೆ ರಾಮದೇವ್ ಖ್ಯಾತಿ ಭಾರತದ ಗಡಿಗಷ್ಟೇ ಸೀಮಿತವಲ್ಲ ಎನ್ನುವುದು ಸ್ಪಷ್ಟ. ಪುಷ್ಪ ಕಮಲ್ ದಾಹಲ್ ಭಾರತಕ್ಕೆ ಭೇಟಿ ನೀಡಿದ ವೇಳೆ, ನೇಪಾಳಿ ಪ್ರಧಾನಿ, ರಾಮದೇವ್ ಅವರ ಪತಂಜಲಿ ಯೋಗಪೀಠ ಹಾಗೂ ಹರಿದ್ವಾರದಲ್ಲಿರುವ ಫುಡ್‌ಪಾರ್ಕ್‌ಗೆ ಭೇಟಿ ನೀಡಿದರು. ಪ್ರಚಂಡ ಎಂದೇ ಖ್ಯಾತರಾಗಿರುವ ನೇಪಾಳಿ ಪ್ರಧಾನಿ, ಅಲ್ಲಿ ಸಾರ್ವಜನಿಕ ಸಭೆಯನ್ನೂ ನಡೆಸಿ, ರಾಮ್‌ದೇವ್ ಉಭಯ ದೇಶಗಳ ನಡುವಿನ ಸಂಬಂಧಸೇತು ಎಂದು ಬಣ್ಣಿಸಿದರು. ಪ್ರಚಂಡ ಹೊಗಳಿಕೆ ವ್ಯರ್ಥವಾಗಲಿಲ್ಲ. ರಾಮ್‌ದೇವ್ ತಕ್ಷಣ ಅತಿಥಿ ಗಣ್ಯರ ಹೊಗಳಿಕೆಗೆ ತಕ್ಷಣ ಪ್ರತಿಸ್ಪಂದಿಸಿದರು. ಭಾರತ ಹೊರತುಪಡಿಸಿ ವಿದೇಶದಲ್ಲಿ ಪತಂಜಲಿಯ ಮೊದಲ ಫುಡ್‌ಪಾರ್ಕ್ ನೇಪಾಳದಲ್ಲಿ ನಿರ್ಮಾಣವಾಗಲಿದೆ ಎಂದು ತಮ್ಮ ಸರದಿ ಬಂದಾಗ ಘೋಷಿಸಿದರು. ವ್ಯಾಪಾರ ಹಾಗೂ ರಾಜತಾಂತ್ರಿಕತೆಯ ಮಿಶ್ರಣಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಸಿಗಬಹುದೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News