ಜೆನೆರಿಕ್ಕು ಮತ್ತು ಲಾಜಿಕ್ಕು

Update: 2016-10-11 18:27 GMT

ಕೆಲವೊಮ್ಮೆ ಸರಕಾರಗಳು ಬಹಳ ಲಾಜಿಕಲ್ ಆದ ತೀರ್ಮಾನಗಳನ್ನು ತೆಗೆದುಕೊಂಡಾಗ, ಅವು ಜನಸಾಮಾನ್ಯರ ಬದುಕಿನ ಮೇಲೆ ನೇರವಾಗಿ ಒಳ್ಳೆಯ ಪರಿಣಾಮ ಬೀರುವಂತಹದ್ದಾಗಿರುತ್ತವೆ. ಜೆನೆರಿಕ್ ಔಷಧಚೀಟಿ ಕಡ್ಡಾಯಗೊಳಿಸಿದ್ದು, ಸರಕಾರಿ ಉದ್ಯೋಗದಲ್ಲಿರುವವರು ಸರಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವುದನ್ನು ಕಡ್ಡಾಯ ಮಾಡಿದ್ದು ಅಂತಹ ಒಳ್ಳೆಯ ನಿರ್ಧಾರಗಳು.
ರಾಜ್ಯಸರಕಾರದ ಸುತ್ತೋಲೆಯನ್ವಯ, ವೈದ್ಯರು ಇನ್ನು ಮುಂದೆ ಔಷಧಚೀಟಿ ಬರೆದುಕೊಡುವಾಗ ಕಡ್ಡಾಯವಾಗಿ ಔಷಧದ ಜೆನೆರಿಕ್ ಹೆಸರಿನಲ್ಲೇ ಔಷಧ ಚೀಟಿ ಬರೆದುಕೊಡಬೇಕಾಗುತ್ತದೆ. ಅಗತ್ಯ ಔಷಧ ದರಗಳು ಹತೋಟಿ ತಪ್ಪಿಏರುತ್ತಿರುವ ಈ ದಿನಗಳಲ್ಲಿ ಇದು ಬಹಳ ಒಳ್ಳೆಯ ನಿರ್ಧಾರ.
ಭಾರತೀಯ ವೈದ್ಯಕೀಯ ಮಂಡಳಿ ಈ ಬಗ್ಗೆ ತನ್ನ ನಿಲುವನ್ನು 2002ರಲ್ಲೇ ಪ್ರಕಟಿಸಿದೆಯಾದರೂ ಆ ಬಗ್ಗೆ ಈ ತನಕ ಯಾರೂ ಮನಸ್ಸು ಮಾಡಿರಲಿಲ್ಲ. ಕೋಡ್ ಆಫ್ ಮೆಡಿಕಲ್ ಎಥಿಕ್ಸ್ ಹೀಗನ್ನುತ್ತದೆ. "1.5 Use of Generic names of drugs: Every physician should, as far as possible, prescribe drugs with generic names and he / she shall ensure that there is a rational prescription and use of drugs.'' ಈ ಜೆನರಿಕ್ ಹೆಸರು ಯಾಕೆ ಉಪಯುಕ್ತವೆಂದರೆ, ಉದಾಹರಣೆಗೆ, ಸೆಫಿಕ್ಸೈಮ್ (Cefixime) ಎಂಬುದು ಒಂದು ಬ್ರಾಡ್ ಸ್ಪೆಕ್ಟ್ರಮ್ ಆ್ಯಂಟಿ ಬಯಾಟಿಕ್. ಅಂದರೆ ಹಲವು ಬ್ಯಾಕ್ಟೀರಿಯಾ ಸೋಂಕುಗಳನ್ನು ಗುಣಪಡಿಸಬಲ್ಲ ಔಷಧ. ಅಗತ್ಯದ ಔಷಧಗಳಲ್ಲಿ ಒಂದಾದ ಈ ಸೆಫಿಕ್ಸೈಮ್ ಭಾರತದ ಮಾರುಕಟ್ಟೆಯಲ್ಲಿ ಸರಿಸುಮಾರು 780 ಬ್ರಾಂಡ್ ಹೆಸರುಗಳಲ್ಲಿ ವಿವಿಧ ಕಂಪೆನಿಗಳ ಉತ್ಪನ್ನವಾಗಿ ಲಭ್ಯವಿದೆ. ಅದರ ಬೆಲೆ ಕೂಡ ಹತ್ತಿಪ್ಪತ್ತು ರೂಪಾಯಿಗಳಿಂದ ಆರಂಭವಾಗಿ, ಬ್ರಾಂಡಿನ ದೊಡ್ಡಸ್ಥಿಕೆಗೆ ತಕ್ಕಂತೆ ನಾಲ್ಕೈದು ನೂರು ರೂಪಾಯಿಗಳ ತನಕವೂ ಇರಬಹುದು.
ಸಾಮಾನ್ಯವಾಗಿ ವೈದ್ಯರು ನೇರವಾಗಿ ಬ್ರಾಂಡ್‌ಗಳ ಹೆಸರನ್ನೇ ಔಷಧ ಚೀಟಿಯಲ್ಲಿ ಬರೆಯುವುದರಿಂದ, ಸಹಜವಾಗಿಯೇ ರೋಗಿಗಳು ಔಷಧ ಅಂಗಡಿಗಳಲ್ಲಿ ಆ ಬ್ರಾಂಡಿನ ಸೆಫಿಕ್ಸೈಮಿಗಾಗಿಯೇ ಹುಡುಕಿಕೊಂಡು ಅಲೆದಾಡುತ್ತಾರೆ. ಇಂತಹದೊಂದು ವ್ಯವಸ್ಥೆಯ ಹಿಂದೆ ವೈದ್ಯರು-ಔಷಧ ಕಂಪೆನಿ-ಔಷಧ ಮಾರಾಟಗಾರರ ನಡುವಿನ ಸಂಬಂಧಗಳ ನೈತಿಕತೆ ಬಹಳಷ್ಟು ಬಾರಿ ಪ್ರಶ್ನಾರ್ಹವಾಗಿರುತ್ತದೆ. ಈಗ ವೈದ್ಯರು ಜೆನೆರಿಕ್ ಹೆಸರನ್ನೇ ಬರೆಯುವುದು ಕಡ್ಡಾಯ ಆಗಿರುವುದರಿಂದ, ರೋಗಿಗೆ ದುಬಾರಿ ಬ್ರಾಂಡಿನ ಸೆಫಿಕ್ಸೈಮ್ ಖರೀದಿಸಲೇಬೇಕಾದ ಅನಿವಾರ್ಯತೆ ಇರುವುದಿಲ್ಲ.
ಸರಕಾರಿ ಉದ್ಯೋಗಿಗಳು ಈ ತನಕ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸೌಲಭ್ಯ ಹೊಂದಿದ್ದರು. ಈಗ ಈ ದುಡ್ಡನ್ನು ಸರಕಾರ ಮರುಪಾವತಿ ಮಾಡುವುದಿಲ್ಲ ಎಂದಾದರೆ, ಇದು ಶೀಘ್ರದಲ್ಲೇ ಸರಕಾರಿ ಆಸ್ಪತ್ರೆಗಳಿಗೆ ಹೊಸ ರೂಪ, ಹೊಸ ಶಿಸ್ತು ತಂದುಕೊಡುವುದರಲ್ಲಿ ಸಂಶಯವಿಲ್ಲ.
ಇದೇ ಹಾದಿಯಲ್ಲಿ, ಈಗಾಗಲೇ ಚರ್ಚೆ ಆರಂಭ ಆಗಿರುವಂತೆ ಸರಕಾರಿ ಸೇವೆಯಲ್ಲಿರುವವರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗಳಲ್ಲೇ ಓದಿಸಬೇಕು ಎಂಬುದೂ ಜಾರಿಗೆ ಬರುವಂತಾದರೆ, ರಾಜ್ಯದಲ್ಲಿ ಮುಚ್ಚುವ ಹಂತಕ್ಕೆ ಬಂದಿರುವ ಬಹುತೇಕ ಎಲ್ಲ ಸರಕಾರಿ ಶಾಲೆಗಳೂ ಮರುಜೀವ ಪಡೆಯಲಿವೆ.
ಕೃಪೆ: ಅವಧಿ

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News