ಈಗಿನ ಈ ವ್ಯವಸ್ಥೆಗೆ ಯಾರನ್ನು ದೂಷಿಸುವುದು?

Update: 2016-11-02 18:00 GMT

ಧುನಿಕ ಮ್ಯಾನೇಜ್ ಮೆಂಟ್ ತಂತ್ರದ ಬಲುದೊಡ್ಡ ಅಸ್ತ್ರ ಎಂದರೆ ಕೈಗೆ ಬಂದ ಜವಾಬ್ದಾರಿಯನ್ನು ಇನ್ನೊಬ್ಬರ ಕೈಗೆ ದಾಟಿಸಿ ಕುಳಿತುಬಿಡುವುದು. ನಮ್ಮ ಸರಕಾರಗಳ ಅಚ್ಚು-ಗಾಲಿ-ಕೀಲುಗಳಾಗಿರುವ ಐಎಎಸ್ ಅಧಿಕಾರಿಗಳು ತಮ್ಮ ತಲೆನೋವು ತಣಿಸಿಕೊಳ್ಳುವ ದಾರಿಯಲ್ಲಿ ಕಂಡುಕೊಂಡಿರುವ ಬಹಳ ಸುಲಭ ವಿಧಾನ ಎಂದರೆ ‘ಖಾಸಗೀಕರಣ’. ಅವರ ಭಾಷೆಯಲ್ಲೇ ಹೇಳಬೇಕೆಂದರೆ, ಅವರಿಗಿದು ‘ವಿನ್-ವಿನ್’ ಸಿಚುವೇಷನ್’. ಆದರೆ, ದುರದೃಷ್ಟವಶಾತ್ ಬಡ ಜನಸಾಮಾನ್ಯನಿಗಿದು ‘ಲೂಸ್-ಲೂಸ್’ ಪರಿಸ್ಥಿತಿ ಎಂಬುದು ಅವರ ಗಮನಕ್ಕೆ ಬರುವುದಿಲ್ಲ ಅಥವಾ ಬಂದರೂ ಆ ಬಗ್ಗೆ ಔದಾಸೀನ್ಯ.

ಸರಕಾರಕ್ಕೆ ಖರ್ಚು, ತಲೆನೋವುಗಳೆರಡೂ ಇರುವ; ನೇರ ಆದಾಯ ಏನೇನೂ ಇರದ ಎರಡು ವಲಯಗಳೆಂದರೆ ‘ಶಿಕ್ಷಣ’ ಮತ್ತು ‘ಆರೋಗ್ಯ’. ಏನೇ ಕೆಲಸ ಮಾಡಿದರೂ, ಅದರಿಂದ ಆ ಎರಡು ವಲಯಗಳಲ್ಲಿ ಇನ್ನಷ್ಟು ದೂರು-ಬೈಗಳು ಬಿಟ್ಟರೆ ಸುಖದ್ದೇನೂ ಸಿಗುವುದಿಲ್ಲ. ಅದೇ ವೇಳೆ, ಖಾಸಗಿಯವರಿಗೆ ಇವೆರಡೂ ವಲಯಗಳು ಚಿನ್ನದ ಗಣಿಗಳು. ಇಂತಹ ಒಂದು ಹರಿತವಾದ ಯೋಚನಾಸರಣಿಯ ಫಲವೇ ನಾವು ಈ ಎರಡೂ ವಲಯಗಳಲ್ಲಿ ಈಗೀಗ ಕಾಣುತ್ತಿರುವ ಸಾರಾಸಗಟು ಖಾಸಗೀಕರಣ.
50ರ ದಶಕದಲ್ಲಿ ಸರಕಾರಕ್ಕೆ ಪೂರಕವಾಗಿ ಆರಂಭಗೊಂಡ ಶಿಕ್ಷಣದ ಖಾಸಗೀಕರಣ, ಮುಂದೆ ಅಪ್ಪ ಅಮ್ಮಂದಿರ ಆಂಗ್ಲಮಾಧ್ಯಮದ ಕೋಟು-ಟೈಗಳ ಕಾನ್ವೆಂಟ್ ಶಿಕ್ಷಣದ ಆಸೆಗೆ ಸಿಕ್ಕಿ ಗಲ್ಲಿಗಲ್ಲಿಗಳಿಗೂ ಹರಡಿತು. ಮುಂದೆ ಇಂಜಿನಿಯರಿಂಗ್-ಮೆಡಿಕಲ್ ಕಾಲೇಜುಗಳಲ್ಲಿ ದುಡ್ಡಿನ ರಾಶಿ ಕಂಡ ಬಳಿಕವಂತೂ, ಖಾಸಗಿಯವರ ದುರಾಸೆ ಎಲ್ಲಿಗೆ ತಲುಪಿತೆಂದರೆ, ಆ ಲಾಬಿ ಸರಕಾರಗಳನ್ನೇ ತನ್ನ ಕೈವಶಕ್ಕೆ ತೆಗೆದುಕೊಂಡು ತಾನೇ ನಿರ್ಧಾರಗಳನ್ನೂ ತೆಗೆದುಕೊಳ್ಳತೊಡಗಿತು.
ಇವತ್ತು ಒಂದು ವೈದ್ಯಕೀಯ ಸ್ನಾತಕೋತ್ತರ ಪದವಿ ಎಂಬುದು 70 ಲಕ್ಷದಿಂದ ಒಂದು ಒಂದೂವರೆ ಕೋಟಿ ಬೆಲೆಬಾಳುವ ಆಸ್ತಿ ಆಗಿಬಿಟ್ಟಿದೆ, ಈ ಖಾಸಗಿ ಶಿಕ್ಷಣ ಲಾಬಿಗೆ. ಇಷ್ಟೊಂದು ಪ್ರಮಾಣದಲ್ಲಿ ದುಡ್ಡು ಸುರಿದು ಕಲಿತು ಬಂದ ಹೊಸ ವೈದ್ಯರು ಕೆಲಸ ಮಾಡುವುದು ಎಲ್ಲಿ? ಸರಕಾರ ಕೊಡುವ ಜುಜುಬಿ ಸಂಬಳ, ಕಳಪೆ ಸವಲತ್ತು, ಬೆಂಬಲ ರಹಿತ ಸೌಲಭ್ಯಗಳ ಮೇಲೆ, ಮಾತೆತ್ತಿದರೆ ಮೆಮೋ, ನೋಟಿಸು, ಸಸ್ಪೆನ್ಶನ್, ವಜಾಗಳ ದರ್ಬಾರಿನಲ್ಲಿ ಕೆಲಸ ಮಾಡಲು ಮನಸ್ಸಾದರೂ ಹೇಗೆ ಬಂದೀತು?
ಪರಿಸ್ಥಿತಿಯಿಂದಾಗಿ, ಹೊಸದಾಗಿ ರಂಗ ಪ್ರವೇಶಿಸಿದ ವೈದ್ಯರಿಗೆ, ಕೆಲಸ ಮಾಡಲು ಮನಸ್ಸಿದ್ದರೂ, ಸರಕಾರಕ್ಕಿಂತ ಖಾಸಗಿಯೇ ಹೆಚ್ಚು ಅನುಕೂಲಕರ ಅನ್ನಿಸತೊಡಗಿತು. ಜೊತೆಗೆ ಸರಕಾರವೂ (ಅಂದರೆ ಅಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವವರು ಖಾಸಗಿ ವೈದ್ಯಶಿಕ್ಷಣದಂಗಡಿಗಳ ಮಾಲಕರೇ!) ಖಾಸಗೀಕರಣಕ್ಕೆ ಪೂರಕವಾಗಿ ವರ್ತಿಸುತ್ತಿರುವುದರಿಂದ ಈಗೀಗ ಆರೋಗ್ಯರಂಗವನ್ನೂ ಸಂಪೂರ್ಣವಾಗಿ ಖಾಸಗಿರಂಗಕ್ಕೆ ವಹಿಸುವ ಹುನ್ನಾರದಲ್ಲಿದೆ ರಾಜ್ಯಸರಕಾರ.
ಕೇಂದ್ರ ಸರಕಾರದ ಹಲವು ಆರೋಗ್ಯ ಯೋಜನೆಗಳನ್ನು (ವಾಜಪೇಯಿ ಆರೋಗ್ಯಶ್ರೀ, ರಾಷ್ಟ್ರೀಯ ಬಾಲಸುರಕ್ಷಾ ಕಾರ್ಯಕ್ರಮ, ರಾಜೀವ್‌ಗಾಂಧಿ ಆರೋಗ್ಯಶ್ರೀ, ರಾಜ್ಯ ಸರಕಾರದ್ದೇ ಆದ ಯಶಸ್ವಿನಿ...ಇತ್ಯಾದಿ) ನಿರ್ವಹಣೆಗಾಗಿ ಈಗಾಗಲೇ ಖಾಸಗಿ ಸಹಭಾಗಿತ್ವದ ವ್ಯವಸ್ಥೆಗಳಿಗೆ ಔಟ್ ಸೋರ್ಸ್ ಮಾಡಿರುವ ರಾಜ್ಯದ ಐಎಎಸ್ ನೀತಿ ನಿರೂಪಕರು, ತಮ್ಮ ತಲೆನೋವು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಬಡಾತಿಬಡವರನ್ನು ತ್ರಿಶಂಕು ಸ್ಥಿತಿಗೆ ಏರಿಸಿದ್ದಾರೆ. ಯಾಕೆಂದರೆ, ಸರಕಾರಿ ಶಾಲೆಗಳು, ಸರಕಾರಿ ಆಸ್ಪತ್ರೆಗಳು ಸಹಾಯ ಮಾಡುತ್ತಿದ್ದುದು ಬಡವರಲ್ಲಿ ಕಡುಬಡವರಿಗೆ. ಅಂತಹವರು ವರ್ಷಕ್ಕೆ 25-30 ಸಾವಿರ ತೆತ್ತು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುವುದು, ಬಳಿಕ ಕೋಟಿಗಳಲ್ಲಿ ಖರ್ಚುಮಾಡಿ ಉನ್ನತ ಶಿಕ್ಷಣ ಕೊಡುವುದು ಕನಸಿನಗಂಟು.
ಇದೇ ಕಾರಣಗಳಿಂದಾಗಿ ಇವತ್ತು ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ವೈದ್ಯರು, ತಜ್ಞ ವೈದ್ಯರು ಸಿಗುತ್ತಿಲ್ಲ. ಮೊನ್ನೆ ಸರಕಾರ ಸುಮಾರು ಏಳುನೂರು ವೈದ್ಯಕೀಯ ಹುದ್ದೆಗಳಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಸಿದಾಗ ಅಂತಿಮವಾಗಿ ಸಿಕ್ಕಿದ್ದು 150 ವೈದ್ಯರಂತೆ. ಅವರೂ 5-6 ವರ್ಷ ಇಲ್ಲಿ ತರಬೇತಿ ಪಡೆದು ಕಾಲು ಕೀಳುವವರು.
ಹಾಗಾಗಿ ಉಡುಪಿಯ ವ್ಯವಸ್ಥಿತ ಸರಕಾರಿ ಜಿಲ್ಲಾಸ್ಪತ್ರೆ ಕೂಡ ಸುಲಭ ತುತ್ತಾಗಿ ಖಾಸಗಿ ಬಾಯಿಗೆ ಬಿದ್ದಿದೆ. ವ್ಯವಸ್ಥೆ ಹೀಗಿರುವಾಗ ಯಾರೋ ಒಬ್ಬರನ್ನು ಇದಕ್ಕೆ ಹೊಣೆಮಾಡಿ ದೂಷಿಸುವುದಕ್ಕೆ ಅರ್ಥ ಇಲ್ಲ.

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News