ಬಡವಾ... ನಿನ್ನ ಮಡಗಿದ್ದೆಲ್ಲಿ?
ಸ್ವಾತಂತ್ರ್ಯ ಬಂದು 69 ವರ್ಷಗಳಾಗಿದ್ದರೂ ಈ ದೇಶದ ಸರಕಾರಗಳಿಗೆ ಇನ್ನೂ ಇಲ್ಲಿನ ಬಡವ ಯಾರು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲ. ಈ ದೇಶದ ಬಡವರನ್ನು ಗುರುತಿಸುವುದಕ್ಕೆ ಕಳೆದ ಅಂದಾಜು 50 ವರ್ಷಗಳಲ್ಲಿ ನಡೆದಿರುವ ಸ್ಟಾಟಿಸ್ಟಿಕಲ್ ಪ್ರಹಸನಗಳ ಸಣ್ಣದೊಂದು ಚಿತ್ರಣ ಕಟ್ಟಿಕೊಡುವ ಪ್ರಯತ್ನ ಇದು.
ಸರಕಾರಿ ಲೆಕ್ಕದಲ್ಲಿ ಒಂದು ಕುಟುಂಬ ಎಂದರೆ 5 ಜನರದು. ಹೆಚ್ಚಿನಂಶ ಅಪ್ಪ, ಅಮ್ಮ, ಮೂವರು ಮಕ್ಕಳು.
1962:
ಮೊದಲಬಾರಿಗೆ ದೇಶದಲ್ಲಿ ಒಂದು ಕುಟುಂಬಕ್ಕೆ ಹೊಟ್ಟೆತುಂಬ ಉಂಡುಟ್ಟು ಬದುಕಲು ಕನಿಷ್ಠ ಎಷ್ಟು ಆದಾಯ ಬೇಕು ಎಂದು ಗುರುತಿಸಲು ಕಾರ್ಯತಂಡವೊಂದು ಕೆಲಸ ಮಾಡಿದ್ದು 1962ರಲ್ಲಿ. ಅಂದಿನ ಮಾರುಕಟ್ಟೆ ಬೆಲೆಗಳನ್ನಾಧರಿಸಿ, ಹಳ್ಳಿಗಳಲ್ಲಿ ತಿಂಗಳಿಗೆ ತಲಾ 20 ರೂಪಾಯಿ (ICMR) ಅಂದರೆ 5 ಜನರ ಕುಟುಂಬಕ್ಕೆ 100ರೂ.) ಮತ್ತು ನಗರಗಳಲ್ಲಿ ತಿಂಗಳಿಗೆ ತಲಾ 25 ರೂಪಾಯಿ (ಕುಟುಂಬಕ್ಕೆ 125 ರೂ). ಗಿಂತ ಕಡಿಮೆ ಆದಾಯ ಇರುವವರು ಬಡವರು ಎಂದು ಗುರುತಿಸಲಾಯಿತು. ಇದು ಬರಿಯ ಹೊಟ್ಟೆಯನ್ನಾಧರಿಸಿದ ಲೆಕ್ಕಾಚಾರ ಆಗಿತ್ತು. ಭಾರತೀಯ ವೈದ್ಯಕೀಯ ಸಂಶೋಧನಾ ಮಡಳಿಯಿಂದ ) ದೈನಂದಿನ ಕನಿಷ್ಠ ಆಹಾರ ಆವಶ್ಯಕತೆಯ ಲೆಕ್ಕ ಪಡೆದು ಈ ತೀರ್ಮಾನ ಕೈಗೊಳ್ಳಲಾಗಿತ್ತು.
1977:
ಡಾ. ವೈ. ಕೆ. ಅಲಘ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ಆಹಾರ ಮಾತ್ರವಲ್ಲದೆ ಬೇರೆ ಕೆಲವು ಆವಶ್ಯಕತೆಗಳನ್ನೂ ಪರಿಗಣನೆಗೆ ತೆಗೆದುಕೊಂಡು, 1973-74ರ ಮಾರುಕಟ್ಟೆ ದರಗಳನ್ನಾಧರಿಸಿ, ಗ್ರಾಮೀಣ ಪ್ರದೇಶಗಳಲ್ಲಿ ತಿಂಗಳಿಗೆ ತಲಾ 49.09ರೂ. ಕ್ಕಿಂತ ಕಡಿಮೆ ಆದಾಯ ಇರುವವರು ಮತ್ತು ನಗರ ಪ್ರದೇಶಗಳಲ್ಲಿ ತಲಾ 56.64 ರೂ. ಕ್ಕಿಂತ ಕಡಿಮೆ ಆದಾಯ ಇರುವವರು ಬಡವರೆಂದು 1979ರಲ್ಲಿ ಪ್ರಕಟಿಸಿತು. ರಾಜ್ಯವಾರು ವೈವಿಧ್ಯತೆಗಳನ್ನು ಪರಿಗಣಿಸದಿದ್ದುದು ಅವರ ಮಿತಿ ಆಗಿತ್ತು.
1989:
ಲಕಡವಾಲಾ ಸಮಿತಿಯು ರಾಜ್ಯವಾರು ವೈವಿಧ್ಯತೆಗಳನ್ನು ಪರಿಗಣನೆಗೆ ತೆಗೆದುಕೊಂಡು, ಪ್ರತಿಯೊಂದು ರಾಜ್ಯಕ್ಕೂ ಪ್ರತ್ಯೇಕ ಬಡತನದ ಗೆರೆ ಎಳೆದು, ಸರಾಸರಿ ದೇಶದ ಗ್ರಾಮೀಣರಲ್ಲಿ ಶೇ. 37.3 ಜನ ಮತ್ತು ನಗರಗಳಲ್ಲಿ ಶೇ.32.4 ಜನ ಬಡತನದ ಗೆರೆಗಿಂತ ಕೆಳಗಿದ್ದಾರೆ ಎಂದು ಪ್ರಕಟಿಸಿತು.
2005:
ಸುರೇಶ್ ಡಿ. ತೆಂಡೂಲ್ಕರ್ ನೇತೃತ್ವದ ಸಮಿತಿಯು 2009ರಲ್ಲಿ ತನ್ನ ವರದಿ ಸಲ್ಲಿಸಿತು. ರಾಜ್ಯವಾರು ಆಹಾರ ಮಾತ್ರವಲ್ಲದೆ ಉಡುಗೆ, ತೊಡುಗೆ, ಶಿಕ್ಷಣ, ಆರೋಗ್ಯ ಮತ್ತು ಮನೆ ಬಳಕೆಯ ಉಪಕರಣಗಳ ಮೇಲೆ ಮಾಡುವ ವೆಚ್ಚಗಳನ್ನೂ ಪರಿಗಣಿಸಿ, ದೇಶದಲ್ಲಿ ಸರಾಸರಿ ಗ್ರಾಮೀಣರಲ್ಲಿ ಶೇ. 33.8 ಜನ ಮತ್ತು ನಗರಗಳಲ್ಲಿ ಶೇ.20.9 ಜನ ಬಡತನದ ರೇಖೆಗಿಂತ ಕೆಳಗಿದ್ದಾರೆ ಎಂದಿತು.
2012:
ತೆಂಡೂಲ್ಕರ್ ಸಮಿತಿ ವರದಿ ನೀಡಿದ ಮೂರೇ ವರ್ಷದಲ್ಲಿ ಯೋಜನಾ ಆಯೋಗ ಡಾ. ಸಿ. ರಂಗರಾಜನ್ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಿತು. ಆ ಸಮಿತಿ ಗ್ರಾಮೀಣರಲ್ಲಿ ಶೇ. 30.9 ಜನ ಮತ್ತು ನಗರಗಳಲ್ಲಿ ಶೇ.26.4 ಜನ ಬಡತನದ ಗೆರೆಗಿಂತ ಕೆಳಗಿದ್ದಾರೆ ಎಂದಿದೆ ಅಲ್ಲದೆ ಬಡತನ ನಿರ್ಧಾರಕ್ಕೆ ತಲಾ ಆದಾಯ ಮಿತಿ ಗ್ರಾಮೀಣ ಪ್ರದೇಶದಲ್ಲಿ 972ರೂ. ಮತ್ತು ನಗರ ಪ್ರದೇಶದಲ್ಲಿ 1407 ರೂ. ಎಂದು ಗುರುತಿಸಿದೆ.
2014:
ಈಗ ಹೊಸ ಎನ್‌ಡಿಎ ಸರಕಾರ ಬಂದಮೇಲೆ ಯೋಜನಾ ಆಯೋಗವನ್ನೇ ಕಿತ್ತುಹಾಕಿ ಘೆಐಐ ಆಯೋಗ ಅಸ್ತಿತ್ವಕ್ಕೆ ಬಂದಿದೆ. ಅವರು ಬಡತನದ ಗೆರೆಯನ್ನು ಗುರುತಿಸುವುದು ಸರಕಾರಿ ಸವಲತ್ತುಗಳನ್ನು ಹಂಚುವುದಕ್ಕಲ್ಲ; ಬದಲಾಗಿ ಕಡುಬಡತನದ ವಿರುದ್ಧ ಹೋರಾಟಕ್ಕಾಗಿ ಎಂಬ ತೀರ್ಮಾನಕ್ಕೆ ಬಂದಿದ್ದು, ಅದಕ್ಕೆ ಉದ್ಯೋಗ ಸೃಷ್ಟಿ ಸಹಿತ ಕ್ಷಿಪ್ರ ಬೆಳವಣಿಗೆ ಮತ್ತು ಬಡತನ ನಿವಾರಣಾ ಕಾರ್ಯಕ್ರಮಗಳಿಗೆ ಇನ್ನಷ್ಟು ಮೊನಚು ನೀಡುವ ಉದ್ದೇಶ ಹೊಂದಿದೆ.
* * *
ದೇಶದ ಜನಸಂಖ್ಯೆಯ ಮೂರನೆ ಒಂದು ಭಾಗದಷ್ಟಿರುವ ಬಡವರನ್ನು ಗುರುತಿಸುವ ಕೆಲಸವೇ ಕಳೆದ 70 ವರ್ಷಗಳಲ್ಲಿ ಸಮರ್ಪಕವಾಗಿ ಆಗಿಲ್ಲ ಎಂದಮೇಲೆ ಇನ್ನು ಬಡಜನೋದ್ಧಾರ ಆಗುವುದಾದರೂ ಹೇಗೆ? ಕೊನೆಗೂ ಈ ಸ್ಥಿತಿ ಬಡತನದ ನಿವಾರಣೆಯೋ ಅಥವಾ ಬಡವರ ನಿವಾರಣೆಯೋ ಎಂಬ ಆಯ್ಕೆಗೆ ಬಂದು ತಲುಪದಿರಲಿ ಎಂದು ಹರಕೆ ಹೊರೋಣ.