ಎಸ್ಪಿ-ಕಾಂಗ್ರೆಸ್ ಮೈತ್ರಿಗೆ ಕಿಶೋರ್ ರಣತಂತ್ರ
ಕೆಲವು ಮೂಲಗಳ ಪ್ರಕಾರ, ಪಂಜಾಬ್ ಹಾಗೂ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನ ಚುನಾವಣಾ ರಣತಂತ್ರ ರೂಪಕರಾದ ಪ್ರಶಾಂತ್ ಕಿಶೋರ್‌ಗೆ ಉತ್ತರಪ್ರದೇಶದಲ್ಲಿ ಪಕ್ಷದ ಗೆಲುವಿನ ಬಗ್ಗೆ ಯಾವುದೇ ಭರವಸೆಯಿಲ್ಲವಂತೆ. ಆದರೆ ಇದನ್ನೊಂದು ಸವಾಲಾಗಿ ಪರಿಗಣಿಸಿರುವ ಕಿಶೋರ್, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನಾಮಾವಶೇಷಗೊಳ್ಳುವ ಬದಲು ಕನಿಷ್ಠ ನಾಲ್ಕನೆ ಸ್ಥಾನವನ್ನಾದರೂ ತಲುಪುವಂತೆ ಮಾಡಲು ಹೊಸ ಮೈತ್ರಿಕೂಟಗಳ ಸಾಧ್ಯತೆಯ ಹುಡುಕಾಟದಲ್ಲಿದ್ದಾರೆ. ಕಿಶೋರ್ ಇತ್ತೀಚೆಗೆ ಸಮಾಜವಾದಿ ಪಕ್ಷದ ಕೆಲವು ನಾಯಕರ ಜೊತೆ ನಡೆಸಿದ ಮಾತುಕತೆಯನ್ನು ಅವರ ವೈಯಕ್ತಿಕ ವಿಷಯವಾಗಿದ್ದು, ತನಗೆ ಸಂಬಂಧಿಸಿದ್ದಲ್ಲವೆಂದು ಕಾಂಗ್ರೆಸ್ ತಳ್ಳಿಹಾಕಿತ್ತು. ಆದರೆ ಹಾಗೆಂದು ಅದನ್ನು ನಿರ್ಲಕ್ಷಿಸುವಂತಿಲ್ಲ. ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಬೆಳೆಸಿದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಬಹುದೆಂದು ಕಿಶೋರ್ ಭಾವಿಸಿದ್ದಾರೆ. ಹೀಗಾಗಿ ಅವರು ಎಸ್ಪಿ ನಾಯಕರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ಆದರೆ ಸಮಾಜವಾದಿ ಪಕ್ಷವು ಇದರಿಂದ ಹುರುಪುಗೊಂಡಿರುವಂತೆ ಕಾಣುತ್ತಿಲ್ಲ. ಇದಕ್ಕಿಂತಲೂ ಮಿಗಿಲಾಗಿ ಎಸ್ಪಿಯು ಪಕ್ಷದೊಳಗಿನ ಅಂತಃಕಲಹದಿಂದ ತತ್ತರಿಸಿದೆ. ಆದರೆ ಕಿಶೋರ್‌ಗೆ ಪಂಜಾಬ್‌ನಲ್ಲಿ ತನ್ನ ಪಕ್ಷವು ಗೆಲ್ಲುವ ಬಗ್ಗೆ ಖಚಿತ ಭರವಸೆಯಿದೆ. ಒಟ್ಟಿನಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯು ಕಾಂಗ್ರೆಸ್‌ಗೆ ನಿರಾಶೆಯ ಕಾರ್ಮೋಡದ ನಡುವೆ ಬೆಳ್ಳಿಗೆರೆಯಾಗಿ ಕಾಣುತ್ತಿದೆ.
ಬಡಪಾಯಿ ಶೀಲಾ...
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಶೀಲಾ ದೀಕ್ಷಿತ್‌ರನ್ನು ಪ್ರಶಾಂತ್ ಕಿಶೋರ್ ನಡುದಾರಿಯಲ್ಲೇ ಕೈಬಿಟ್ಟಿದ್ದಾರೆಯೇ?. ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಶೀಲಾಗೆ ಅಳುಕುತ್ತಿದ್ದರೂ, ಪಕ್ಷದ ಬಲವಂತಕ್ಕಾಗಿ ಅದನ್ನವರು ಒಪ್ಪಿಕೊಳ್ಳಬೇಕಾಯಿತು. ಆದರೆ ಆನಂತರ ನಡೆದ ಬೆಳವಣಿಗೆಗಳು ತನ್ನ ಹಾಗೂ ಪಕ್ಷದ ಗೆಲುವಿನ ಅವಕಾಶಗಳ ಬಗ್ಗೆ ಅವರ ವಿಶ್ವಾಸವನ್ನು ಬಲಪಡಿಸುವ ಬದಲು ಕುಂದುವಂತೆ ಮಾಡಿತು. ಅವರ ಸಭೆಗಳಿಗೆ ಕಡಿಮೆ ಸಂಖ್ಯೆಯ ಜನರು ಭಾಗವಹಿಸಿದ್ದರು. ಅವರಿಗೆ ಅತೀ ಕಡಿಮೆ ಬೆಂಬಲ ಕಂಡುಬರುತ್ತಿದೆ. ಸ್ಥಳೀಯ ಮಾಧ್ಯಮಗಳೂ ಅವರ ಸುದ್ದಿಗಳಿಗೆ ಹೆಚ್ಚಿನ ಕವರೇಜ್ ನೀಡುತ್ತಿಲ್ಲ. ಇವೆಲ್ಲವುಗಳಿಂದಾಗಿ ಸಹಜವಾಗಿಯೇ ಅವರು ಕಳೆದ ಸೆಪ್ಟಂಬರ್‌ನಿಂದೀಚೆಗೆ ರಾಜ್ಯಕ್ಕೆ ಕಾಲಿಡಲು ಹಿಂದೇಟುಹಾಕುತ್ತಿದ್ದಾರೆ. ಚುನಾವಣೆಯಲ್ಲಿ ತನ್ನ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಶೀಲಾ, ಸೋನಿಯಾ ಬಳಿ ತನ್ನ ಸಂದೇಹಗಳನ್ನು ವ್ಯಕ್ತಪಡಿಸಿದ್ದಾರಂತೆ. ಅದಕ್ಕೆ ಸೋನಿಯಾ ತುಸು ತಾಳ್ಮೆಯಿಂದಿರುವಂತೆ ಸೂಚಿಸಿದ್ದಾರೆ. ಆದರೆ ತನ್ನ ಬೆಂಬಲಿಗರು ಕೇಳುತ್ತಿರುವ ಪ್ರಶ್ನೆಗಳಿಗೆ ಹೇಗೆ ವೌನ ವಹಿಸಲು ಶೀಲಾರಿಗೆ ಸಾಧ್ಯ?. ಎಂದಿನಂತೆ, ಅವರಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಉತ್ತರ ದೊರೆಯುತ್ತಿಲ್ಲ.
ಕರೆನ್ಸಿ ಅಮಾನ್ಯತೆಗೆ ಉ.ಪ್ರ. ಚುನಾವಣೆ ನಂಟು?
ನರೇಂದ್ರ ಮೋದಿ ಸರಕಾರ ನಡೆಸಿದ ಮೊದಲ ಸರ್ಜಿಕಲ್ ದಾಳಿಯು ಗಡಿಪ್ರದೇಶದ ಗ್ರಾಮಗಳನ್ನು ಖಾಲಿಗೊಳಿಸಿತು. ಈಗ ನಡೆಸಿರುವ ಎರಡನೆ ದಾಳಿಯು ಮಾರುಕಟ್ಟೆಗಳನ್ನು ಭಣಗುಟ್ಟುವಂತೆ ಮಾಡಿದೆೆ. ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ಪ್ರಧಾನಿಯ ಈ ದಿಟ್ಟನಿರ್ಧಾರವನ್ನು ಜನರು ಒಲ್ಲದ ಮನಸ್ಸಿನಿಂದಲೇ ಗೌರವಿಸುತ್ತಿದ್ದಾರೆ. ಆದರೆ ಯೋಜನೆಯ ಕಳಪೆ ಅನುಷ್ಠಾನದಿಂದಾಗಿ ಆಡಳಿತಾರೂಢ ಸರಕಾರಕ್ಕೆ, ಅದರಿಂದ ದೊರೆಯಬಹುದಾಗಿದ್ದ ಪ್ರಯೋಜನ ಕೈತಪ್ಪಿಹೋಗಿರುವಂತೆ ಕಾಣುತ್ತಿದೆ. ಮೋದಿ ಬೆಂಬಲಿಗರಿರಲಿ ಅಥವಾ ಅಲ್ಲದೆ ಇರಲಿ ಪ್ರತಿಯೊಬ್ಬರು ಮೋದಿ ಯಾಕೆ ಹೀಗೆ ಮಾಡಿದರು ಎಂಬ ಬಗ್ಗೆ ತಮ್ಮದೇ ಆದ ಸಿದ್ಧಾಂತಗಳನ್ನು ಮುಂದಿಡುತ್ತಿದ್ದಾರೆ. ಆ ಪೈಕಿ ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಸಿದ್ಧಾಂತವು ಹೆಚ್ಚು ಜನಪ್ರಿಯವಾಗಿದೆ. ಪ್ರಧಾನಿಯ ನಡೆಗಳನ್ನು ಅರಿತುಕೊಳ್ಳಲು ಸಾಧ್ಯವಾಗದ ಕೆಲವು ಬಿಜೆಪಿ ನಾಯಕರು ಕೂಡಾ ಅದೇ ವಾದವನ್ನು ಮುಂದಿಡುತ್ತಿದ್ದಾರೆ. ಮೊದಲ ಸರ್ಜಿಕಲ್ ದಾಳಿಯ ಹಾಗೆಯೇ, ಎರಡನೆಯ ದಾಳಿ (ನಗದು ಅಮಾನ್ಯತೆ)ಗೂ ಕೂಡಾ ಉತ್ತರಪ್ರದೇಶದ ಚುನಾವಣೆಯೇ ಕಾರಣವೆಂದು ನಂಬಲಾಗುತ್ತಿದೆ. ಅಮಿತ್‌ಶಾ ಅವರ ಪರಿವರ್ತನ್ ಯಾತ್ರೆಗೆ ದೊರೆತ ನೀರಸ ಪ್ರತಿಕ್ರಿಯೆಯು ಉತ್ತರಪ್ರದೇಶದಲ್ಲಿ ತನ್ನ ನಿರ್ಣಾಯಕ ವೋಟ್‌ಬ್ಯಾಂಕ್‌ಗಳು ಮಾಯಾವತಿಯ ಕಡೆಗೆ ವಾಲುತ್ತಿರುವುದನ್ನು ಬಿಜೆಪಿಗೆ ನಿಚ್ಚಳವಾಗಿ ತೋರಿಸಿಕೊಟ್ಟಿತು. ಇಂತಹ ಸನ್ನಿವೇಶದಲ್ಲಿ ಅಭ್ಯರ್ಥಿಗಳ ಟಿಕೆಟ್ ಮಾರಾಟಕ್ಕೆ ಹಾಗೂ ಪಕ್ಷಗಳ ನಿಧಿ ದೇಣಿಗೆಗೆ ಕಡಿವಾಣ ಹಾಕುವ ಮೂಲಕ ಬಿಜೆಪಿ ವಿರೋಧಿಗಳನ್ನು ಕಂಗಾಲು ಮಾಡಲು ಮೋದಿಗೆ ಇದಕ್ಕಿಂತ ಒಳ್ಳೆಯ ಮಾರ್ಗ ಬೇರೇನಿದೆ?. ಆದರೆ ಇದರಿಂದ ಪಕ್ಷಕ್ಕೆ ಚುನಾವಣೆಯಲ್ಲಿ ಭರ್ಜರಿ ಲಾಭವಾಗುವುದೇ ಎಂಬ ಪ್ರಶ್ನೆಯನ್ನು ಈಗ ಪ್ರತಿಯೊಬ್ಬರೂ ಕೇಳುತ್ತಿದ್ದಾರೆ. ವರದಿಗಳ ಪ್ರಕಾರ ಜನ ಸಂಕಷ್ಟಕ್ಕೆ ಸಿಲುಕಿರುವುದು ನಿಜ. ಆದರೆ, ನಗದು ಅಮಾನ್ಯತೆಯು ಕೆಟ್ಟ ನಿರ್ಧಾರವಲ್ಲವೆಂದು ಬಡವರು ಕೂಡಾ ಹೇಳುತ್ತಿದ್ದಾರೆ. ಒಟ್ಟಾರೆ ಬಿಜೆಪಿಯ ಈ ತಂತ್ರಗಾರಿಕೆ ಫಲಿಸುವುದೇ ಎಂಬುದನ್ನು ಕಾದುನೋಡಬೇಕಿದೆ.
ಕರೆನ್ಸಿ ಅಮಾನ್ಯತೆ ಗೊಂದಲ: ಯಾರ ತಲೆದಂಡ?
ನಗದು ಅಮಾನ್ಯತೆ ಅಭಿಯಾನವು ಯೋಜನೆಯಂತೆ ನಡೆಯದೆ ಇರುವುದಕ್ಕಾಗಿ ಯಾರು ತಲೆದಂಡ ನೀಡಬೇಕಾಗುತ್ತದೆಯೆಂಬ ಬಗ್ಗೆ ದಿಲ್ಲಿಯ ಅಧಿಕಾರದ ಕಾರಿಡಾರ್‌ಗಳಲ್ಲಿ ಗಾಳಿಸುದ್ದಿಗಳು ಹರಿದಾಡುತ್ತಿವೆ. ನಗದು ಅಮಾನ್ಯತೆಯ ಕಾರ್ಯಾಚರಣೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮೊದಲ ಎರಡು ದಿನ ಪತ್ರಿಕಾಗೋಷ್ಠಿಗಳಲ್ಲಿ ಮಾತನಾಡಿದ್ದನ್ನು ಬಿಟ್ಟರೆ, ಆ ಬಳಿಕ ಸದ್ದಿಲ್ಲದೆ ಹಿಂದೆ ಸರಿದಿದ್ದಾರೆ. ಆ ಮೂಲಕ ಪತ್ರಕರ್ತರ ಪ್ರಶ್ನೆಗಳ ಸುರಿಮಳೆಯಿಂದ ಪಾರಾಗುತ್ತಿದ್ದಾರೆ. ಕೇಂದ್ರ ಸರಕಾರದ ಕಂದಾಯ ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ್‌ದಾಸ್ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ನೂತನ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಕೂಡಾ ನಗದು ಅಮಾನ್ಯತೆಯ ಬಗ್ಗೆ ಹೆಚ್ಚೇನೂ ಮಾತನಾಡುತ್ತಿಲ್ಲ. ಇದೇ ರೀತಿಯ ಅವ್ಯವಸ್ಥೆ ಮುಂದುವರಿದಲ್ಲಿ ಯಾರು ತಲೆದಂಡ ನೀಡಬೇಕಾಗುವುದೆಂಬ ಪ್ರಶ್ನೆ ಈಗ ಎಲ್ಲರ ಬಾಯಿಂದಲೂ ಕೇಳಿಬರುತ್ತಿದೆ. ನಗದು ಅಮಾನ್ಯತೆ ಜಾರಿಗೊಂಡ ಬಳಿಕ ವೌನಕ್ಕೆ ಶರಣಾಗಿರುವ ಪಕ್ಷದ ಹಲವಾರು ಸಚಿವರನ್ನು ಕೂಡಾ ತಾವು ಯಾಕೆ ಈ ಕ್ರಮಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಯಾಕೆ ವ್ಯಕ್ತಪಡಿಸಿಲ್ಲವೆಂದು ಪಕ್ಷದ ನಾಯಕತ್ವ ಕೇಳುವ ಸಾಧ್ಯತೆಯೂ ಇದೆ.
ರಾಜತಾಂತ್ರಿಕತೆಯೇ ಅಥವಾ ಜೂಜಾಟವೇ?
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಶೀಘ್ರದಲ್ಲೇ ಮಾತುಕತೆ ಏರ್ಪಾಡಾಗುವಂತೆ ಮಾಡಲು ಭಾರತದ ವಿದೇಶಾಂಗ ಕಾರ್ಯದರ್ಶಿಯವರನ್ನು ಸದ್ದಿಲ್ಲದೆ ಅಮೆರಿಕಕ್ಕೆ ಕಳುಹಿಸಿಕೊಡಲಾಗಿದೆ. ಟ್ರಂಪ್ ಅಚ್ಚರಿಯ ಗೆಲುವು ಸಾಧಿಸಿದ ಕೆಲವೇ ದಿನಗಳ ಬಳಿಕ ವಿದೇಶಾಂಗ ಕಾರ್ಯದರ್ಶಿ ಅಮೆರಿಕಕ್ಕೆ ಪ್ರಯಾಣಿಸಿದ್ದಾರೆ. ಆದರೆ ಜೈಶಂಕರ್ ಟ್ರಂಪ್ ಅವರ ಸರಕಾರ ರಚನೆ ತಂಡದ ಸದಸ್ಯರನ್ನು ಭೇಟಿಯಾಗಲು ಶಕ್ತರಾಗುವರೇ ಎಂಬ ಪ್ರಶ್ನೆ ಈಗ ಎಲ್ಲರ ಬಾಯಲ್ಲೂ ನಲಿದಾಡುತ್ತಿದೆ. ಟ್ರಂಪ್‌ರ ತಂಡವು ಸಂಪುಟ ರಚನೆಯಲ್ಲಿ ಬ್ಯುಸಿಯಾಗಿರುವಾಗ ಅವರಲ್ಲಿ ಯಾರಾದರೂ ಜೈಶಂಕರ್‌ಗೆ ಭರವಸೆ ನೀಡುವ ಪರಿಸ್ಥಿತಿಯಲ್ಲಿದ್ದಾರೆಯೇ?. ಆದರೆ ಜೈಶಂಕರ್ ಅಮೆರಿಕದ ಮಾಜಿ ರಾಯಭಾರಿಯಾಗಿರುವುದರಿಂದ ಟ್ರಂಪ್‌ರನ್ನು ಭೇಟಿಯಾಗಲು ಅವರು ತನಗಿರುವ ಕೆಲವು ಸಂಪರ್ಕಗಳನ್ನು ಬಳಸಿಕೊಳ್ಳಬಹುದಾಗಿದೆಯೆಂದು ಮೋದಿ ಭಾವಿಸಿದಂತಿದೆ. ಟ್ರಂಪ್ ಭಾರತದ ಬಗ್ಗೆ ಸದಾಭಿಪ್ರಾಯ ಹೊಂದಿರುವುದಾಗಿ ದಿಲ್ಲಿ ರಾಜತಾಂತ್ರಿಕ ಸಮುದಾಯಕ್ಕೆ ಮನವರಿಕೆಯಾಗಿದೆ. ಹೀಗಾಗಿ ಸರಕಾರ ತುರ್ತಾಗಿ ಈ ಪ್ರಯತ್ನಕ್ಕೆ ಕೈಹಾಕಿದೆ. ಆದರೆ ಜೈಶಂಕರ್ ಭೇಟಿಯು ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಸಾಧಿಸಿದಂತೆ ಕಾಣುತ್ತಿಲ್ಲ.