ಒಬಾಮಗೂ ಎಂಎಂಎಸ್ ಅಚ್ಚುಮೆಚ್ಚು
ಒಬಾಮಗೂ ಎಂಎಂಎಸ್ ಅಚ್ಚುಮೆಚ್ಚು
ನೋಟು ಅಮಾನ್ಯತೆಯ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ (ಎಂಎಂಎಸ್)ರಾಜ್ಯಸಭೆಯಲ್ಲಿ ಮಾಡಿದ 6.33 ನಿಮಿಷಗಳ ಅವಧಿಯ ಭಾಷಣಕ್ಕೆ ವ್ಯಾಪಕವಾದ ಪ್ರಶಂಸೆ ವ್ಯಕ್ತವಾಗಿರುವುದು ಹಾಗೂ ಮಾಧ್ಯಮಗಳು ಅತಿಯಾದ ಪ್ರಚಾರ ನೀಡಿರುವುದು ಬಿಜೆಪಿಯನ್ನು ತಬ್ಬಿಬ್ಬುಗೊಳಿಸಿದೆ. ಮನಮೋಹನ್ ವಿಷಯವಾಗಿ ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ ಚಿಂತೆಯುಂಟು ಮಾಡಿರುವ ಇನ್ನೂ ಕೆಲವು ಸಂಗತಿಗಳಿವೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ತನ್ನ ಸ್ನೇಹಿತನೆಂದು ಮೋದಿ ಹೇಳಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ ಒಬಾಮಾ ತನ್ನ ಶ್ವೇತಭವನದ ದಿನಗಳ ಬಗ್ಗೆ ಬರೆದ ಕೃತಿಯಲ್ಲಿ ಮೋದಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಮೋದಿಯ ಪೂರ್ವಾಧಿಕಾರಿ ಮನಮೋಹನ್‌ಸಿಂಗ್‌ರನ್ನು ಒಬಾಮಾ ತನ್ನ ಕೃತಿಯಲ್ಲಿ ಅಪಾರವಾಗಿ ಪ್ರಶಂಸಿಸಿರುವುದು ಹಾಲಿ ಪ್ರಧಾನಿ ಅಭಿಮಾನಿ ಬಳಗಕ್ಕೆ ಹತಾಶೆಯುಂಟು ಮಾಡಿದೆ. ಸಿಂಗ್ ಅವರು ಜಗತ್ತಿನಾದ್ಯಂತ ಗೌರವಾದರಗಳನ್ನು ಹೊಂದಿರುವ ಪ್ರಸಿದ್ಧ ಅರ್ಥಶಾಸ್ತ್ರಜ್ಞನೆಂದು ಒಬಾಮ ತನ್ನ ಕೃತಿಯಲ್ಲಿ ಬಣ್ಣಿಸಿದ್ದಾರೆ. ಒಬಾಮಾ ಹಾಗೂ ಸಿಂಗ್ ನಡುವೆ ಇರುವ ಕೆಮೆಸ್ಟ್ರಿಗೆ ಇವರಿಬ್ಬರ ಹಾರ್ವರ್ಡ್ ನಂಟು ಕಾರಣವೆಂದು ಕೆಲವರು ಹೇಳಿದ್ದಾರೆ. ಒಬಾಮಾ ಹಾರ್ವರ್ಡ್ ವಿವಿ ವಿದ್ಯಾರ್ಥಿಯಾಗಿದ್ದರೆ, ಸಿಂಗ್ ಅವರು ಹಾರ್ವರ್ಡ್ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದವರಾಗಿದ್ದಾರೆ. ಅದೇನಿದ್ದರೂ, ಮೋದಿ ಹಾಗೂ ಅವರ ಅಭಿಮಾನಿಗಳಿಗೆ ಈಗ ಸ್ವಲ್ಪ ಮಟ್ಟಿಗಾದರೂ ಬೇಸರವುಂಟಾಗಿದೆ.
**************************************
ಚಿಂತಾಕ್ರಾಂತ ಅಮಿತ್ ಶಾ
ಕರೆನ್ಸಿ ಅಮಾನ್ಯತೆ ಅಥವಾ ಹಿಂದಿ ಭಾಷಿಕ ಪ್ರದೇಶಗಳಲ್ಲಿ ಕರೆಯಲಾಗುತ್ತಿರುವಂತೆ ‘ನೋಟ್‌ಬಂದಿ’ ಈಗ ಭಾರತದ ಉದ್ದಗಲಕ್ಕೂ ಹೊಸಪದವಾಗಿ ಪ್ರಚಲಿತಕ್ಕೆ ಬಂದಿದೆ. ಈ ವಿದ್ಯಮಾನವು ಈಗ ಅಪ್ಪಟವಾದ ಅರ್ಥಿಕ ಪ್ರಕ್ರಿಯೆಯಾಗಿ ಉಳಿದಿಲ್ಲ. ಅದೊಂದು ಬಲವಾದ ರಾಜಕೀಯ ವಿಷಯವಾಗಿ ಮಾರ್ಪಾಡುಗೊಂಡಿದೆ. ಶೀಘ್ರದಲ್ಲಿಯೇ ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರಪ್ರದೇಶದಲ್ಲಿ ನೋಟ್ ಬಂದಿ ವಿಷಯವನ್ನು ಪ್ರತಿಯೊಬ್ಬ ರಾಜಕೀಯ ನಾಯಕನೂ ಪ್ರಸ್ತಾಪಿಸುತ್ತಿದ್ದಾನೆ. ನಿರೀಕ್ಷೆಯಂತೆ ಸಮಾಜವಾದಿ ಪಕ್ಷದ ನಾಯಕ ಹಾಗೂ ರಾಜ್ಯದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡಾ ಈ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಬಿಜೆಪಿಯ ತಳಮಳಕ್ಕೆ ಕಾರಣವಾಗಿದೆ ಹಾಗೂ ಅದು ನೋಟ್ ಬಂದಿಯನ್ನು ಯಶಸ್ವಿಯಾಗುವಂತೆ ಮಾಡಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದೆ. ತೀರಾ ಇತ್ತೀಚೆಗೆ ಉತ್ತರಪ್ರದೇಶದ ಬಿಜೆಪಿ ಸಂಸದರೊಬ್ಬರು ಅಮಿತ್‌ಶಾ ಅವರಿಗೆ ಕರೆ ಮಾಡಿ, ನೋಟು ಅಮಾನ್ಯತೆಯ ಕ್ರಮವನ್ನು ಶ್ಲಾಘಿಸತೊಡಗಿದರು. ಆಗ ಶಾ, ಹೊಗಳುವುದನ್ನು ಅಲ್ಲಿಗೆ ನಿಲ್ಲಿಸುವಂತೆ ಹಾಗೂ ರಾಜ್ಯದ ಲ್ಲಿನ ವಾಸ್ತವಿಕ ಸನ್ನಿವೇಶದ ಬಗ್ಗೆ ವಿವರಿಸುವಂತೆ ಆ ಸಂಸದನಿಗೆ ತಿಳಿಸಿದರು. ತಬ್ಬಿಬ್ಬುಗೊಂಡ ಸಂಸದನು, ಉತ್ತರಿಸಲು ತಡವರಿಸಿದಾಗ ಆ ಬಗ್ಗೆ ಪ್ರಾಮಾಣಿಕವಾಗಿ ಉತ್ತರಿಸುವಂತೆ ಆತನನ್ನು ಶಾ ಬಲವಂತಪಡಿಸಬೇಕಾಯಿತು. ಏನಿದ್ದರೂ ಆತಂಕಿತರಾದ ಶಾ ಅವರು ನೋಟು ಅಮಾನ್ಯತೆಯ ಪರಿಣಾಮದ ಬಗ್ಗೆ ನಿಕಟವಾದ ನಿಗಾವಿರಿಸಿದ್ದಾರೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ನೋಟು ಅಮಾನ್ಯತೆಯ ವಿಷಯವಾಗಿ ಪಕ್ಷದೊಳಗೆ ಬಂಡಾಯವುಂಟಾಗುವುದನ್ನು ತಾನು ತಪ್ಪಿಸಿರುವುದಾಗಿ ಬಿಜೆಪಿ ಭಾವಿಸಿಕೊಂಡಿರಬಹುದು. ಆದರೆ ಸರಕಾರದ ಈ ನಡೆಯನ್ನು ಸಂದೇಹಿಸುವ ಕೆಲವರು ಪಕ್ಷದಲ್ಲಿದ್ದಾರೆ. ಇದು ಶಾ ಅವರಿಗೂ ತಿಳಿದಿದೆ.
**********************
ಪಂಜಾಬ್‌ನಲ್ಲಿ ಕಿಶೋರ್ ಭಲ್ಲೆ ಭಲ್ಲೆ...
500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ಹಳೆಯ ನೋಟು ಗಳು ನಾಪತ್ತೆಯಾಗಿವೆ. ಹಾಗೆಯೇ ಉತ್ತರಪ್ರದೇಶದಲ್ಲಿ ಪ್ರಶಾಂತ್ ಕಿಶೋರ್ ಕೂಡಾ ಕಾಣೆಯಾಗಿದ್ದಾರೆ. ರಾಹುಲ್‌ಗಾಂಧಿಯ ಕಿಸಾನ್ ಯಾತ್ರೆಯನ್ನು ಸಂಘಟಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಕಿಶೋರ್‌ಗಾಗಿ ಉತ್ತರಪ್ರದೇಶದಲ್ಲಿ ಕಾಂಗ್ರೆಸಿಗರು ಹುಡುಕಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಿಶೋರ್ ಚಂಡೀಗಡ ಹಾಗೂ ಪಟಿಯಾಲಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಪಂಜಾಬ್ ಕಾಂಗ್ರೆಸ್ ಹಾಗೂ ಅಮರೀಂದರ್‌ಸಿಂಗ್‌ಗೆ ಚುನಾವಣಾ ತಂತ್ರದ ಕರಡನ್ನು ರೂಪಿಸಲು ನೆರವಾಗುತ್ತಿದ್ದಾರೆ. ಕಿಶೋರ್ ತನ್ನ ನೆಲೆಗಳನ್ನು ಬದಲಾಯಿಸಿಕೊಂಡಿರುವ ಕುರಿತಾಗಿ ಕಾಂಗ್ರೆಸ್ ವಲಯಗಳಲ್ಲಿ ವ್ಯಾಪಕವಾದ ವದಂತಿಯೊಂದು ಹರಿದಾಡುತ್ತಿದೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆಯನ್ನು ಮಾಡುವ ಸಾಧ್ಯತೆಗಳು ಅತ್ಯಧಿಕವಾಗಿವೆ. ಆದರೆ ಕಿಶೋರ್ ಅವರ ಸತ್ವಪರೀಕ್ಷೆಯ ನೆಲವಾದ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ನಡೆಯುವ ಚತುಷ್ಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್ ನಾಲ್ಕನೆ ಸ್ಥಾನಕ್ಕೆ ಕುಸಿಯಲಿದ್ದು, ಅತ್ಯಂತ ಕಳಪೆ ಸಾಧನೆ ಪ್ರದರ್ಶಿಸಲಿದೆಯೆಂದು ಚುನಾವಣಾ ಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಮಹಾಮೈತ್ರಿಕೂಟ ರಚನೆಯ ಚಿಂತನೆಯನ್ನು ಹರಿಯಬಿಡುವ ಮೂಲಕ ಉತ್ತರಪ್ರದೇಶದಲ್ಲಿ ಕಿಶೋರ್ ತನ್ನ ಗುಂಡಿಯನ್ನು ತಾನೇ ತೋಡಿಕೊಂಡಿದ್ದಾರೆಂದು ಕಾಂಗ್ರೆಸ್ ಭಾವಿಸಿದೆ. ಮಹಾಮೈತ್ರಿಕೂಟ ಬಿಹಾರದಲ್ಲಿ ಯಶಸ್ವಿಯಾಗಿತ್ತು. ಆದರೆ ಬಿಹಾರದಲ್ಲಿ ಸಾಧ್ಯ ವಾದದ್ದು, ಉತ್ತರಪ್ರದೇಶದಲ್ಲಿಯೂ ಆಗಬೇಕೆಂದೇನಿಲ್ಲವಲ್ಲ. ಕಿಶೋರ್‌ಗೆ ಇದು ಅರಿವಾಗಿದೆಯೇ?
*************************
ಅಮರೀಂದರ್‌ಗೆ ಮುಖಭಂಗ
ನವಜೋತ್‌ಸಿಂಗ್ ಸಿಧು ಅವರು ಹಾಗೂ ಮಾಜಿ ಹಾಕಿ ಆಟಗಾರ್ತಿ ಪರ್ಗತ್‌ಸಿಂಗ್ ಶೀಘ್ರದಲ್ಲೇ ಪಕ್ಷಕ್ಕೆ ಸೇರಲಿದ್ದಾರೆಂದು ಕಾಂಗ್ರೆಸ್ ಪ್ರಕಟಿಸುವುದರೊಂದಿಗೆ, ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಕ್ಯಾಪ್ಟನ್ ಅಮರೀಂದರ್‌ಸಿಂಗ್ ಪಕ್ಷದೊಳಗೆ ನಡೆಯುತ್ತಿದ್ದ ಸಣ್ಣ ಮಟ್ಟದ ಕದನವೊಂದರಲ್ಲಿ ಸೋಲುಂಡಂತಾಗಿದೆ. ಸಿಧು ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಚಿಂತನೆಯನ್ನು ಅಮರೀಂದರ್‌ಸಿಂಗ್ ವಿರೋಧಿಸಿದ್ದರು. ಆದರೆ ಸಿಧು ಹಾಗೂ ಅವರ ಬೆಂಬಲಿಗರು ಬಾದಲ್ ಸರಕಾರದ ವಿರುದ್ಧದ ಹೋರಾಟಕ್ಕೆ ಹೊಸ ಅಸ್ತ್ರವಾಗಲಿದ್ದಾರೆಂದು ಪಕ್ಷದಲ್ಲಿ ಅಮರೀಂದರ್ ಅವರ ಎದುರಾಳಿಯಾದ ಪ್ರತಾಪ್‌ಸಿಂಗ್ ಬಾಧ್ವಾ ಅವರು ರಾಹುಲ್‌ಗಾಂಧಿಗೆ ಮನವರಿಕೆ ಮಾಡಿರುವಂತೆ ಕಾಣುತ್ತದೆ. ಸಿಧು ಕೂಡಾ ಸ್ವಲ್ಪ ದಿನಗಳ ಆನಂತರ ಪಕ್ಷಕ್ಕೆ ಸೇರ್ಪಡೆಗೊಳ್ಳಬಹುದು ಹಾಗೂ ಒಂದು ವೇಳೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದರೆ ಅವರನ್ನು ಅಮೃತಸರ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ ಹಾಗೂ ಇನ್ನೊಂದೆಡೆ ಸಿಧು ಪತ್ನಿಗೆ ರಾಜ್ಯ ಸರಕಾರದಲ್ಲಿ ಸಚಿವ ಸ್ಥಾನ ದೊರೆಯಬಹುದೆಂಬ ವದಂತಿಗಳು ಹರಿದಾಡುತ್ತಿವೆ. ಪ್ರಸ್ತುತ ಈ ಕ್ಷೇತ್ರವನ್ನು ಅಮರೀಂದರ್‌ಸಿಂಗ್ ಪ್ರತಿನಿಧಿಸುತ್ತಿದ್ದು ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಅರುಣ್ ಜೇಟ್ಲಿಯವರನ್ನು ಪರಾಭವಗೊಳಿಸಿದ್ದರು. ಬಹುಶಃ ಸಿಧು ವಿಚಾರದಲ್ಲಿ ಅಮರೀಂದರ್ ತನಗಾಗಿರುವ ನೋವನ್ನು ನುಂಗಿಕೊಳ್ಳುತ್ತಿರುವ ಹಾಗೆ ಕಾಣುತ್ತಿದೆ. ಆದರೆ ಒಂದು ವೇಳೆ ಅವರು ಪಂಜಾಬ್ ಚುನಾವಣೆಯಲ್ಲಿ ಗೆದ್ದಲ್ಲಿ, ಈ ಅಪಮಾನವನ್ನು ಅವರು ಮರೆಯಲಿದ್ದಾರೆ.
*****************************
ಜೋಶಿಯವರ ಕನಸುಗಳು ಹಾಗೂ ವೌನ!
ನೋಟು ಅಮಾನ್ಯತೆಯನ್ನು ಬಿಜೆಪಿಯ ಪ್ರತಿಯೊಬ್ಬರೂ ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಈಗಾಗಲೇ ನಿಷ್ಕ್ರಿಯತೆಯ ಹಂತಕ್ಕೆ ತಲುಪಿರುವ ಮಾರ್ಗದರ್ಶಕ ಮಂಡಳಿಯ ಸದಸ್ಯರಾದ ಮುರಳಿ ಮನೋಹರ ಜೋಶಿಯಂತಹ ಕೆಲವರು ಈ ಸಂಕೀರ್ಣವಾದ ವಿಷಯದ ಬಗ್ಗೆ ವೌನವಹಿಸಲು ಬಯಸಿದ್ದಾರೆ. ಇತ್ತೀಚೆಗೆ ನಡೆದ ಆರೆಸ್ಸೆಸ್‌ನ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಜೋಶಿಯವರ ಬಳಿ ನೋಟು ಅಮಾನ್ಯತೆಯ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಅವರು ಉತ್ತರಿಸದೆ ವೌನ ತಾಳಿದ್ದರು. ಜೋಶಿಯವರ ಈ ವೌನವ್ರತದ ಹಿಂದೆ ಇರುವ ನೈಜ ಉದ್ದೇಶವನ್ನು ತಾವು ಕಂಡುಹಿಡಿದಿರುವುದಾಗಿ ಕೆಲವರು ಹೇಳಿಕೊಂಡಿದ್ದಾರೆ. ಈ ಹಿರಿಯ ಬಿಜೆಪಿ ನಾಯಕನು ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಲು ತೀವ್ರ ಆಸಕ್ತಿಯನ್ನು ಹೊಂದಿದ್ದ್ಜಾರೆ. ಹೀಗಿರುವಾಗ ನರೇಂದ್ರ ಮೋದಿಯವರ ನೋಟು ಅಮಾನ್ಯತೆ ನೀತಿಯ ಬಗ್ಗೆ ಹಗುರವಾದ ಪ್ರತಿಕ್ರಿಯೆ ನೀಡಿ, ಈ ಅವಕಾಶವನ್ನು ಕಳೆದುಕೊಳ್ಳುವುದು ಅವರಿಗೆ ಬೇಕಾಗಿಲ್ಲ. ಆದರೆ ಜೋಶಿ ಅವರು ಕರೆನ್ಸಿ ಅಮಾನ್ಯತೆಯ ಪರವಾಗಿ ಮಾತನಾಡಿ, ತನ್ನ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗುವ ತನ್ನ ಅವಕಾಶಗಳನ್ನು ಅವರು ಉಜ್ವಲಗೊಳಿಸಬಹುದಾಗಿತ್ತೆಂದು ಬಿಜೆಪಿ ಹಾಗೂ ಆರೆಸ್ಸೆಸ್‌ನೊಳಗಿನ ಕೆಲವರು ಭಾವಿಸಿದ್ದಾರೆ.