ಸಂಸತ್ತನ್ನು ‘ಚಿಲ್ಲರೆ’ ಮಾಡಿಬಿಟ್ಟರು
ಮೊನ್ನೆ ಸಂಸತ್ತಿನ ಚಳಿಗಾಲದ ಅಧಿವೇಶನದ 16ನೆ ದಿನವೂ ಸಂಸತ್ತಿನ ಎರಡೂ ಸದನಗಳು ಕೆಲಸ ಮಾಡದೆ ಮುಂದೂಡಿಕೆಯಾದಾಗ ಸಿಟ್ಟು ಬಂದದ್ದಾದರೂ ಯಾರಿಗೆ? ಒಂದು ಕಾಲದಲ್ಲಿ ವಾಜಪೇಯಿ ಎಂಬ ‘ಮುಕುಟ’ದ ಹಿಂದಿದ್ದ ‘ನಿಜಮುಖ’ ಲಾಲಕೃಷ್ಣ ಅಡ್ವಾಣಿ ಅವರಿಗೆ. ಪ್ರತಿಪಕ್ಷ ನಾಯಕರಾಗಿ ಅಡ್ವಾಣಿ ಅವರಿಗಿರುವಷ್ಟು ಅನುಭವ ಸದ್ಯಕ್ಕೆ ಸಂಸತ್ತಿನಲ್ಲಿ ಬೇರಾರಿಗೂ ಇಲ್ಲ. ‘ಮಾತಿನ ಮನೆ’ ರಾಜಕೀಯದ ‘ಕದನಗಳ ಮನೆ’ ಆಗುತ್ತಾ ಬಂದ 90ರ ದಶಕದುದ್ದಕ್ಕೂ ಸಂಸತ್ತಿನಲ್ಲಿ ಪ್ರತಿಪಕ್ಷದ ತೀವ್ರಗಾಮಿ ನಾಯಕರೆಂದು ಪರಿಗಣಿತರಾಗಿದ್ದವರು ಅವರು.
ಸ್ವತಃ ಅಡ್ವಾಣಿಯವರು 16ನೆ ದಿನ ಸಿಟ್ಟಿನಿಂದ ‘‘ಲೋಕಸಭೆಯ ಸ್ಪೀಕರ್ ಆಗಲಿ, ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವರಾಗಲಿ ಸದನ ನಡೆಸಲು ಆಸಕ್ತಿ ತೋರಿಸುತ್ತಿಲ್ಲ; ಸಂಸತ್ತು ಅದರಷ್ಟಕ್ಕೇ ಮನಸೋಇಚ್ಛೆ ನಡೆಯುತ್ತಿದೆ’’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಅದಾದ ಮರುದಿನ (ಗುರುವಾರ) ಸ್ವತಃ ದೇಶದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ದಿಲ್ಲಿಯಲ್ಲಿ ಉಪನ್ಯಾಸವೊಂದರಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ಬಗ್ಗೆ ಮಾತನಾಡುತ್ತಾ ‘‘ದಮ್ಮಯ್ಯ ನಿಮ್ಮ ಕೆಲಸ ಮಾಡಿ’’ ಎಂದು ಸಂಸತ್ ಸದಸ್ಯರಿಗೆ ಮನವಿ ಮಾಡಿದ್ದಾರೆ. ದಶಕಗಳ ಕಾಲ ಸಂಸದರಾಗಿ, ಸಚಿವರಾಗಿ ಅನುಭವಿ ಆಗಿರುವ ಮುಖರ್ಜಿ ಅವರಿಗೂ ಅಧಿವೇಶನದ ಹಾಲಿ ಸ್ಥಿತಿ ಕಿರಿಕಿರಿ ತಂದಿದೆ.
ಆಗಿರುವುದು ಏನು?
ಈಗ ಸಂಸತ್ತಿನಲ್ಲಿ ನಡೆದಿರುವುದು ನಿಯಮಗಳ ಹೆಸರಲ್ಲಿ ಗುದ್ದು ತಪ್ಪಿಸಿಕೊಳ್ಳುವ ಕದನ.
ಸಂಸತ್ತು ಆರಂಭ ಆದ ಕೂಡಲೇ ನೋಟು ರದ್ದತಿಯ ಬಗ್ಗೆ ಚರ್ಚಿಸಲು ನಿಯಮ 56ರ ಅಡಿ ನಿಲುವಳಿ ಸೂಚನೆ (ಅಛ್ಜಟ್ಠ್ಟ್ಞಞಛ್ಞಿಠಿ ಟಠಿಜಿಟ್ಞ) ಮಂಡಿಸಲಾಗಿತ್ತು. ಹಾಗೆಂದರೆ ಒಂದು ಪ್ರಮುಖವಾದ ವಿಚಾರದ ಕುರಿತು ಚರ್ಚೆಗಾಗಿ ಸದನದ ಬೇರೆಲ್ಲ ಕಲಾಪಗಳನ್ನು ಮುಂದೂಡಲು ಮತ್ತು ಆ ಪ್ರಮುಖ ವಿಚಾರದ ಚರ್ಚೆ ನಡೆಸಲು ಸ್ಪೀಕರ್ ಅವರ ಅನುಮತಿ ಕೋರುವುದು. ಅದನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಒಪ್ಪಿದ್ದರು, ಆ ಬಗ್ಗೆ ಚರ್ಚೆ ಆರಂಭವಾಗಿತ್ತು.
ಆದರೆ, ಈ ನಡುವೆ ಹಠಾತ್ತಾಗಿ ತಮ್ಮ ತಂತ್ರ ಬದಲಿಸಿದ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷಗಳು ಚರ್ಚೆಯನ್ನು ಸದನದೊಳಗೆ ಮತದಾನಕ್ಕೆ ಹಾಕಲು ಅವಕಾಶ ಇರುವ ನಿಯಮ 184ರ ಅನ್ವಯ ನಡೆಸಬೇಕು ಎಂದು ಪಟ್ಟು ಹಿಡಿದವು. ಇದಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಆಡಳಿತ ಪಕ್ಷವು ಚರ್ಚೆ ಈಗಾಗಲೇ ಆರಂಭ ಆಗಿರುವುದರಿಂದ ಅದನ್ನು ಮುಗಿಸೋಣ ಅಥವಾ ಮತದಾನಕ್ಕೆ ಆವಶ್ಯಕತೆ ಇಲ್ಲದ ನಿಯಮ 193ರ ಅನ್ವಯ ಚರ್ಚೆ ನಡೆಯಲಿ ಎಂಬ ನಿಲುವು ತಳೆದು ನಿಂತಿದೆ.
ನಡುವೆ ಪ್ರಧಾನಿ ಸಂಸತ್ತಿಗೆ ಬರಲಿಲ್ಲ ಎಂದು, ಬಂದರೂ ಮಾತನಾಡದೆ ಕುಳಿತಿದ್ದರು ಎಂದೂ ಉಪಗದ್ದಲಗಳು ನಡೆದವು. ಹೀಗೆ ನಡೆಯುತ್ತಾ ನಡೆಯುತ್ತಾ ಚಳಿಗಾಲದ ಸಂಸತ್ ಅಧಿವೇಶನ ಇನ್ನು ಒಂದೆರಡು ದಿನಗಳ ಕಾಲ ಮಾತ್ರ ಉಳಿದಿದೆ; ನೋಟುರದ್ದತಿಯ ಪರಿಣಾಮಗಳು ದೇಶದಾದ್ಯಂತ ತೋರಿಬರುತ್ತಿದ್ದರೂ ಆ ಬಗ್ಗೆ ಚರ್ಚಿಸಲು ದೇಶದ ಸಂಸತ್ತು ಬಹುತೇಕ ವಿಫಲಗೊಂಡಿದೆ.
ಸರಕಾರಕ್ಕೆ ಭಯ ಯಾಕೆ?
545 ಸದಸ್ಯರಿರುವ ಲೋಕಸಭೆಯಲ್ಲಿ 280 ಸದಸ್ಯಬಲ ಹೊಂದಿದ್ದು, ಯಾವುದೇ ವಿಚಾರವನ್ನು ಮತಕ್ಕೆ ಹಾಕಿದಲ್ಲಿ ನಿರಾಳವಾಗಿ ಗೆಲ್ಲಬಲ್ಲ ಪಕ್ಷವೊಂದು, ಮತಕ್ಕೆ ಹಾಕುವ ಅವಕಾಶ ಸಹಿತ ಚರ್ಚೆ ನಡೆಯಲಿ ಎಂಬ ಪ್ರತಿಪಕ್ಷಗಳ ಬೇಡಿಕೆಗೆ ಯಾಕೆ ಮಣೆ ಹಾಕುತ್ತಿಲ್ಲ ಎಂಬುದಕ್ಕೆ ಸರಿಯಾದ ತರ್ಕ ಅವರಲ್ಲಿಲ್ಲ. ಅಡ್ವಾಣಿಯವರ ಸಿಟ್ಟಿಗೂ ಮೂಲಭೂತ ಕಾರಣ ಇದೇ. ಯಾಕೆಂದರೆ, ಸಂಸತ್ತನ್ನು ಸುಗಮವಾಗಿ ನಡೆಸುವ ಜವಾಬ್ದಾರಿ ಹೊತ್ತಿರುವ ಸ್ಪೀಕರ್ ಮತ್ತು ಸಂಸದೀಯ ವ್ಯವಹಾರ ಸಚಿವರು ಈ ವಿಚಾರದಲ್ಲಿ ಪ್ರತಿಪಕ್ಷದವರೊಂದಿಗೆ ಕೊಡು-ಕೊಳ್ಳುವ ಸಾಮರಸ್ಯ ತೋರಿಸಿಲ್ಲ. ಇಂತಹದೊಂದು ಕೊಡು-ಕೊಳ್ಳುವಿಕೆ ಇಲ್ಲದೆ ಸದನ ನಡೆಯುವುದು ಸಾಧ್ಯವೂ ಇಲ್ಲ.
ನಿಚ್ಚಳ ಬಹುಮತ ಇರುವ ಪಕ್ಷಕ್ಕೆ ಸದನದೊಳಗೆ ಮತದಾನ ನಡೆಸಿ, ಗೆದ್ದು ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಹಿಂಜರಿಕೆ ಯಾಕೆ ಎಂಬ ವಿಚಾರ ಹೊರಗಿನಿಂದ ನೋಡುವವರಿಗೆ ಅರ್ಥ ಆಗುತ್ತಿಲ್ಲ. ಆಳುವವರ ಪರ ಇರುವ ಬಹುಸಂಖ್ಯಾತ ಮಾಧ್ಯಮಗಳಂತೂ ‘‘ಪ್ರತಿಪಕ್ಷಗಳು ಸದನ ನಡೆಸಲು ಬಿಡುತ್ತಿಲ್ಲ, ಸಂಸತ್ತಿನ ಸಮಯ ಹಾಳು ಮಾಡುತ್ತಿವೆ, ದೇಶಕ್ಕೆ ನಷ್ಟ ಆಗುತ್ತಿದೆ’’ ಎಂದು ಗೌಜೆಬ್ಬಿಸುತ್ತಿವೆ. 17 ಪ್ರತಿಪಕ್ಷಗಳು ಒಟ್ಟಾಗಿ ನಿಯಮ 184ರಡಿ ಚರ್ಚೆ ಆಗಲಿ ಎನ್ನುತ್ತಿರುವಾಗ, ತನ್ನ ಬೆಂಬಲಿಗ ಪ್ರತಿಪಕ್ಷ ತೆಲಂಗಾಣ ರಾಷ್ಟ್ರ ಸಮಿತಿಯ ಸದಸ್ಯರೊಬ್ಬರ ಮೂಲಕ ನಿಯಮ 193ರ ಅಡಿ ಚರ್ಚೆ ಆರಂಭಿಸಲು ಸರಕಾರ ವಿಫಲ ಯತ್ನ ನಡೆಸಿದ್ದೂ ಗುರುವಾರ ಸದನದಲ್ಲಿ ದಾಖಲಾಯಿತು.
ತೇಲಿಸಿಬಿಡುವ ಪ್ರಯತ್ನ
ನೋಟು ರದ್ದತಿ ಪ್ರಕಟಿಸಿದ ಆರಂಭದ ದಿನಗಳಲ್ಲಿ ಹೊಂದಿದ್ದ ‘ಆತ್ಮವಿಶ್ವಾಸ’ ಈವತ್ತು ಸರಕಾರದಲ್ಲಿ ತೋರುತ್ತಿಲ್ಲ. ಸದನದಲ್ಲಿ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಬೇಕಾಗಿದ್ದ ಪ್ರಧಾನಮಂತ್ರಿಗಳು ಸಾರ್ವಜನಿಕ ಸಭೆಗಳಲ್ಲಿ ‘ದೇಶದ ಜನ ತನ್ನೊಂದಿಗಿದ್ದಾರೆ’ ಎಂದು ಪರೋಕ್ಷವಾಗಿ ಸಮರ್ಥಿಸಿಕೊಳ್ಳಲಾರಂಭಿಸಿದ್ದಾರೆ.
ಇದೇ ವೇಳೆಗೆ, ನೋಟು ರದ್ದತಿಯ ಆರಂಭದ ದಿನಗಳಲ್ಲಿ ಅಚ್ಚರಿ, ಆಘಾತ ಅನುಭವಿಸಿ, ನೋಟು ರದ್ದತಿಯನ್ನು ಬೆಂಬಲಿಸಲೋ ಬೇಡವೋ ಎಂಬ ದ್ವಂದ್ವ ಹೊಂದಿದ್ದ ಪ್ರತಿಪಕ್ಷಗಳು ದಿನ ಕಳೆದಂತೆ, ಹೊಸನೋಟು ಪೂರೈಕೆಯ ಅಧ್ವಾನಗಳು ಒಂದೊಂದಾಗಿ ಹೊರಬರತೊಡಗಿದಾಗ ಎಚ್ಚೆತ್ತುಕೊಂಡಿವೆ; ಸರಕಾರದ ನೋಟುರದ್ದತಿ ತೀರ್ಮಾನಕ್ಕೆ ಸಮರ್ಪಕ ತಯಾರಿ ಇಲ್ಲದ್ದರ ವಿರುದ್ಧ ಬಲವಾಗಿ ಹರಿಹಾಯತೊಡಗಿವೆ.
ಇಂತಹದೊಂದು ಸನ್ನಿವೇಶದಲ್ಲಿ, ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲು ಸದನದೊಳಗೆ ಹೆಣಗಾಡುವ ಬದಲು, ಸಣ್ಣದೊಂದು ನಿಯಮದ ಹೆಸರಲ್ಲಿ ಅಳುಕದೆ ನಿಂತು, ಪ್ರತಿಪಕ್ಷಗಳೇ ಗದ್ದಲ ಎಬ್ಬಿಸಿ ಸದನ ನಡೆಯಗೊಡಲಿಲ್ಲ ಎಂದು ಬಿಂಬಿಸಿ ತೂಗುವ ಕತ್ತಿಯಿಂದ ಪಾರಾಗಲು ಹೊರಟಂತಿದೆ ಕೇಂದ್ರ ಸರಕಾರದ ನಿಲುವು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ನೋಟುರದ್ದತಿಯ ಚರ್ಚೆ ನಡೆಯದಿದ್ದರೆ, ಅದರ ಲಾಭ ಇರುವುದು ಕೇವಲ ಆಳುವ ಪಕ್ಷಕ್ಕೆ ಮಾತ್ರ. ಹಾಗಾಗಿ ಅಧಿವೇಶನದ ಕೊನೆಯ ದಿನವಾದ ಡಿಸೆಂಬರ್ 16ರ ತನಕವೂ ಸದನವನ್ನು ತೇಲಿಸಿಬಿಡುವ ಪ್ರಯತ್ನದಲ್ಲಿದೆ ಕೇಂದ್ರ ಸರಕಾರ.
ಮನಸ್ಸಿದ್ದರೆ ಪರಿಹಾರವೂ ಇತ್ತು !
ಲೋಕಸಭೆಯ ನಿವೃತ್ತ ಮಹಾಕಾರ್ಯದರ್ಶಿ ಸುಭಾಸ್ ಸಿ. ಕಶ್ಯಪ್ ಅವರು ಒಂದು ಕುತೂಹಲಕರ ವಾದವನ್ನು ಮಂಡಿಸುತ್ತಾರೆ. ಲೋಕಸಭೆಯಲ್ಲಿ ನಿಯಮ 342 ಇದೆ. ಆ ನಿಯಮದನ್ವಯ, ಚರ್ಚೆ ಆರಂಭ ಆಗುವಾಗ ಚರ್ಚೆಯನ್ನು ಮತಗಣನೆಗೆ ಪರಿಗಣಿಸಬೇಕಾಗಿಲ್ಲ. ಚರ್ಚೆಯ ಅಂತ್ಯದಲ್ಲಿ, ಅಗತ್ಯಕಂಡರೆ ಸದಸ್ಯರೊಬ್ಬರು, ಆ ವಿಚಾರವನ್ನು ಮತಕ್ಕೆ ಹಾಕಲು ಸ್ಪೀಕರ್ ಅವರನ್ನು ಕೋರಬಹುದು.
ಹೆಚ್ಚಿನಂಶ ಸರಕಾರಕ್ಕೆ ಚರ್ಚೆ ನಡೆಸುವ ಮನಸ್ಸಿದ್ದರೆ, ಈ ನಿಯಮದಡಿ ಚರ್ಚೆಗೆ ಅವಕಾಶ ಮಾಡಿಕೊಡಬಹುದಿತ್ತು. ಆದರೆ, ಚರ್ಚೆಯೇ ಬೇಡ ಎಂಬ ಉದ್ದೇಶ ಸರಕಾರದ್ದಾಗಿದ್ದರೆ, ಈ ನಿಯಮ 342ರ ಪ್ರಸ್ತಾಪ ಸದನದ ಎದುರು ಬರುವ ಸಾಧ್ಯತೆ ಇಲ್ಲ.