ಕಾಸು ಬದಿಗಿಡಿ; ಉಣ್ಣೋ ಅನ್ನವನ್ನೇ ತಲುಪಿಸಲಾಗಿಲ್ಲ ಇನ್ನೂ..

Update: 2016-12-14 18:58 GMT

ಭಾರತದಂತಹ ವಿಶಾಲ ದೇಶದ ಉದ್ದಗಲಗಳನ್ನು ತಲುಪುವುದು ಎಷ್ಟು ಕಷ್ಟ ಎಂಬುದನ್ನು ಅರ್ಥಮಾಡಿಕೊಂಡಿದ್ದರೆ ಆಳುವವರಿಗೆ ನೋಟು ರದ್ದತಿ -ಹೊಸನೋಟು ಪೂರಣದಂತಹ ಸಂಕೀರ್ಣ ಸಂಗತಿಗಳನ್ನು ‘ಲಘು’ವಾಗಿ ಪರಿಗಣಿಸಿ ಅಧ್ವಾನ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ.

ನಾನೀಗ ಹೇಳಹೊರಟಿರುವುದು 2013ರಲ್ಲಿ ದೇಶ ಅಂಗೀಕರಿಸಿರುವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (ಘೆಊಖಅ 2013) ಅನುಷ್ಠಾನದ ಬಗ್ಗೆ ದೇಶದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಕಚೇರಿ ನಡೆಸಿದ ಆಡಿಟ್‌ನ ಬಗ್ಗೆ. ದೇಶದ 11 ರಾಜ್ಯಗಳನ್ನು ಆಯ್ದು, ಅಲ್ಲಿ ಈ ಆಡಿಟ್ ನಡೆಸಲಾಗಿದ್ದು, 135 ಕೋಟಿ ಜನರಿರುವ ದೇಶದ 81.34 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸುವ ಈ ಕಾರ್ಯಕ್ರಮದ ಅನುಷ್ಠಾನ ಮೂರು ವರ್ಷಗಳಾದರೂ ಸಮರ್ಪಕವಾಗಿಲ್ಲ ಎಂದು ಇದೇ ಎಪ್ರಿಲ್ ತಿಂಗಳಿನಲ್ಲಿ ಮಂಡನೆ ಆಗಿರುವ ಸಿಎಜಿ ವರದಿ ಅಭಿಪ್ರಾಯಪಟ್ಟಿದೆ.

ಉಣ್ಣುವ ಅನ್ನವನ್ನೇ ತಲುಪಿಸಬೇಕಾದವರಿಗೆ ಸುಸೂತ್ರವಾಗಿ ತಲುಪಿಸಲು ಸಾಧ್ಯವಾಗದ ಕೇಂದ್ರ ಮತ್ತು ರಾಜ್ಯ ಸರಕಾರಗಳು, ಇನ್ನು ಹೊಸನೋಟುಗಳನ್ನು ದೇಶದಾದ್ಯಂತ ಗ್ರಾಮಗ್ರಾಮಗಳಿಗೆ ತಿಂಗಳೊಪ್ಪತ್ತಿನಲ್ಲಿ ತಲುಪಿಸುವುದಾದರೂ ಹೇಗೆ?

ಸಂವಿಧಾನದ 21ನೆ ವಿಧಿ ಪ್ರತಿಯೊಬ್ಬ ನಾಗರಿಕನಿಗೂ ಬದುಕುವ ಹಕ್ಕನ್ನು ನೀಡಿದ್ದರೆ, 47ನೆ ವಿಧಿಯು ಜನರ ಆಹಾರ, ಜೀವನ ಗುಣಮಟ್ಟ ಮತ್ತು ಆರೋಗ್ಯಗಳು ಸರಕಾರಗಳ ಪ್ರಾಥಮಿಕ ಜವಾಬ್ದಾರಿ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ 2011 ರ ಜನಗಣತಿಯನ್ವಯ ಶೇ. 75 ಗ್ರಾಮೀಣ ಮತ್ತು ಶೇ. 50 ನಗರ ಜನಸಮುದಾಯಗಳಿಗೆ ಎನ್‌ಎಫ್‌ಎಸ್‌ಎ ಕಾಯ್ದೆಯನ್ವಯ ಆಹಾರ ಭದ್ರತೆಯನ್ನು ಒದಗಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ವಾರ್ಷಿಕ 26, 780 ಕೋಟಿ ರೂಪಾಯಿಗಳ ಸಬ್ಸಿಡಿಯನ್ನೂ ಒದಗಿಸಬೇಕಿತ್ತು.

365 ದಿನಗಳಲ್ಲಿ ಈ ಯೋಜನೆಗೆ ಅರ್ಹ ಜನರನ್ನು ಗುರುತಿಸುವುದು ರಾಜ್ಯ ಸರಕಾರಗಳ ಜವಾಬ್ದಾರಿ ಆಗಿತ್ತು. ಆದರೆ, ಎರಡು ವರ್ಷಗಳು ಪೂರೈಸಿದರೂ (2015ರಲ್ಲಿ) ರಾಜ್ಯ ಸರಕಾರಗಳಿಗೆ ಗುರುತಿಸಲು ಸಾಧ್ಯವಾದದ್ದು ಕೇವಲ ಶೇ. 49 ಫಲಾನುಭವಿಗಳನ್ನು ಮಾತ್ರ.

2012ರಲ್ಲೇ ನಿರ್ಧಾರ ಆಗಿದ್ದರೂ ಆಹಾರ ಧಾನ್ಯಗಳ ಸಾಗಣೆಗೆ ಯೋಜನೆ ಸಿದ್ಧವಾಗಿಲ್ಲ, ತಲುಪಿದರೂ ಮೂರು ತಿಂಗಳಿಗೆ ಆವಶ್ಯಕವಿರು ವಷ್ಟು ಆಹಾರಧಾನ್ಯಗಳನ್ನು ಶೇಖರಿಸಿಟ್ಟುಕೊಳ್ಳುವ ಉಗ್ರಾಣ ವ್ಯವಸ್ಥೆ ರಾಜ್ಯ ಸರಕಾರಗಳ ಬಳಿ ಇಲ್ಲ.

ಇಡಿಯ ವ್ಯವಸ್ಥೆ ಡಿಜಿಟಲೀಕರಣಗೊಂಡು ಆಗಬೇಕಾಗಿತ್ತು, ಆದರೆ ರಾಜ್ಯ ಸರಕಾರಗಳ ಬಳಿ ಅಗತ್ಯ ಇರುವ ಕಂಪ್ಯೂಟರ್‌ಗಳು, ಸಾಫ್ಟ್ ವೇರ್‌ಗಳು, ಜನ-ವ್ಯವಸ್ಥೆಗಳಿಲ್ಲ.

ವ್ಯವಸ್ಥೆಯಲ್ಲಿ ತೊಂದರೆಗಳಿಲ್ಲದಂತೆ ನಾಲ್ಕು ಹಂತಗಳ ದೂರು-ಪರಿಹಾರ ವ್ಯವಸ್ಥೆಗಳಿರಬೇಕಿದ್ದು, ಆ ವ್ಯವಸ್ಥೆ ಇನ್ನೂ ಸಮರ್ಪಕವಾಗಿಲ್ಲ.

ಕರ್ನಾಟಕದಲ್ಲಿ ಪರಿಸ್ಥಿತಿ
ಆಡಿಟ್‌ನಲ್ಲಿ ಕರ್ನಾಟಕ ಕೂಡ ಒಳಗೊಂಡಿರುವುದರಿಂದ, ಇಲ್ಲಿ 2015ರ ಆಡಿಟ್ ಅವಧಿಗೆ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಕಂಡುಕೊಂಡರೆ ಇಡಿ ದೇಶದ ಚಿತ್ರಣ ಸಿಗುತ್ತದೆ. ಯಾಕೆಂದರೆ, ಕರ್ನಾಟಕ ದೇಶದ ಮುಂಚೂಣಿಯ ರಾಜ್ಯಗಳಲ್ಲೊಂದು ಎಂದು ಪರಿಗಣಿತವಾಗಿದೆ. ಆಡಿಟ್ ನಲ್ಲಿ ಕರ್ನಾಟಕದ ಬಗ್ಗೆ ಉಲ್ಲೇಖಿಸಲಾದ ಅಂಶಗಳು ಈ ಕೆಳಗಿನಂತಿವೆ:

ಎನ್‌ಎಫ್‌ಎಸ್‌ಎ ಅಡಿ ಅಂತ್ಯೋದಯ ಅನ್ನ ಯೋಜನೆಗೆ ಹೊಸದಾಗಿ ಫಲಾನುಭವಿಗಳನ್ನು ಗುರುತಿಸುವ ಬದಲು ಈಗಾಗಲೇ ಇರುವ 403.25 ಲಕ್ಷ ಬಿಪಿಎಲ್ ಕುಟುಂಬಗಳನ್ನೇ ಈ ಯೋಜನೆಗೆ ಆಯ್ದುಕೊಳ್ಳಲಾಯಿತು.

ಈ ಕಾಯ್ದೆಯ ಅಡಿ 358.81 ಲಕ್ಷ ಕುಟುಂಬಗಳನ್ನು ಮಾತ್ರ ಆದ್ಯತೆಯ ಮೇರೆಗೆ ಆಯಬೇಕಿದ್ದ ರಾಜ್ಯ ಸರಕಾರ, ತಾನು 2013ರಲ್ಲೇ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯಲ್ಲಿ ಹೇಳಿದ ಪ್ರಮಾಣದಲ್ಲೇ ಎನ್‌ಎಫ್‌ಎಸ್‌ಎ ಯೋಜನೆಯ ಆಹಾರವನ್ನೂ ವಿತರಿಸಿದ್ದರಿಂದಾಗಿ, ಕೋಟಿಗಟ್ಟಲೆ ರೂಪಾಯಿಗಳ ಹೆಚ್ಚುವರಿ ಹೊರೆ ಹೊರಬೇಕಾಯಿತು.

ತಾನು ಆಯ್ದ 445.36 ಲಕ್ಷ ಜನರಲ್ಲಿ 113.23 ಲಕ್ಷ ಫಲಾನುಭವಿಗಳನ್ನು ಮಾತ್ರ ಅಂತ್ಯೋದಯ ಯೋಜನೆಗೆ ಆಯ್ಕೆ ಮಾಡಲಾಯಿತು, ಆದರೆ ಜೂನ್ 2015ರ ವೇಳೆಗೆ ಎಪಿಕ್ ಸೀಡಿಂಗ್ ವೇಳೆ 8.90 ಲಕ್ಷ ಬೋಗಸ್ ಕಾರ್ಡುಗಳು ಪತ್ತೆ ಆದವು, ಅವುಗಳನ್ನು ರದ್ದುಪಡಿಸುವ ಬದಲು, ಅವರಿಗೂ ಆಹಾರ ಧಾನ್ಯಗಳನ್ನು ವಿತರಿಸಲಾಯಿತು.

ಆಹಾರವನ್ನು ನ್ಯಾಯಬೆಲೆ ಅಂಗಡಿಗಳಿಗೆ ತಲುಪಿಸುವುದು ಸರಕಾರದ ಜವಾಬ್ದಾರಿಯಾಗಿತ್ತಾದರೂ ಇನ್ನೂ ನ್ಯಾಯಬೆಲೆ ಅಂಗಡಿಗಳವರು ತಾವೇ ಅದನ್ನು ಉಗ್ರಾಣಗಳಿಂದ ಸಾಗಿಸಿಕೊಳ್ಳುತ್ತಿದ್ದಾರೆ.
2014ರಲ್ಲೇ ರಾಜ್ಯ ಆಹಾರ ಆಯೋಗ ಸ್ಥಾಪಿತವಾಗಿದೆಯಾದರೂ, ಇನ್ನೂ ಕಾರ್ಯಾಚರಣೆ ಆರಂಭಿಸಿಲ್ಲ.

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News