8/11 ಅವಾಂತರದ ಮುಗಿಯದ ಯಾತನೆಗಳು
8/11 ಎಂಬುದೊಂದು ಅವಾಂತರ ಎಂದು ದಿನೇ ದಿನೇ ಖಚಿತವಾಗುತ್ತಾ ಹೋಗುತ್ತಿರುವಂತೆಯೇ, ನಮ್ಮ ಇಕಾನಮಿಯ ಪಿರಮಿಡ್ಡಿನ ತುದಿ ತಲುಪಿರುವ ನೋಟು ರದ್ದತಿಯ ಯಾತನೆಗಳು ಒಂದೊಂದೇ ಕೆಳಗಿಳಿದು ಬರಲಾರಂಭಿಸಿವೆ. ಪಿರಮಿಡ್ಡಿನ ತಲೆಯಲ್ಲಿರುವವರು ತಮ್ಮ ಮೇಲೆ ಬಿದ್ದ ಹೊರೆಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ತಮಗಿಂತ ಒಂದು ಹಂತ ಕೆಳಗಿರುವವರ ತಲೆಯ ಮೇಲೆ ಹೇರಿ ಕೈತೊಳೆದುಕೊಳ್ಳುವುದು ಮಾರುಕಟ್ಟೆಗೆ ಸಹಜ ವಿದ್ಯಮಾನ.
ರಾಮಾಯಣದಲ್ಲಿ ರಾಮ ವಾಲಿಯನ್ನು ಮರದ ಮರೆಯಲ್ಲಿ ನಿಂತು ಹೊಡೆದುರುಳಿಸುತ್ತಾನೆ ಯಾಕೆಂದರೆ, ಮುಖಾಮುಖಿ ಕಾದಾಟಕ್ಕೆ ನಿಲ್ಲುವ ಎದುರಾಳಿಯ ಅರ್ಧದಷ್ಟು ಶಕ್ತಿ ತನಗೆ ಸಿಗಬೇಕೆಂಬ ವರವಿತ್ತಂತೆ ವಾಲಿಗೆ. ಹಾಗಾಗಿ ಎದುರಾ ಎದುರು ವಾಲಿಯನ್ನು ಕೊಲ್ಲುವುದು ಕಷ್ಟವಿತ್ತು ರಾಮನಿಗೆ.
ಕಳೆದ ವಾರ ಉದ್ಯೋಗ ಮಾರುಕಟ್ಟೆಯ ಬಗ್ಗೆ ಮಾತನಾಡುತ್ತಿದ್ದ ಪತ್ರಿಕಾ ವರದಿಗಳೆಲ್ಲ, ಈ ವರ್ಷ ಹೊಸ ಉದ್ಯೋಗಗಳು ಸೃಷ್ಟಿ ಆಗುವುದು ಕಷ್ಟ, ಇರುವವರು ತಮ್ಮ ಸಂಬಳ ಹೆಚ್ಚಳದ ಬಗ್ಗೆ ಕೇಳಿ ಪ್ರಯೋಜನ ಆಗದು ಎಂದು ಎಚ್ಚರಿಸುತ್ತಿದ್ದವು. ಅಂದರೆ ಅದರ ಅರ್ಥ, ಉತ್ಪಾದನೆಯಲ್ಲಿ, ಮಾರುಕಟ್ಟೆಯಲ್ಲಿ ನಿರೀಕ್ಷಿಸಲಾಗಿರುವ ನಷ್ಟವನ್ನು ತುಂಬಿಕೊಳ್ಳಲು ಉದ್ಯಮಪತಿಗಳು ಈಗಾಗಲೇ ತಮ್ಮ ಸ್ಕೀಮುಗಳನ್ನು ಸಿದ್ಧಪಡಿಸಿಕೊಂಡಿದ್ದು, ಅದರ ನೇರ ಪರಿಣಾಮ ಸಂಬಳಪತಿಗಳಾದ ಕೆಲಸಗಾರರ ಮೇಲೆ ಬೀಳಲಿದೆ. ಇದೊಂದು ಚಾಕ್ರಿಕ ಪರಿಣಾಮ ಬೀರುವ ಸ್ಥಿತಿ. ಸಂಬಳ ಹೆಚ್ಚಿಗೆ ಸಿಗದಿದ್ದರೆ, ಮಾರುಕಟ್ಟೆಯಲ್ಲಿ ಖರೀದಿ ಕಡಿಮೆಯಾಗುತ್ತದೆ, ಮಾರುಕಟ್ಟೆಯಲ್ಲಿ ಖರೀದಿ ಕಡಿಮೆಯಾದರೆ, ಸ್ಥಳಕ್ಕೆ ಕುತ್ತು ಬರುತ್ತದೆ.
ಪಿರಮಿಡ್ಡಿನ ತಳಸ್ಥರದಲ್ಲಿ ಈ ಚಾಕ್ರಿಕ ಪರಿಣಾಮ ಇನ್ನಷ್ಟು ತೀವ್ರವಾಗಿರುತ್ತದೆ. ಮೊನ್ನೆ (ರವಿವಾರ) ಬೆಳಗ್ಗೆ ನನ್ನ ಹಳೆ ರದ್ದಿ ಪೇಪರ್ ಮಾರಲೆಂದು ಯಾವತ್ತೂ ಬರುವ ಹುಡುಗನಿಗೆ ಬರಹೇಳಿದ್ದೆ. ದಾವಣಗೆರೆಯ ಈ ಹುಡುಗ ತನ್ನ ಅಣ್ಣ, ತಮ್ಮ, ಮಾವ ಹೀಗೆ ನಾಲ್ಕಾರು ಜನರೊಂದಿಗೆ ಕಳೆದ ನಾಲ್ಕೈದು ವರ್ಷಗಳಿಂದ ಉಡುಪಿಯಲ್ಲಿ ಮನೆಮನೆಗಳಿಂದ ರದ್ದಿ ಪೇಪರ್ ಸಂಗ್ರಹಿಸಿ, ರದ್ದಿ ಸಗಟು ವ್ಯಾಪಾರಸ್ಥರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾನೆ.
ನನ್ನಿಂದ ಕಿಲೋಗ್ರಾಂಗೆ 7ರೂ. ಗೆ ಸಂಗ್ರಹಿಸುವ ಪೇಪರನ್ನು ಸಗಟು ಮಂಡಿಗೆ ರೂ. 9.50ರಲ್ಲಿ ಮಾರುತ್ತಿದ್ದ. ಆದರೆ, ಈ ಬಾರಿ ಬಂದವನೇ ‘‘ಸಾರ್, ರೇಟೆಲ್ಲ ಕಡಿಮೆ ಆಗಿದೆ’’ ಎಂದ. ಎಷ್ಟು? ಎಂದರೆ, ‘‘ಕೇಜಿಗೆ 6.00 ರೂ. ಎಂದ. ಯಾಕಪ್ಪಾಎಂದು ಕುಳಿತು ಮಾತನಾಡಿಸಿದರೆ, ‘‘ಸಾರ್ ಸಾವಿರದ ನೋಟು ಬಂದ್ ಆದ ಮೇಲೆ ತೊಂದ್ರೆ ಆಗಿದೆ ಅಂತೆ.’’ ಅಂದ. ನೋಟು ರದ್ದಾದ್ದಕ್ಕೂ ನಿಮ್ಮ ರದ್ದಿ ವ್ಯವಹಾರಕ್ಕೂ ಏನಪ್ಪಾಸಂಬಂದ ಅಂದರೆ, ‘‘ತಗೊಳ್ಳುವವರಿಲ್ಲ ಅಂತೆ. ಹಾಗಾಗಿ ನಮ್ಮ ರೇಟು 7.50-8.00ಕ್ಕೆ ಇಳಿಸಿದ್ದಾರೆ’’ ಎಂದ.
ಮನೆ ಮನೆಗಳಿಂದ ಸಂಗ್ರಹಿಸಿ, ಸ್ವತಃ ಸೈಕಲ್ಲಿನಲ್ಲಿ ಹೊತ್ತು ಸಗಟುಮಂಡಿಗೆ ಹಾಕಿ ಬರುವ ಆ ಹುಡುಗನಿಗೆ ಕಿಲೋಗ್ರಾಂ ಮೇಲೆ ರೂ. 2.00-2.50 ರೂಪಾಯಿ ಸಿಕ್ಕರೆ, ದಿನದ ಅಂತ್ಯಕ್ಕೆ ರೂ. 200-250 ರೂಪಾಯಿ ದುಡಿಮೆಯಂತೆ. ತಿಂಗಳಿಗೆ ರೂ. 7000ದಿಂದ 10,000 ತನಕ ಆತ ಸಂಪಾದಿಸುತ್ತಾನಂತೆ. ಈಗ ಹಠಾತ್ತಾಗಿ ಮಂಡಿಯವರು ಖರೀದಿಯ ದರವನ್ನು ಇಳಿಸಿದ್ದರಿಂದ, ಈ ರದ್ದಿ ಹುಡುಗನ ದಿನದ ಗಳಿಕೆ 150-200 ರೂ. ಗಳಿಗೆ ಇಳಿದಿದೆ.
ಇದರ ಮೇಲೆ, ಬ್ಯಾಂಕ್ ಅಕೌಂಟ್ ಕೂಡ ಇಲ್ಲದೆ ಇದ್ದುದರಿಂದ, ಕೈಯಲ್ಲಿದ್ದ ಕೆಲವೇ ನೋಟುಗಳನ್ನು ಬದಲಾಯಿಸಿಕೊಳ್ಳಲು ಪರದಾಡಬೇಕಾಯಿತು. ‘‘ದಾವಣಗೆರೆಗೆ ಹೋಗಿ ಆಧಾರ್ ಕಾರ್ಡ್ ತರಬೇಕಾಯಿತು. ಕೊನೆಗೂ ಮಂಡಿಯವರು ಸಹಾಯ ಮಾಡಿ, ಬ್ಯಾಂಕ್ ಅಕೌಂಟ್ ತೆರೆದುಕೊಂಡೆ. ನಮಗೆ ದುಡಿದು ತಿನ್ನುವವರಿಗೆ ಅನವಶ್ಯಕ ತೊಂದರೆ ಮಾಡಿದ್ರು ಸಾರ್’’ ಎಂದ. ಇದು ಈಗ ಅವರವರ ಮಟ್ಟದಲ್ಲಿ ಮನೆಮನೆ ಕಥೆ.
ಹಿಂದೊಮ್ಮೆ ಕಂಪ್ಯೂಟರೀಕರಣ ಎಂದಾಗ, ಬ್ಯಾಂಕ್‌ಗಳಲ್ಲಿ, ಕಚೇರಿಗಳಲ್ಲಿ ನೌಕರರ ಸಂಘಗಳು, ತಮ್ಮ ಉದ್ಯೋಗಕ್ಕೆ ಕುತ್ತು ಬಂತೆಂದು ತೀವ್ರ ಪ್ರತಿರೋಧ ತೋರಿಸಿದ್ದಿದೆ. ಆದರೆ ಈವತ್ತು, ಸಂಪೂರ್ಣ ಡಿಜಿಟಲ್ ವ್ಯವಹಾರ, ಪೇಮೆಂಟ್ ಬ್ಯಾಂಕಿಂಗ್ ಎಂದಾಗಲೂ, ಇಡಿಯ ಬ್ಯಾಂಕಿಂಗ್ ವ್ಯವಸ್ಥೆಯೇ ಮಗ್ಗುಲು ಬದಲಾಯಿಸುತ್ತಿದೆ ಎನ್ನುವಾಗಲೂ ಅಲ್ಲಿಂದೆಲ್ಲ ಯಾವುದೇ ಸೊಲ್ಲು ಕೇಳಿಬರುತ್ತಿಲ್ಲ. ಖಾಸಗಿ ಬ್ಯಾಂಕಿಂಗ್ ಎದುರು ರಾಷ್ಟ್ರೀಕೃತ ಬ್ಯಾಂಕುಗಳು ಮಂಡಿಯೂರಿದ ಬಳಿಕ, ಬ್ಯಾಂಕ್ ನೌಕರರನ್ನೆಲ್ಲ ಅಧಿಕಾರಿಗಳಾಗಿಸಿ, ಬ್ಯಾಂಕುಗಳಲ್ಲಿ ಗುಮಾಸ್ತಗಿರಿಯ ಬೆನ್ನುಮೂಳೆ ಮುರಿಯಲಾಗಿದೆ.
ಇನ್ನು ಖಾಸಗಿ ರಂಗದಲ್ಲಿ ಐಟಿ ಹುಡುಗರು ಮಾಡುವ ಜೀತಕ್ಕೆ ಹೊಸ ಹೊಸ ಹೆಸರುಗಳನ್ನು ನೀಡಿ ದುಡಿಮೆಗಾರರ ಹಿತಾಸಕ್ತಿ, ಉದ್ಯೋಗ ಸ್ಥಳದ ಶಿಸ್ತುಗಳನ್ನೆಲ್ಲ ದುಡ್ಡು ಸುರಿದು ಮುಚ್ಚಲಾಗಿದೆ. ಅಂಗಡಿ ಮುಂಗಟ್ಟುಗಳೆಲ್ಲ ಇ - ಮಾರುಕಟ್ಟೆಯ ಪಾಲಾಗುತ್ತಿವೆ.
ಇಂತಹದೊಂದು ಸ್ಥಿತಿಯಲ್ಲಿ ಈಗ ಯಾರ್ಯಾರ ಬೆನ್ನುಹುರಿಗಳು ಯಾವಾಗ, ಹೇಗೆ, ಎಷ್ಟೆಷ್ಟು ಸೆಟೆದುಕೊಂಡು ನೆರವಾಗಲಿವೆ ಎಂದು ಕಾದು ನೋಡುವ ಕುತೂಹಲ ಇದೆ.