ತಂಬೂರಿ ಮೀಟಿದವರು

Update: 2023-06-30 06:19 GMT

ಕಲಾತ್ಮಕವಾದ ಒಂದು ಹಿಂಪರದೆ, ವೇದಿಕೆಯ ಮೇಲೆ ಮಧ್ಯದಲ್ಲಿ ಕುಳಿತ ಗಾಯಕ/ವಾದಕ. ಆತ/ಆಕೆಯನ್ನು ಅನುಸರಿಸಿ ತುಸುವೇ ಹಿಂದೆ ತಂಬೂರಿ ಮೀಟುವವರು. ಅರೆ ವೃತ್ತಾಕಾರ ಅಥವ ಅಧಿಕ ಕೋನದಲ್ಲಿ ತಬಲಾ ಹಾಗೂ ಹಾರ್ಮೋನಿಯಂ ವಾದಕರು ಇಲ್ಲವೇ ವಯೊಲಿನ್, ಮೃದಂಗ, ಘಟ, ಖಂಜಿರ, ಕಲಾವಿದರ ಉಪಸ್ಥಿತಿ...ಉಪಸಂಹಾರವಾಗಿ ವೇದಿಕೆ ಮುಂದಿಷ್ಟು ಅಲಂಕಾರ. ಭಾರತೀಯ ಶಾಸ್ತ್ರೀಯ ಸಂಗೀತ ಕಚೇರಿ ಅಂದಾಕ್ಷಣ ಇಂತಹದೊಂದು ಸ್ತಬ್ಧ, ಸ್ಥಿರ, ಸಿದ್ಧ ಚಿತ್ರ ಮನಸ್ಸಲ್ಲಿ ಮೂಡು ತ್ತದೆ. ಆದರೆ ಸ್ಟ್ಯಾಚ್ಯುಗೊಳಿಸಿದ ಈ ಬಿಂಬದಲ್ಲಿಯೂ ಒಂದು ಜೀವಮಿಡಿತ ಇರುತ್ತದೆ ಎಂದು ಕಲ್ಪಿಸಿಕೊಳ್ಳುವುದು ಕಡ್ಡಾಯ: ಮಧ್ಯ ಬೆರಳಲ್ಲಿ ಮೊದಲ ತಂತಿಯನ್ನು ಬಲವಾಗಿ ಮೀಟಿ ಅದರ ಅನುರಣನ ಎಂಬಂತೆ ಉಳಿದ ಮೂರನ್ನು ಮೀಟುತ್ತ ಇರುವ ತಂಬೂರಿ ವಾದನ ಅನಾದಿ ಮತ್ತು ಅನಂತ!
 
ಶಾಸ್ತ್ರೀಯ ಸಂಗೀತದ ಅ,ಆ,ಇ ಬೋಧೆಯಾದ ಮೇಲೆ ಪಕ್ಕವಾದ್ಯಗಳ ಸಹಯಾನ ಒಂದೊಂದೇ ಗಮನಿಸುತ್ತ, ಗಮನಿಸುತ್ತ ಮನಸ್ಸು ತಾನ್‌ಪುರ ಎಂದೂ ಕರೆಯಲಾಗುವ ತಂಬೂರಿಯ ಮೇಲೆ ನೆಟ್ಟಿತು. ಪಿಟೀಲಿನ ಭೋರ್ಗರೆತ, ಹಾರ್ಮೋನಿಯಂನ ಕೂಗಿ ಹೇಳುವ ಅಸ್ತಿತ್ವ, ಸಾರಂಗಿಯ ಗುಂಗು ಶ್ರವಣ ತಂಬೂರಿ ನಾದದಲ್ಲಿ ಇಲ್ಲ ನಿಜ. ಆದರೂ ಬಿಂದು, ಬಿಂದು ಪೋಣಿಸಿಕೊಂಡು ಗೆರೆ ಸೃಷ್ಟಿಸುವಂತೆ, ಶಬ್ದದ ಚಿಕಣಿ ಹೊಲಿಗೆಯನ್ನು ಅಂಟಿಸುತ್ತ ಅಂಟಿಸುತ್ತ ಸ್ವರವಾಗಿ ಎಳೆಯುವ ಅದರ ಬುರುಡೆ ಭಲೆ ಎನಿಸಿತು. ಇದನ್ನು ಮೀಟುವವರೂ ತಂಬೂರಿ ಸ್ವರದಂತೆಯೇ ನಿರುಪಾಯರು, ಸ್ಪಾಟ್ ಲೈಟ್‌ಗೆ ಅವರ ಮುಖ ಅವನತ. ಅರೆನಿಮಿಲಿತ ಕಣ್ಣೋಟ ಕೆಳಗೆ. ಗಾನ ಗಂಗೆಯೊಳಗೆ ಶುಭ್ರಸ್ನಾತರಾದವರಿಗೆ ಅಲಂಕಾರದಲ್ಲೂ ಆಸಕ್ತಿ ಕಡಿಮೆ. ಮುಖ್ಯ ಗಣ ಗಂಧರ್ವ, ಕಿಂಪುರುಷರಂತೆ ಲಕಲಕಿಸುತ್ತಿದ್ದರೂ ಇವರದು ಮಾತ್ರ ನಾರುಡುಗೆ. ಅಂದರೆ ಸ್ವಲ್ಪಸರಳ. (ಅಪವಾದಗಳಿಗೆ ಅವಕಾಶ ಇದ್ದೇ ಇದೆ). ಸಭೆಗೆ ಸಜ್ಜುಗೊಳ್ಳಲು ವಯೋಸಹಜ ಆಸಕ್ತಿ ಇರುವ ಷೋಡಶಿಯರು, ತರುಣಿಯರು ಅಚ್ಚುಕಟ್ಟಾಗಿ ಹಾಜರಿದ್ದರೂ ತಂಬೂರಿ ಆನಿಸಿಕೊಂಡ ಕೂಡಲೇ ಚಾಂಚಲ್ಯ ಕಳೆದುಹೋದವರಂತೆ ಗಂಭೀರರಾಗುವುದು ಒಂದು ಸೋಜಿಗ. ಅಥವಾ ತಂಬೂರಿ ಕೊಡುವ ಕರ್ತವ್ಯ ದೀಕ್ಷೆ ಹಾಗೆ ಮಾಡಿಸುತ್ತದೆ. ದೇವತಾಮೂರ್ತಿಯ ಮುಂದೆ ಮೂರು ಹೊತ್ತೂ ಮಿಣುಗುಡುವ ಜೋಡಿ ಸೊಡರಿನಂತೆ ಮೀಟುವಿಕೆ ಅವ್ಯಾಹತವಾಗಿ ಸಾಗಬೇಕು.

ಹಾಗೆಂದು ತಂಬೂರಿ ಸಾದಾಸೀದಾ ಆಗಿ ಇರುವುದಿಲ್ಲ. ಬಹಳಷ್ಟು ಬಾರಿ. ಮಿರುಗುವ ಕರಿ ಮರದ ಬುಡ ಭಾಗದ ಮೇಲೆಲ್ಲ ಬಿಳಿ ಹೂ ಎಲೆ ಬಳ್ಳಿಯ ವಲ್ಲರಿ ಬರೆದುಕೊಂಡಿರುತ್ತದೆ. (ಅನುಕೂಲಕ್ಕಾಗಿ ವಿನ್ಯಾಸಗೊಳಿಸಿಕೊಂಡಿರುವ ಇದರ ಆಧುನಿಕ ಛೋಟಾವತಾರ, ಪ್ರಾಚೀನ ಮಾದರಿ ಹಾಕಿದ ಮರಿ ಅಂದುಕೊಳ್ಳುವುದು ಮಜಾ ಯೋಚನೆ.) ಕೆಮಿಸ್ಟ್ರಿ ಪ್ರಯೋಗಾಲಯಗಳಲ್ಲಿರುವ ಗಾಜಿನ ಡಿಸ್ಟಿಲ್ಲೇಷನ್ ಉಪಕರಣ ರೆಟಾರ್ಟ್ ಅನ್ನು ನೆನಪಿಸುವಂತೆ. ಅರ್ಧ, ಮುಕ್ಕಾಲು ಗೋಲ, ಹಗೂರಕೆ, ಅಡ್ಡಲಾಗಿ ಇಟ್ಟರೆ ಮೂತಿಯಾಗಿ, ಲಂಬವಾಗಿ ನೋಡಿದರೆ ಕಾಲಾಗಿ (ಅವರವರ ಕಲ್ಪನೆಗೆ ತಕ್ಕುನಾಗಿ) ಮುಂದುವರಿದಿರುವುದರ ಮಾಟವೇ ಮಾಟ! ಸಾಮಾನ್ಯವಾಗಿ ನೇರವಾಗಿಯೇ ಅದನ್ನು ಆನಿಸಿಕೊಳ್ಳುವುದು: ಚೂರು ಶಿರ, ಪೂರ್ತಿ ಕುತ್ತಿಗೆ, ಬಲವಾದ ಆಧಾರವಾಗಿ ಭುಜ ಹೀಗೆ ಹಿಡಿಯಲು ಸಹಾಯಕ. ಬುರುಡೆಗೆ ಮಡಿಲು ಇಲ್ಲವೇ ನೆಲವೇ ಆಧಾರ. ಇಷ್ಟು ಅರ್ಧ ಬಿಡಿಸಿದ ರಮಣೀಯ ಚಿತ್ರದಂತೆ ಇದ್ದರೆ, ಕಂಬದ ಹಿಂದೆ ತುಸುವೇ ಅಡಗಿಕೊಂಡ ಸುಂದರ ಮೋರೆ ಉಳಿದರ್ಧ.

ಹೀಗೆ ಒದಗಿಬಂದ ದಿನ ವೀಡಿಯೊ ಚಿತ್ರಗ್ರಾಹಕರ ಕಲ್ಪಕತೆ ಸಮೃದ್ಧ: ಅತ್ಯಂತ ಸಮೀಪ ನೋಟದ ಅವಲೋಕನ ಸಿಕ್ಕು (ಅಪ್ರತ್ಯಕ್ಷ) ನೋಡುಗರೂ ಭಾವವಿದಗ್ಧ! ಇನ್ನು ಸಂತೂರ್ ವಾದನದಲ್ಲಿ ಅಡ್ಡಲಾಗಿ ಸ್ಥಾಪಿಸಿದ ತಂಬೂರಿ ಕಂಡರೆ, ಮುಖ್ಯವಾದ್ಯದ ಅಗಲಗಲ ಆಕಾರಕ್ಕೆ ಹೊಂದಿಕೆಯಾಗಲು ಹೀಗೆ ಹಿಡಿದಿದ್ದಾರೇನೋ ಎಂಬ ಯೋಚನೆ ಬರುವುದುಂಟು. ತಂಬೂರಿಗೆ ಯಾರಾದರೂ ಕೂರಬಹುದು. ಹೌದು, ಅದೊಂದು ಹೇಳುವ ರೀತಿ: ಪಕ್ಕವಾದ್ಯದವರ ವ್ಯವಸ್ಥೆ ಆಯಿತು, ತಂಬೂರಿಗೆ ನೀನೇ ಕೂತುಬಿಡು ಹೀಗೆ ಕೊನೆ ಗಳಿಗೆಯಲ್ಲಿ ಕಲಾವಿದರು ತಮ್ಮ ಮನೆಮಂದಿಗೆ ತಾಕೀತು ಮಾಡುವುದು ವಾಡಿಕೆ. ಅಷ್ಟರಮಟ್ಟಿಗೆ ಅದು ಹತ್ತಿರ ಮತ್ತು ಆಪ್ತ. ಹಿರಿಯಜ್ಜ, ಎಳೆ ಪುಟ್ಟಿ, ಸಹೋದರ-ಸಹೋದರಿ, ಅರ್ಧಾಂಗಿ, ಕಚೇರಿ ನೆಪದಲ್ಲಿ ಭೇಟಿಕೊಟ್ಟ ಬಂಧು, ಸೋದರ ಸಂಬಂಧಿ-ಹೀಗೆ ಯಾರಾದರೂ ಅಲ್ಲಿ ಹೊಂದಬಹುದು. ನಿಖಿಲ್ ಬ್ಯಾನರ್ಜಿಯವರ ಸಿತಾರ್‌ಗೆ, ಬಾಬ್‌ಕಟ್ ಕೂದಲಿಗೆ ಅಗಲ ಹೇರ್‌ಬ್ಯಾಂಡ್ ಧರಿಸಿ, ಫ್ರಾಕ್ ತೊಟ್ಟ ಕಿಶೋರಿ ತಂಬೂರಿ ಮೀಟುತ್ತಿದ್ದುದನ್ನು ದೂರದರ್ಶನದ ಆರ್ಕೈವ್ ಕಚೇರಿಯಲ್ಲಿ ನೋಡಿದ ನೆನಪು. ಆಹಾ! ಎಂಥಾ ಸಮನ್ವಯ ಅನಿಸುತ್ತದೆಯಲ್ಲವೇ? ತಲೆಮಾರುಗಳ ಅಂತರ ಮುದ್ದಾಗಿ ಮುಚ್ಚಿಹೋಗುವ ಬಗೆ ಅದು. ಬಿಟ್ಟೂಬಿಡದೆ ತಂತಿ ಮೀಟುತ್ತ, ಸಮಯಕ್ಕೆ ಸರಿಯಾಗಿ, ಇಚ್ಛೆ ಅರಿತಂತೆ, ಹಿಂದೆ ಇಟ್ಟುಕೊಂಡ ಫ್ಲಾಸ್ಕಿನ ಮುಚ್ಚಳ ತೆರೆದು, ಬಿಸಿ ಹಾಲು, ಕಾಫಿಯನ್ನು ಅಪ್ಪನಿಗೋ, ಅಜ್ಜನಿಗೋ ಒಂಟಿಕೈಯಲ್ಲೇ ತುಂಬಿಕೊಡುವ ಹೆಚ್ಚುವರಿ ಜವಾಬ್ದಾರಿಯೂ ಹೀಗೆ ನಿಯುಕ್ತಿಗೊಂಡ ಮನೆಹುಡುಗರ ಮೇಲೆ ಇರುತ್ತದೆ. ಒಂದು ಮಮತೆ ಉಕ್ಕಿಸುವ ನೋಟ, ಖಂಡಿತವಾಗಿ.

ತಂಬೂರಿ ಮೀಟುವವರಷ್ಟೇ ಅಲ್ಲ, ಆಯುಷ್ಯದ ಕೊನೆಯ ದಶಕದಲ್ಲಿರುವ ಹಾಡುಗಾರನಿಗೆ ಅದೇ ತಾನೆ ಪ್ರವರ್ಧಮಾನಕ್ಕೆ ಬಂದ ತಬಲಾ ಸಾಥಿ, ಶಿಶು ಪ್ರತಿಭೆಯಾಗಿ ತಾರುಣ್ಯ ತಲುಪಿದ ಕೊಳಲುವಾದಕನಿಗೆ ಮಾಗಿದ ಪ್ರೌಢತೆಯ ಪಿಟೀಲು ಸಹವಾದಕ, ನಾದ ತರಂಗಗಳ ಪಾತಾಳಗರಡಿಯಾಡಿ ಧೂಳೀಪಟ ಎಬ್ಬಿಸುವ ಫಟಿಂಗ ಸಾಮರ್ಥ್ಯದ ಪುರುಷ ಪ್ರಧಾನ ವಾದ್ಯವೃಂದದ ಮಧ್ಯೆ ಒಬ್ಬ ಗಾಂಭೀರ್ಯವೇ ಮೈವೆತ್ತ ಸಹಭಾಗಿ ಸ್ತ್ರೀ...ಹೀಗೆ ಸಂಗೀತ ಜಗತ್ತಿನಲ್ಲಿರುವ ಕಲಸುಮೇಲೋಗರ ಅನ್ಯಾದೃಶ. ಒಡಪಿಗೆ, ಅರ್ಥ ಗಹನತೆಗೆ, ತೆರತೆರನಾದ ಭಾವ ಎಬ್ಬಿಸುವ ಪದಪುಂಜಗಳಿಗೆ ಇನ್ನೊಂದು ಹೆಸರೇ ಆಗಿರುವ ಶರೀಫರು ‘‘ತರವಲ್ಲ ತೆಗಿ ನಿನ್ನ ತಂಬೂರಿ ಸ್ವರ/ಬರದೆ ಬಾರಿಸದಿರು ತಂಬೂರಿ’’ ಅಂದಾಗ ಅದಕ್ಕೆ ನಾನಾ ಉಲ್ಲೇಖ, ಆಧ್ಯಾತ್ಮಿಕ ತಾತ್ಪರ್ಯ. ನೋಡುಗರಿಗೆ ಸಸಾರವಾಗಿ ಕಂಡರೂ ತಂಬೂರಿ ಬಾರಿಸುವುದು ಸುಲಭವಲ್ಲ, ಅದೂ ಕಲಿತೇ ಬರಬೇಕು ಎಂಬ ಸಂಗತಿಯನ್ನು ಸಹ ಈ ಸಾಲು ಹೊಳೆಯಿಸುತ್ತಿ ದೆಯಷ್ಟೆ. ವಿಶ್ವಪ್ರಸಿದ್ಧ ಹಾಡುಗಾರನ/ಹಾಡುಗಾರ್ತಿಯ ಎಡ ಬಲ ತಂಬೂರಿಧಾರಿಗಳಾಗಿ ಕೂತಿರುವ ಪಟ್ಟ ಶಿಷ್ಯ/ಶಿಷ್ಯೆಯರು ಹಾಗೆ ತಂಬೂರಿ ಮೀಟುವಿಕೆಗೂ ನೀಡುತ್ತಾರೆ, ಒಂದು ವಜನು. ಒಂದಿಗೇ ಕಿವಿ ತೆರೆದು, ತುಸು ಓರೆಗಣ್ಣಾಗಿ ಗುರುವಿನ ನಾದನದಿಯನ್ನು ಹಿಂಬಾಲಿಸುತ್ತಿರುತ್ತಾರೆ. ಉಸಿರು ತೆಗೆದುಕೊಳ್ಳಲು ಆತ/ಆಕೆ ನಿಂತ ಕ್ಷಣ ಅದರದೇ ಛಾಯೆಯ ತಮ್ಮ ಕಂಠದಾನ ಮಾಡಿ ಕೃತಕೃತ್ಯರಾಗುತ್ತಾರೆ. ಸಂಜ್ಞೆ ಮುಗಿದ ಕೂಡಲೇ ಮೌನವಾಗಿ ಮುಂದಿನ ಧನ್ಯತೆಯ ಚಣಗಳಿಗೆ ಕಾಯುವುದು ಮಿಲಿಟರಿ ಶಿಸ್ತಿನಲ್ಲಿಯೇ ನಡೆಯುತ್ತದೆ! ‘ಬಿಟ್ವೀನ್ ಟೂ ತಾನ್‌ಪುರಾಸ್’- ಎರಡು ತಂಬೂರಿಗಳ ಮಧ್ಯೆ ಸಂಗೀತ ಕುರಿತ ತಮ್ಮ ಪುಸ್ತಕಕ್ಕೆ ಇಂತಹದೊಂದು ಧ್ವನಿಪೂರ್ಣ ಶೀರ್ಷಿಕೆ ನೀಡಿರುವವರು ವಾಮನರಾವ್ ದೇಶಪಾಂಡೆ.

ಇವರು ಕಿರಾಣಾ ಘರಾನಾದ ಪಿತಾಮಹ ಅಬ್ದುಲ್ ಕರೀಂ ಖಾನ್ ಮಗ ಸುರೇಶ್‌ಬಾಬು ಮಾನೆಯ ಶಿಷ್ಯ. ಅಕೌಂಟೆಂಟ್ ವೃತ್ತಿ, ಅಮೂರ್ತ ಸಂಗೀತ ಎರಡೂ ದೋಣಿಯ ಮೇಲೆ ಕಾಲಿಟ್ಟ ಗಟ್ಟಿಗ. ಅವರನ್ನು ಅನುಸರಿಸಿ, ಎರಡು ಕಿವಿಯ ನಡುವೆ ಮುಖಾರವಿಂದ ಇರುವಂತೆ ಸಂಗೀತ ಕಚೇರಿಯ ಸಾರಸ್ವರೂಪ ಎರಡು ತಂಬೂರಿಯ ನಡುವೆ ಅಡಗಿರುತ್ತದೆ ಎಂದು ಕಲ್ಪಿಸಿಕೊಳ್ಳಲಡ್ಡಿಯಿಲ್ಲ. ಅರ್ಥಕೋಶದಲ್ಲಿ ತಾನ್‌ಪುರವನ್ನು ವರ್ಣಿಸಿರುವ ಬಗೆಯಾದರೂ ಎಂಥದ್ದು? ಏಕತಾನ ಗುಂಜಾರವ ಹೊಮ್ಮಿಸುವ ನಾಲ್ಕು ತಂತಿಗಳ ವಾದ್ಯ; ಅತಿ ಸಂಯಮದ ನಾದ ಸೃಷ್ಟಿ ಅದರ ರೀತಿ. ಆದಾಗ್ಯೂ ಶಾಸ್ತ್ರೀಯ ಸಂಗೀತಕ್ಕೆ ಮೂಲಭೂತ ಅಸ್ತಿವಾರ. ಸಾಂಪ್ರದಾಯಿಕ ಸಂಗೀತ ಕಲಿಕೆಗೆ ಎರವಾದವರು ಎಷ್ಟೇ ತಿಪ್ಪರಲಾಗ ಹಾಕಿದರೂ ಅರ್ಥ ಮಾಡಿಕೊಳ್ಳಲಾಗದ, ಮನನ ಮಾಡಿಕೊಂಡಷ್ಟೂ ನುಣುಚಿಕೊಳ್ಳುವ ಪರಿಕಲ್ಪನೆ ಎಂದರೆ ಶ್ರುತಿ. ಇಂಡಿಯನ್ ಇಂಕ್‌ನಲ್ಲಿ ಎಳೆದ ಒಂದು ಗರಿ ಗರಿ ರೇಖೆಯನ್ನೇ ಶ್ರುತಿ ಎಂದು ಭಾವಿಸಿದರೆ, ಆ ರೇಖೆಯ ಬಿಂದು ಬಿಂದುವನ್ನೂ ಅವುಚಿಕೊಂಡು ಹೊಮ್ಮಿದ್ದೇ ಶ್ರುತಿ ಶುಭ್ರ ಗಾನ. ಚಪ್ಪರಗೋಲನ್ನು ಹಬ್ಬಿದ ಹೀರೆ ಬಳ್ಳಿಯಂತೆ ಹಾಡು ಅತ್ತಲಿತ್ತ ಅಲ್ಲಾಡಿದರೆ ಸ್ವಾರಸ್ಯವಿಲ್ಲ. ಬೇರೆ ಬೇರೆ ದಪ್ಪ, ಎತ್ತರದ ಶ್ರುತಿ ರೇಖೆಗಳು ಸೃಷ್ಟಿಯಾಗುವುದು ತಂಬೂರಿಯಿಂದ ಎಂದಮೇಲೆ ಅದರ ಮಹಿಮೆ ಹೇಳುವುದೇನು? ಶ್ರುತಿ ಶುಭ್ರತೆ ಸಿದ್ಧಿಗೆ ತಾಲೀಮು-ಪ್ರತಿಭೆ ಸಂಗಮಿಸಿರಬೇಕು. ಈ ವ್ರತ ಹಿಡಿದವರಿಗೆ ಎರಡಲ್ಲ ಮೂರು, ನಾಲ್ಕು ತಂಬೂರಿಗಳೂ ತಾಳೆ ನೋಡಲು ಬೇಕಾದೀತು! ‘‘ಪರಮ ಶ್ರುತಿ ಪ್ರಾವೀಣ್ಯದ ಅಬ್ದುಲ್ ಕರೀಂ ಖಾನ್ ಸಾಹೇಬರು ಹೀಗೊಮ್ಮೆ ನಾಲ್ಕು ತಾನ್‌ಪುರ ವಾದನಕ್ಕೆ ಅಪ್ಪಣೆ ಕೊಡಿಸಿದ್ದರು. ಸರಿ, ತಗೋ ಭಾರ ಭಾರದ ನಾಲ್ಕು ಮೀರಜ್ ತಂಬೂರಿ ಹಿಡಿದು ನಾಲ್ಕು ಶಿಷ್ಯರು ಗುರುವಿನ ಹಿಂದೆ ಕೂತರು. ದಟ್ಟ ದುಂಬಿ ಝೇಂಕಾರ ಹದಿನಾರು ತಂತಿಗಳಿಂದ ಒಮ್ಮೆಲೇ ಆಲಾಪಿಸುತ್ತಿದ್ದ ಗುರುಗಳು ಅದೇಕೋ ಅತೃಪ್ತರಾದರು. ಹಿಂದಿರುಗಿ, ಶ್ರುತಿ ಮೀರಿ ಸಾಗುತ್ತಿದ್ದ ತಂತಿಯನ್ನು ಸರಕ್ಕನೆ ಹಿಡಿದು ಸರಿಮಾಡಿದರು...’’ ಎಂಬ ಪ್ರಸಂಗ ಕುಮಾರ್ ಪ್ರಸಾದ್ ಮುಖರ್ಜಿ ಎಂಬವರು ಬರೆದ ಪುಸ್ತಕದಲ್ಲಿ ಇದೆ. ಬಾಯ್ದೆರೆದು ಹಾಡುತ್ತ ಹಾಡುತ್ತ, ಶ್ರುತಿಯೊಂದಿಗೆ ತಾದಾತ್ಮ್ಯ ಸಾಧಿಸಿದ ಸಂಗೀತ ಶ್ರೇಷ್ಠರು ಹಾಡುತ್ತಿದ್ದಾರೋ ಇಲ್ಲವೋ ಎಂದು ರಸಿಕರು ಒಂದು ಗಳಿಗೆ ಭ್ರಮಾತ್ಮಕ ಅನುಭವಕ್ಕೆ ಪಕ್ಕಾದ ಕತೆಗಳೂ ಈ ಲೋಕದಲ್ಲಿ ಜನಜನಿತ.

ಸ್ವರ ಸಾಮ್ರಾಜ್ಯವನ್ನು ವಿಸ್ತರಿಸುತ್ತ, ಇಂಚಿಂಚು ರಸಾನುಭವದ ಗೋಡೆ ಸರಿಸುತ್ತ, ವೇದಿಕೆ ಮೇಲಿನ ಕಲಾವಿದರೆಲ್ಲ ಏಕ ಪ್ರಕಾರವಾಗಿ ನಲಿಯುತ್ತ ಜೀವತಳೆದುಕೊಳ್ಳುವುದು ಕಣ್ಣಮುಂದೆಯೇ ನಡೆಯುವ ಜಾದೂ. ಕಚೇರಿ ಚರಮ ಮುಟ್ಟಿದ ಗುರುತು. ಸಭಾಸದರಲ್ಲೂ ಹೊಟ್ಟೆತುಂಬುತ್ತದೆ ನಿಷ್ಕಾರಣ ಹಿಗ್ಗು. ಸವಾಲ್-ಜವಾಬ್‌ನಲ್ಲಿ ಹುಬ್ಬೇರಿಸಿ, ಕಣ್ಣರಳಿಸಿ, ತಲೆ ಝಾಡಿಸುವುದು ಅವರಿಗೆ ಅರಿವಿಲ್ಲದಂತೆ ಕಲಾವಿದರಿಂದ ಅಭಿನಯಿಸಲ್ಪಡುತ್ತದೆ. ಆಗಲೂ ತಂಬೂರಿ ಮೀಟುವವರು ತಮ್ಮ ಇರವನ್ನು ಮರೆಮಾಚುವರಲ್ಲವೆ-ಹೆಚ್ಚೆಂದರೆ ಮುಗುಳೊಂದು ನಗೆಯಾಗಿ ಅರಳುವ ಹೊರತು-ಅನ್ನಿಸೀತು. ಪುಟ್ಟಲಕೋಟೆ, ಗುಲಾಬಿ ಮೊಗ್ಗು ಒಳಗೊಂಡ ಗೌರವಾರ್ಪಣೆಯ ಘಟ್ಟದಲ್ಲೂ ಅವರದು ಕೊನೆಯ ಸಾಲು. ಯಾವುದೇನೇ ಇರಲಿ, ತಂಬೂರಿ ವಾದಕರು ಪ್ರತೀ ಸಂಗೀತ ಕಚೇರಿಯ, ಖಾಸಗಿ ಬೈಠಕ್‌ನ ಆಧಾರ ಸ್ತಂಭ. ಸರಸ ಸಂಗೀತದ ಕುರುಹುಗಳನ್ನು ಅರಿತವರು. ಕುಶಲರಿಗೊಪ್ಪುವ ಹಾಗೆ ವಹಿಸಿದ ಜವಾಬ್ದಾರಿಯನ್ನು ಕಡೆತನಕ ನಿರ್ವಹಿಸುವವರು. ಒಂದು ರೀತಿಯಲ್ಲಿ, ಅನ್ನದಾತ ರೈತನಂತೆಯೇ ಯೋಗಿ, ಭೋಗಿ, ಮತ್ತು ತ್ಯಾಗಿ ವರ್ಗ ಎಂಬ ಸಮೀಕರಣ, ಪಥ ಬದಲಿಸಿದ ಸೂರ್ಯನ ಹೊಸ ಬಿಸಿಲಂತೆ ಆಪ್ಯಾಯಮಾನ.

Writer - ವೆಂಕಟಲಕ್ಷ್ಮಿ ವಿ. ಎನ್

contributor

Editor - ವೆಂಕಟಲಕ್ಷ್ಮಿ ವಿ. ಎನ್

contributor

Similar News