ವಿಜ್ಞಾನ ಕಥನ ಹಾಗೂ ತಾಂತ್ರಿಕ ಪರಿಣತರು ನೆಚ್ಚುವ ನಿಜ

Update: 2023-06-30 06:19 GMT

ನಾಶ-ಪತನ-ಪೂರ್ಣಾಹುತಿ-ಪ್ರಳಯದಂತಹ ಪರಿಣಾಮ ಸೃಷ್ಟಿ ಕೆಲ ಬಗೆಯ ಸೈಫೈಗಳ ಅನಿವಾರ್ಯ ಅಂಗ. ಇದರೊಂದಿಗೆ ದ್ವೇಷ, ಈರ್ಷೆ, ಕೇಡಿಗತನಗಳ ನೇತ್ಯಾತ್ಮಕ ಶಕ್ತಿಯೂ ಒಗ್ಗೂಡಿದರೆ? ಇಂತಹದೊಂದು ಯೋಚನೆ ಸೈಫೈ ಪಿತಾಮಹ ಜೂಲ್ಸ್ ವರ್ನ್‌ನಲ್ಲಿಯೂ ಮೊಳೆಯಿತು: ಮಾನವತೆ ಅಳಿಸಿಹಾಕುವ ಆಯುಧ ನಿರ್ಮಾಣ, ಪ್ರತಿಸ್ಪರ್ಧಿ ದೇಶಗಳ ವಿಜ್ಞಾನಿಗಳು ಪೈಪೋಟಿಯಿಂದ ಅದನ್ನು ಕೈಗೊಳ್ಳುವುದು ಮುಂತಾದುವೆಲ್ಲ ಆತನ ಹೊಸ ಕೃತಿಗಳಲ್ಲಿ ಕಾಣಿಸಿಕೊಂಡವು... ಇದಕ್ಕೆಲ್ಲ ಒಂದು ಹಿನ್ನೆಲೆಯೂ ಇತ್ತು.


ಜೂಲ್ಸ್ ವರ್ನ್ ಕೇವಲ ಸೈಫೈ ಜನಕ ಮಾತ್ರವಲ್ಲ, ಬರವಣಿಗೆಯನ್ನೇ ಜೀವನೋಪಾಯ ಮಾರ್ಗ ಮಾಡಿಕೊಳ್ಳಲು ಹೊರಟ ಹರಿಕಾರ. ಶಾಲೀನ ಕಥನಕಲೆ ಅವನನ್ನು ಒಪ್ಪಿಒಲಿದಿತ್ತು. ವಿಜ್ಞಾನ-ಕಥನ ಎರಡೂ ಬಲ್ಲ ಜಾರ್ಜ್ ಆರ್‌ವೆಲ್-1984, ಆಲ್ಡಸ್ ಹಕ್ಸ್‌ಲಿ- ಎ ಬ್ರೇವ್ ನ್ಯೂ ವರ್ಲ್ಡ್, ಎಚ್.ಜಿ. ವೆಲ್ಸ್-ಟೈಮ್ ಮಶೀನ್ ಮುಂತಾದವರು ಆನಂತರ ತಾರೆಗಳಾಗಿ ಹೊಳೆದದ್ದು ಇದೇ ದಿಗಂತದಲ್ಲಿ. ಸಿನೆಮಾ ರಂಗದ ಅವರ ಕಸಿನ್ಸ್ ಎಂದರೆ, ಸ್ಟಾನ್ಲಿ ಕ್ಯುಬ್ರಿಕ್, ಸ್ಟೀವನ್ ಸ್ಪೀಲ್‌ಬರ್ಗ್, ಜೇಮ್ಸ್ ಕೆಮರೂನ್ ಮತ್ತಿತರರು. ಆದರೆ, ಆರಂಭಿಸುವ ವೇಳೆ, ಬರೆಯಲು ಇನ್ನು ಏನು ತಾನೆ ಉಳಿದಿದೆ ಎಂದು ಅಪ್ರತಿಭನಾಗಿದ್ದನಂತೆ. ಕಾಲೇಜು ಶಿಕ್ಷಣ ಅರ್ಧದಲ್ಲೇ ತೊರೆದ ತರುಣ ವರ್ನ್, ತನ್ನೊಬ್ಬ ಬಂಧುವನ್ನು ಭೇಟಿಯಾದ. ಆತ ಅನೇಕ ಅನ್ವೇಷಣೆ ಯಾತ್ರೆ ಕೈಗೊಂಡಿದ್ದ, ಹಲವು ಶೋಧಗಳನ್ನು ಮಾಡಿದ್ದ ಮೇರು ಪ್ರತಿಭೆ. ಲೇಖಕ ವರ್ನ್‌ನಲ್ಲಿ ಈ ವಿನೀತಭಾವ ಹುಟ್ಟಿಸಿದ್ದು ಅವನೇ. ‘‘ಎಲ್ಲ ಮಾಡಿ ಮುಗಿದಿದ್ದರೇನು, ಭವಿಷ್ಯ ಇನ್ನೂ ತೆರವಾಗಿದೆಯಲ್ಲ?! ಅದರ ಕುರಿತಾಗಿಯೇ ಬರೆಯುವೆ’’ ಎಂದು ವರ್ನ್, ಮಿಲಿಯನ್ ಡಾಲರ್ ಪ್ರಶ್ನೆಗೆ ತನ್ನದೇ ಉತ್ತರವನ್ನೂ ಕಂಡುಕೊಂಡ.

ಉತ್ಕೃಷ್ಟ ಉತ್ಪನ್ನಗಳನ್ನೇ ಬಹುಪಾಲು ನೀಡುತ್ತ ಬಂದ ಸೈಫೈ ಸಿನೆಮಾ ಪ್ರಕಾರದಲ್ಲೂ ಇಂತಹದೊಂದು ಶೂನ್ಯ ಚಿಂತನೆ- ಮಾಡಲು ಇನ್ನು ಏನು ತಾನೆ ಉಳಿದಿದೆ-ಆಗಾಗ ತನ್ನ ನೆರಳು ಕವಿಸುತ್ತಿತ್ತು; ಅದನ್ನು ಮೆಟ್ಟಿ ಅಳಿಸುವುದು ಸಾಹಸಿಗರಿಗೆ ಸಾಮಾನ್ಯ ಆಗಿಬಿಟ್ಟಿತು. ಇತ್ತೀಚೆಗೆ ನಮ್ಮನ್ನು ರಂಜಿಸಿದ ‘ದಿ ಮಾರ್ಟ್ಷಿಯನ್’ ಅಮೋಘ, ನಿಜ ಬಿಂಬಿಸುವ ದೃಶ್ಯಾವಳಿ ಹೊಂದಿರುವ ಕುರಿತು ವಿಜ್ಞಾನಿಗಳಲ್ಲಿ ಒಮ್ಮತ. ಅಂತರಿಕ್ಷಯಾನದ ಸಿನೆಮಾಗಳು ಭಾಗಶಃ ಸಾಕ್ಷ್ಯಚಿತ್ರಗಳೇನೋ ಎನ್ನುವಷ್ಟು ಕರಾರುವಾಕ್ಕಾಗಿ ಚಿತ್ರಿತವಾಗುತ್ತವೆ. ಕಪ್ಪುರಂಧ್ರಗಳನ್ನು ಕೇಂದ್ರವಾಗಿ ಉಳ್ಳದ್ದು ಒಬ್ಬ ಬ್ಲ್ಯಾಕ್‌ಹೋಲ್ ಎಕ್ಸ್‌ಪರ್ಟ್‌ನನ್ನೂ ತಂಡದಲ್ಲಿ ಹೊಂದಿರತಕ್ಕದ್ದು ಎಂಬ ಪೂರ್ವತಯಾರಿ ಈ ದಿನಗಳಲ್ಲಿ ಸ್ವಾಭಾವಿಕ. ಆದರೆ ಕತೆಯ ಕ್ರೈಸಿಸ್-ಸಂಕಷ್ಟ ಪರಿಹಾರ ಒದಗುವುದು ಮಾತ್ರ ಸಾಕಷ್ಟು ಸಿನಿಮೀಯವಾಗಿ: ದಶಕಗಟ್ಟಲೆ ಅಂಬೆಗಾಲಿಟ್ಟುಕೊಂಡು ನಮ್ಮ ಶೋಧಗಳ ದೋಷ ಸರಿಪಡಿಸಿಕೊಳ್ಳುವುದು ವಸ್ತುಸ್ಥಿತಿಯಾದರೆ, ಸ್ಪೇಸ್‌ಷಿಪ್‌ನಲ್ಲಿ ಇಂಜಿನಿಯರುಗಳ ಒಂದು ತುರ್ತು ಮೀಟಿಂಗ್ ಕರೆದು ಮಿಂಚಿನ ವೇಗದಲ್ಲಿ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂಬ ಸಣ್ಣ ಪರಿಹಾಸ್ಯವೂ ವಿಜ್ಞಾನಿ ಸಮುದಾಯದಲ್ಲಿ ಕೇಳಿಸುತ್ತದೆ. ಕಂಪ್ಯೂಟರ್ ತಂತ್ರಜ್ಞಾನ ಕುಡುಮಿ-ನೆರ್ಡ್, (ತನ್ನ ತಂತ್ರಜ್ಞಾನ ಪರಿಣತಿ ಬಿಟ್ಟು ಬೇರೆ ಯಾವುದರಲ್ಲೂ ಇನಿತೂ ಆಸಕ್ತಿ ಇಲ್ಲದ, ಅಸಡ್ಡಾಳ ವೇಷ-ಭೂಷಣ-ವರ್ತನೆಯವನು ಎಂದು ನೆರ್ಡ್‌ನನ್ನು ವರ್ಣಿಸಬಹುದು) ಇಂತಹವರು ಕಟ್ಟುವ ಕಣ್‌ಕುಕ್ಕುವ ಕಾರ್ಪೊರೇಟ್ ಸಾಮ್ರಾಜ್ಯ, ಅಲ್ಲಿಯ ನಾಕ, ನರಕ, ಧೋಕಾ...ಇವುಗಳನ್ನೊಳಗೊಂಡ ಸೈಫೈ, ವಿಕಸಿತ ತಂತ್ರಜ್ಞಾನ ಅರ್ಥ ಮಾಡಿಕೊಳ್ಳಬಲ್ಲ ಬುದ್ಧಿವಂತ ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಮನೋವೇದಿ ರೋಮಾಂಚನ-ಸೈಕಲಾಜಿಕಲ್ ಥ್ರಿಲ್ ಉಂಟುಮಾಡಲು ಯತ್ನಿಸಿತು.

ಇಲ್ಲೊಂದು ಹೋಲಿಕೆ ಪ್ರಾಸಂಗಿಕ: ಪ್ರಾಣದೇವರಾದ ಹನುಮಂತ, ಸ್ಥೂಲ ಹಾಗೂ ಸೂಕ್ಷ್ಮ ಶರೀರಿ ಎರಡೂ ಆಗಿರಬಲ್ಲ ಎಂಬುದು ನಂಬಿಕೆ. ಹೊಳೆ ಹೊಳೆವ ಸ್ಟೀಲ್ ಬ್ಲೂ ಬೃಹತ್ ಆಕಾಶ ನೌಕೆ, ಗ್ರಹ-ತಾರೆಗಳ ಬಿಳಿಮಣ್ಣಿನ ತರಿ ತರಿ ಲ್ಯಾಂಡ್‌ಸ್ಕೇಪ್, ಆ ಉದ್ದಾನುದ್ದ ಜಾಗದಲ್ಲಿ ಯಂತ್ರಮಾನವರಂತೆ ಶಿರಸ್ತ್ರಾಣ ಧರಿಸಿ ಓಡಾಡುವ/ತೇಲಾಡುವ ಪಾತ್ರಧಾರಿಗಳು- ಇವುಗಳ ಬೆಂಬಲದಿಂದ ರಚಿತವಾಗುವ ಸೈಫೈ ಸ್ಥೂಲ ಶರೀರದ ಟೈಪ್ ಆದರೆ, ಸೈಬರ್ ತಂತ್ರಜ್ಞಾನ ಕೇಂದ್ರೀಕರಿಸಿದವನ್ನು ಸೂಕ್ಷ್ಮಶರೀರದವು ಎನ್ನ ಬಹುದು! ದೆವ್ವ-ಭೂತ, ರಕ್ತಪಿಪಾಸು ಪಿಶಾಚಿ ಅವುಗಳ ಅಧೋಲೋಕ ಮಧ್ಯೆ ಎಲ್ಲೋ ಕೂಡಿಕೊಂಡವು. ಇಲ್ಲೊಂದು ಅಡ್ಡ ಟಿಪ್ಪಣಿ ಅಳವಡಿಸಬೇಕು: ಅಕರಾಳ ವಿಕರಾಳ ಚಹರೆಯ ಕಪೋಲಕಲ್ಪಿತ, ಇಸ್ಸಿಸ್ಸೀ ಅನಿಸುವಂತೆ ಕೊರಳ ಕೊರೆದು ರಕ್ತ ಹೀರುವ ಪಿಶಾಚಿಗಳಿಗಿಂತ ರಾಕ್ಷಸಾಕೃತಿ, ಭೀಷಣ ಸಾಮರ್ಥ್ಯದ ಪಶು-ಪಕ್ಷಿಗಳೇ ರೌದ್ರ ರಸವನ್ನು ಹೆಚ್ಚು ರಭಸದಿಂದ ಹರಿಸಬಲ್ಲವು ಎಂಬುದು ದೆವ್ವ ಭೂತಗಳಲ್ಲಿ ನಂಬಿಕೆ ಇಲ್ಲದವರ ಅಭಿಪ್ರಾಯ. ಸಾಕಷ್ಟು ಸಾಧಾರವಾದದ್ದೇ ಇದು. ಸ್ಪೀಲ್‌ಬರ್ಗ್ ನಿರ್ಮಿಸಿದ ಶಾರ್ಕ್ ಥ್ರಿಲ್ಲರ್ ‘ಜಾಸ್’, ‘ಜುರಾಸಿಕ್ ಪಾರ್ಕ್’ ಸರಣಿ ಉದಾಹರಿಸಬಹುದು. ಹಾಗೆಯೇ ‘ಲೈಫ್ ಆಫ್ ಪೈ’ನ ಘೋರ ವ್ಯಾಘ್ರ...ಏನೇನೋ ತಾಂತ್ರಿಕತೆ ಬಳಸಿ ಈ ಪರಿಣಾಮ ಉಂಟು ಮಾಡಲಾಗಿದೆ ಎಂಬುದು ಮನದ ಮೂಲೆಯಲ್ಲಿದ್ದರೂ ಪ್ರೇಕ್ಷಕ/ಕಿ ಸೀಟಿನಲ್ಲಿ ಮರಗಟ್ಟುತ್ತಾನೆ/ಳೆ.

ಯೋಚನೆ ಇನ್ನೂ ವಿಸ್ತರಿಸಿದರೆ, ವಾಸ್ತವಿಕ ನೆಲೆಯಲ್ಲಿ ಅರಣ್ಯವಾಸಿಗಳು, ವನ್ಯಜೀವಿ ವಿಜ್ಞಾನಿಗಳು-ಸಂಶೋಧಕರಿಗೆ ಎದುರಾಗುವ ಅನುಭವಗಳ ಮುಂದೆ ಪರದೆಯ ದೈತ್ಯ ಪಶು ಸಪ್ಪೆ! ಊರೊಳಗೆ ಬಿಜಯಂಗೈವ ಕಾಡಾನೆಗಳು ಹುಲುಮನುಷ್ಯ ಸೇರಿದಂತೆ ದಾರಿಗಡ್ಡ ಬಂದ ಎಲ್ಲವನ್ನೂ ಲೆಫ್ಟ್, ರೈಟ್ ಮತ್ತು ಸೆಂಟರ್ ಆಗಿ ತರಾಟೆಗೆ ತೆಗೆದುಕೊಳ್ಳುವುದನ್ನು ಇಪ್ಪತ್ನಾಲ್ಕು ತಾಸಿನ ವಾರ್ತಾವಾಹಿನಿಗಳು ಬಿಡುವಿಲ್ಲದೇ ಬಿತ್ತರಿಸಿವೆ. ನಾವು ಬಾಯಿ ಕಳೆದು ನೋಡಿದ್ದೇವೆ. ಪ್ರಕೃತಿಯ ಮುನಿಸೂ ಅಷ್ಟೇ ಭೀಷಣ: ಮೂರು ವರ್ಷಗಳ ಹಿಂದೆ ಘಟಿಸಿದ ಉತ್ತರಾಖಂಡದ ಅಖಂಡ ಪ್ರವಾಹದಲ್ಲಿ, ಅದಕ್ಕೂ ಹಿಂದಿನ ಸುನಾಮಿ ಪ್ರಕೃತಿ ವಿಕೋಪದಲ್ಲಿ ಬೃಹತ್ ಕಟ್ಟಡಗಳು ರಟ್ಟಿನ ಮನೆಗಳಂತೆ ಮುದುರಿ ಉರುಳಿದ್ದು ನೆನಪಲ್ಲಿ ಚಿರಸ್ಥಾಯಿ. ತಾಂತ್ರಿಕ ಚಳಕ, ಭಾರದ ಬಜೆಟ್‌ನ, ಸೈಫೈ ಸಿನೆಮಾ ಸೆಟ್ ಧ್ವಂಸಗಳನ್ನು ಅವುಗಳ ಮುಂದೆ ನಿವಾಳಿಸಬಹುದು ಎಂಬುದು ಯಾರಾದರೂ ಒಪ್ಪುವಂಥ ಮಾತು. ‘‘ರಿಯಾಲಿಟಿ ಈಸ್ ದಿ ಗ್ರೇಟೆಸ್ಟ್ ಫ್ಯಾಂಟಸಿ ಆಫ್ ಲೈಫ್’’- ಅದೊಂದು ಕಾಲದ ಹೊಸ ಅಲೆಯ ಕನ್ನಡ ಸಿನೆಮಾದಲ್ಲಿ ಜಿ.ಕೆ.ಗೋವಿಂದ ರಾವ್ ಡೈಲಾಗ್ ಹೀಗೇನೋ ಇತ್ತು.

ನಾಶ-ಪತನ-ಪೂರ್ಣಾಹುತಿ-ಪ್ರಳಯದಂತಹ ಪರಿಣಾಮ ಸೃಷ್ಟಿ ಕೆಲ ಬಗೆಯ ಸೈಫೈಗಳ ಅನಿವಾರ್ಯ ಅಂಗ. ಇದರೊಂದಿಗೆ ದ್ವೇಷ, ಈರ್ಷೆ, ಕೇಡಿಗತನಗಳ ನೇತ್ಯಾತ್ಮಕ ಶಕ್ತಿಯೂ ಒಗ್ಗೂಡಿದರೆ? ಇಂತಹದೊಂದು ಯೋಚನೆ ಸೈಫೈ ಪಿತಾಮಹ ಜೂಲ್ಸ್ ವರ್ನ್‌ನಲ್ಲಿಯೂ ಮೊಳೆಯಿತು: ಮಾನವತೆ ಅಳಿಸಿಹಾಕುವ ಆಯುಧ ನಿರ್ಮಾಣ, ಪ್ರತಿಸ್ಪರ್ಧಿ ದೇಶಗಳ ವಿಜ್ಞಾನಿಗಳು ಪೈಪೋಟಿಯಿಂದ ಅದನ್ನು ಕೈಗೊಳ್ಳುವುದು ಮುಂತಾದುವೆಲ್ಲ ಆತನ ಹೊಸ ಕೃತಿಗಳಲ್ಲಿ ಕಾಣಿಸಿಕೊಂಡವು... ಇದಕ್ಕೆಲ್ಲ ಒಂದು ಹಿನ್ನೆಲೆಯೂ ಇತ್ತು. ವರ್ನ್, ಮಾನಸಿಕ ತೊಂದರೆ ಅನುಭವಿಸುತ್ತಿದ್ದ, ಒಂದು ವಿಕ್ಷಿಪ್ತ ಗಳಿಗೆಯಲ್ಲಿ ತನ್ನಲ್ಲಿದ್ದ ಕಾದಂಬರಿಗಳ ಹಸ್ತಪ್ರತಿ ಸುಟ್ಟುಹಾಕಿದ. ಕಾಲಿಗೆ ಗುಂಡುಹಾರಿಸಿಕೊಂಡು ವೈಕಲ್ಯ ತಂದುಕೊಂಡ. ನಿರ್ಗತಿಕ ಸಾವು ಕಂಡ...ಎಂಬೆಲ್ಲ ಹೃದಯವಿದ್ರಾವಕ ಸಂಗತಿ ದಾಖಲಾಗಿದೆ. ಒಟ್ಟಾರೆ ಆತ ನೀಡುತ್ತಿದ್ದ ಚೇತೋಹಾರಿ ಭವಿಷ್ಯನೋಟದ ಜಗತ್ತು ಬದಲಾಗಲು ತೊಡಗಿತ್ತು. ಜರಗಲಿರುವ ಮೊದಲನೆ ಮಹಾಯುದ್ಧದ ವಿನಾಶಕಾರಿ ಮುಂಗಾಣ್ಕೆಯನ್ನು ಹೊಂಚಿತ್ತು ಎನ್ನುವಲ್ಲಿಗೆ ಆ ಮಹಾನ್ ಮೇಧಾವಿಯ ಅಧ್ಯಾಯ ಮುಗಿಯುತ್ತದಾದರೂ ಸೈಫೈಗಳಲ್ಲಿ ರಾಮರಾಜ್ಯ-ಯುಟೋಪಿಯ ಜಾಗದಲ್ಲಿ ಡಿಸ್ಟೋಪಿಯ-ಘೋರರಾಜ್ಯ ಚಿತ್ರಣ ಮುಗಿಯುವುದಿಲ್ಲ.

ಮನುಷ್ಯರನ್ನು ಕ್ಷಣಾರ್ಧದಲ್ಲಿ ಆಕ್ರಮಣ ಮಾಡುವ ಬ್ಯಾಕ್ಟೀರಿಯ, ವೈರಾಣು, ವಿಷಗಾಳಿ ಕಂಡುಹಿಡಿಯುವ ವಿಜ್ಞಾನಿಗಳು, ಹೂಂಕರಿಸಿ ಚೀತ್ಕರಿಸುವ ಗಡ್ಡ-ಗೌನು-ಕೊಳಕು ಅಭ್ಯಾಸಗಳ ಮಾಂತ್ರಿಕರು, ಈ ಎಲ್ಲರಿಗೆ ಅಲ್ಲಿ ಜಾಗವಿದೆ. ಅವರೊಂದಿಗೆ ಕಾದಾಡಲು ಅತೀಂದ್ರಿಯ ಶಕ್ತಿಯ ಸಮರ ಪಟುಗಳು, ಕಪೋಲ ಕಲ್ಪಿತ ಸುಪರ್ ಹೀರೋಗಳ- ಬ್ಯಾಟ್‌ಮ್ಯಾನ್, ಸ್ಪೈಡರ್‌ಮ್ಯಾನ್, ಸ್ಟಾರ್‌ವಾರ್ ವೀರರು- ಸೃಷ್ಟಿಯಾಗಿದೆ. ಮಾನವತೆಯ ಘನತೆಯ ಅಸ್ತಿತ್ವವನ್ನು ಉಸಿರುಗಟ್ಟಿಸುವಷ್ಟು ಸಂಪತ್ತು, ಅಧಿಕಾರ ಕೇಂದ್ರೀಕರಿಸಿಕೊಂಡ ಸಾಮ್ರಾಟರೂ ಘೋರರಾಜ್ಯ ಸೃಷ್ಟಿಗೆ ತಮ್ಮದೇ ಕಾಣಿಕೆ ಸಲ್ಲಿಸುತ್ತಾರೆ. ಕಳೆದ ದಶಕದಲ್ಲಿ ತೆರೆಕಂಡ ‘ಇನ್‌ಸೆಪ್ಷನ್’(2010) ಒಂದು ಸೂಕ್ಷ್ಮಶರೀರಿ ಸೈಫೈ: ಒಬ್ಬ ಕನಸುಗಳನ್ನು ಕದಿಯುವ ಗೂಢಚಾರ ಹೀರೊ. ತನ್ನ ಬೇಟೆ ನಿಸ್ಸಹಾಯವಾಗಿ ಮಲಗಿ ನಿದ್ರಿಸುತ್ತಿರುವಾಗ, ಅವನಲ್ಲಿ ತನಗೆ ಬೇಕಾದಂತೆ ಯೋಚನೆಗಳನ್ನು ಬಿತ್ತಬಲ್ಲ. ಮಾರನೇ ಬೆಳಗ್ಗೆ ಅವು ಬೆಳೆದು ಕಾರ್ಯಗತ ಆಗುವುದನ್ನು ನಿರೀಕ್ಷಣೆ ಮಾಡುತ್ತಾ ಗುರಿ ಸಾಧಿಸುವುದು ಅವನ ವಿಧಾನ. ವೈರಿಗೆ ಅದಕ್ಕಾಗಿ ಒಂದು ಔಷಧ ನೀಡುತ್ತಾನೆ. ಡ್ರೀಮ್ ಮೆಶೀನ್ ಎಂಬ ಸಾಧನದಿಂದ ವೈರಿಯ ಕನಸುಗಳ ಕೊಯ್ಲು ಮಾಡುತ್ತಾನೆ.

ಅಬ್ಬಬ್ಬಾ! ಒಬ್ಬ ಭಾರತೀಯ ಶ್ರೀಸಾಮಾನ್ಯ ಪ್ರೇಕ್ಷಕನಿಗೆ ಇಷ್ಟೊಂದು ಸಂಕೀರ್ಣತೆ ರುಚಿಸಬಹುದೆ ಎಂಬ ಉದ್ಗಾರಗಳು ಈ ಸಿನೆಮಾ ಬಿಡುಗಡೆಯಾದಾಗ ಹರಿದಾಡಿದವು. ಅದೇನ್ಮಹಾ ಎಂದ ನಿರ್ದೇಶಕರೊಬ್ಬರು ಮೂಲ ಸಿನೆಮಾದ ಸುಲಭ ಆವೃತ್ತಿಗೆ ಮುಂದಾದರು! ಕತೆಯ ನೀತಿ ಎಂದರೆ, ಜಾಗತೀಕರಣಗೊಂಡ ಜಗತ್ತಿನಲ್ಲಿ ಇಂದು ಹಾಲಿವುಡ್-ಬಾಲಿವುಡ್-ಕಾಲಿವುಡ್-ಸ್ಯಾಂಡಲ್‌ವುಡ್ ವಗೈರೆಗಳು ಪರಸ್ಪರ ಹೊಕ್ಕು-ಬಳಕೆ ತಾಳಿಕೊಳ್ಳುತ್ತವೆ. ಆದರೆ ಮೂಲ ಹಾಗೂ ರೂಪಾಂತರಗಳ ನಡುವಿನ ಕಂದರ, ಅಗಲ. ಸಾಕಷ್ಟು ಅಗಲ.

ವಿಜ್ಞಾನಿ ನಿರ್ಮಿತ ಯಂತ್ರಮಾನವ, ತನಗೆ ಜನ್ಮಕೊಟ್ಟವನಿಗೇ ಎದುರುಬೀಳುವ ಥೀಮ್‌ನ ತಮಿಳು ಚಿತ್ರ ‘ಎಂದಿರನ್’ ಒಂದು ಆ್ಯಕ್ಷನ್ ಥ್ರಿಲ್ಲರ್ ಆಗಿ ಸಿನಿ ಪಂಡಿತ-ಪಾಮರರನ್ನು ರಂಜಿಸಿದರೂ ಅದೇ ವಿಷಯ ಹೊಂದಿದ್ದ ಹಿಂದಿಯ ‘ರಾಒನ್’ ಅಷ್ಟೇನೂ ಯಶಸ್ವಿಯಾಗಲಿಲ್ಲ. ‘‘ಏಳೇಳು ಗಂಟೆ ಶೂಟ್ ಮಾಡಿದ ಶಾಟ್ ಅದು, ಗಾಜಿನ ತುಂಡು, ಯಂತ್ರಮಾನವನ ಮುಖಕ್ಕೆ ತಾಗಿ ಹೋಗುತ್ತದೆ...ಆದರೆ ನಮ್ಮ ಪ್ರೇಕ್ಷಕರು ಅಂತಹ ತಾಂತ್ರಿಕತೆಯನ್ನೆಲ್ಲ ಸವಿಯದೆ ಬೇರೆಲ್ಲೋ ದೃಷ್ಟಿ ನೆಟ್ಟಿರುತ್ತಾರೆ’’ ಎಂದು ಒಂದು ಸಂದರ್ಶನದಲ್ಲಿ ನಾಯಕ ಶಾರುಖ್ ಖಾನ್ ಹಲುಬಿದ್ದರು. ಅದೇನೇ ಇದ್ದರೂ ಯಂತ್ರಮಾನವ ಮೇಲುಗೈ ಪಡೆದಾಗ ಏನಾಗುತ್ತದೆ ಎನ್ನುವುದು ಎಲ್ಲರನ್ನೂ ಸೆರೆಹಿಡಿಯುವ ಭಯಮಿಶ್ರಿತ ಕಲ್ಪನೆ. ಇತ್ತೀಚೆಗೆ ಗೂಗಲ್ ಮುಖ್ಯಸ್ಥ, ಭಾರತ ಮೂಲದ ಸುಂದರ ಪಿಚೈ ಟೆಲಿವಿಷನ್ ಸ್ಟುಡಿಯೋದಲ್ಲಿ ಕುಳಿತಾಗ ಅವರಿಗೆ ಆ ಪ್ರಶ್ನೆ ಹಾಕಲಾಯಿತು. ತಮ್ಮ ಸ್ಥಾಯಿ ಮುಗುಳ್ನಗೆಯಲ್ಲಿಯೇ ಅದನ್ನು ಅವಗಣಿಸಿ ಅವರು ದಿನಂಪ್ರತಿಯ ವಾಸ್ತವಿಕ ನೆಲೆಗಟ್ಟಿನಲ್ಲಿ ಮಾತನಾಡೋಣ ಅಂದರು. ಭಾರತೀಯರ ಕೈಗೆಟಕುವ ಮೂವತ್ತು ಡಾಲರ್ ಬೆಲೆಯ ಸ್ಮಾರ್ಟ್ ಫೋನುಗಳ ನಿರ್ಮಾಣಕ್ಕೆ ಸಂಸ್ಥೆ ಮುಂದಾಗಲಿರುವ ಕುರಿತು ಹೇಳಿದರು. ಸಾಧನಗಳ ಬದಲಾಗಿ ಕೈಬೆರಳಚ್ಚು, ಧ್ವನಿ, ಕಣ್ಣಪಾಪೆಯ ಸೆನ್ಸಾರ್‌ಗಳಿಂದ ಸಂವಹನ ಸಾಧಿಸುವುದರ ಚಿತ್ರ ವಿವರಿಸಿದರು. ರಾಜಸ್ಥಾನದ ಕೃಷಿಕ ಮಹಿಳೆಯರು ತಮ್ಮ ಬೆಳೆಯ ಸ್ಥಿತಿ-ಗತಿಯನ್ನು ಗೂಗಲಿಸಿ ತಿಳಿದುಕೊಳ್ಳುತ್ತಿರುವುದನ್ನು ಉತ್ಸುಕರಾಗಿ ಹಂಚಿಕೊಂಡರು.

ರೋಚಕ ಪ್ರಶ್ನೆಯನ್ನು ಪಿಚೈ ಉತ್ತರಿಸದೇ ಹೋದದ್ದು ಪಿಚ್ಚೆನಿಸಿದರೂ ಅವರ ವಾಸ್ತವಿಕ ನೆಲೆಗಟ್ಟಿನ ವಿವರಣೆಗಳಲ್ಲಿರುವುದು ಹಿಂದಿನ ವರ್ಷಗಳ ಮುಂಗಾಣ್ಕೆಯ ಸೈಫೈ ಫ್ಯಾಂಟಸಿಯೇ ಅಲ್ಲವೆ ಎಂಬ ಯೋಚನೆ ಮುತ್ತಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News