ಮುಂದಿನ ‘‘ಸರ್ಜಿಕಲ್ ಸ್ಟ್ರೈಕ್’’ ಹೀಗಿರಬಹುದೇ?

Update: 2017-02-20 18:41 GMT

ದೇಶದಾದ್ಯಂತ ಬಿಜೆಪಿಯಲ್ಲಿ ನಡೆದಿರುವ ತಯಾರಿಗಳ ಭರಾಟೆಯನ್ನು ಕಂಡರೆ, ಇಂತಹದೊಂದು ‘‘ಸರ್ಜಿಕಲ್ ಸ್ಟ್ರೈಕ್’’ ನಡೆದರೂ ನಡೆದೀತೆಂಬ ಅನುಮಾನಗಳು ಮೂಡುವುದು ಸಹಜ.


2018 ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡಕ್ಕೂ ಚುನಾವಣಾ ವರ್ಷ ಆಗಬಹುದು!
ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಪ್ರತಿಪಕ್ಷ ಬಿಜೆಪಿ ಚುನಾವಣೆಗೆ (ಮೇ 2018) ಇನ್ನೂ ಒಂದೂವರೆ ವರ್ಷ ಅವಧಿ ಇರುವಾಗಲೇ ತನ್ನ ಸಿದ್ಧತೆಗಳ ಗೇರ್ ಬದಲಾಯಿಸುತ್ತಿರುವ ವೇಗ ಕಂಡರೆ ಇಂತಹದೊಂದು ಸಾಧ್ಯತೆ ಇಲ್ಲ ಎಂದು ಹೇಳುವಂತಿಲ್ಲ. ಇದೆಲ್ಲ ಖಚಿತವಾಗಿ ನಿರ್ಧಾರ ಆಗತೊಡಗುವುದು, ಈಗ ನಡೆದಿರುವ ಉತ್ತರಪ್ರದೇಶ ಸಹಿತ ಐದು ರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ಆಧರಿಸಿಕೊಂಡು.

ಇದಕ್ಕೆಲ್ಲ ಒಂದು ಹಿನ್ನೆಲೆ ಇದೆ!
ನರೇಂದ್ರ ಮೋದಿ ಸರಕಾರ ಆಡಳಿತ ಆರಂಭಿಸಿದ ಮೇಲೆ, ‘ಯೋಜನಾ ಆಯೋಗ’ವನ್ನು ರದ್ದುಪಡಿಸಿ ‘ನೀತಿ ಆಯೋಗ’ ರಚಿಸಿತ್ತಲ್ಲವೇ, ಆ ಆಯೋಗಕ್ಕೆ ವಹಿಸಲಾದ ಕೆಲಸಗಳಲ್ಲಿ ಒಂದೆಂದರೆ -ಪದೇ ಪದೇ ಚುನಾವಣಾ ವೆಚ್ಚ-ಕಿರಿಕಿರಿಗಳನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಚುನಾವಣೆಯನ್ನು ಏಕಕಾಲಕ್ಕೆ ನಡೆಸಲು ಯೋಜನೆಯೊಂದನ್ನು ಸಿದ್ಧಪಡಿಸುವುದು. ನೀತಿ ಆಯೋಗದ ಒಂದು ತಜ್ಞರ ತಂಡ ಆ ಯೋಜನೆಯನ್ನೀಗ ಸಿದ್ಧಪಡಿಸಿದೆ. ಆ ಯೋಜನೆಯ ಪ್ರಕಾರ ಎಪ್ರಿಲ್-ಮೇ 2019ರ ವೇಳೆಗೆ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆರಡಕ್ಕೂ ಏಕಕಾಲದಲ್ಲಿ ಚುನಾವಣೆಯನ್ನು ನಡೆಸಬಹುದು.
ಯೋಜನಾ ವರದಿ ಪ್ರಕಟಗೊಂಡ ಬಳಿಕ, ನೋಟು ರದ್ದತಿಯಂತಹ ಮಹತ್ವದ ಬದಲಾವಣೆಗಳು ದೇಶದಲ್ಲಿ ಸಂಭವಿಸಿದ್ದು, ಅದರ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿಗಳು ಮತ್ತು ದೇಶದ ಜನಾಭಿಪ್ರಾಯಗಳನ್ನಾಧರಿಸಿ ಕೇಂದ್ರದಲ್ಲಿರುವ ಸರಕಾರ ತನ್ನ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸಹಜ ವಿದ್ಯಮಾನವೇ ಆಗಿದ್ದು, ಹೆಚ್ಚಿನಂಶ ಈಗ ನಡೆದಿರುವ ಉಪಚುನಾವಣೆಗಳು ಈ ತೀರ್ಮಾನಗಳಿಗೆ ದಿಕ್ಸೂಚಿ ಆಗಲಿವೆ.
ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಮತ್ತು ರಾಜ್ಯಗಳ ಚುನಾವಣೆಯನ್ನು ಒಟ್ಟಾಗಿ ನಡೆಸುವ ವಿಚಾರವನ್ನು ಈಗಾಗಲೇ ಒಂದೆರಡು ಬಾರಿ ಪ್ರಸ್ತಾಪ ಕೂಡ ಮಾಡಿದ್ದಾರೆ.

ಏಕಕಾಲಕ್ಕೆ ಚುನಾವಣೆ
1951-52, 57, 62, 67ರ ತನಕ ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಚುನಾವಣೆ ಒಟ್ಟೊಟ್ಟಿಗೇ ಆಗುತ್ತಿತ್ತು. ಆ ಬಳಿಕ, 68-69ರಲ್ಲಿ ವಿಧಾನಸಭೆಗಳ ವಿಸರ್ಜನೆ ಆದದ್ದು ಮತ್ತು 1970ರಲ್ಲಿ ಲೋಕಸಭೆ ವಿಸರ್ಜನೆ ಆದದ್ದು, ಈ ಸರಣಿಯನ್ನು ಕಡಿದುಹಾಕಿತು.

ಅಲ್ಲಿಂದ ಮುಂದೆ ಈ ಚುನಾವಣೆಗಳು ಎಷ್ಟು ಅಧ್ವಾನವಾಗಿಬಿಟ್ಟಿವೆ ಎಂದರೆ, ವರ್ಷಪೂರ್ತಿ ಒಂದಲ್ಲ ಒಂದು ರಾಜ್ಯದಲ್ಲಿ ಚುನಾವಣೆ ಇರುವುದರಿಂದ, ದೇಶದಲ್ಲಿ ಹಲವು ತಿಂಗಳ ಕಾಲ ನೀತಿಸಂಹಿತೆಗಳ ಆಚರಣೆಯ ಹೆಸರಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಸ್ಥಗಿತ ಆಗಿಬಿಡುತ್ತವೆ. ಚುನಾವಣೆಗಳಿಗೆ ಖರ್ಚು ಕೂಡ ವಿಪರೀತವಾಗುತ್ತಿದ್ದು, ಕೇವಲ ಲೋಕಸಭಾ ಚುನಾವಣೆಯೊಂದಕ್ಕೇ ಅಧಿಕೃತವಾಗಿ ರೂ. 4000 ಕೋಟಿ ರೂಪಾಯಿಗಳ ವೆಚ್ಚ ಬರುತ್ತದೆ. ಇನ್ನು ಅನಧಿಕೃತವಾಗಿ ಈ ವೆಚ್ಚ ಇನ್ನೆಷ್ಟೋ! ಇದಲ್ಲದೆ, ರಕ್ಷಣಾಪಡೆಗಳು - ಚುನಾವಣಾ ಸಿಬ್ಬಂದಿ ತಮ್ಮ ಸಮಯವನ್ನು ವರ್ಷ ಪೂರ್ತಿ ಇದಕ್ಕೇ ಮೀಸಲಿಡಬೇಕಾಗುತ್ತಿದೆ. ಇಷ್ಟೇ ಅಲ್ಲ. ಜನಜೀವನಕ್ಕೆ ಅಡ್ಡಿ, ಚುನಾವಣಾ ಕೆಸರೆರಚಾಟದಲ್ಲಿ ಜಾತಿ-ಧರ್ಮಗಳ ನಡುವೆ ವೈಷಮ್ಯ, ನೀತಿ-ಯೋಜನೆಗಳ ನಿರೂಪಣೆಯ ಮೇಲೆ ಪರಿಣಾಮ... ಹೀಗೆ ಹತ್ತು ಹಲವು ಆತಂಕಗಳನ್ನು ದೇಶ ಎದುರಿಸಬೇಕಾಗುತ್ತದೆ.

ಹಾಗಾಗಿ, ಕೇಂದ್ರ-ರಾಜ್ಯ ಚುನಾವಣೆಗಳು ಒಟ್ಟೊಟ್ಟಿಗೆ ಐದು ವರ್ಷಕ್ಕೊಮ್ಮೆ ನಡೆಯುವಂತಾದರೆ ಚೆಂದ ಎಂಬ ಭಾವನೆ ಹಲವು ವರ್ಷಗಳಿಂದ ಸರಕಾರಿ ನೀತಿ ನಿರೂಪಣಾ ಮಟ್ಟದಲ್ಲಿ ಚಾಲ್ತಿಯಲ್ಲಿದೆ. ಕಾಂಗ್ರೆಸ್, ಕಮ್ಯುನಿಸ್ಟರು, ತೃಣಮೂಲ, ಎನ್‌ಸಿಪಿ ಸೇರಿದಂತೆ ಹಲವು ಪಕ್ಷಗಳಿಂದ ಈ ಯೋಚನೆಗೆ ಆಕ್ಷೇಪವೂ ಇದೆ.

ದೊಡ್ಡ ದೇಶವಾಗಿರುವ ಭಾರತದಲ್ಲಿ ರಾಷ್ಟ್ರೀಯ ವಿಚಾರಗಳು ಮತ್ತು ಪ್ರಾದೇಶಿಕ ವಿಚಾರಗಳು ಬೇರೆ ಬೇರೆ ಆಗಿರುತ್ತವೆ. ಹಾಗಾಗಿ ಲೋಕಸಭೆ-ವಿಧಾನಸಭೆಗಳಿಗೆ ಒಟ್ಟಾಗಿ ಚುನಾವಣೆ ನಡೆದರೆ, ಅದು ಮತದಾನದ ಮೇಲೆ ಪ್ರಭಾವ ಬೀರಬಹುದೆಂಬುದು ಒಂದು ವಾದ. ಈ ವಾದದಲ್ಲಿ ಹುರುಳಿದೆ. ಏಕೆಂದರೆ, ಈ ಹಿಂದೆ 31 ಬಾರಿ ಕೇಂದ್ರ ಮತ್ತು ರಾಜ್ಯ ಚುನಾವಣೆಗಳು ಒಟ್ಟೊಟ್ಟಾಗಿ ಬಂದಾಗ, ಅದರಲ್ಲಿ 24 ಬಾರಿ ಒಂದೇ ರೀತಿಯ ಫಲಿತಾಂಶಗಳು ಬಂದದ್ದಿದೆ. ಕರ್ನಾಟಕದಲ್ಲೇ 1989, 1999, 2004ರಲ್ಲಿ ಈ ರೀತಿ ಆಗಿದೆ.

ಎಲ್ಲಕ್ಕಿಂತ ಮೇಲಾಗಿ ನರೇಂದ್ರ ಮೋದಿಯವರಂತಹ ‘‘ಏಕವ್ಯಕ್ತಿ’’ ಪ್ರಭಾವಿ ಆಗಿರುವ ಸರಕಾರಕ್ಕೆ ಇಂತಹದೊಂದು ಸನ್ನಿವೇಶ ಅನುಕೂಲಕರವೂ ಹೌದು. ಹಾಗಾಗಿ ಈ ಪ್ರಸ್ತಾಪಕ್ಕೆ ಬೇರೆ ಪಕ್ಷಗಳ ಆಕ್ಷೇಪ ಕೂಡ ಬಲವಾಗಿಯೇ ವ್ಯಕ್ತವಾಗಿದೆ.

ಇಂತಹದೊಂದು ವ್ಯವಸ್ಥೆಗೆ ಸಾಂವಿಧಾನಿಕ ವಿರೋಧವೇನಿಲ್ಲ. ಸಂವಿಧಾನದ 83(2) ವಿಧಿಯ ಪ್ರಕಾರ ಲೋಕಸಭೆಗೆ, ಮತ್ತು 172 (1) ವಿಧಿಯನ್ವಯ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಬೇಕಾದ ಅವಧಿಯನ್ನು ಒಂದೂವರೆ ವರ್ಷದ ತನಕ ಮುಂದೂಡುವ ಅಥವಾ ಸಾಂವಿಧಾನಿಕ ಅಗತ್ಯ ಇರುವಾಗಲೆಲ್ಲ ಹಿಂದೂಡುವ ಅವಕಾಶಗಳಿವೆ. ಹಾಗಾಗಿ, ಯಾವುದಾದರೊಂದು ದಿನವನ್ನು ಚುನಾವಣೆಗೆ ನಿಗದಿಪಡಿಸಿದರೆ, ಅದರ ಆಚೀಚೆ ಬರುವ ವಿಧಾನಸಭೆಗಳ ಅವಧಿ ವಿಸ್ತರಿಸಲು ಅಥವಾ ಕುಗ್ಗಿಸಲು ಸಾಂವಿಧಾನಿಕ ಅವಕಾಶಗಳು ಸ್ಪಷ್ಟವಾಗಿವೆ.

ವರದಿ ಏನು ಹೇಳುತ್ತದೆ?
2019 ಎಪ್ರಿಲ್- ಮೇ ಅವಧಿಯಲ್ಲಿ 14 ರಾಜ್ಯಗಳಿಗೆ ಮತ್ತು ಲೋಕಸಭೆಗೆ ಚುನಾವಣೆ ನಡೆದರೆ, ಬಳಿಕ ಅಕ್ಟೋಬರ್-ನವೆಂಬರ್ 2021ಕ್ಕೆ 16 ರಾಜ್ಯಗಳ ಚುನಾವಣೆ ನಡೆಸಬಹುದು. ಅಲ್ಲಿಂದಾಚೆಗೆ ಎರಡೂವರೆ ವರ್ಷಗಳಿಗೆ ಒಮ್ಮೆ ಮಾತ್ರ ಚುನಾವಣೆ ನಡೆಸುವಂತೆ ಸಾಂವಿಧಾನಿಕ ತಿದ್ದುಪಡಿಗಳನ್ನು ತಂದುಕೊಳ್ಳಬಹುದು ಎನ್ನುತ್ತದೆ ವರದಿ. ಅದರಲ್ಲಿ ನಡುನಡುವೆ ಚುನಾವಣೆಗಳು ನಡೆಯದಂತೆ ತಡೆಯಲು ಅವಿಶ್ವಾಸ ಗೊತ್ತುವಳಿಯ ಜೊತೆಗೇ ವಿಶ್ವಾಸ ಗೊತ್ತುವಳಿ ತರುವ, ರಾಷ್ಟ್ರಪತಿಗಳು ನೇಮಿಸುವ ರಾಷ್ಟ್ರೀಯ ಸರಕಾರವೊಂದು ಕಾರ್ಯನಿರ್ವಹಿಸುವ... ಹೀಗೆ ಹಲವಾರು ಸಲಹೆಗಳಿವೆ.

ದೇಶದಾದ್ಯಂತ ಬಿಜೆಪಿಯಲ್ಲಿ ನಡೆದಿರುವ ತಯಾರಿಗಳ ಭರಾಟೆಯನ್ನು ಕಂಡರೆ, ಇಂತಹದೊಂದು ‘‘ಸರ್ಜಿಕಲ್ ಸ್ಟ್ರೈಕ್’’ ನಡೆದರೂ ನಡೆದೀತೆಂಬ ಅನುಮಾನಗಳು ಮೂಡುವುದು ಸಹಜ.

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News