ರಾಜಕೀಯ ಕೊಲೆಕೃತ್ಯಗಳ ಸೂತ್ರಧಾರರು ಸುರಕ್ಷಿತ, ಕಾರ್ಯಕರ್ತರೇ ಬಲಿಪಶುಗಳು: ಕೇರಳ ಹೈಕೋರ್ಟು

Update: 2017-02-23 06:32 GMT

ಕೊಚ್ಚಿ,ಫೆ. 23: ಉನ್ನತ ಸ್ಥಾನದಲ್ಲಿ ಕುಳಿತು ರಾಜಕೀಯ ಕೊಲೆಕೃತ್ಯ ಕ್ಕೆ ಸೂತ್ರ ಹೆಣೆಯುವವರು ಯಾವಾಗಲೂ ಸುರಕ್ಷಿತರಾಗಿರುತ್ತಾರೆ. ಕೆಳಹಂತದ ಸಾಮಾನ್ಯ ಕಾರ್ಯಕರ್ತರು ಬಲಿಯಾಗುತ್ತಾರೆಂದು ಕೇರಳ ಹೈಕೋರ್ಟು ಅಭಿಪ್ರಾಯ ಪ್ರಕಟಿಸಿದೆ. ರಾಜಕೀಯ ಲಾಭಕ್ಕಾಗಿ ಪಕ್ಷಗಳು ಬಲಿಪಶುಗಳನ್ನು ಹುತಾತ್ಮರನ್ನಾಗಿಸುತ್ತವೆ ಎಂದು ಬೇಕಾದರೆ ಹೇಳಬಹುದು. ಇಂತಹ ಕ್ರಮಕ್ಕೆ ಆದೇಶ ನೀಡುವ ಬೌದ್ಧಿಕ ಕೇಂದ್ರಗಳು ಸುರಕ್ಷಿತವಾಗಿ ನಿಂತು ಹುತಾತ್ಮದಿನಾಚರಣೆ ನಡೆಸಿ ಮೊಸಳೆಕಣ್ಣೀರು ಹಾಕುತ್ತವೆ ಎಂದು ಕೋರ್ಟು ಹೇಳಿದೆ. ತಲಚೇರಿ ಪಾನೂರಿನಲ್ಲಿ ಸಿಪಿಎಂ ಕಾರ್ಯಕರ್ತ ಅರಿಕ್ಕಲ್ ಅಶೋಕನ್‌ರ ಕೊಲೆಪ್ರಕರಣದಲ್ಲಿ ನಾಲ್ವರು ಬಿಜೆಪಿ/ಆರೆಸ್ಸೆಸ್ ಕಾರ್ಯಕರ್ತರ ಶಿಕ್ಷೆ ರದ್ದುಪಡಿಸಿದ ತೀರ್ಪಿನಲ್ಲಿ ವಿಭಾಗೀಯ ಪೀಠ ತನ್ನ ಈ ಅಭಿಪ್ರಾಯವನ್ನು ಉದ್ಧರಿಸಿದೆ.

  " ಮನುಷ್ಯ ಜೀವಕ್ಕೆ ರಾಜಕೀಯ ಸಿದ್ಧಾಂತದಷ್ಟು ಬೆಲೆಯಿಲ್ಲ. ರಾಜ್ಯದಲ್ಲಿ ಕೆಲವು ಕಡೆ ಮುಖ್ಯವಾಗಿ ಉತ್ತರ ಜಿಲ್ಲೆಗಳಲ್ಲಿ ನಡೆಯುತ್ತಿರುವ ರಾಜಕೀಯ ದಾಳಿಗಳು ಇದನ್ನು ಸ್ಪಷ್ಟಪಡಿಸುತ್ತಿವೆ. ಆಯುಧಗಳನ್ನು ಮತ್ತು ಸ್ಫೋಟಕ ವಸ್ತುಗಳನ್ನು ಉಪಯೋಗಿಸಿ ರಾಜಕೀಯ ಕೊಲೆಪಾತಕಕ್ಕೆ ಮುಂದಾಗುವುದು ಪಾಶವೀಯ ಕೃತ್ಯವಾಗಿದೆ. ಹಲವು ಪಕ್ಷಗಳಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ಅಭಿಪ್ರಾಯಗಳಿರುವುದು ಸಹಜವಾಗಿದೆ. ಅದನ್ನು ಮರೆತು ರಾಜಕೀಯ ವಿರೋಧಿಗಳನ್ನು ಇಲ್ಲದಾಗಿಸುವ ಪ್ರವೃತ್ತಿ ನಡೆಯುತ್ತಿದೆ. ಯಾವುದೇ ಸಿದ್ಧಾಂತ ಮಾನವರಾಶಿಯ ಪ್ರಗತಿ, ಕಲ್ಯಾಣಗಳಿಗಿರುವುದು ಎನ್ನುವುದನ್ನು ಅವರು ಮರೆಯುತ್ತಿದ್ದಾರೆ" ಎಂದು ಕೋರ್ಟು ಆದೇಶದಲ್ಲಿ ತಿಳಿಸಿದೆ. ಕಣ್ಣೂರಿನಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಎರಡು ಪಾರ್ಟಿಗಳ ನಡುವೆ ದ್ವೇಷ ಮುಂದುವರಿಯುತ್ತಿದೆ ಎಂದು ಕೋರ್ಟು ಅಭಿಪ್ರಾಯ ವ್ಯಕ್ತಪಡಿಸಿದೆ.

ತಪ್ಪಾದ ಪ್ರಾಸಿಕ್ಯೂಶನ್‌ನಿಂದಾಗಿ ರಾಜಕೀಯ ಕೊಲೆಪಾತಕ ಸರಣಿಯ ಒಬ್ಬ ಬಲಿಪಶುಗೆ ನ್ಯಾಯ ಸಿಗದಾಗುತ್ತಿದೆ ಎಂದು ಕೋರ್ಟು ಹೇಳಿದೆ. ಕ್ರಿಮಿನಲ್ ಕೇಸು ವಿಚಾರಣೆಯಲ್ಲಿ ಗರಿಷ್ಠ ಕಾನೂನು ವಿರುದ್ಧ ಕ್ರಮ ಸೆಶನ್ಸ್ ಕೋರ್ಟಿನಿಂದಾಗಿದೆ ಎಂದು ಹೈಕೋರ್ಟು ಆರೋಪಿಸಿದೆ. ವಿಚಾರಣೆಯಲ್ಲಿ ಸಾಬೀತಾಗದ, ಕೇಸ್ ಡೈರಿಯ ಸಾಕ್ಷ್ಯವನ್ನು ಪರಿಗಣಿಸಿದ ಆರೋಪಿಗಳನ್ನು ಅಪರಾಧಿಗಳೆಂದು ಅದು ನಿರ್ಧರಿಸಿತು. ಸಾಕ್ಷ್ಯ ಪಡೆಯುವ ವೇಳೆ ಈ ಸಾಕ್ಷ್ಯವನ್ನು ಬದಲಾಯಿಸಿ ಹೇಳಿಯೂ ಸೆಶನ್ಸ್ ನ್ಯಾಯಾಧೀಶರು ಆ ಸಾಕ್ಷ್ಯವನ್ನೇ ಲೆಕ್ಕಕ್ಕೆ ತೆಗೆದುಕೊಂಡರು. ಸತ್ಯವನ್ನು ತಿಳಿಯ ಬೇಕೆಂದಿದ್ದರೆ ಸಾಕ್ಷಿಗಳನ್ನು ಯಾವ ಹಂತದಲ್ಲೂ ಕೋರ್ಟಿಗೆ ಕರೆಸಿಕೊಳ್ಳಬಹುದಾಗಿತ್ತು ಎಂದು ಹೈಕೋರ್ಟು ಹೇಳಿದೆ.

ಸಬೊರ್ಡಿನೇಟ್ ಜ್ಯುಡಿಶರಿಯ ಹಿರಿಯ ಅಧಿಕಾರಿಯ ಕಡೆಯಿಂದ ಕಾನೂನಾತ್ಮಕ ಮತ್ತು ನ್ಯಾಯದಾನದ ಉದ್ದೇಶ ನಿಲುವು ಇಲ್ಲದಾದ್ದರಲ್ಲಿ ಶಂಕೆಯಿದೆ. ತೀರ್ಪಿನ ಕಾಪಿ ಸಂಬಂಧಿಸಿದ ನ್ಯಾಯಧೀಶರಿಗೆ ಕಳುಹಿಸಿ ಕೊಡಬೇಕೆಂದು ಕೋರ್ಟು ಸೂಚಿಸಿದೆ. ಲಭ್ಯ ಸಾಕ್ಷ್ಯಗಳನ್ನೆಲ್ಲ ಕಾನೂನಿನ ಮುಂದೆ ತರಲು ತನಿಖಾಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಸಂಶಯಾತೀತವಾಗಿ ಕೇಸು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಹೈಕೋರ್ಟು ತಿಳಿಸಿದೆ. ತಲಚೇರಿ ಅಡ್‌ಹಾಕ್ ಸೆಶನ್ಸ್ ಕೋರ್ಟು(ಅಡ್‌ಹಾಕ್-2) ನೀಡಿದ ಶಿಕ್ಷೆಯ ಆದೇಶವನ್ನು ಪ್ರಶ್ನಿಸಿ ಮೊಟ್ಟಮ್ಮಲ್ ಶಾಜಿ ಮುಂತಾದವರು ಹೈಕೋರ್ಟಿಗೆ ಅರ್ಜಿಸಲ್ಲಿಸಿದ್ದರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News