ಡಿಜಿಟಲ್ ಅಂತರ ನಿವಾರಣೆಗೆ ಕೇರಳ ಸಜ್ಜು

Update: 2017-02-23 12:48 GMT

ತಿರುವನಂತಪುರ,ಫೆ.23: ಕೇರಳ ಸರಕಾರವು ಪ್ರತಿಯೊಬ್ಬರಿಗೂ ನಿರ್ದಿಷ್ಟ ಪ್ರಮಾಣದ ಉಚಿತ ಬ್ಯಾಂಡ್‌ವಿಡ್ತ್ ಒದಗಿಸುವ ಮೂಲಕ ಅಂತರ್ಜಾಲ ಹಕ್ಕನ್ನು ಎತ್ತಿ ಹಿಡಿಯಲಿದೆ ಎಂದು ರಾಜ್ಯಪಾಲ ನ್ಯಾ(ನಿವೃತ್ತ) ಪಿ.ಸದಾಶಿವಂ ಅವರು ಗುರುವಾರ ಇಲ್ಲಿ ತಿಳಿಸಿದರು. ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲಿಸಲೂ ಸರಕಾರವು ಗಮನವನ್ನು ಕೇಂದ್ರೀಕರಿಸಲಿದೆ ಎಂದರು.

ಕೇರಳ ವಿಧಾನಸಭೆಯ ನಾಲ್ಕನೇ ಅಧಿವೇಶನದ ಆರಂಭದ ದಿನ ಸದನವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ರಾಜ್ಯದಲ್ಲಿಯ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ವನ್ನೊದಗಿಸುವ ಸಿಪಿಎಂ ನೇತೃತ್ವದ ರಾಜ್ಯ ಸರಕಾರದ ಪ್ರಯತ್ನ ಸದ್ಯವೇ ಯಶಸ್ವಿಯಾಗಲಿದೆ. ವಿದ್ಯುತ್ ಹೊಂದಿರುವ ಎಲ್ಲ ಮನೆಗಳಿಗೂ ಅಂತರ್ಜಾಲ ಸಂಪರ್ಕ ಒದಗಿಸುವುದು ಮುಂದಿನ ಹೆಜ್ಜೆಯಾಗಲಿದೆ ಎಂದರು. ಡಿಜಿಟಲ್ ಅಂತರವನ್ನು ತಗ್ಗಿಸಲು ತನ್ನ ಸರಕಾರವು ಶ್ರಮಿಸಲಿದೆ ಎಂದರು.

 ಸಾರ್ವಜನಿಕ ಸ್ಥಳಗಳಲ್ಲಿ ಇನ್ನೂ ಒಂದು ಸಾವಿರ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲಾಗುವುದು ಎಂದ ಅವರು, ಹೂಡಿಕೆದಾರರನ್ನು ಸೆಳೆಯಲು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸಲು ಸರಕಾರವು ಬದ್ಧವಾಗಿದೆ ಎಂದರು.

ಪ್ರತಿವರ್ಷ ಕನಿಷ್ಠ 1,000 ಕಿರು ಕೈಗಾರಿಕೆಗಳನ್ನು ಸ್ಥಾಪಿಸಲು ಕೇರಳ ಹಣಕಾಸು ನಿಗಮವು ಉದ್ದೇಶಿಸಿದ್ದು, ಇದರಿಂದ ಪ್ರತಿವರ್ಷ 10,000 ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ರಾಜ್ಯಪಾಲರು ತಿಳಿಸಿದರು.


        ಲೈಂಗಿಕ ಅಪರಾಧಿಗಳ ನೋಂದಣಿ ವ್ಯವಸ್ಥೆ

ಕೇರಳ ಸರಕಾರವು ದೇಶದಲ್ಲಿಯೇ ಮೊದಲ ಬಾರಿಗೆ ಲೈಂಗಿಕ ಅಪರಾಧಿಗಳ ನೋಂದಣಿ ವ್ಯವಸ್ಥೆಯನ್ನು ಆರಂಭಿಸಲಿದ್ದು, ಇದು ಲೈಂಗಿಕ ಅಪರಾಧಿಗಳ ಎಲ್ಲ ಗುರುತು ವಿವರಗಳನ್ನು ಒಳಗೊಂಡಿರುತ್ತದೆ ಮತ್ತು ಈ ವಿವರಗಳು ಸಾರ್ವಜನಿಕರಿಗೆ ಲಭ್ಯವಿರುತ್ತವೆ ಎಂದು ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯಗಳ ತಡೆಗೆ ಕೈಗೊಳ್ಳಲಾಗಿರುವ ಕ್ರಮಗಳನ್ನು ವಿವರಿಸುತ್ತ ನ್ಯಾ.ಸದಾಶಿವಂ ಹೇಳಿದರು. ಲೈಂಗಿಕ ಅಪರಾಧಗಳ ಬಲಿಪಶುಗಳಿಗಾಗಿ ಪರಿಹಾರ ನಿಧಿಯೊಂದನ್ನು ಸರಕಾರವು ಸ್ಥಾಪಿಸಲಿದೆ ಎಂದರು.

ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸರಕಾರವು ಮಹಿಳೆಯರಿಗಾಗಿ ಪ್ರತ್ಯೇಕ ಇಲಾಖೆಯನ್ನು ರಚಿಸಲಿದ್ದು, ಈ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಮತ್ತು ತಾಲೂಕು ಮಟ್ಟದಲ್ಲಿ ಸರ್ವ ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News