ಅಣು ತಂತ್ರಜ್ಞಾನ, ರಾಕೆಟ್ ಸಂತರ ಸಂಶೋಧನೆ!
ವಡೋದರ ಮಾ.10: ಜಾತಿ ರಾಜಕೀಯ ಬಗೆಗಿನ ಕಾರ್ಯಾಗಾರವನ್ನು ಬಲಪಂಥೀಯರಿಗೆ ತಿರುಗುಬಾಣವಾಗುವ ಮುನ್ಸೂಚನೆ ಅರಿತು ಮುಂದೂಡಿ ಸುದ್ದಿ ಮಾಡಿದ್ದ ಇಲ್ಲಿನ ಮಹಾರಾಜ ಸಯ್ಯಜಿ ರಾವ್ ವಿಶ್ವವಿದ್ಯಾನಿಲಯ ಇದೀಗ ಹೊಸ ಆಘಾತಕಾರಿ ಸಂಶೋಧನೆ ಮೂಲಕ ಸುದ್ದಿ ಮಾಡಿದೆ. 2017ರ ಅಧಿಕೃತ ಡೈರಿಯಲ್ಲಿ ಇದರ ಉಲ್ಲೇಖವಿರುವುದು ಅಚ್ಚರಿಗೆ ಕಾರಣವಾಗಿದೆ.
ವಿಜ್ಞಾನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ ಸಂತರ ಉಲ್ಲೇಖ ಈ ಡೈರಿಯಲ್ಲಿದೆ. ಅಣು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು ಆಚಾರ್ಯ ಕಂದ. ರಾಕೆಟ್ ಹಾಗೂ ವಿಮಾನವನ್ನು ಕಂಡುಹಿಡಿದದ್ದು ಮಹರ್ಷಿ ಭಾರಧ್ವಾಜ, ಸೌಂದರ್ಯ ಶಸ್ತ್ರಚಿಕಿತ್ಸೆಯ ಜನಕ ಸುಶ್ರೂತ, ಕಾಸ್ಮೋಲಜಿಯ ಜನಕ ಕಪಿಲ ಮುನಿ. ವೈದ್ಯಕೀಯ ಶಾಸ್ತ್ರದ ಪಿತಾಮಹ ಚರಕ ಋಷಿ ಹಾಗೂ ತಾರಾ ವಿಜ್ಞಾನದ ಸಂಶೋಧಕ ಗರಗ ಮುನಿ ಎಂದು ಅಧಿಕೃತ ದಿನಚರಿ ಪುಸ್ತಕದಲ್ಲಿ ಮುದ್ರಿಸಲಾಗಿದೆ. ಇಂಥ ಸುಮಾರು 2000 ಡೈರಿಗಳನ್ನು ಮುದ್ರಿಸಿ ಎಲ್ಲ ದಾನಿಗಳು ಹಾಗೂ ವಿಶ್ವವಿದ್ಯಾನಿಲಯದ ಹಿತೈಷಿಗಳಿಗೆ ವಿತರಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಡೈರಿಯಲ್ಲಿ ಖ್ಯಾತ ವಿಜ್ಞಾನಿಗಳು ಹಾಗೂ ಗಣಿತಜ್ಞರಾದ ಜಗದೀಶ್‌ಚಂದ್ರ ಬೋಸ್, ವಿಕ್ರಮ್ ಸಾರಾಭಾಯ್, ಸಿ.ವಿ.ರಾಮನ್, ಶ್ರೀನಿವಾಸ ರಾಮಾನುಜಂ ಹಾಗೂ ಆರ್ಯಭಟ ಅವರ ಉಲ್ಲೇಖವೂ ಇದೆ.
ಆರೆಸ್ಸೆಸ್ ಸಿದ್ಧಾಂತದ ಕೃತಿಗಳಿಂದ ಹಾಗೂ ಶಿಕ್ಷಾ ಬಚಾವೋ ಆಂದೋಲನ ಸಮಿತಿಯ ಸಂಸ್ಥಾಪಕ ದೀನನಾಥ ಬಾತ್ರಾ ನೀಡಿದ ಮಾಹಿತಿ ಆಧಾರದಲ್ಲಿ ಇವುಗಳನ್ನು ಪ್ರಕಟಿಸಲಾಗಿದೆ ಎಂದು ವಿಶ್ವವಿದ್ಯಾನಿಲಯದ ಮೂಲಗಳು ಸ್ಪಷ್ಟಪಡಿಸಿವೆ.
ಡೈರಿ ಸಮಿತಿಯ ಮುಖ್ಯಸ್ಥ ಅಜಯ್ ಅಷ್ಟಾಪುರೆ ಅವರ ಪ್ರಕಾರ, ಈ ಹೆಸರುಗಳು ಹಾಗೂ ವಿವರಣೆಯನ್ನು ಸಿಂಡಿಕೇಟ್ ಸದಸ್ಯ ಜಗದೀಶ್ ಸೋನಿಯವರ ಶಿಫಾರಸನ್ನು ಆಧರಿಸಿ ನೀಡಲಾಗಿದೆ. ಇವರು ಗುಜರಾತ್‌ನಲ್ಲಿ ಜನಸಂಘದ ಸ್ಥಾಪಕ ಸದಸ್ಯರಾಗಿದ್ದ ಬಾಪುಬಾಯ್ ಸೋನಿಯವರ ಪುತ್ರ. ಸಂತರು ನಿಜವಾದ ವಿಜ್ಞಾನಿಗಳು. ಋಷಿಗಳು ಸಂಶೋಧನೆಗೆ ಹೆಸರಾದವರು. ಆಯಾ ಕ್ಷೇತ್ರಗಳ ವಿಜ್ಞಾನಿಗಳು ಎಂದೇ ಅವರನ್ನು ಪರಿಗಣಿಸಬೇಕಾಗುತ್ತದೆ ಎಂದು ಸೋನಿ ಸಮರ್ಥಿಸಿಕೊಂಡಿದ್ದಾರೆ.