ದಾಳಿಕೋರನಿಂದ ಒಡತಿಯನ್ನು ರಕ್ಷಿಸಲು ತಾನೇ ಬಲಿಯಾದ ನಾಯಿ

Update: 2017-04-13 14:11 GMT

ಮುಂಬೈ,ಎ.1: ಇಲ್ಲಿಯ ಆ್ಯಂಟಪ್ ಹಿಲ್ ನಿವಾಸಿ ಮಹಿಳೆಯೋರ್ವಳು ಸಾಕಿದ್ದ ಬೀದಿನಾಯಿಯೊಂದು ತನ್ನ ಪ್ರಾಣವನ್ನೇ ನೀಡಿ ದುಷ್ಕರ್ಮಿಯಿಂದ ತನ್ನ ಒಡತಿಯನ್ನು ರಕ್ಷಿಸಿದೆ.

  ಪ್ರೀತಿಯ ನಾಯಿ ‘ಲಕಿ’ಯ ಸಾವಿನ ಆಘಾತದಿಂದ ಸುಮತಿ ದೇವೇಂದ್ರ(26) ಇನ್ನೂ ಚೇತರಿಸಿಕೊಂಡಿಲ್ಲ. ಕಳೆದ ವರ್ಷ ತನ್ನ ತಾಯಿಯ ನಿಧನದ ಬಳಿಕ ಒಂಟಿತನವನ್ನು ನೀಗಿಸಿಕೊಳ್ಳಲು ಯಾರೋ ಮಕ್ಕಳು ಕಟ್ಟಡದ ಎದುರು ಬಿಟ್ಟುಹೋಗಿದ್ದ ನಾಯಿಮರಿಯನ್ನು ಆಕೆ ಅಕ್ಕರೆಯಿಂದ ಸಾಕಿದ್ದರು. ಲಕಿ ಸುಮತಿ ಮತ್ತು ಆಕೆಯ ಸಹೋದರನಿರುವ ಕುಟುಂಬದ ಮೂರನೇ ಸದಸ್ಯನಾಗಿತ್ತು.

ಎ.9ರಂದು ರಾತ್ರಿ ಮನೆಯ ಹೊರಗೆ ಗದ್ದಲ ಕೇಳಿ ಸುಮತಿ ಬಾಗಿಲು ತೆರೆದು ಹೊರಗೆ ಬಂದಿದ್ದರು. ಆ ವೇಳೆಗೆ ನೆರೆಮನೆಯ ವೆಂಕಟೇಶ ದೇವೇಂದ್ರ ಎಂಬಾತ ತನ್ನ ಗೆಳತಿ ಜ್ಯೋತಿ ಮತ್ತು ಆಕೆಯ ಸೋದರಿ ರೋಸಿ ಜೊತೆ ವಾಗ್ವಾದದಲ್ಲಿ ತೊಡಗಿದ್ದ.ಅದು ವಿಕೋಪಕ್ಕೆ ತಿರುಗಿದಾಗ ವೆಂಕಟೇಶ ಮನೆಗೆ ಹೋಗಿ ಚೂರಿಯೊಂದಿಗೆ ವಾಪಸ್ ಬಂದಿದ್ದ.

 ಗಾಬರಿಗೊಂಡ ಆ ಸೋದರಿಯರು ಸುಮತಿಯ ಮನೆಯೊಳಗೆ ಧಾವಿಸಿದ್ದರು. ಅವರ ಹಿಂದೆಯೇ ಸುಮತಿ ಮನೆ ಸೇರಿಕೊಂಡಿದ್ದರು. ಅಲ್ಲಿಗೂ ದೇವೇಂದ್ರ ನುಗ್ಗಿದ್ದ. ಸುಮತಿ ದೇವೇಂದ್ರನ್ನು ತಳ್ಳಿದಾಗ ಆತ ಇರಿಯಲು ಮುಂದಾಗಿದ್ದ. ಅಲ್ಲಿಯೇ ಇದ್ದ ಲ ಕಿ ಜೋರಾಗಿ ಬೊಗಳುತ್ತ ಆತನ ಮೈಮೇಲೆ ಹಾರಿ ಚೂರಿಯ ಇರಿತಕ್ಕೆ ತಾನೇ ಬಲಿಯಾಗುವ ಮೂಲಕ ಒಡತಿಯನು ರಕ್ಷಿಸಿತ್ತು.

ಪರಾರಿಯಾಗಿದ್ದ ದೇವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಅದರಿಂದ ತನ್ನ ಪ್ರೀತಿಪಾತ್ರ ನಾಯಿಯನ್ನು ಕಳೆದುಕೊಂಡಿರುವ ಸುಮತಿಯ ನೋವು ಕಡಿಮೆಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News