ಮತಯಂತ್ರ ಮತ್ತು ಕುತಂತ್ರ
ಪ್ರತೀಬಾರಿ ಈ ಚರ್ಚೆ ಬಂದಾಗ ಕೇವಲ ಸೋತವರ ಗೊಣಗಾಟದಲ್ಲಿಯೇ ಅದು ಮುಗಿದುಹೋಗುತ್ತಿತ್ತು. ಆದರೆ ಈ ಬಾರಿ ಮಾಧ್ಯಮಗಳೂ ಈ ಸೊಲ್ಲನ್ನೆತ್ತಿಕೊಂಡು ರಾಗವಾಗಿ ಹಾಡಲಾರಂಭಿಸಿವೆ. ಇವಕ್ಕೆಲ್ಲ ಅಂತಿಮ ಫಲಾನುಭವಿಗಳು ಯಾರೆಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.
ಇಲೆಕ್ಟ್ರಾನಿಕ್ ಮತದಾನ ಯಂತ್ರಗಳು ಸುದ್ದಿ ಮಾಡುತ್ತಿವೆ. ಈ ಯಂತ್ರಗಳನ್ನು ತಿರುಚಲು ಸಾಧ್ಯ ಇದೆ ಎಂದು ಕೆಲವರು ಶಂಕೆ ವ್ಯಕ್ತಪಡಿಸುತ್ತಿದ್ದರೆ, ಸರಕಾರ ಮತ್ತು ಚುನಾವಣಾ ಆಯೋಗ ಅದು ಅಸಾಧ್ಯ ಎಂದು ಹೇಳುತ್ತಿವೆ. ದಿಲ್ಲಿಯ ಮುಖ್ಯಮಂತ್ರಿ ತಾನು ಸ್ವತಃ ಈ ಯಂತ್ರಗಳನ್ನು ತಿರುಚಲು 10 ವಿಧಾನಗಳನ್ನು ಬಲ್ಲೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಉತ್ತರ ಪ್ರದೇಶದ ಚುನಾವಣೆಗಳ ಬಳಿಕ ಈ ಯಂತ್ರಗಳ ಬಗ್ಗೆ ಸಂಶಯದ ಬೀಜವೊಂದನ್ನು ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ.
ಕೇಂದ್ರದಲ್ಲಿ ಈಗ ಇರುವುದು ‘ಇಲೆಕ್ಟ್ರಾನಿಕ್ ಯುಗದ’ ಸರಕಾರ ಆಗಿರುವ ಕಾರಣ, ಈ ಸಂಶಯದ ಬೀಜ ತಾನಾಗಿಯೇ ಮೊಳೆಯಲಾರಂಭಿಸಿದೆ. ಚುನಾವಣೆಯ ಚರಿತ್ರೆಯನ್ನು ಗಮನಿಸಿದರೆ, ಮತಪತ್ರದ ಮೇಲೆ ಮುದ್ರೆ ಒತ್ತುವ ಕಾಲದಲ್ಲೂ ಚುನಾವಣಾ ಅಕ್ರಮಗಳು ನಡೆದಿವೆ; ಬಳಿಕ ಮತಯಂತ್ರಗಳಲ್ಲೂ ಬಲಾತ್ಕಾರದ ಮತಗಳನ್ನು ಒತ್ತಿದ ಪ್ರಕರಣಗಳು ಬೆಳಕಿಗೆ ಬಂದದ್ದಿದೆ. ಹೇಗಾದರೂ ಚುನಾವಣೆ ಗೆಲ್ಲಲೇ ಬೇಕು ಎಂಬವರಿಗೆ ದಾರಿಗಳು ನೂರಾರು.
ಬೆಂಗಳೂರಿನ ಬಿಇಎಲ್, ಹೈದರಾಬಾದಿನ ಇಸಿಐಗಳಲ್ಲಿ ನಿರ್ಮಾಣಗೊಳ್ಳುವ ಮತಯಂತ್ರಗಳನ್ನು ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಬಳಸುತ್ತಿದೆ. ಈ ಯಂತ್ರಗಳಲ್ಲಿ 3 ವಿಧ. ಎಂ1, ಎಂ2 ಮತ್ತು ಎಂ3. ಇವುಗಳಲ್ಲಿ ಎಂ1 ಎಂಬುದು 2006ರ ತನಕ ಬಳಕೆಯಲ್ಲಿದ್ದ ಯಂತ್ರ. ಎಂ2 ಎಂಬುದು 2006-2013ರ ತನಕ ಬಳಕೆಯಲ್ಲಿದ್ದ ಯಂತ್ರವಾಗಿದ್ದರೆ, ಎಂ3 2014ರ ಬಳಿಕ ಉತ್ಪಾದನೆಗೆ ಸಿದ್ಧಗೊಳ್ಳುತ್ತಿರುವ ಯಂತ್ರ.
ಮೈಕ್ರೋಚಿಪ್‌ಗಳು ಸಾಧಾರಣ ಮನುಷ್ಯರ ಅರಿವಿಗೆ ಮೀರಿದ ‘ಮ್ಯಾಜಿಕ್’ ತುಣುಕುಗಳಾಗಿದ್ದು, ಅವುಗಳ ಸಾಧ್ಯತೆ-ಸಂಭಾವ್ಯತೆ ಅಪಾರ. ಇವತ್ತು ಇಲೆಕ್ಟ್ರಾನಿಕ್ ಮತಯಂತ್ರಗಳ ಮೇಲೆ ಸಂಶಯ ಹುಟ್ಟುವುದಕ್ಕೆ ಮೂಲ ಕಾರಣಗಳೂ ಈ ಮೈಕ್ರೋಚಿಪ್‌ಗಳು ಹೊಂದಿರುವ ಸಾಧ್ಯತೆಗಳೇ. ಇವಿಎಂಗಳ ಬಗ್ಗೆ ಜನರಿಗಿರುವ ಸಂಶಯಗಳನ್ನು ದೂರಮಾಡಲು ಚುನಾವಣಾ ಆಯೋಗ ಮೊನ್ನೆಯಷ್ಟೇ ಬಹಳ ವಿಸ್ತೃತವಾದ ಪ್ರಶ್ನೋತ್ತರಿಯೊಂದನ್ನು ಪ್ರಕಟಿಸಿದೆ. ಅದರ ಲಿಂಕ್ ಇಲ್ಲಿದೆ: (http://eci.nic.in/eci_main1/ current/FAQ-English14012017. pdf)
ಈ ಇವಿಎಂ ಯಂತ್ರಗಳು ಇಂಟರ್‌ನೆಟ್‌ಗಾಗಲಿ, ಬೇರಾವುದೇ ಪರಿಕರಗಳಿಗಾಗಲಿ ಸಂಪರ್ಕ ಹೊಂದಿಲ್ಲದ ಸ್ವತಂತ್ರ ಯಂತ್ರಗಳಾಗಿರುವುದರಿಂದ ಮತ್ತು ಅವುಗಳ ಸುರಕ್ಷೆ, ಚುನಾವಣೆಗಳ ವೇಳೆ ಹಂಚಿಕೆ, ಮತದಾನದ ಬಳಿಕ ಅವುಗಳ ಕಾವಲು ಮತ್ತು ಆ ಬಳಿಕ ಅವುಗಳಿಂದ ದತ್ತಾಂಶ ಸ್ವೀಕಾರ ಚುನಾವಣಾ ಆಯೋಗದ ಸುಪರ್ದಿಯಲ್ಲೇ ನಡೆಯುತ್ತದೆ; ಅವಕ್ಕೆಲ್ಲ ಸೂಕ್ತ ನಿಯಮಾವಳಿಗಳಿದ್ದು, ಆ ನಿಯಮಗಳನ್ನು ಪಾಲಿಸಿದರೆ ವಂಚನೆ ಅಸಾಧ್ಯ ಎಂಬುದು ಚುನಾವಣಾ ಆಯೋಗದ ನಿಲುವು.
ಭಾರತದಲ್ಲಿ ‘ಕಾರ್ಯಾಂಗ’ ಎಂಬುದು ಮುಂದೆ ಬಂದರೆ ಹಾಯುವ, ಹಿಂದೆ ಬಂದರೆ ಒದೆಯುವ ಸಕಲ ಸಾಮರ್ಥ್ಯಗಳೂ ಇರುವ ‘ಪಾಪದ’ ಗೋವು. ಅದು ಯಾವಾಗ ಹಾಯುತ್ತದೆ/ಹಾಯಬೇಕು ಮತ್ತು ಯಾವಾಗ ಒದೆಯುತ್ತದೆ/ಒದೆಯಬೇಕು ಎಂದು ನಿರ್ಧರಿಸುವುದು ‘ಶಾಸಕಾಂಗ’. ಇದು ಅಧಿಕೃತವಾಗಿ ‘ಸತ್ಯ’; ಅನಧಿಕೃತವಾಗಿ ‘ಸತ್ಯೋತ್ತರ’. ಈ ಕಾರಣದಿಂದಾಗಿಯೇ ಎಲ್ಲೋ ಒಬ್ಬರು ಮಾಯಾವತಿ, ಇನ್ನೆಲ್ಲೋ ಒಬ್ಬರು ಕೇಜ್ರಿವಾಲ್ ಇವಿಎಂ ಬಗ್ಗೆ ಮಾತನಾಡಿದಾಗ ಅದು ದೇಶವ್ಯಾಪಿ ಸುದ್ದಿ ಆಗುತ್ತಿದೆ.
ನಡುವೆ ಗಮನಿಸಬೇಕಾದ ಇನ್ನೊಂದು ಸಂಗತಿ ಇದೆ. ಅದೆಂದರೆ, ನಮ್ಮ ದೇಶದಲ್ಲಿ ಮತದಾನ ಯಂತ್ರಗಳಿರುವುದು ಕೇಂದ್ರ ಚುನಾವಣಾ ಆಯೋಗದ ಬಳಿ ಮಾತ್ರ ಅಲ್ಲ, ರಾಜ್ಯ ಸರಕಾರಗಳ ಬಳಿಯೂ ಪ್ರತ್ಯೇಕ ಇವಿಎಂಗಳಿವೆ. ಅವುಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳ ವೇಳೆ ಬಳಸಲಾಗುತ್ತಿದೆ ಮತ್ತು ಕೇಂದ್ರ ಚುನಾವಣಾ ಆಯೋಗ ಈ ರಾಜ್ಯ ಮಾಲಕತ್ವದ ಇವಿಎಂಗಳ ಬಗ್ಗೆ ತನ್ನ ಜವಾಬ್ದಾರಿ ಏನಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಹೇಳುತ್ತದೆ. ಹೆಚ್ಚಿನಂಶ ಇದು ಈ ಇಡೀಯ ವಿವಾದದಲ್ಲಿ ಗ್ರೇ ಏರಿಯಾ. ವಿದೇಶಗಳಲ್ಲಿ ಯಾಕೆ ಇವಿಎಂ ಬಳಕೆ ಆಗುತ್ತಿಲ್ಲ ಎಂಬ ಪ್ರಶ್ನೆ ಆಗಾಗ ಏಳುತ್ತಿದೆ. ಆದರೆ, ವಿದೇಶಗಳಲ್ಲಿ ಬಳಕೆ ಆಗಿ ವಿಫಲಗೊಂಡ ಇವಿಎಂಗಳು ಕಂಪ್ಯೂಟರಿಗೆ ಸಂಪರ್ಕ ಇರುವ ಮಾದರಿಗಳಾಗಿದ್ದು, ಅವುಗಳನ್ನು ತಿರುಚುವ ಸಾಧ್ಯತೆಗಳಿವೆ. ಸ್ವತಂತ್ರ ಯಂತ್ರಗಳಲ್ಲಿ ಆ ಸಾಧ್ಯತೆ ಕಡಿಮೆ ಎನ್ನುತ್ತದೆ ಚುನಾವಣಾ ಆಯೋಗ. ದೇಶದಲ್ಲಿರುವ 14 ಲಕ್ಷದಷ್ಟು ಇವಿಎಂಗಳನ್ನು ತಿರುಚುವುದು ವಾಸ್ತವದಲ್ಲಿ ಸಾಧ್ಯವಿಲ್ಲ ಎಂಬುದು ಆಯೋಗದ ಖಚಿತ ನಿಲುವು.
ಎಲ್ಲ ಬೆಳವಣಿಗೆಗಳ ಹಿಂದೆ, ಚುನಾವಣಾ ವ್ಯವಸ್ಥೆಯ ಬಗ್ಗೆಯೇ ಸಂಶಯ ಹುಟ್ಟಿಸುವ ಒಂದು ಪ್ರಯತ್ನ ಇರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಪ್ರತೀಬಾರಿ ಈ ಚರ್ಚೆ ಬಂದಾಗ ಕೇವಲ ಸೋತವರ ಗೊಣಗಾಟದಲ್ಲಿಯೇ ಅದು ಮುಗಿದುಹೋಗುತ್ತಿತ್ತು. ಆದರೆ ಈ ಬಾರಿ ಮಾಧ್ಯಮಗಳೂ ಈ ಸೊಲ್ಲನ್ನೆತ್ತಿಕೊಂಡು ರಾಗವಾಗಿ ಹಾಡಲಾರಂಭಿಸಿವೆ. ಇವಕ್ಕೆಲ್ಲ ಅಂತಿಮ ಫಲಾನುಭವಿಗಳು ಯಾರೆಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.