ಹಲವರ ನೆರವಿನಿಂದ ಕನಸು ನನಸಾಯ್ತು

Update: 2017-05-30 18:34 GMT

ರಸ್ತೆ ಬದಿಯ ಮನೆಯಾದುದರಿಂದ ಭಿಕ್ಷೆ ಬೇಡುವ ತರಹೇವಾರಿ ಜನಗಳನ್ನು ನೋಡಲು ಸಿಗುತ್ತಿತ್ತು. ಪ್ರತಿಯೊಂದು ಧರ್ಮದ ಜನರಲ್ಲೂ ಇಲ್ಲದವರಿಗೆ ನೀಡುವುದು ಒಳ್ಳೆಯ ಕೆಲಸ ಹಾಗೂ ಅದರಿಂದ ನೀಡಿದವರಿಗೆ ಒಳಿತಾಗುತ್ತದೆ, ಅಥವಾ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ. ಕಾಪಿಕಾಡಿನ ಮನೆಗೆ ಚಿಕ್ಕವಳಿದ್ದಾಗ ಬರುತ್ತಿದ್ದ ದಾಸಯ್ಯರು, ಕುರುಕುರು ಮಾಮರವರು, ಲಕ್ಷಣ ಹೇಳುವವರು, ಭವಿಷ್ಯ ನುಡಿಯುವವರು ಬಂದಾಗೆಲ್ಲಾ ಅಮ್ಮ ಭಾವುಕರಾಗಿ ಅವರಿಗೆ ದುಡ್ಡು, ಅಕ್ಕಿ, ಕೊನೆಗೆ ಊಟವನ್ನೂ ಹಾಕುತ್ತಿದ್ದರು. ಅದೆಲ್ಲಾ ನಮ್ಮ ಅಪ್ಪ ಹೇಳುತ್ತಿದ್ದ ಭಕ್ತರ, ಸಂತರ ಕತೆಗಳ ಪ್ರಭಾವ ಎಂದರೂ ನಿಜ.

ದೇವರು ನಮ್ಮನ್ನು ಪರೀಕ್ಷಿಸುವುದಕ್ಕೆ ಮಾರುವೇಷದಲ್ಲಿ ಬರುತ್ತಾನೆ ಎನ್ನುತ್ತಿದ್ದುದನ್ನು ಆಗ ನಿಜವೆಂದೇ ನಂಬುತ್ತಿದ್ದೆವು. ಆದರೆ ಈಗ ಸಮಾಜ ಬದಲಾದುದು ಅವರಿಗೂ ತಿಳಿದ ಸತ್ಯವಾಗಿತ್ತು. ನನಗಂತೂ ಇಂತಹ ನಂಬಿಕೆಗಳು ಎಷ್ಟರ ಮಟ್ಟಿಗೆ ಔಚಿತ್ಯಪೂರ್ಣ ಎಂಬ ಸಂದೇಹ ಶುರುವಾಗಿತ್ತು. ಇದರರ್ಥ ನೆರವಿನ ಅಗತ್ಯವಿರುವವರಿಗೆ ನೆರವು ನೀಡಬಾರ ದೆಂಬ ನಿರ್ಧಾರವಲ್ಲ. ಹೀಗೆ ಬೇಡುವ ವೇಷಗಳ ಬಗೆಗೆ ನಂಬಿಕೆ ಇರಲಿಲ್ಲ. ನಮ್ಮ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವ ದಾರಿ ಎನ್ನುವುದು ಅರಿವಾಗುತ್ತಿತ್ತು, ನಾವು ನೀಡಿದ ಹಣ ಸಂಜೆಯ ಹೊತ್ತಿಗೆ ಗಡಂಗ್ ಸೇರುವುದನ್ನು ಒಮ್ಮಿಮ್ಮೆ ಕಣ್ಣಾರೆ ನೋಡುತ್ತಿದ್ದೆವು. ಆದರೂ ನಾವು ಒಂದು ಸಂದರ್ಭದಲ್ಲಿ ಮೋಸ ಹೋದುದನ್ನು ನೆನಪಿಸಿ ಕೊಡರೆ ನಾಚಿಕೆಯಾಗುತ್ತದೆ. ನಮ್ಮಂತಹವರೇ ಹೀಗಾದರೆ ಉಳಿದವರು ಮೋಸ ಹೋಗುವುದರಲ್ಲಿ ಆಶ್ಚರ್ಯವೇನು ಇಲ್ಲ.

ಒಂದು ದಿನ ಮಧ್ಯಾಹ್ನ, ಶನಿವಾರವಿರಬೇಕು, ಒಬ್ಬ ಅವಧೂತ ಸ್ವಾಮಿಯಂತೆ ಸಾಲಿನಲ್ಲಿದ್ದ ಇನ್ಯಾಂವ ಮನೆಗೂ ಹೋಗದೆ ನೇರವಾಗಿ ನಮ್ಮ ಮನೆಯ ಒಳಗೇ ಬಂದು ಬಿಟ್ಟ. ನಮ್ಮ ಬಗ್ಗೆ ಹಲವಾರು ವಿಷಯಗಳನ್ನೂ ಹೇಳಿ ಕೆಲವು ನಮ್ಮ ಜೀವನದ ಖಾಸಗೀ ವಿಷಯಗಳನ್ನೂ ಹೇಳಿದ. ನಾವು ಆಶ್ಚರ್ಯಗೊಂಡಂತೆಯೇ! ಅವನ ಮಾತಿಗೆ ಮರುಳಾಗಿ ಬಿಟ್ಟೆವು, ಜತೆಗೆ ತನ್ನ ಅಂಗೈ ಬಿಡಿಸಿ ತೋರಿಸಿ ಬಳಿಕ ಮುಷ್ಠಿ ಹಿಡಿದು ನೀರು ಸುರಿಸಿದ. ಇನ್ನೊಂದು ಕ್ಷಣದಲ್ಲಿ ಅಂಗೈ ಒರಸಿ ಪುನ: ಬಿಡಿಸಿ ತೋರಿಸಿ ಆ ಬಳಿಕ ಬೂದಿಯಂತಹ ಪುಡಿ ಉದುರಿಸಿದ. ಇಷ್ಟೆಲ್ಲಾ ಜಾದೂಗಳ ಬಳಿಕ ನಮ್ಮ ಭವಿಷ್ಯದ ಬಗ್ಗೆ ಹೇಳತೊಡಗಿದ. ಒಳ್ಳೆಯದಾಗುತ್ತದೆ ಎಂಬ ಭವಿಷ್ಯ ಹೇಳಿದರೆ ಮನಸ್ಸು ಉಬ್ಬುವುದರೊಂದಿಗೆ ಬುದ್ಧಿಗೆ ಮಂಕು ಕವಿಯುತ್ತದೆ ಎನ್ನುವ ಸತ್ಯ ತಿಳಿದಿದ್ದರೂ, ನಾವು ಬುದ್ಧಿಗೇಡಿಗಳಾಗಿ ಬಿಟ್ಟೆವು, ಅವನು ಬೇಡಿದಂತೆ ನಮ್ಮವರ ಒಂದು ಒಳ್ಳೆಯ ಪಂಚೆ ಪೆಟ್ಟಿಗೆಯಿಂದ ಹೊರಬಂದು ಅವನ ಪಾಲಾಯ್ತು, ಜತೆಗೆ ಅಂದಿನ ದಿನಕ್ಕೆ ಹೆಚ್ಚು ಎಂಬಂತೆ ರೂಪಾಯಿ ಹತ್ತನ್ನು ದಕ್ಷಿಣೆ ಪಡೆದು ಕೊಂಡು ಹೊರಟ. ಆ ದಿನಗಳಲ್ಲಿ ಇಂತಹ ಪವಾಡಗಳನ್ನು ಪುಟ್ಟಪರ್ತಿಯ ಸಾಯಿಬಾಬಾ ನಡೆಸುತ್ತಾರೆ ಎಂದು ತಿಳಿದಿತ್ತು. ಅವರನ್ನೂ ಪರೀಕ್ಷಿಸ ಹೊರಟ ಮಂಗಳೂರಿನ ನರೇಂದ್ರ ನಾಯಕರನ್ನು ಕೇಳಿದ್ದೆವು. ನೋಡಿರಲಿಲ್ಲ. ಹೀಗೆ ಈ ಒಂದು ಬಾರಿ ಮಾತ್ರ ಮೋಸ ಹೋದೆವು. ಮುಂದೆ ಹೀಗಾಗಲಿಲ್ಲ, ಆದರೆ ಅವನು ಹೇಳಿದ ಸದ್ಯೋ ಭವಿಷ್ಯ ಮಾತ್ರ ನಿಜವಾದುದು ಕಾಕತಾಳೀಯವಾಗಿರಬೇಕು. ಯಾಕೆಂದರೆ ಆ ಭವಿಷ್ಯಗಳೆಲ್ಲಾ ನಾವು ಕನಸು ಕಂಡದ್ದೇ ಆಗಿತ್ತಲ್ಲವೇ!

ಈ ಘಟನೆಯ ಬಳಿಕ ಮಗಳ ಬಗ್ಗೆ ಹೆಚ್ಚು ಜಾಗರೂಕರಾಗಿರುವಂತೆ ಮನೆ ಮಂದಿಗೆ ತಿಳಿಸಿದ್ದಾಯ್ತು. ಹಾಗೆಯೇ ಬಾಗಿಲು ತೆರೆದು ಇಟ್ಟಿರಬಾರದು ಎಂದೂ ಹೇಳಿ ಒಳಗೆ ಬಂದು ಸಣ್ಣ ಬೀಗ ಹಾಕಿಕೊಳ್ಳುವ ವ್ಯವಸ್ಥೆ ಮಾಡಲಾಯಿತು. ಮುಂದೆ ಇಂತಹ ಪ್ರಮಾದ ನಮ್ಮಲ್ಲಿ ಯಾರಿಂದಲೂ ಆಗಲಿಲ್ಲ ಎನ್ನುವುದೇ ನಮ್ಮ ಸಂತಸ. ಮೂರು ವರ್ಷ ದಾಟಿದ ನನ್ನ ಮಗಳಿಗೆ ವಿಜಯದಶಮಿಯ ದಿನ ನನ್ನ ತವರುಮನೆಯಲ್ಲಿ ನನ್ನ ಅಪ್ಪನಿಂದಲ್ಲೇ ಅಕ್ಷರಾಭ್ಯಾಸ ಮಾಡಲಾಯಿತು. ಮುಂದೆ ದಸರಾ ರಜೆ ಕಳೆದ ಬಳಿಕ ನಾನು ಕಲಿತ ಕಾಪಿಕಾಡು ಮುನಿಸಿಪಲ್ ಶಾಲೆಗೆ ಕಳುಹಿಸಬೇಕೆಂದು ನಿಶ್ಚಯಿದ್ದೆವು. ಶಾಲೆ ಮನೆಗೆ ಹತ್ತಿರವೇ ಇತ್ತಲ್ಲಾ. ಆ ಶಾಲೆಯಲ್ಲಿ ನಮ್ಮ ಒಟ್ಟು ಕುಟುಂಬದ ಅನೇಕ ಮಕ್ಕಳು ಕಲಿತಿದ್ದೇವೆ. ಚಿಕ್ಕಮ್ಮ, ಚಿಕ್ಕಪ್ಪ ಇಲ್ಲೇ ಶಿಕ್ಷಕ-ಶಿಕ್ಷಕಿಯರಾಗಿದ್ದು ಈಗ ಬೇರೆಡೆಗೆ ವರ್ಗವಾಗಿದ್ದರು. ಅಪ್ಪನ ಸೋದರ ಸೊಸೆ ಈಗಲೂ ಇದೇ ಶಾಲೆಯಲ್ಲಿ ಶಿಕ್ಕಕಿಯಾಗಿದ್ದರು.

ಹಾಗೆ ಒಂದು ದಿನ ಶಾಲೆಗೆ ಹೋಗಿ ಮುಖ್ಯೋಪಾಧ್ಯಾಯಿನಿಯನ್ನು ಕಂಡು ಪರಿಚಯ ಮಾಡಿಕೊಂಡೆ. ಬಳಿಕ ಮಗಳನ್ನು ಶಾಲೆಗೆ ಸೇರಿಸುವ ಬಗ್ಗೆ ಹೇಳಿದೆ. ಆಗ ಅಂಗನವಾಡಿಯೆಂಬುದು ಇನ್ನೂ ಪ್ರಾರಂಭವಾಗಿರಲಿಲ್ಲ. ಆದರೆ ಬಾಲವಾಡಿಯನ್ನುವುದು 60ರ ದಶಕದಲ್ಲೇ ಪ್ರಾರಂಭವಾಗಿತ್ತು ನಾನು ನನ್ನ ಮಗಳನ್ನು ಸೇರಿಸುವ ಬಗ್ಗೆ ಅವರು ಸಂತೋಷ ಪಡುತ್ತಾರೆ ಎಂದು ಭಾವಿಸಿದ್ದರೆ ಅದಕ್ಕೆ ತದ್ವಿರುದ್ಧ ವಾಗಿ ಆಕೆ ‘‘ನೀವು ಯಾಕೆ ಈ ಶಾಲೆಗೆ ಸೇರಿಸುತ್ತೀರಿ. ಬೇರೆ ಒಳ್ಳೆಯ ಶಾಲೆಗೆ ಕಳುಹಿಸಿ’’ ಎನ್ನುವುದೇ? ಇಂದು ಇಡೀ ರಾಜ್ಯದಲ್ಲಿ ಕನ್ನಡ ಶಾಲೆ ಮುಚ್ಚಿದೆ, ಮುಚ್ಚುತ್ತಿದೆ. ಅದರಲ್ಲೂ ಸರಕಾರಿ ಶಾಲೆಗಳು ಮುಚ್ಚುತ್ತಿವೆ ಎಂದರೆ ಇಂತಹ ಮನೋಧರ್ಮದ ಶಿಕ್ಷಕ /ಶಿಕ್ಷಕಿಯರಿಂದಲೇ ಎನ್ನುವುದು ಪೂರ್ಣ ಸತ್ಯವಲ್ಲವಾದರೂ ಅರ್ಧಸತ್ಯವಂತೂ ನಿಜ. ಅವರೆಲ್ಲ ಅವರ ಸ್ವಂತ ಮಕ್ಕಳನ್ನು ಕನ್ನಡ ಶಾಲೆಗೆ ಹಾಕದೆ ಇಂಗ್ಲಿಷ್ ಮಾಧ್ಯಮ ಶಾಲೆಗಳು ಇನ್ನೂ ಆರಂಭವಾಗಿರಲಿಲ್ಲವಾದ್ದರಿಂದ ಕಾನ್ವೆಂಟ್ ಶಾಲೆಗಳಿಗೆ ಕಳುಹಿಸುತ್ತಿದ್ದರು.

ಶಾಲೆ ಮುಚ್ಚುವುದು ಮಾತ್ರವಲ್ಲ, ಇಂತಹ ಶಿಕ್ಷಕ, ಶಿಕ್ಷಕಿಯರು ತಾವು ಕಲಿಸಬೇಕಾದ ಮಕ್ಕಳ ಬಗೆಗೆ ಎಂತಹ ಭವಿಷ್ಯವನ್ನು ರೂಪಿಸಿಯಾರು? ಇವರಿಂದ ಕಲಿತ ಮಕ್ಕಳ ಶಿಕ್ಷಣದ ಗುಣ ಮಟ್ಟ ಹೇಗಿದ್ದಿರಬಹುದು? ಎಂಬ ಬಗ್ಗೆ ಹೆಚ್ಚು ಯೋಚಿಸಬೇಕಾದ ಅಗತ್ಯವೇ ಇಲ್ಲ. ಇಂದು ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎನ್ನುವುದಕ್ಕೆ ಇಂತಹವರೂ ಕಾರಣ ಎಂದರೆ ತಪ್ಪಾಗಲಾರದಲ್ಲವೇ? ಶಾಲೆ ಒಂದು ಊರನ್ನು, ಸಮಾಜವನ್ನು ರೂಪಿಸುತ್ತದೆ ಎನ್ನುವ ಮಾತನ್ನು ಇದೇ ಕಾಪಿಕಾಡು ಶಾಲೆಯ ಉದಾಹರಣೆಯೊಂದಿಗೆ ಈ ಅಂಕಣದಲ್ಲಿಯೇ ಬರೆದಿದ್ದೆ. ಈಗ ಊರಿಗೂ, ಅಲ್ಲಿನ ಸುತ್ತಲಿನ ಸಮಾಜಕ್ಕೂ ಸಂಬಂಧವಿಲ್ಲದ ಶಾಲೆಗಳಲ್ಲಿ ಅನಿವಾರ್ಯವಾಗಿ ಶಿಕ್ಷಕರಾಗಿರುವ ಪಾಪಕ್ಕೆ ಕಾಟಾಚಾರದಿಂದ ಪಾಠ ಮಾಡುವ ಶಿಕ್ಷಕರಿಂದ ಎಂತಹ ಸಮಾಜ ನಿರ್ಮಿಸಲ್ಪಡುತ್ತದೆ ಎಂಬ ಪ್ರಶ್ನೆ ಅಂದು ಹುಟ್ಟಿದುದಕ್ಕೆ ಇಂದಿಗೂ ಸಮಂಜಸವಾದ ಉತ್ತರ ದೊರಕಿಲ್ಲ. ಅದೇನೇ ಇದ್ದರೂ ಅವರ ಮಾತಿಗೆ ಕಿವಿ ಕೊಡದ ನಾನು ನವೆಂಬರ್‌ನಿಂದ ಮಗಳನ್ನು ಕಳುಹಿಸಿಕೊಡುವ ನಿರ್ಧಾರ ಮಾಡಿದೆ.

ಹಾಗೆಯೇ ಬಾಲವಾಡಿಗೆ ಸೇರಿಸಿದ್ದಾಯಿತು. ಹೋಗುವುದಕ್ಕೆ ಖುಷಿ ಪಡುವ ಮಗಳು ಹಿಂದಿರುಗಿ ಬಂದು ‘‘ತಮ್ಮ ಬರಲಿಲ್ಲ’’ ಎಂದು ಹೇಳುತ್ತಿದ್ದಾಗ ‘‘ಬರುತ್ತಾನೆ ನೀನು ದಿನಾ ಶಾಲೆಗೆ ಹೋಗಿ ಬಾ, ಒಂದು ದಿನ ಬಂದೇ ಬರುತ್ತಾನೆ’’ ಎಂದಿದ್ದೆ. ಅದರಂತೆ ನವೆಂಬರ್ ಏಳರಂದು ಅಪ್ಪನ ಶಾಲೆಗೆ ಹೋದ ಮಗಳು ಮನೆಗೆ ಹಿಂದಿರುಗಿದಾಗ ನಾನು ಮನೆಯಲ್ಲಿರಲಿಲ್ಲ. ಅವಳಿಗೊಬ್ಬ ತಮ್ಮನನ್ನು ಹೆತ್ತು ಭಟ್ ನರ್ಸಿಂಗ್ ಹೋಂನಲ್ಲಿ ಮಲಗಿದ್ದೆ, ನನ್ನ ಮಾತು ನಿಜವಾದುದನ್ನು ಕಂಡು ಅವಳಿಗಾದ ಸಂತೋಷ ಹೇಳತೀರದು. ಹಾಗೆಯೇ ತಮ್ಮ ಮನೆಗೆ ಬಂದ ಮೇಲೂ ಆಕೆ ಶಾಲೆಗೆ ಆಕೆಯ ಹಿರಿಯ ಸ್ನೇಹಿತೆ ಬೇಬಿಯೊಂದಿಗೆ ಕಾಪಿಕಾಡು ಶಾಲೆಗೆ ಹೋಗುತ್ತಿದ್ದಳು. ಆದರೆ ಕೆಲವೇ ದಿನಗಳಲ್ಲಿ ಶಾಲೆಯಿಂದ ಸೋಂಕು ರೋಗ ‘ಕೋಟಲೆ’ಯನ್ನು ಪಡೆದುಕೊಂಡು ಬಂದು ತಾನು ಸಂಕಟ ಅನುಭವಿಸಿದ್ದಲ್ಲದೆ ನನಗೆ ತಮ್ಮನಿಗೆ, ಅಪ್ಪನಿಗೆ ಎಲ್ಲರಿಗೂ ಪ್ರಸಾದವಾಗಿ ಹಂಚಿ ಬಿಟ್ಟಳು. ಆಕೆ ಗುಣಮುಖಳಾದ ಬಳಿಕ ನನಗೆ ಆಕೆಯನ್ನು ಶಾಲೆಗೆ ಕಳುಹಿಸಲು ಮನಸ್ಸಾಗದೆ ನಾನೇ ಮನೆಯಲ್ಲಿದ್ದಷ್ಟು ದಿನ ಅವಳಿಗೆ ಓದಲು ಬರೆಯಲು ಕಲಿಸುವುದರೊಂದಿಗೆ ಕತೆ, ಹಾಡುಗಳನ್ನು ಹೇಳುತ್ತಾ ಮನೆಯಲ್ಲೇ ಉಳಿಸಿಕೊಂಡೆ.

ಮೂರು ತಿಂಗಳ ಬಾಣಂತನದ ರಜೆ ಮುಗಿಸಿಕೊಂಡು ಮಾರ್ಚ್ ತಿಂಗಳ ಮೊದಲವಾರ ಮತ್ತೆ ಕಾಲೇಜಿನ ಕರ್ತವ್ಯಕ್ಕೆ ಹಾಜರಾದೆ. ಇದೇ ಸಂದರ್ಭದಲ್ಲಿ ನನ್ನ ಸಹೋದ್ಯೋಗಿ ಮಿತ್ರರು ‘‘ಕಾಟಿಪಳ್ಳದ ಐದನೆ ಬ್ಲಾಕಲ್ಲಿ ಒಂದು ಮನೆ ಹಿತ್ತಲು ಇದೆ. 26 ಸಾವಿರ ಎಂದು ಹೇಳುತ್ತಿದ್ದಾರೆ. ಈಗಂತೂ ರಿಜಿಸ್ಟ್ರೇಶನ್ ಆಗುವುದಿಲ್ಲ. ಆರು ತಿಂಗಳ ಬಳಿಕ ರಿಜಿಸ್ಟ್ರೇಶನ್ ಮಾಡಬಹುದು. ಈಗ ಹದಿನೈದು ಸಾವಿರ ಕೊಟ್ಟು ಕೈಕಾಗದ ಮಾಡಿಕೊಂಡರೆ ಮನೆಯಲ್ಲಿ ವಾಸವೂ ಮಾಡಬಹುದು. ಉಳಿದ ಮೊತ್ತ ರಿಜಿಸ್ಟ್ರೇಶನ್ ವೇಳೆ ಕೊಟ್ಟರೆ ಸಾಕು ಎಂದಿದ್ದಾರೆ. 5ನೆ ಬ್ಲಾಕಲ್ಲಿ ಪೂರ ಹಿಂದೂಗಳೇ ಇರುವುದು. ಏನೂ ತೊಂದರೆಯಲ್ಲ. ನೋಡಿ ಯೋಚಿಸಿ’’ ಎಂದಾಗ ಮೂಲೆಯಲ್ಲಿ ತಣ್ಣಗೆ ಕುಳಿತಿದ್ದ ಆಸೆ ಮೆಲ್ಲನೆ ಮತ್ತೆ ಚಿಗುರಿತು. ಅಪ್ಪನಲ್ಲಿ ನನಗೆ ಹಣ ಕೊಡಲು ಸಾಧ್ಯವಿಲ್ಲ ಎಂದು ಗೊತ್ತಿದೆ.

ಸಾಧ್ಯವಾಗುವುದಾದರೆ ಅಪ್ಪ ತನ್ನ ಸ್ನೇಹಿತರಿಂದ ಒದಗಿಸಿಕೊಂಡುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಅಪ್ಪನನ್ನು ಈ ಬಗ್ಗೆ ಅಂಜಿಕೆಯಿಂದಲೇ ವಿಚಾರಿಸಿದೆ. ‘‘ಸಾಲ ಮಾಡಿ ಮನೆ ಮಾಡುವುದಿದ್ದರೆ ನಾನೇ ಮಾಡುತ್ತಿರಲಿಲ್ಲವೇ? ನನ್ನಿಂದ ಸಾಧ್ಯವಿಲ್ಲ. ಮಾತ್ರವಲ್ಲ ನನ್ನ ಹೆಸರು ಉಪಯೋಗಿಸಿಕೊಂಡು ನೀನು ಯಾರಲ್ಲೂ ಸಾಲ ಕೇಳಬಾರದು’’ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಇನ್ನು ಆ ಅಪ್ಪಣೆಯನ್ನು ಮೀರುವಂತಿಲ್ಲ. ಆಗ ಬ್ಯಾಂಕ್‌ಗಳೆಲ್ಲ ಮನೆ ಸಾಲ ಎಂದು ನೀಡುತ್ತಿರಲಿಲ್ಲ, ನಮ್ಮ ಉಳಿತಾಯ ಖಾತೆ ಇರುವ ಬ್ಯಾಂಕುಗಳು ಪರ್ಸನಲ್ ಲೋನ್ ಎಂದು 5,000 ರೂ. ಕೊಡುತ್ತದೆ ಎಂದು ಹೇಳುವುದನ್ನು ಕೇಳಿದ್ದೆ. ಆ ಹಿನ್ನೆಲೆಯಲ್ಲಿ ನನ್ನ ವೇತನದ ಖಾತೆ ಇರುವ ವಿಜಯಾಬ್ಯಾಂಕ್‌ನಲ್ಲಿ ವಿಚಾರಿಸಿದರೆ ಮೆನೇಜರರು ನೀವು ವಿಜಯಬ್ಯಾಂಕಿನ ಅಧ್ಯಕ್ಷರಾಗಿದ್ದ ಸುಂದರ ರಾಮ ಶೆಟ್ಟರಿಂದ ಶಿಫಾರಸು ಮಾಡಲು ಸಾಧ್ಯವಾದರೆ ಕೊಡಲು ಸಾಧ್ಯ. ಇಲ್ಲವಾದರೆ ಇಲ್ಲ ಎನ್ನಬೇಕೇ? ಆಗ ನನಗೆ ನೆನಪಿಗೆ ಬಂದವರು ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಇದ್ದ ನನ್ನ ಒಡಹುಟ್ಟಿದ ಅಣ್ಣನಂತಿದ್ದ ಅ. ಬಾಲಕೃಷ್ಣ ಶೆಟ್ಟಿಯವರು.

ಅದಾಗಲೇ ಅವರು ಸ್ಥಾಪಕ ಕಾರ್ಯದರ್ಶಿಯಾಗಿದ್ದ ಮಂಗಳೂರು ಕನ್ನಡ ಸಂಘದ ಕಾರ್ಯದರ್ಶಿ ಸ್ಥಾನವನ್ನು ನನಗೆ ವಹಿಸಿದ್ದರು. ಈ ಹಿನ್ನ್ನೆಲೆಯಲ್ಲಿ ಅವರಲ್ಲಿ ಪತ್ರ ವ್ಯವಹಾರವಿತ್ತು. ಅವರಿಗೆ ವಿಷಯ ಬರೆದು ತಿಳಿಸಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ‘‘ಸಾಲದ ಅರ್ಜಿ ಪತ್ರ ಬರೆದು ಕೊಡು. ಮೆನೇಜರರಲ್ಲಿ ಈ ಬಗ್ಗೆ ಸುಂದರರಾಮ ಶೆಟ್ಟಿರಿಗೂ ವಿಷಯ ತಿಳಿಸಲು ಹೇಳು. ನಾನು ಒಂದು ಮಾತು ಹೇಳುತ್ತೇನೆ’’ ಎಂದರು. ಹೀಗೆ ವಿಜಯಾ ಬ್ಯಾಂಕಿನಿಂದ ರೂ. 5000 ದೊರೆಯುವುದಾದರೂ ಉಳಿದ ಹತ್ತು ಸಾವಿರಕ್ಕೆ ಏನು ದಾರಿ ಎನ್ನುವಾಗ ಮತ್ತೆ ಉರ್ವಸ್ಟೊರ್‌ನ ಮನೆಯ ಧಣಿ ಮಾಯಿ ಕ್ಲೇರಾಬಾಯಿ ನೆನಪಾದರು. ಅವರಿಗೆ ನಾನು ಮನೆ ಹಿತ್ತಲು ಖರೀದಿಸುವ ವಿಷಯ ಕೇಳಿಯೇ ಖುಷಿಯಾಯಿತು. ಆದರೆ ತನಗೆ ಒಂದು ಸಾವಿರ ಮಾತ್ರ ನೀಡಲು ಸಾಧ್ಯ ಎಂದರು. ಹಾಗೆಯೇ ಅವರ ಸೋದರ ಸೊಸೆ ಸಿಲೆಸ್ತಿನ್ ಮಾಯಿಯಲ್ಲಿಯೂ ಕೇಳು ನಾನೂ ಒಂದು ಮಾತು ಹೇಳುತ್ತೇನೆ ಎಂದರು. ಹೀಗೆ ಅತ್ತೆ, ಸೊಸೆ ಸೇರಿ ಎರಡು ಸಾವಿರ ನೀಡಿದರು.

ಮಾರ್ಕೆಟ್ ರೋಡಲ್ಲಿ ಇರುವ ಮೈಸೂರು ಪ್ಯಾಶನ್ ಹೌಸ್ ಬ್ರಹ್ಮಾನಂದರ ಜವುಳಿ ಅಂಗಡಿಯಿಂದಲೇ ನಮ್ಮ ಅಪ್ಪ ನಮಗೆ ಬಟ್ಟೆ ಖರೀದಿಸುತ್ತಿದ್ದ ಬಗ್ಗೆ ಹಿಂದೆ ಹೇಳಿದ್ದೆ. ನಾನು ಮದುವೆಯಾದ ಬಳಿಕವೂ ನಾನು ಆವಶ್ಯಕ ಜವುಳಿಗಳನ್ನು ಅಲ್ಲಿಯೇ ಖರೀದಿಸುತ್ತಿದ್ದೆ. ಈ ಕಾರಣದಿಂದ ನೇರವಾಗಿ ಬ್ರಹ್ಮಾನಂದರಲ್ಲಿ ನನ್ನ ಈ ವಿಚಾರವನ್ನು ತೀಳಿಸಿ ಸಾಧ್ಯವಾದರೆ ನನಗೆ ಆರ್ಥಿಕ ನೆರವು ನೀಡಲು ಕೇಳಿದೆ. ಅವರು ಸಂತೋಷದಿಂದ 2000 ರೂಪಾಯಿಗಳನ್ನು ಕೊಟ್ಟೇ ಬಿಟ್ಟರು. ಇವರು ಕೂಡಾ ಮಂಗಳೂರು ಕನ್ನಡ ಸಂಘದ ಸ್ಥಾಪಕ ಸದಸ್ಯರಾಗಿದ್ದವರು. ಈಗಲೂ ಕಾರ್ಯಕಾರಿ ಸಮಿತಿಯಲ್ಲಿದ್ದುದರಿಂದ ಆತ್ಮೀಯತೆ ಇತ್ತು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿದ್ದ ಎಲ್ಲೂರು ಉಮೇಶ ರಾಯರು ಮಂಗಳೂರು ಕನ್ನಡ ಸಂಘದ ಕೋಶಾಧಿಕಾರಿಯಾಗಿದ್ದರು. ಇವರು ಕೂಡಾ ಈ ನಿಟ್ಟಿನಲ್ಲಿ ಹಿರಿಯರಾಗಿದ್ದರೂ ಆತ್ಮೀಯರಾಗಿದ್ದರು. ಅವರನ್ನೂ ಅವರ ಕನ್ನಡಕದ ಅಂಗಡಿ ರಾಮರಾವ್ ಆ್ಯಂಡ್ ಸನ್ಸ್ಸ್‌ಲ್ಲಿ ಒಂದು ಸಂಜೆ ಭೇಟಿ ಮಾಡಿ ವಿಷಯ ತಿಳಿಸಿದೆ.

ಅವರೂ ಖುಷಿಯಿಂದಲೇ 2000 ರೂಪಾಯಿಗಳನ್ನು ನೀಡಿದರು. ಹನ್ನೊಂದು ಸಾವಿರದ ವ್ಯವಸ್ಥೆಯಾಯಿತು. ಇನ್ನ್ನುಳಿದ ಹಣಕ್ಕೆ ನನ್ನ ಗೆಳತಿ ವೃಂದಾನಾಯಕ್ ಬಳಿ ವಿಚಾರಿಸಿದೆ. ಅವಳು ಅವರ ಕಾಲೇಜಿನ ಸ್ಟಾಫ್ ಫಂಡ್ ಎಂಬ ಸಹಕಾರಿ ಪದ್ಧತಿಯ ಒಂದು ವ್ಯವಸ್ಥೆಯಿಂದ ಸಾಲ ತೆಗೆಸಿಕೊಟ್ಟಳು. ಹೀಗೆ ಹದಿನೈದು ಸಾವಿರ ಹೊಂದಿಸಿಕೊಂಡು ಕೈಕಾಗದ ಮಾಡಿಸಿಕೊಂಡು ಮನೆ ಹಿತ್ತಲು ಖರೀದಿಸಿದ್ದಾಯಿತು. ಇದು ನಮ್ಮ ಸೌಕರ್ಯಕ್ಕಾಗಿ ಎನ್ನುವುದಕ್ಕಿಂತ ಮಾವನ ಆಸೆ ನೆರವೇರಿಸಿದಂತೆ ಎನ್ನುವುದು ನನಗೆ ಮುಖ್ಯವಾಗಿತ್ತು. ಬಹುಶ: ಅವರ ಆ ಆಸೆಯೇ ನಮಗೆ ಇಂತಹ ಯೋಗ ಒದಗಿಸಿರಬಹುದು. ಆದರೆ ಈ ಮೇಲಿನ ಎಲ್ಲಾ ನನ್ನ ಹಿತೈಷಿಗಳು ಆರ್ಥಿಕ ನೆರವು ನೀಡದಿದ್ದರೆ ಯಾವ ಯೋಗವೂ ಕೂಡಿ ಬರುವುದಿಲ್ಲ. ಯಾವ ಆಸೆಯೂ ಫಲಿಸುವುದಿಲ್ಲ. ಮನೆ ಮಾರಾಟ ಮಾಡುವವರು ಯಾವುದೇ ಕಷ್ಟದಿಂದ ಮಾರುತ್ತಿದ್ದುದಲ್ಲ, ವೃದ್ಧೆ ತಾಯಿ ತನ್ನ ಹೆಸರಲ್ಲಿದ್ದುದನ್ನು ತನ್ನ ಮಕ್ಕಳಿಗೆ ಹಂಚಿಕೊಡಬೇಕಾಗಿತ್ತ್ತು. ಈ ಮನೆಯ ಅಗತ್ಯಯಾರಿಗೂ ಇರಲಿಲ್ಲವಾದ್ದರಿಂದ ನಾನು ಸಂತೋಷದಿಂದ ಖರೀದಿಸುವುದು ಸಾಧ್ಯವಾಯಿತು ಅಂತೂ ಕೊಟ್ಟಾರ ಕ್ರಾಸಿನ ನೀರಿನ ಋಣವೂ ಮುಗಿಯಿತು. ಮತ್ತೊಮ್ಮೆ ಬೆಕ್ಕಿನ ಬಿಡಾರ ಬದಲಾದಂತೆ ನನ್ನ ಸಂಸಾರ ಬಿಡಾರದ ಬದಲು ಸ್ವಂತ ಮನೆ ಹಿತ್ತಿಲಿಗೆ ಕಾಲಿಟ್ಟಿತು.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News