ಹೊಸ ಅನುಭವಗಳ ಆರಂಭ

Update: 2017-06-13 18:42 GMT

ಅಂತೂ ಹೊಸಮನೆ ಅನ್ನುವುದಕ್ಕಿಂತ ಸ್ವಂತ ಮನೆ ಒಕ್ಕಲು ಸಹೋದ್ಯೋಗಿ ಮಿತ್ರರ ಸಲಹೆಯಂತೆ ಗಣ ಹೋಮದೊಂದಿಗೆ ನಡೆಯಿತು. ಈ ವರೆಗೆ ಗಣ ಹೋಮ ಎಂದರೆ ಏನೆಂಬ ಕಲ್ಪನೆ ನಮ್ಮಿಬ್ಬರಿಗೂ ಇರಲಿಲ್ಲ. ಅತ್ತೆ ಮಾವಂದಿರಿಗೂ ಇರಲಿಲ್ಲ. ಕೋಟೆಕಾರಿನ ಸೋವೂರಿನ ಬಳಿಯಲ್ಲೇ ಇದ್ದ ಸ್ನೇಹಿತರಿದ್ದ ಜೇಂಕಳ ಶ್ರೀನಿವಾಸಭಟ್ಟರ ಮನೆ ಪೌರೋಹಿತ್ಯದ ಮನೆಯೇ ಆಗಿತ್ತಲ್ಲವೇ? ಆ ಸ್ನೇಹದಿಂದ ಅವರಿಗೆ ವಿಷಯ ತಿಳಿಸಿದಾಗ ಸಂತೋಷದಿಂದ ಅವರು ಮತ್ತು ಅವರ ತಂದೆ ಬಂದು ಗಣ ಹೋಮ ನಡೆಸಿಕೊಟ್ಟರು.

ಹಾಲುಕ್ಕಿಸುವ ಶಾಸ್ತ್ರದೊಂದಿಗೆ ಮನೆ ಒಕ್ಕಲಿನ ಶಾಸ್ತ್ರ ಮುಗಿದು ಬಂದ ನೆಂಟರಿಷ್ಟರು ಸೇರಿ ಮಧ್ಯಾಹ್ನಕ್ಕೆ ಸರಳವಾದ ಸಿಹಿಯಡುಗೆ ಸಿದ್ಧಪಡಿಸಿದ್ದೂ ಆಯ್ತು. ಸುಮಾರು 2 ಗಂಟೆಯ ವೇಳೆಗೆ ಊಟ ಮುಗಿಸಿ ಮಂಗಳೂರಿನ ಬಂಧುಗಳು ಅಪ್ಪ ಅಮ್ಮನನ್ನೂ ಸೇರಿಸಿ ಎಲ್ಲರೂ ಹೊರಟರು. ದೂರದ ಅತ್ತಿಗೆಯಂದಿರು ಇಬ್ಬರು ಮಕ್ಕಳ ಸಹಿತ ಉಳಿದಿದ್ದರು. ಸುಮಾರು ನಾಲ್ಕು ನಾಲ್ಕೂವರೆ ಗಂಟೆಗೆ ಒಂದಷ್ಟು ಜನರ ಗುಂಪು ನಮ್ಮನೆಗೆ ಬಂತು. ಬಂದವರು ಯುವಕರು. ಆರೇಳು ಜನ ಇದ್ದಿರಬಹುದು. ಅವರಲ್ಲಿ ಹಿರಿಯರಾದವರು ತನ್ನನ್ನು ಶಿಕ್ಷಕರೆಂದು ಪರಿಚಯಿಸಿಕೊಂಡು, ತಮ್ಮನ್ನು ಇಲ್ಲಿಗೆ ಹೋಗುವಂತೆ ತಿಳಿಸಿದವರು ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಎಚ್.ಗೋಪಾಲಕೃಷ್ಣರಾಯರೆಂದರು.

ಈ ಊರಿಗೆ ಬಂದ ಬಗ್ಗೆ ತಮ್ಮ ಸಂತೋಷ ಹಾಗೂ ಶುಭಾಶಯಗಳನ್ನು ಹೇಳಿದರು. ನಾವಂತೂ ಈ ಊರಲ್ಲಿ ಮನೆ ಖರೀದಿಸಿದ ಬಗ್ಗೆ, ಮನೆ ಒಕ್ಕಲಿನ ಬಗ್ಗೆ ಯಾವುದೇ ರೀತಿಯ ಮಾಹಿತಿ ಯಾರಿಗೂ ನೀಡಿರಲಿಲ್ಲ. ಊರಲ್ಲಿ ನನ್ನ ಸಹೋದ್ಯೋಗಿ ಮಿತ್ರರನ್ನು ಬಿಟ್ಟರೆ ಉಳಿದ ಯಾರೂ ನಮಗೆ ಪರಿಚಿತರೆಂದು ಇರಲಿಲ್ಲ. ಸರಿ ಬಂದವರನ್ನು ಕುಳ್ಳಿರಿಸಿ ಮಾತನಾಡಿಸಿ ಷರಬತ್ತೋ, ಚಹವೋ ಏನೋ ಬಾಯಾರಿಕೆಗೆಂದು ನೀಡಿದ ನೆನಪು. ಅವರು ಸ್ವೀಕರಿಸಿದ್ದರು ಕೂಡಾ. ಹಾಗೆಯೇ ಹೊರಟಾಗ ಅವರಿಗೂ, ಗೋಪಾಲಕೃಷ್ಣರಾಯರಿಗೂ ನಮ್ಮ ಕೃತಜ್ಞತೆಗಳನ್ನು ತಿಳಿಸಿದೆವು. ನನಗೆ ಈ ವಿಷಯ ಬಹಳ ಕುತೂಹಲವನ್ನೂ, ಆಶ್ಚರ್ಯವನ್ನೂ ಉಂಟುಮಾಡಿತು. ಹೀಗೊಂದು ರೀತಿಯ ಸ್ವಾಗತ ಕೋರುವ ಕ್ರಮ ಈ ಊರಲ್ಲಿದೆಯೇ ಎಂದು ತಿಳಿದು ಸಂತೋಷವಾದರೂ ಮನಸ್ಸಿನ ಮೂಲೆಯೊಳಗೆ ಪ್ರಶ್ನೆಯೂ ಮೂಡಿತು. ಈ ಕಾರಣದಿಂದ ನಮ್ಮವರನ್ನು ಮತ್ತೆ ಮತ್ತೆ ಕೆದಕಿದಾಗ ಉತ್ತರದ ಸುಳಿಹು ಸಿಕ್ಕಿತು. ಗೋವಿಂದದಾಸ ಕಾಲೇಜಿನಲ್ಲಿ ಬೇಸಿಗೆಯ ರಜೆಯ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಶಿಬಿರ ನಡೆಯುತ್ತದೆ. ಇದರ ವ್ಯವಸ್ಥಾಪಕರಾಗಿ ಗೋಪಾಲಕೃಷ್ಣರಾವ್ ಮುಖ್ಯಸ್ಥರಾಗಿದ್ದವರು. ಈ ಹಿನ್ನೆಲೆ ವಾಮನ ನಂದಾವರರ ಕುಟುಂಬಕ್ಕೆ ಸ್ವಾಗತ ಸಿಕ್ಕಿರುವುದೆಂದು ತಿಳಿಯಿತು.

ಈ ಸ್ವಾಗತವನ್ನು ನಾವೇನೂ ತಿರಸ್ಕರಿಸಲಿಲ್ಲ ತಾನೇ? ಈಗ ನಂದಾವರರಿಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೂ ಇದ್ದ ಬಾದರಾಯಣ ಸಂಬಂಧ ನೆನಪಿಗೆ ಬಂತು. ಕೋಟೆಕಾರಿನ ಮನೆಯಲ್ಲಿದ್ದ ದಿನಗಳಲ್ಲಿ ನಂದಾವರರ ಸಹಪಾಠಿ ಸ್ನೇಹಿತ ನರೇಂದ್ರರು ಆದಿತ್ಯವಾರದ ಶಾಖೆ ಮುಗಿಸಿ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ನಂದಾವರರನ್ನು ಆದಿತ್ಯವಾರದ ಬೈಠಕ್‌ಗಳಿಗೆ ಬರಲು ಹೇಳುತ್ತಿದ್ದುದೂ ಉಂಟು. ಹಾಗೆಯೇ ಬೆಂಗಳೂರಿನಿಂದ ಬರುತ್ತಿದ್ದ ಪ್ರಮುಖ್‌ರಿಗೆ ರಾತ್ರಿಯ ಊಟ, ವಾಸ್ತವ್ಯಗಳಿಗೆ ಅವರ ನಿಯಮದಂತೆ ನಮ್ಮ ಮನೆಯ ಸರತಿ ಬಂದಾಗ ಆತಿಥ್ಯ ನೀಡುವಲ್ಲಿ ನಾನು ಹಿಂದೆ ಉಳಿಯುವ ಪ್ರಶ್ನೆಯೇ ಇರಲಿಲ್ಲ. ಯಾಕೆಂದರೆ ನನ್ನ ತವರು ಮನೆಯಲ್ಲಿ ಅತಿಥಿ ಅಭ್ಯಾಗತರೆಂದು ಸದಾ ಬರುತ್ತಿದ್ದವರನ್ನು ಸತ್ಕರಿಸಿ ಆತಿಥ್ಯ ನೀಡಿದ ಹಿನ್ನೆಲೆಯಲ್ಲಿ ‘ಅತಿಥಿ ದೇವೋಭವ’ ಎನ್ನುವುದು ಬರೀ ಹೇಳಿಕೆಯಾಗಿರದೆ ಅನುಭವದ ಸತ್ಯ ಮಾತ್ರವಲ್ಲ, ಅತಿಥಿ ಅಭ್ಯಾಗತರೆಂದರೆ ನಮ್ಮ ನೆಂಟರಷ್ಟರಿಂದ ಹಿಡಿದು ಸ್ನೇಹಿತರು, ಪರಿಚಿತರು, ನೆರವಿಗಾಗಿ ಬಂದವರು ಎನ್ನುವುದರೊಂದಿಗೆ ಅವರು ಯಾವ ಜಾತಿ, ಯಾವ ಧರ್ಮ ಎನ್ನುವ ಪ್ರಶ್ನೆಯೂ ನಮ್ಮ ಮನೆಯಲ್ಲಿ ಏಳುತ್ತರಲಿಲ್ಲ.

ಆದ್ದರಿಂದ ನನ್ನ ಶಾಕಾಹಾರಿ ಊಟದ ತಯಾರಿಯ ಕುಶಲತೆಗೆ ಸಿಕ್ಕ ಅವಕಾಶ ಎಂದು ಸಂತಸ ಪಡುತ್ತಿದ್ದೆ. ಹಾಗೆಯೇ ಉಂಡು ಹೋಗುತ್ತಿದ್ದವರು ‘ಊಟ ಪರಿಷ್ಕಾರ’ ವಾಗಿತ್ತು. ಅಂದರೆ ಚೆನ್ನಾಗಿತ್ತು ಎಂದು ಹೊಗಳಿದವರೇ ಆಗಿದ್ದರು. ನಾನು ಹುಟ್ಟಿನಿಂದ ಶಾಕಾಹಾರಿಯಾಗಿದ್ದರಿಂದ ಶಾಕಾಹಾರಿ ಅಡುಗೆ ಸಾಕಷ್ಟು ಚೆನ್ನಾಗಿ ಮಾಡುತ್ತಿದ್ದೆ. ನನ್ನ ಅಮ್ಮನೂ ಅಡುಗೆಯಲ್ಲಿ ನಿಪುಣೆಯೇ.

ನನ್ನವರು ಬಿ.ಎಸ್ಸಿ, ಬಿ.ಇಡಿ, ಮುಗಿಸಿದಾಗ ಅವರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ನೇಹಿತರಾಗಿದ್ದ ಮಂಗಳೂರಿನ ಸಾಹಿತ್ಯ ಕೇಂದ್ರದ ಚಂದ್ರಹಾಸರ ಸಲಹೆಯಂತೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಹೋದವರು ತಲುಪಿದ್ದು ಮಾಗಡಿಯ ಚನ್ನೇನ ಹಳ್ಳಿಯ ವಸತಿ ಸಹಿತವಾದ ಪ್ರೌಢ ಶಾಲೆಗೆ. ಅದು ಆಗ ವಿಧಾನ ಪರಿಷತ್‌ನ ಶಿಕ್ಷಣ ಕ್ಷೇತ್ರದ ಶಾಸಕ ಮಳ್ಳೂರು ಆನಂದರಾಯರ ಶಾಲೆ ಯೆಂದು ಗುರುತಿಸಲ್ಪಟ್ಟಿತ್ತು. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ವ್ಯಕ್ತಿಯೆನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಅಲ್ಲಿ ಕೆಲಸ ದೊರೆತುದಲ್ಲದೆ ಊಟ, ವಸತಿ ಎಲ್ಲವೂ ಉಚಿತ. ವೇತನ ಮಾತ್ರ ಎಷ್ಟು ಏನು ಎಂಬ ಬಗ್ಗೆ ಮಾಹಿತಿ ನನಗಿರಲಿಲ್ಲವಾದರೂ ಶಾಲೆಗೆ ಇನ್ನೂ ಅನುದಾನ ದೊರಕಿಲ್ಲ ಎನ್ನುವುದು ತಿಳಿದಿತ್ತು. 1973ರಿಂದ ಅಲ್ಲಿ ಶಿಕ್ಷಕರಾಗಿದ್ದವರು 1976ರ ರಜೆಯಲ್ಲಿ ಬಂದಾಗ ನಮ್ಮ ವಿವಾಹದ ಪೂರ್ವಭಾವೀ ಮಾತುಗಳಾಗಿದ್ದವು.

ಆದರೆ 1976ರಲ್ಲಿ ಅವರ ಶಾಲೆಗೆ ಬೀಗ ಜಡಿಯಲ್ಪಟ್ಟಾಗ ಊರಿಗೆ ಹೋದ ವಿದ್ಯಾರ್ಥಿಗಳು ಅಲ್ಲಲ್ಲೇ ಶಾಲೆಗಳಿಗೆ ಸೇರಬಹುದಾದರೂ ಈ ಶಿಕ್ಷಕರು ಎಲ್ಲಿ ಹೋಗುವುದು? ಇದು ನನ್ನವರ ಬದುಕಿನ ತಿರುವು ಮಾತ್ರವಲ್ಲ. ಇಡೀ ದೇಶದ ಚರಿತ್ರೆಯಲ್ಲೇ ಉಂಟಾದ ತಿರುವು. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಜಾರಿ ಮಾಡಿದ ಸಂದರ್ಭ. ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳ ಪ್ರಮುಖರನ್ನೆಲ್ಲಾ ಜೈಲಿಗೆ ಕಳುಹಿಸಿದ ರೀತಿ ಪ್ರಜಾಪ್ರಭುತ್ವಕ್ಕೆ ಕೊಟ್ಟ ಕೊಡಲಿಯೇಟು. ಇದರಿಂದಾಗಿ ಉಂಟಾದ ಕ್ಷೋಭೆಯೊಂದಿಗೆ ಸಂವಿಧಾನದ ಬಗೆಗೆ ನಡೆಯುತ್ತಿದ್ದ ಚರ್ಚೆಗಳು ನಮ್ಮಂತಹವರು ಸಾಹಿತ್ಯ, ಶಿಕ್ಷಣದೊಂದಿಗೆ, ರಾಜಕೀಯ, ಸಾಮಾಜಿಕ ವಿಷಯಗಳತ್ತ ಚಿಂತಿಸುವಂತೆ ಮಾಡಿದ್ದು ಸುಳ್ಳಲ್ಲ. ಪರ-ವಿರೋಧಗಳ ನಡುವಿನ ಸತ್ಯಾಂಶದ ಕಡೆಗೆ ನಮ್ಮ ಅನುಭವಗಳ ಸತ್ಯದ ಕಡೆಗೆ ಮುಖಮಾಡಬೇಕಾದ ಅನಿವಾರ್ಯತೆಯನ್ನು ಕೂಡಾ ಅದು ಸೃಷ್ಟಿಸಿತ್ತು.

ಈ ಹಿನ್ನೆಲೆಯಲ್ಲಿಯೇ ಗಾಂಧಿವಾದಿ ಕಾಂಗ್ರೆಸ್ ಕಾರ್ಯಕರ್ತನ ಮಗಳಾದ ನಾನು ನಂದಾವರರನ್ನು ವಿವಾಹವಾಗುವ ವೇಳೆ, ವಿವಾಹದ ಮೇಲೂ ಈ ಬಗ್ಗೆ ನಮ್ಮಿಬ್ಬರೊಳಗೆ ಸಾಕಷ್ಟು ವಾದ ವಿವಾದಗಳು, ಚರ್ಚೆಗಳು ಸದಾ ನಡೆಯುತ್ತಿತ್ತು ಎಂದರೆ ತಪ್ಪಲ್ಲ. ಈ ವಿಷಯ ಏನೇ ಇರಲಿ ಕಾಟಿಪಳ್ಳದ ಊರಿಗೆ ನಮ್ಮನ್ನು ಸ್ವಾಗತಿಸಿದ ಗೋಪಾಲಕೃಷ್ಣರಾಯರ ಗೋವಿಂದದಾಸ ಕಾಲೇಜು ನಮಗೆ ತೀರಾ ಹತ್ತಿರವಾಯಿತು. ಅದಕ್ಕೆ ಕಾರಣರಾದವರು ಶೇಖರ್ ಇಡ್ಯಾ, ಲೀಲಾವತಿ ಎಸ್. ರಾವ್ ಮತ್ತು ಡಾ. ಸಿ. ಹೊಸಬೆಟ್ಟು ಇವರೆಲ್ಲಾ. ಹಾಗೆಯೇ ಸುರತ್ಕಲ್ ವಿದ್ಯಾವಾಹಿನಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದ ಎಂ. ವಾಸುದೇವರಾಯರು, ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದ ಪಿ.ಸಿ. ವಾಸುದೇವರಾಯರು, ತಬ್ಲಾ, ಮೃದಂಗ ವಾದಕರಾಗಿದ್ದ ನಾರಾಯಣರಾಯರು ಇವರೆಲ್ಲರಿಗೆ ನಾವು ಕೊಂಡಾಣ ವಾಮನರ ಮಗಳು, ಅಳಿಯ ಎನ್ನುವುದರೊಂದಿಗೆ ನಾನು ಮಂಗಳೂರು ಕನ್ನಡ ಸಂಘದ ಕಾರ್ಯದರ್ಶಿ, ವಾಮನ ನಂದಾವರರವರು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎನ್ನುವುದು ತಿಳಿದಿತ್ತು. ಹಿರಿಯರಾದ ವಾಸುದೇವರಾಯರು ಬಹಳ ಪ್ರೀತಿ ಮತ್ತು ಗೌರವದಿಂದ ‘‘ಅಂತೂ ಇಬ್ಬರೂ ಸಾಹಿತ್ಯದ ಜೋಡಿ’’ಗಳೆಂದು ಕರೆಯುವ ಮೂಲಕ ನಮಗೆ ಆತ್ಮೀಯರಾಗಿದ್ದರು.

ಗೋವಿಂದದಾಸ ಕಾಲೇಜಿನಲ್ಲಿ ನಡೆಯುವ ಯಾವುದೇ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾವು ಪಾಲ್ಗೊಳ್ಳುತ್ತಿದ್ದೆವು. ಹಾಗೆಯೇ ಅಲ್ಲಿಯೇ ಇದ್ದ ಹಿರಿಯ ಸಾಹಿತಿ, ಸಂಶೋಧಕ ಕೆ.ವೆಂಕಟ್ರಾಯಾಚಾರ್ಯರ ಸ್ನೇಹವೂ ನಂದಾವರರಿಗೆ ಹಳೆಯ ಪತ್ರಿಕೆ, ಲೇಖನಗಳ ಸಂಗ್ರಹದ ಹವ್ಯಾಸಕ್ಕೆ ಮತ್ತಷ್ಟು ನೆರವು ನೀಡಿತು. ನಾವು ಕಾಟಿಪಳ್ಳದಲ್ಲಿ ವಾಸವಿದ್ದರೂ ಬಹುಶಃ ನಮ್ಮ ಪರಿಚಿತರು ಸುರತ್ಕಲ್‌ನ ಆಸುಪಾಸಲ್ಲಿ ಹೆಚ್ಚಾಗಿ ಇದ್ದರು ಎನ್ನುವುದು ಸಾಹಿತ್ಯಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕಾಟಿಪಳ್ಳದ ನಮ್ಮ ಮನೆಗೆ ಹೆಸರು ಇಡಬೇಕೆಂದು ಅನ್ನಿಸಿದಾಗ ನನಗೆ ಅನ್ನಿಸಿದ ಹೆಸರು ‘ದೃಶ್ಯ’. ರಸ್ತೆಯಿಂದ ಮನೆಯ ವೃತ್ತಕ್ಕೆ ಏರುವ ಮೆಟ್ಟಿಲುಗಳ ಎದುರಲ್ಲಿ ಒಂದು ಕಬ್ಬಿಣದ ಗೇಟು ಮಾಡಿ ಅದರಲ್ಲೇ ‘ದೃಶ್ಯ’ ಎಂದು ಬರೆಯಿಸಿದೆವು. ನನ್ನ ಸಹೋದ್ಯೋಗಿ ಮಿತ್ರರು ಬ್ರಾಹ್ಮಣರಾಗಿದ್ದುದರಿಂದ ನಮ್ಮನ್ನೂ ಬ್ರಾಹ್ಮಣರೆಂದೇ ತಿಳಿದಿದ್ದರು ಆಸುಪಾಸಿನವರು.

ಹಾಗೆಯೇ ನಾವು ಒಕ್ಕಲಾಗುವ ಮೊದಲು ಹೋಗಿ ಬರುತ್ತಿದ್ದ ವೇಳೆ ನಮ್ಮ ಮನೆಯ ಎದುರಿನ ಮನೆಯಲ್ಲಿದ್ದ ಅಜ್ಜಿ ನಮ್ಮ ಜಾತಿ ಕೇಳಿದರು. ನನಗಾಗಲೀ, ನಮ್ಮವರಿಗಾಗಲೀ ಎಲ್ಲಿಯೂ ಜಾತಿ ಹೇಳುವುದಕ್ಕೆ ಅಂಜಿಕೆ ಅಥವಾ ಕೀಳರಿಮೆ ಇಲ್ಲವಾದ್ದರಿಂದ ನಮ್ಮ ಜಾತಿ ಹೇಳಿದೆವು. ಅಂದಿನಿಂದ ಮತ್ತೆ ನಾವು ಹೋದಾಗ ಹಿಂದೆ ಅವರು ನಮ್ಮನ್ನು ಮಾತನಾಡಿಸುತ್ತಿದ್ದ ರೀತಿಗೂ ಮತ್ತೆ ಮಾತನಾಡುತ್ತಿದ್ದ ರೀತಿಗೂ ಇದ್ದ ಸೂಕ್ಷ್ಮವ್ಯತ್ಯಾಸವನ್ನು ನಾನು ಗುರುತಿಸಿದೆ. ಹಾಗೆಯೇ ಆ ಸುದ್ದಿ ಇತರ ಎಲ್ಲಾ ಮನೆಗಳಿಗೂ ಹರಡಿದೆ ಎನ್ನುವುದು ಅನುಭವಕ್ಕೆ ಬರಲಾರಂಭಿಸಿತು. ಇವರ್ಯಾರೂ ಬ್ರಾಹ್ಮಣರಲ್ಲ. ನಮ್ಮಂತೆಯೇ ಬ್ರಾಹ್ಮಣರು ಕೀಳು ಎಂದು ಭಾವಿಸುವ ಶೂದ್ರ ಜಾತಿಯವರೇ. ಹಾಗಿದ್ದಾಗ ಇವರು ನಮ್ಮ ಬಗ್ಗೆ ಈ ರೀತಿಯ ಅಗೌರವ ಅಥವಾ ಒಂದು ರೀತಿಯ ಅಸಡ್ಡೆ ಯಾಕೆ ತೋರಿಸುತ್ತಾರೆ? ಜಾತಿ ತಿಳಿಯುವ ಮೊದಲು ಅವರು ತೋರಿಸುತ್ತಿದ್ದ ಗೌರವದ ನೆಲೆಯಾವುದು ಎಂಬುದು ನನ್ನನ್ನು ಮೂಲಭೂತವಾಗಿ ಕಾಡತೊಡಗಿತು. ಇದುವರೆಗೆ ನನ್ನ ಜೀವನದಲ್ಲಿ ನಾನು ಜಾತಿಯ ಕಾರಣಕ್ಕೆ ಎಲ್ಲೂ ಇಂತಹ ಅನುಭವವನ್ನು ಪಡೆದಿರಲಿಲ್ಲ. ಬ್ರಾಹ್ಮಣರನ್ನು ಶ್ರೇಷ್ಠರೆಂದು ಉಳಿದ ಜನಾಂಗ ಭಾವಿಸಿದ್ದರಿಂದ ಅವರು ಶ್ರೇಷ್ಠರಾಗಿ ನಾವು ಕೀಳಾದೆವೇ? ಅಥವಾ ಬ್ರಾಹ್ಮಣರೇ ಉಳಿದವರನ್ನು ಕೀಳಾಗಿ ಕಂಡರೇ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿತ್ತು ನನ್ನ ಬುದ್ಧಿ.

ಮಗಳನ್ನು ಶಾಲೆಗೆ ಸೇರಿಸಬೇಕಾಗಿತ್ತಲ್ಲ. ಎಲ್ಲಿ? ಹೇಗೆ? ಎಂಬ ಪ್ರಶ್ನೆಯನ್ನು ಮಳೆಗಾಲದ ಬಳಿಕವೇ ನೋಡಿಕೊಂಡರಾಯಿತು ಎಂಬ ನಿರ್ಧಾರದಲ್ಲಿ ಮಗಳೊಂದಿಗೆ ನಾವಿಲ್ಲದ ಹೊತ್ತಿನಲ್ಲಿ ಅಜ್ಜ, ಅಜ್ಜಿ ಹಾಗೂ ಮಕ್ಕಳಿಬ್ಬರನ್ನು ನೋಡಿಕೊಳ್ಳುತ್ತಿದ್ದ ಅತ್ತಿಗೆಯ ಮಗಳು ಎಲ್ಲರೂ ಹರಕು ಮುರುಕು ಕನ್ನಡ ಹಾಗೂ ತುಳುವಿನಲ್ಲಿ ಮಾತನಾಡುತ್ತಿದ್ದರು. ಓದು ಬರಹದ ವಿಷಯವೇ ಇಲ್ಲ. ಕೃಷ್ಣಾಪುರದ 5ನೆ ಬ್ಲಾಕ್‌ನಲ್ಲಿ ಮುಖ್ಯ ರಸ್ತೆಯಲ್ಲಿ ಯುವಕ ಮಂಡಲ ಒಂದಿದ್ದು ಅದಕ್ಕೊಂದು ಕಟ್ಟಡವಿತ್ತು. ಆ ಕಟ್ಟಡದಲ್ಲಿ ಮಹಿಳಾ ಮಂಡಲದ ಸದಸ್ಯರು ನಡೆಸುತ್ತಿದ್ದ ಬಾಲವಾಡಿಯೊಂದು ಉಂಟು ಎನ್ನುವುದು ತಿಳಿಯಿತು. ಮುಂದಿನ ಅಕ್ಟೋಬರ್‌ನಿಂದ ರಜೆ ಮುಗಿದ ಬಳಿಕ ಮಗಳನ್ನು ಅಲ್ಲಿಗೆ ಕಳುಹಿಸುವುದೆಂದು ಯೋಚಿಸಿದೆವು. ನಾವು ಮನೆಗೆ ಬಂದ ಬಳಿಕವೇ ಮಗಳಿಗೆ ನಮ್ಮ ಜತೆಯಲ್ಲಿ ಶೈಕ್ಷಣಿಕವಾದ ಆಟ ಪಾಠಗಳು, ಮಾತುಕತೆಗಳು ಎಲ್ಲವೂ.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News