ಗೌರಿ ಲಂಕೇಶರದು ಫಾಸ್ಟ್ ಫಾರ್ವರ್ಡ್ ಕಗ್ಗೊಲೆ !
ಟೈಮ್ಸ್ ಆಫ್ ಇಂಡಿಯಾ ಬಳಗದಿಂದ ಹೊರಬರುತ್ತಿದ್ದ ‘ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ಕ್ಕೆ ಆಗ ಪ್ರೀತೀಶ್ ನಂದಿ ಸಂಪಾದಕರು. ಅದರ ಒಂದು ಸಂಚಿಕೆಯಲ್ಲಿ ಪಿ. ಲಂಕೇಶರ ಒಂದು ಕವನ ಇಂಗ್ಲೀಷಿಗೆ ಭಾಷಾಂತರಗೊಂಡು ಪ್ರಕಟ ಆಗಿತ್ತು. ಅದು 1989-90 ಇರಬೇಕು. ‘ಮುಂಗಾರು’ ಪತ್ರಿಕೆಯ ಸುದ್ದಿಕೋಣೆಯಲ್ಲಿ ಈ ಬಗ್ಗೆ ಮಾತುಕತೆ ಆದಾಗ ಮೊದಲ ಬಾರಿಗೆ ಚಿದಾನಂದ ರಾಜಘಟ್ಟ, ಗೌರಿ ಲಂಕೇಶ್ ಹೆಸರು ನನ್ನ ಕಿವಿಗೆ ಬಿದ್ದಿತ್ತು. ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಕನ್ನಡಿಗರ ಹೆಸರು ಕೇಳುವುದು ಅಪರೂಪವಾಗಿದ್ದ ದಿನಗಳವು. ಅಲ್ಲಿಂದಾಚೆಗೆ ‘ಇಂಡಿಯಾ ಟುಡೆ’ಯಲ್ಲಿ ಚಿದಾನಂದ್ ಅವರ ವರದಿಗಳನ್ನು, ‘ಸಂಡೆ’ಯಲ್ಲಿ ಗೌರಿ ಅವರ ವರದಿಗಳನ್ನು ಗಮನಿಸಿದ್ದು ನೆನಪಿದೆ.
ಮುಂದೆ 2000ನೆ ಇಸವಿಯಲ್ಲಿ ಲಂಕೇಶರು ತೀರಿಕೊಂಡ ಬಳಿಕ ಗೌರಿ ಲಂಕೇಶ್ ಬಂದು ಪತ್ರಿಕೆ ಮುನ್ನಡೆಸಲಿದ್ದಾರೆ ಎಂಬ ಸುದ್ದಿ ಕೇಳಿ, ಒಹ್! ಇಂಗ್ಲಿಷ್ ಪತ್ರಿಕೋದ್ಯಮದ ಹಿನ್ನೆಲೆ ಇರುವ ಗೌರಿ ಬಂದರೆ ‘ಲಂಕೇಶ್ ಪತ್ರಿಕೆ’ಯ ಸ್ವರೂಪ ಬದಲಾಗಬಹುದು ಎಂದುಕೊಂಡಿದ್ದೆ. ಆದರೆ ಅದು ಹಾಗಾಗದಾಗ ಲಂಕೇಶ್ ಪತ್ರಿಕೆಯನ್ನು ಕೊಂಡು ಓದುವುದನ್ನು ನಿಲ್ಲಿಸಿಬಿಟ್ಟಿದ್ದೆ.
ತೀರಾ ಔಪಚಾರಿಕವಾಗಿಯೇ ಇದ್ದ ಕನ್ನಡದ ಪತ್ರಿಕಾ ಭಾಷೆ ಲಂಕೇಶ್ ಪತ್ರಿಕೆಯೊಂದಿಗೆ ಬದಲಾದದ್ದು ಈಗ ಇತಿಹಾಸ. ‘‘ಹೂರಣ (ಕಂಟೆಂಟ್) ಇಲ್ಲದ ಸುದ್ದಿಗಳು ಮಾತ್ರ ಶಬ್ದಾಡಂಬರದ ಮೊರೆ ಹೋಗುತ್ತವೆ’’ ಎಂಬುದು ಪತ್ರಕರ್ತ ಕಸುಬಿನಲ್ಲಿರುವವರಿಗೆ ಬಾಲಪಾಠ. ಹಾಗಿದ್ದೂ ಲಂಕೇಶ್ ಪತ್ರಿಕೆಯು ಭಾಷೆಯ ದೃಷ್ಟಿಯಿಂದ ಯಾಕೆ ಗಮನ ಸೆಳೆಯಿತು ಎಂದರೆ, ಲಂಕೇಶ್‌ಗೆ ಶಬ್ದಗಳು ಹೊರಡಿಸುವ ಒಳಧ್ವನಿಗಳ ಬಗ್ಗೆ ಹಿಡಿತ ಅದ್ಭುತವಾಗಿತ್ತು. ಹಾಗಾಗಿ ಅವರ ಪೆನ್ನಿನಲ್ಲಿ ಬಯ್ಯಿಸಿಕೊಂಡು ಪುನೀತರಾಗಲು ಕಾಯುವವರ ಸಂಖ್ಯೆಯೂ ಆಗ ದೊಡ್ಡದಿತ್ತು.
ದುರದೃಷ್ಟವಶಾತ್, ಲಂಕೇಶರ ಸುದ್ದಿಗಾರ ಬಳಗ ಈ ಶೈಲಿಯನ್ನು ಮೈಗೂಡಿಸಿಕೊಳ್ಳುವ ಭರದಲ್ಲಿ ಬೈಗಳು ಮುಂದೆ ಬಂತೇ ಹೊರತು ಲಂಕೇಶರಿಗೆ ಸಾಧ್ಯವಾಗಿದ್ದ ಒಳಧ್ವನಿ ಮುರುಟಿಹೋಯಿತು. ಮುಂದೆ ‘ಹಾಯ್ ಬೆಂಗಳೂರು’ ಆದಿಯಾಗಿ ಬಂದ ಟ್ಯಾಬ್ಲಾಯ್ಡಾಗಳು, ಸಂಜೆ ಪತ್ರಿಕೆಗಳ ಸರಮಾಲೆಯು ಪತ್ರಿಕೋದ್ಯಮದ ಭಾಷೆಯಾಗಿ ಕನ್ನಡವನ್ನು ಕೊಳೆಯಿಸುತ್ತಲೇ ಹೋದವು. ಈಗೀಗ ಅದೇ ಯಶಸ್ವಿ ಮಾಡೆಲ್ ಎಂದುಕೊಂಡು, ಬಹುತೇಕ ದಿನಪತ್ರಿಕೆಗಳೂ ಆ ಹಾದಿ ಹಿಡಿದಿರುವುದು ಸುಳ್ಳಲ್ಲ. ಒಟ್ಟಿನಲ್ಲಿ ಈಗ ಉಳಿದಿರುವುದು ಒಳಧ್ವನಿ ಇಲ್ಲದ ಬೊಬ್ಬೆ ಮಾತ್ರ!
ಗೌರಿ ಲಂಕೇಶ್ ಅವರ ಕಗ್ಗೊಲೆ - ಅದಕ್ಕೆ ಕಾರಣಗಳ ತನಿಖೆ ನಡೆದಿದೆ. ಈ ಇಡಿಯ ಪ್ರಕರಣದಲ್ಲಿ ನನಗೆ ಕುತೂಹಲ ಹುಟ್ಟಿಸಿರುವುದು, ಪ್ರಕರಣದ ಕುರಿತಾದ ಮಾಧ್ಯಮಗಳ ಧಾವಂತ. ನಾನು ಈ ತನಕ ಇಷ್ಟೊಂದು ಫಾಸ್ಟ್ ಫಾರ್ವರ್ಡ್ ಕೊಲೆ ಪ್ರಕರಣವೊಂದನ್ನು ಕಂಡಿಲ್ಲ.
ಅಂದು ಸಂಜೆ, ಅಪರೂಪಕ್ಕೆ ಟೆಲಿವಿಷನ್ ಚಾನೆಲ್‌ಗಳ ಜಾಲಾಟ ಮಾಡುತ್ತಿದ್ದಾಗ ಯಾವುದೋ ಒಂದು ಚಾನೆಲ್‌ನಲ್ಲಿ ಗೌರಿ ಲಂಕೇಶ್ ಮನೆಗೆ ಗುಂಡು ಹಾರಾಟ ಆದ ಬಗ್ಗೆ ಬ್ರೇಕಿಂಗ್ ನ್ಯೂಸ್ ಕಂಡೆ. ಅದಾಗಿ ಹದಿನೈದು ನಿಮಿಷಗಳಲ್ಲೇ ಹತ್ಯೆಯ ಸುದ್ದಿ ಕೂಡ ಬಂತು. ಇಂತಹ ಕಗ್ಗೊಲೆಗಳು ನಡೆದಾಗ ಸಾಮಾನ್ಯವಾಗಿ ಮೊದಲ ಸಾರ್ವಜನಿಕ ಪ್ರತಿಕ್ರಿಯೆ ದಿಗ್ಭ್ರಾಂತಿಯದ್ದಾಗಿರುತ್ತದೆ. ಅದು ನಿಧಾನಕ್ಕೆ ದುಗುಡ, ಆತಂಕ, ಖಿನ್ನತೆಗಳಿಗೆ ಜಾರಿ, ಮತ್ತೆ ವಾಸ್ತವಕ್ಕೆ ಬಂದು ಪ್ರತಿಕ್ರಿಯಿಸಲು ನಾಲ್ಕೈದು ದಿನಗಳಾದರೂ ತಗಲುವುದು ಮಾನವ ಸಹಜ ಪ್ರತಿಕ್ರಿಯೆ.
ಆದರೆ, ಗೌರಿ ಪ್ರಕರಣಕ್ಕೆ ಒಂದು ಪೂರ್ವ ಚರಿತ್ರೆ ಇತ್ತು. ಎಂ.ಎಂ. ಕಲಬುರ್ಗಿ ಅವರ ಕಗ್ಗೊಲೆ, ಅದಕ್ಕಿಂತ ಮೊದಲು ಮಹಾರಾಷ್ಟ್ರದಲ್ಲಿ ದಾಭೋಲ್ಕರ್, ಪನ್ಸಾರೆ ಅವರ ಕಗ್ಗೊಲೆಗಳು ಇವೆಲ್ಲ ಬಹುತೇಕ ಒಂದೇ ರೀತಿಯ ಕಾರಣಕ್ಕಾಗಿ ನಡೆದವು ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದ್ದುದರಿಂದ, ಅದೇ ಹಾದಿಯಲ್ಲಿ ಗೌರಿ ಪ್ರಕರಣವೂ ಇರಬಹುದೆಂಬ ಶಂಕೆಗೆ ಮೊದಲ ಒತ್ತು ಕೊಟ್ಟದ್ದು, ಕೊಲೆ ನಡೆದ ವಿಧಾನ. ಹಾಗಾಗಿ ಗೌರಿ ಕೊಲೆಯಲ್ಲಿ, ಕೊಲೆ ಆಗಿದೆ ಎಂಬ ದಿಗ್ಭ್ರಾಂತಿಗಿಂತ, ಒಹ್! ಇಂತಹದೊಂದು ಕೃತ್ಯ. ನಮ್ಮ ಮನೆಬಾಗಿಲಿಗೇ ಬಂದುಬಿಟ್ಟಿದೆಯಲ್ಲ ಎಂಬ ಆತಂಕ ಹೆಚ್ಚು ವೇಗ ಪಡೆದಿತ್ತು. ಸೆಪ್ಟಂಬರ್ ಐದರ ರಾತ್ರಿಯೇ ಗೌರಿ ಕೊಲೆಗೆ ಸಾರ್ವಜನಿಕ ಪ್ರತಿಭಟನೆ ವ್ಯಕ್ತವಾದದ್ದರ ಹಿಂದೆ ಇದ್ದುದು ಈ ರೀತಿಯ ಮಾನವ ಸಹಜ ಆತಂಕ ಮತ್ತು ಹತಾಶೆ.
ಹಠಾತ್ ಪ್ರತಿಕ್ರಿಯೆಯನ್ನು ಮಾಧ್ಯಮಗಳು ತಪ್ಪಾಗಿ ಗ್ರಹಿಸಿದ ಬೆನ್ನಿಗೇ ಇಡಿಯ ಪ್ರಕರಣ ‘ಫಾಸ್ಟ್ ಫಾರ್ವರ್ಡ್’ ಆಗತೊಡಗಿತು. ಎಡಪಂಥೀಯರು ರಾತ್ರೋ ರಾತ್ರಿ ಪ್ರತಿಭಟಿಸಿದರೆಂಬುದಕ್ಕೆ ಪ್ರತಿಕ್ರಿಯೆ ಯಾಗಿ, ಬಲಪಂಥೀಯ ಬಾಹುಳ್ಯದ ಕನ್ನಡ ಮಾಧ್ಯಮಗಳು ಪ್ಯಾನಿಕ್ ಬಟನ್ ಒತ್ತಿದ್ದರಿಂದ ಈ ಪ್ರಕರಣದ ‘ಮೀಡಿಯಾ ಟ್ರಯಲ್’ ಮರುದಿನವೇ ಆರಂಭಗೊಂಡಿತು. ಗೌರಿ ಸಾವಿಗೆ ಆಘಾತ, ದುಃಖ, ನೋವು ವ್ಯಕ್ತಪಡಿಸಬೇಕಾಗಿದ್ದ ಜಾಗಗಳಲ್ಲಿ ಸಾರ್ವಜನಿಕಾಭಿಪ್ರಾಯದ ದಿಕ್ಕು ಬದಲಾಯಿಸುವ ಪ್ರಯತ್ನಗಳು ನಡೆದವು. ‘ನಕ್ಸಲರಿಂದ ಈ ಹತ್ಯೆಯಾಗಿದೆ’ ಎಂಬುದನ್ನಂತೂ ಎಷ್ಟು ಕ್ಷಿಪ್ರವಾಗಿ, ಬಲವಾಗಿ ಪ್ಲಾಂಟ್ ಮಾಡಲಾಯಿತೆಂದರೆ, ಈ ತಂತ್ರವೂ ಕೊಲೆಯ ಯೋಜನೆಯ ಭಾಗವೇ ಎಂಬ ಶಂಕೆ ಮೂಡಿದ್ದರೂ ಅಚ್ಚರಿ ಇಲ್ಲ!
ನಿಜಕ್ಕೆಂದರೆ, ಪೊಲೀಸರು ಈ ಪ್ರಕರಣದಲ್ಲಿ ಯಾವ ಹಾದಿಯಲ್ಲಿದ್ದಾರೆ ಎಂಬುದು ಮಾಧ್ಯಮಗಳಿಗೆ ಇನ್ನೂ ಗೊತ್ತಿಲ್ಲ; ಗೊತ್ತಿರಬೇಕಾಗಿಲ್ಲ. ಅಲ್ಲಿ-ಇಲ್ಲಿ ತಮಗೆ ಅನುಕೂಲ ಎನ್ನಿಸುವ ಊಹಾಪೋಹದ ವದಂತಿ ಗಳನ್ನಷ್ಟೇ ಮಾಧ್ಯಮಗಳಲ್ಲಿ ಹರಿಬಿಡಲಾಗುತ್ತಿದೆ; ತನಿಖೆಯ ಹಾದಿಯಲ್ಲಿ ಸಾರ್ವಜನಿಕರ ಗಮನಕ್ಕೆ ಬಂದ ಸಂಗತಿಗಳನ್ನು (ಉದಾ: ಲಂಕೇಶ್ ಕುಟುಂಬದವರು ವಿಚಾರಣೆಗೆ ಹಾಜರಾದದ್ದು) ತಮ್ಮ ವಾದಕ್ಕೆ ಪೂರಕವಾಗಿ ಪೋಣಿಸಲು ಪ್ರಯತ್ನಗಳು ಮಾಧ್ಯಮಗಳಲ್ಲಿ ನಡೆದಿವೆ. ಯಾವನೇ ಪೊಲೀಸ್ ಅಧಿಕಾರಿ ಇಂತಹದೊಂದು ಸೆನ್ಸೇಷನಲ್ ಪ್ರಕರಣದಲ್ಲಿ ಮಾಧ್ಯಮಗಳ ಬಾಯಿಗೆ ಆಹಾರಕೊಡುವ ಹೆಡ್ಡುತನ ಮಾಡಲಾರ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಪ್ರಶ್ನೆ ಇರುವುದು ಇಡಿಯ ಪ್ರಕರಣ ಫಾಸ್ಟ್ ಫಾರ್ವರ್ಡ್ ಯಾಕಾಯಿತು ಎಂದು. ಕೊಲೆ ನಡೆದ ವಿಧಾನದಲ್ಲಿ ನೇರಾನೇರ ಸಾಮ್ಯತೆ ಇರುವಾಗ ಸಹಜವಾಗಿಯೇ ಕಲಬುರ್ಗಿ ಪ್ರಕರಣದ ಜೊತೆ ಹೋಲಿಕೆ ನಡೆದು, ಅದಲ್ಲ ಎಂದಾದ ಮೇಲೆ ಬೇರೆ ದಿಕ್ಕುಗಳತ್ತಲೂ ವಿಶ್ಲೇಷಣೆ ನಡೆಸುವುದು ಮಾಧ್ಯಮಗಳಿಗೆ ಸಹಜ ಹಾದಿಯಾಗುತ್ತಿತ್ತು. ಆದರೆ ಏಕಾಏಕಿ ಡಿಫರೆನ್ಷಿಯಲ್ ಡಯಾಗ್ನೋಸಿಸ್ ಆರಂಭಿಸಿದ ಬಲ ಒಲವಿನ ಮಾಧ್ಯಮಗಳು ತಮ್ಮ ಹೊಸ ಥಿಯರಿಯನ್ನು ಪುಟಗಟ್ಟಲೆ ಸಮರ್ಥಿಸಿಕೊಳ್ಳತೊಡಗಿದ್ದು ಕುತೂಹಲಕರ.
ಕೊಲೆ ನಡೆದ ದಿನವೊಪ್ಪತ್ತಿನಲ್ಲೇ ಈ ಸ್ವರಗಳು ಎಷ್ಟು ಬಲಗೊಂಡಿದ್ದವು ಎಂದರೆ, ಎಸ್‌ಐಟಿ ತನಿಖೆಯೋ-ಸಿಬಿಐ ತನಿಖೆಯೋ ಎಂಬ ಚರ್ಚೆ, ಸ್ವತಃ ಮೃತರ ತಮ್ಮನೇ ಹೇಳಿದ್ದಾರಲ್ಲ ಎಂಬ ವಾದಗಳೆಲ್ಲ ಏರುಧ್ವನಿ ಪಡೆದು ರಾಜಕೀಯದ ರಾಡಿ ಕಾಣಿಸಿಕೊಂಡಿತು. ಇಲ್ಲಿಯ ತನಕ ಸಾವಿಗೆ ಮರುಕ, ಹತಾಶೆ ಬಿಟ್ಟರೆ ಬೇರೆ ವಿಧದ ಪ್ರತಿಕ್ರಿಯೆ ಕಂಡು ಅಭ್ಯಾಸವಿರದ ಸಾರ್ವಜನಿಕ ಬದುಕಿನಲ್ಲಿ ಸಾವನ್ನು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ (ಉದಾ. ಆಕೆ ಹಾಗೆಲ್ಲ ಬರೆದದ್ದರಿಂದ ಹೀಗಾಯಿತು ಎಂಬಂತಹವು) ಸಮರ್ಥಿಸುವ, ಸಂಭ್ರಮಿಸುವ ವಾತಾವರಣಕ್ಕೂ ಕರ್ನಾಟಕ ಸಾಕ್ಷಿ ಆಯಿತು.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸಾವಿಗೆ ಪ್ರತಿರೋಧ ತೋರಿಸುವ ಸಮಾವೇಶ ಕೂಡ ಒಂದೆರಡೇ ದಿನಗಳಲ್ಲಿ ಸ್ವಯಂಸ್ಫೂರ್ತಿಯಿಂದ ದೊಡ್ಡ ಗಾತ್ರದಲ್ಲಿ ಸಂಘಟಿತವಾದದ್ದರ ಹೊರತಾಗಿಯೂ ಮಾಧ್ಯಮಗಳಿಂದ ಎದ್ದುಕಾಣಿಸುವಷ್ಟು ನಿರ್ಲಕ್ಷ್ಯಕ್ಕೀಡಾಯಿತು ಮತ್ತು ಮೂಲ ಸಂಗತಿ (ಕೊಲೆ, ಅದರ ಖಂಡನೆ, ಬೇಸರ, ತಪ್ಪಿತಸ್ಥರನ್ನು ಹುಡುಕಿ ಶಿಕ್ಷೆ ಆಗಬೇಕು ಎಂಬುದನ್ನು) ಬಿಟ್ಟು ಬೇರೆ ಸಂಗತಿಗಳೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ಮುಂಚೂಣಿಯಲ್ಲಿರುವಂತೆ ಟ್ರೆಂಡ್ ಸ್ಪಿನ್ ಮಾಡಲಾಯಿತು.
ಇದನ್ನೆಲ್ಲ ಒಟ್ಟಾಗಿ ಹೊರನಿಂತು ನೋಡಿದಾಗ ಎದ್ದು ಕಾಣುವುದು -ಒಂದು ಕೊಲೆ ಮತ್ತದರ ತನಿಖೆಯ ಹಾದಿಯ ಬಗ್ಗೆ ಮಾಧ್ಯಮಗಳಿಗೆ ಇಷ್ಟೆಲ್ಲ ಅತೀ ಅನ್ನಿಸುವಷ್ಟು ಹಿತಾಸಕ್ತಿ ಯಾಕೆ ಹುಟ್ಟಿತು? ಇಂತಹದೊಂದು ರಾಡಿ ಹುಟ್ಟಿದರೆ ಅದು ಲಾಭ ತಂದುಕೊಡುವುದು ಯಾರಿಗೆ ಎಂಬ ಪ್ರಶ್ನೆಗಳು. ಮಾಧ್ಯಮಗಳ ಈ ಪರ-ವಿರುದ್ಧ ಉರುಡಾಟದ ಬಿಂದುಗಳನ್ನೆಲ್ಲ ಜೋಡಿಸುತ್ತಾ ಹೋದರೆ ಸಿಗುವ ಒಟ್ಟು ಚಿತ್ರಣವನ್ನು ತನಿಖೆ ಅಂತಿಮ ಹಂತ ತಲುಪಿದ ಮೇಲೆ ಸಾಂದರ್ಭಿಕ ಸಾಕ್ಷ್ಯಗಳ ರೂಪದಲ್ಲಿ ಕಾನೂನು ನೋಡಬೇಕಾದ ಸ್ಥಿತಿ ಬಂದರೂ ಅಚ್ಚರಿ ಇಲ್ಲ!