ಭಡ್ತಿ ಮೀಸಲು: ‘ಅಹಿಂಸಾ’ ಎಂಬ ಬಹಿರಂಗ ಅಸ್ಪೃಶ್ಯತಾಚರಣೆ?

Update: 2017-10-25 07:02 GMT

ಎಸ್ಸಿ/ಎಸ್ಟಿಯವರ ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಕಳೆದ ಫೆಬ್ರವರಿ 9ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿಚಾರವಾಗಿ ಎಸ್ಸಿ/ಎಸ್ಟಿ ನೌಕರರು ಸಂಘಟಿತರಾಗಿ ಹೋರಾಟ ನಡೆಸುತ್ತಿರುವ ವಿಚಾರ ಎಲ್ಲರಿಗೂ ತಿಳಿದದ್ದೆ. ಅದು ಎಸ್ಸಿ/ಎಸ್ಟಿ ಸಮನ್ವಯ ಸಮಿತಿ ಇರಬಹುದು, ಭಡ್ತಿ ಮೀಸಲಾತಿ ಸಂರಕ್ಷಣಾ ಸಮಿತಿ ಇರಬಹುದು ಶೋಷಿತ ನೌಕರರ ಸಂಘಟನೆಗಳು ತಮ್ಮ ಹೋರಾಟವನ್ನು ನ್ಯಾಯಯುತವಾಗಿ ಮುಂದುವರಿಸಿವೆ. ಆಶ್ಚರ್ಯವೆಂದರೆ ಇದರ ವಿರುದ್ಧ ಹುಟ್ಟಿಕೊಂಡಿರುವ ನೌಕರರ ವೇದಿಕೆ ಎಸ್ಸಿ/ಎಸ್ಟಿಯವರನ್ನು ದೂರ ಇಟ್ಟು ‘ಅಹಿಂಸಾ’ =ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ಎಂಬ ಸಂಘಟನೆ ಕಟ್ಟಿಕೊಂಡು ಎಸ್ಸಿ/ಎಸ್ಟಿಯವರ ಭಡ್ತಿ ಮೀಸಲಾತಿ ವಿರುದ್ಧ ನಿಂತಿದೆ.

ಪ್ರಶ್ನೆ ಏನೆಂದರೆ ಅಹಿಂಸಾ ಸಂಘಟನೆಯ ಈ ಕಾನ್ಸೆಪ್ಟ್ೃ ಸಂವಿಧಾನಬದ್ಧವೇ ಎಂಬುದು? ಯಾಕೆಂದರೆ ಎಸ್ಸಿ/ಎಸ್ಟಿ ಅದು ಭಾರತ ಸಂವಿಧಾನವೇ ಸೃಷ್ಟಿಸಿರುವ ಅಸ್ಪಶ್ಯತೆ, ಶೋಷಣೆ ಅನುಭವಿಸುತ್ತಿರುವ ನಿರ್ದಿಷ್ಟ ಜನಸಂಖ್ಯೆಯ ಗುಂಪಾಗಿದೆ ಮತ್ತು ಸಂವಿಧಾನದ ಆಧಾರದಲ್ಲಿಯೇ ಆ ಗುಂಪಿಗೆ(ಎಸ್ಸಿ/ಎಸ್ಟಿ) ಉದ್ಯೋಗ ಮೀಸಲಾತಿ ನೀಡಲಾಗಿದೆ. ಹಾಗೆಯೇ ಅನುಚ್ಛೇದ16(4)(ಎ) ಆಧಾರದಲ್ಲಿ ಭಡ್ತಿಯಲ್ಲೂ ಸಂವಿಧಾನದ ಪ್ರಕಾರವೇ ಮೀಸಲಾತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಸಂವಿಧಾನದ ಅನುಚ್ಛೇದದ ಪ್ರಕಾರ ತೀರ್ಪಿನ ಪುನರ್‌ಪರಿಶೀಲನೆಗೆ ಮನವಿ ಸಲ್ಲಿಸಿರುವ ಅಥವಾ ಮತ್ತೊಂದು ಮಸೂದೆ ರಚಿಸಿ ನಮ್ಮ ಭಡ್ತಿ ಮೀಸಲಾತಿ ರಕ್ಷಿಸಿ ಎಂದು ಕೇಳುತ್ತಿರುವ ಎಸ್ಸಿ/ಎಸ್ಟಿಗಳ ಹಕ್ಕು ಮಂಡನೆ ಸಂಪೂರ್ಣ ನ್ಯಾಯಬದ್ಧ. ಪ್ರಶ್ನೆ ಏನೆಂದರೆ ಇವರ ವಿರುದ್ಧ, ಎಸ್ಸಿ/ಎಸ್ಟಿಯವರ ವಿರುದ್ಧ ‘ಅಹಿಂಸಾ’ ಸಂಘಟನೆ ಕಟ್ಟಲ್ಪಟ್ಟಿದೆ. ಇದು ಹೇಗೆ ನ್ಯಾಯಬದ್ಧ? ಸಂವಿಧಾನಬದ್ಧ? ಎಂಬುದು.

ಖಂಡಿತ, ಸಮಾಜದಲ್ಲಿ ಹೀಗೆ ಇತರರು ಒಗ್ಗಟ್ಟಾಗಿ ಶತಶತಮಾನಗಳಿಂದ ಒಂದು ವರ್ಗವನ್ನು ದೂರ ಇಟ್ಟಿದ್ದಕ್ಕೇ, ಅಸ್ಪಶ್ಯತೆ ಆಚರಿಸುತ್ತಿರುವುದಕ್ಕೇ ಎಸ್ಸಿ/ಎಸ್ಟಿಗಳು ಸೃಷ್ಟಿಯಾದದ್ದು ಮತ್ತು ಅವರಿಗಾಗಿ ಪ್ರತ್ಯೇಕ ಮೀಸಲಾತಿ, ದೌರ್ಜನ್ಯ ತಡೆ ಕಾಯ್ದೆ, ಶೋಷಣೆಯ ವಿರುದ್ಧ ರಕ್ಷಣೆ... ಇತ್ಯಾದಿ ಇತ್ಯಾದಿ ಸಂವಿಧಾನ ನೀಡಿದ್ದು. ಪ್ರಶ್ನೆ ಏನೆಂದರೆ ಇವರ ವಿರುದ್ಧ ಮತ್ತೆ ಹೀಗೆ ಇತರರು ಒಗ್ಗೂಡುವುದು, ಅವರ ಸಂವಿಧಾನಬದ್ಧ ಹಕ್ಕುಗಳ ವಿರುದ್ಧ ಹೋರಾಟಕ್ಕಿಳಿಯುವುದು ಕೂಡ ಅಸ್ಪಶ್ಯತಾಚರಣೆಯಾಗುತ್ತದೆ ಮತ್ತು ಇತರರಿಂದ ಅಸ್ಪಶ್ಯರನ್ನು, ಎಸ್ಸಿ/ಎಸ್ಟಿಯವರನ್ನು ಬೇರ್ಪಡಿಸುವ ಅದು ಅಂತಹವರು ಅಂದರೆ ‘ಅಹಿಂಸಾ’ದವರು ಎಸ್ಸಿ/ಎಸ್ಟಿಗಳ ವಿರುದ್ಧ ಎಸಗುವ ಸಾಮಾಜಿಕ ಬಹಿಷ್ಕಾರವಾಗುತ್ತದೆ. ಸಾಮಾಜಿಕ ಬಹಿಷ್ಕಾರ; ಯಾಕೆಂದರೆ ಸರಕಾರಿ ಕಚೇರಿ ಎನ್ನುವುದು ಕೂಡ ಒಂದು ಸಾಮಾಜಿಕ ವ್ಯವಸ್ಥೆ. ವಿವಿಧ ಜಾತಿಗಳವರು, ಧರ್ಮ, ಸಮುದಾಯಗಳವರು ಎಲ್ಲರೂ ಅಲ್ಲಿರುತ್ತಾರೆ.

ಎಲ್ಲರೂ ಒಗ್ಗೂಡುವುದು, ಕಚೇರಿ ಕೆಲಸ ನಿರ್ವಹಿಸುವುದು, ಕಾರ್ಯಾಂಗವಾಗಿ ಅವರ ಸಂವಿಧಾನಬದ್ಧ ಜವಾಬ್ದಾರಿಯಾಗಿರುತ್ತದೆ ಮತ್ತು ಅಂತಹ ವಾತಾವರಣದಲ್ಲಿ ಇತರರು ಎಸ್ಸಿ/ಎಸ್ಟಿ ನೌಕರರ ವಿರುದ್ಧ ಕಚೇರಿಯ ಹೊರಗಡೆ ಸಮಾಜದಲ್ಲಿ ಇರುವಂತೆ ಒಗ್ಗೂಡುವುದು ಅಥವಾ ಸಂಘಟನೆ ಕಟ್ಟುವುದು, ಹೋರಾಟ ರೂಪಿಸುವುದು ಕೂಡ ಮತ್ತದೇ ಬಹಿರಂಗ ಅಸ್ಪಶ್ಯತಾಚರಣೆಯೇ ಆಗುತ್ತದೆ. ಹಾಗಿದ್ದರೆ ಇತರ ನೌಕರರು ಭಡ್ತಿ ಮೀಸಲಾತಿ ಬಗ್ಗೆ ಹೋರಾಟ ಮಾಡುವುದು ಬೇಡವೇ? ಖಂಡಿತ ಮಾಡಲಿ. ಹಾಗೆ ಅವರು ಮಾಡಲು ಕೂಡ ಅರ್ಹರು, ಹಕ್ಕುದಾರರು. ಆದರೆ ಅವರು ಇಟ್ಟು ಕೊಳ್ಳಬೇಕಾದ ಹೆಸರು? ಉದಾಹರಣೆಗೆ ಅವರು ಭಡ್ತಿ ಮೀಸಲಾತಿ ಸುಪ್ರೀಂಕೋರ್ಟ್ ತೀರ್ಪು ಜಾರಿ ಸಮಿತಿ ಎಂದು ಹೆಸರಿಟ್ಟುಕೊಂಡಿದ್ದರೆ ಮತ್ತು ಅಲ್ಲಿ ಅವರು ಯಾರನ್ನಾದರೂ ಸರಿ ಒಳಗೊಂಡಿದ್ದರೆ ಅದನ್ನು ಯಾರೂ ಆಕ್ಷೇಪಿಸುತ್ತಿರಲಿಲ್ಲ.

ಆದರೆ ಬದಲಿಗೆ ಎಸ್ಸಿ/ಎಸ್ಟಿಯವರನ್ನು ಹೊರತುಪಡಿಸಿ ಇತರ ವರ್ಗಗಳನ್ನು ಒಗ್ಗೂಡಿಸಿ ಆ ಇತರರ ಹೆಸರಿನಲ್ಲಿಯೇ ‘ಅಹಿಂಸಾ’ ಕಟ್ಟಿದರೆ ಆ ಸಂಘಟನೆ ಬಿಂಬಿಸುವುದಾದರೂ ಏನನ್ನು? ನೌಕರಶಾಹಿಯ ಬಹುಸಂಖ್ಯೆಯ ನೌಕರರು ಎಸ್ಸಿ/ಎಸ್ಟಿ ನೌಕರರ ವಿರುದ್ಧ ಎಂಬುದಾಗಿ ತಾನೇ? ಎಸ್ಸಿ/ಎಸ್ಟಿಯವರ ವಿರುದ್ಧ ಎಂದಾದರೆ ಅದು ಕಾನೂನು ಪ್ರಕಾರ ಏನಾಗುತ್ತದೆ? ಎಸ್ಸಿ/ಎಸ್ಟಿಗಳ ವಿರುದ್ಧದ ತಾರತಮ್ಯದ ಹಾಗೆ ತಾನೆ? ಅಥವಾ ಒಟ್ಟು ನೌಕರ ವೃಂದದಿಂದ ಎಸ್ಸಿ/ಎಸ್ಟಿ ನೌಕರರನ್ನು ದೂರ ಇಟ್ಟ ಸಾಮಾಜಿಕ ಬಹಿಷ್ಕಾರದ ಹಾಗೆ ತಾನೇ? ಆಶ್ಚರ್ಯವೆಂದರೆ ಸಣ್ಣಪುಟ್ಟ ಸಾಮಾಜಿಕ ಬಹಿಷ್ಕಾರಗಳಿಗೆ ವ್ಯವಸ್ಥೆ ತಲೆಕೆಡಿಸಿಕೊಳ್ಳುತ್ತದೆ. ಆದರೆ ಲಕ್ಷಾಂತರ ಎಸ್ಸಿ/ಎಸ್ಟಿ ನೌಕರರ ವಿರುದ್ಧ ಈ ಅಹಿಂಸಾ ಸಂಘಟನೆ ಕಟ್ಟಿರುವ ಬಗ್ಗೆ, ಮತ್ತದರ ಪ್ರಕ್ರಿಯೆಯ ಬಗ್ಗೆ? ಯಾರೂ ಚಕಾರ ಎತ್ತುತ್ತಿಲ್ಲ!

‘ಅಹಿಂಸಾ’ ಸಂಘಟನೆಯ ಕಾನ್ಸೆಪ್ಟ್ೃ ‘82 / 18’ ಎಂಬುದಾಗಿದೆ ಮತ್ತು ಇದು ಸಂಘಪರಿವಾರದ ಚಿಂತನಾ ಕೊಠಡಿಯಲ್ಲಿ ಮೂಡಿಬಂದ ಚಿಂತನೆಯೇ ಆಗಿದೆ. ‘82 / 18’ ಅಂದರೆ ಶೇ.18 ಮೀಸಲಾತಿ ಪಡೆಯುವ ಎಸ್ಸಿ/ಎಸ್ಟಿಯವರ ವಿರುದ್ಧ ಉಳಿದ ಶೇ.82ರಷ್ಟು ಜನ ವರ್ಗದವರು ಎಂದರ್ಥ! ಗಮನಿಸಿ, ದೇಶದ ಜನಸಂಖ್ಯೆಯನ್ನು ಹೇಗೆ ಶೋಷಕರು ಮತ್ತು ಶೋಷಿತರು ಎಂಬ ಮಾದರಿಯಲ್ಲಿ ಈಗಲೂ ವಿಭಜಿಸಲಾಗುತ್ತಿದೆ ಮತ್ತು ಅಂತಹ ವಿಭಜನೆಯ ಮೂಲಕ ಹೇಗೆ ಹೋರಾಟ ರೂಪಿಸಲಾಗುತ್ತಿದೆ ಎಂಬುದನ್ನು. ಆದರೆ ಒಂದು ಪ್ರಶ್ನೆ ಇಲ್ಲಿ ಅರ್ಥಮಾಡಿಕೊಳ್ಳಬೇಕು, ಅದೆಂದರೆ ಬಾಬರಿ ಮಸೀದಿ ವಿಚಾರ, ಗೋಹತ್ಯೆಯ ವಿಚಾರ ಬಂದಾಗ ಈ ‘82 /18’ ಪರಿಕಲ್ಪನೆ ರೂಪಿಸಿರುವವರಿಗೆ ಅಥವಾ ‘ಅಹಿಂಸಾ’ ಬೋರ್ಡ್ ಹಾಕಿಕೊಂಡವರಿಗೆ ‘ಅ’ ಅಂದರೆ ಅಲ್ಪಸಂಖ್ಯಾತರು ಬೇಡ! ಹಾಗೆಯೇ ಇವರಿಗೆ ಮಂಡಲ್ ವರದಿ, ಹಾವನೂರು ವರದಿ ಅಥವಾ ಈಚಿನ ಮುಖ್ಯಮಂತ್ರಿಗಳ ಶೇ.70ಕ್ಕೆ ಮೀಸಲಾತಿ ಏರಿಸಬೇಕು ಎಂಬ ವಿಚಾರ ಬಂದಾಗಲೂ ‘ಹಿಂ’ ಎಂದರೆ ಹಿಂದುಳಿದ ವರ್ಗಗಳು ಬೇಡ! ಆದರೆ ಎಸ್ಸಿ/ಎಸ್ಟಿಯವರ ಭಡ್ತಿ ಮೀಸಲು ವಿರೋಧಿಸುವಾಗ ಇಬ್ಬರೂ ಬೇಕು!! ಮನುವಾದದ ಪಿತೂರಿ ಅಥವಾ ತಂತ್ರ ಅಂದರೆ ಇದೇ!

ಈ ಹಿನ್ನೆಲೆಯಲ್ಲಿ ಮನುವಾದದ ಈ ತಂತ್ರವನ್ನು, ಅಂದರೆ ಒಬ್ಬರಿಗೊಬ್ಬರನ್ನು ಎತ್ತಿಕಟ್ಟಿ ತನ್ನ ಬೇಳೆ ಬೇಯಿಸಿಕೊಳ್ಳುವುದನ್ನು ಅಲ್ಪಸಂಖ್ಯಾತರು ಮತ್ತು ಹಿಂದುಳಿದವರು ಇಬ್ಬರೂ ಅರ್ಥಮಾಡಿಕೊಳ್ಳಬೇಕು. ಯಾಕೆಂದರೆ ತಕ್ಷಣದ ಆಸೆಗೆ ಈ ಇಬ್ಬರೂ ‘ಅಹಿಂಸಾ’ಗೆ ಜೈ ಎನ್ನಬಹುದು? ಆದರೆ ದೂರಗಾಮಿ ನೆಲೆಯಲ್ಲಿ? ಮುಂದೊಂದು ದಿನ ಸಮಗ್ರ ಮೀಸಲಾತಿಯ ಪ್ರಶ್ನೆ ಬಂದಾಗ? ಒಂದಂತು ಸ್ಪಷ್ಟ, ಬಹಿರಂಗವಾಗಿ ‘ಅಹಿಂಸಾ’ ಎಂಬ ಈ ಸಂಘ ಕಟ್ಟಿಕೊಂಡಿರುವ ಮಾದರಿಯೇ ಹೇಳುತ್ತದೆ ಸಮಾಜದಲ್ಲಿ ಈಗಲೂ ಅಸ್ಪಶ್ಯತೆ ಎಷ್ಟೊಂದು ಢಾಳಾಗಿ ಆಚರಿಸಲ್ಪಡುತ್ತಿದೆ, ಹೇಗೆ ಎಗ್ಗಿಲ್ಲದೆ ದೌರ್ಜನ್ಯಾತ್ಮಕ ಶಕ್ತಿಗಳು ಮುನ್ನುಗ್ಗುತ್ತಿವೆ ಎಂಬುದನ್ನು. ಅಂದಹಾಗೆ ಇಂತಹದ್ದನ್ನು ಯಶಸ್ವಿಯಾಗಲು ಬಿಟ್ಟರೆ? ಮುಂದೆ ಇಂತಹದ್ದೇ ಮಾದರಿಯ ಸಂಘಟನೆಗಳು ಎಸ್ಸಿ/ಎಸ್ಟಿಯವರ ಪ್ರತಿಯೊಂದು ಹಕ್ಕನ್ನು ವಿರೋಧಿಸಬಹುದು, ದೌರ್ಜನ್ಯದ ಶಿಲಾಯುಗಕ್ಕೆ ಮತ್ತೆ ಭಾರತವನ್ನು ಒಯ್ಯಬಹುದು.

ಈ ನಿಟ್ಟಿನಲ್ಲಿ ‘ಅಹಿಂಸಾ’ ಹೆಸರಿನ ಈ ಹೋರಾಟ ಅಕ್ಷರಶಃ ನೌಕರಶಾಹಿಯನ್ನು ಜಾತಿ ಆಧಾರದಲ್ಲಿ ವಿಭಜಿಸುವ ಅಪಾಯಕಾರಿ ನಡೆಯಾಗಿದೆ. ಭಡ್ತಿ ಮೀಸಲಾತಿ ಬೇಕಿದ್ದರೆ ಅದನ್ನು ಕಾನೂನಾತ್ಮಕವಾಗಿ ಪ್ರಶ್ನಿಸುವ ಕೇಳುವ ಹಕ್ಕು ಎಲ್ಲರಿಗೂ ಇರುತ್ತದೆ. ಆದರೆ ಇಡೀ ನೌಕರಶಾಹಿಯನ್ನು ಎಸ್ಸಿ/ಎಸ್ಟಿಯವರು ಒಂದೆಡೆ, ಇತರರು ಒಂದೆಡೆ ಎಂಬಂತೆ ಬಿಂಬಿಸಿ ಆ ಮಾದರಿಯಲ್ಲಿ ಹೋರಾಟ ರೂಪಿಸಿ ಸಂಘಟನೆಯನ್ನು ಅದೇ ಮಾದರಿಯಲ್ಲಿ ಮುಂದುವರಿಸಿದರೆ ಎಸ್ಸಿ/ಎಸ್ಟಿಯವರು ಎಲ್ಲಿ ಓಡುವುದು? ಈ ಕಾರಣಕ್ಕಾಗಿ ಇಂತಹ ಅಪಾಯಕಾರಿ ನಡೆಯಲ್ಲಿ, ಹೋರಾಟದಲ್ಲಿ ಭಾಗವಹಿಸಬೇಕೆ ಮತ್ತು ಅದು ಕಾನೂನುಬದ್ಧವೇ ಎಂದು ಪ್ರಜ್ಞಾವಂತ ನೌಕರ ಸಮೂಹ ಚಿಂತಿಸಬೇಕು. ಸರಕಾರ ಕೂಡ ನೌಕರರ ಇಂತಹ ಅಪಾಯಕಾರಿ ನಡೆಯನ್ನು ತಡೆಯಬೇಕು. ಒಗ್ಗಟ್ಟಿನ ನೆಲೆಯಲ್ಲಿ ನೌಕರಶಾಹಿಯನ್ನು ಸಂವಿಧಾನ ಮಾರ್ಗದಲ್ಲಿ ಮುನ್ನಡೆಸುವ ದಿಸೆಯಲ್ಲಿ ಕ್ರಮಕೈಗೊಳ್ಳಬೇಕು. ‘ಅಹಿಂಸಾ’ ವೇದಿಕೆಯಿಂದ ಬಹಿರಂಗ ಅಸ್ಪಶ್ಯತಾಚರಣೆ ನಡೆದು ಇಡೀ ಎಸ್ಸಿ/ಎಸ್ಟಿ ನೌಕರ ಸಮುದಾಯ ಮುಜುಗರ ಅನುಭವಿಸುವಂತಾಗುವುದನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಗಂಭೀರ ಕ್ರಮಕೈಗೊಳ್ಳಬೇಕು ಎಂಬುದೇ ಸದ್ಯದ ಕಳಕಳಿ. 

Writer - ರಘೋತ್ತಮ ಹೊ.ಬ.

contributor

Editor - ರಘೋತ್ತಮ ಹೊ.ಬ.

contributor

Similar News