ನಾಯಕನಾಗಿ ಚೊಚ್ಚಲ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ರೋಹಿತ್

Update: 2017-12-25 18:14 GMT

ಹೊಸದಿಲ್ಲಿ, ಡಿ.25: ಭಾರತ ಕ್ರಿಕೆಟ್ ತಂಡದ ಹಂಗಾಮಿ ನಾಯಕ ರೋಹಿತ್ ಶರ್ಮ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿ ಗಮನ ಸೆಳೆದಿದ್ದಾರೆ. ನಾಯಕನಾಗಿ ಚೊಚ್ಚಲ ಸರಣಿಯಲ್ಲಿ ಯಶಸ್ಸಿನ ಸವಿ ಉಂಡಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಲೆಗ್-ಸ್ಪಿನ್ನರ್ ಯಜುವೇಂದ್ರ ಚಹಾಲ್ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

 ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ್ದ ರೋಹಿತ್ ವೃತ್ತಿಜೀವನದಲ್ಲಿ ಮೂರನೇ ದ್ವಿಶತಕ ಸಿಡಿಸಿದ್ದರು. ಟ್ವೆಂಟಿ-20 ಸರಣಿಯಲ್ಲೂ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ರೋಹಿತ್ ಕೇವಲ 35 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಟ್ವೆಂಟಿ-20ಯಲ್ಲಿ ವಿಶ್ವದಾಖಲೆಯ ಶತಕ ಸಿಡಿಸಿದ್ದ ಡೇವಿಡ್ ಮಿಲ್ಲರ್ (35 ಎಸೆತ)ಅವರ ದಾಖಲೆ ಸರಿಗಟ್ಟಿದ್ದರು.

ಮುಂಬೈ ಬ್ಯಾಟ್ಸ್‌ಮನ್ ರೋಹಿತ್ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 54ರ ಸರಾಸರಿಯಲ್ಲಿ ಒಟ್ಟು 162 ರನ್ ಗಳಿಸಿದ್ದಾರೆ.

ಏಕದಿನ ಸರಣಿಯನ್ನು ಆಡದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಟ್ವೆಂಟಿ-20 ಸರಣಿಯಲ್ಲಿ 51.33ರ ಸರಾಸರಿಯಲ್ಲಿ ಒಟ್ಟು 154 ರನ್ ಗಳಿಸಿದ್ದಾರೆ.

ಹರ್ಯಾಣದ ಸ್ಪಿನ್ನರ್ ಚಹಾಲ್ ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ಒಟ್ಟು 14 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಟ್ವೆಂಟಿ-20 ಕ್ರಿಕೆಟ್‌ನಲ್ಲಿ 8 ವಿಕೆಟ್‌ಗಳನ್ನು ಪಡೆದಿದ್ದರು.

ಹಾರ್ದಿಕ್ ಪಾಂಡ್ಯ ಏಕದಿನ ಕ್ರಿಕೆಟ್‌ನಲ್ಲಿ ಬೌಲಿಂಗ್‌ನಲ್ಲಿ ಮಿಂಚಲಿಲ್ಲ. ಆದರೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವಿಕೆಟ್ ಗಳಿಕೆಯಲ್ಲಿ ಕುಲ್‌ದೀಪ್ ಯಾದವ್(6 ವಿಕೆಟ್) ಅವರೊಂದಿಗೆ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ದೀರ್ಘಸಮಯದ ಬಳಿಕ ತಂಡಕ್ಕೆ ವಾಪಸಾಗಿರುವ ಗುಜರಾತ್ ಬೌಲರ್ ಜೈದೇವ್ ಉನದ್ಕಟ್ ಪ್ರತಿ ಓವರ್‌ಗೆ 4.88 ರನ್ ಸರಾಸರಿಯಲ್ಲಿ 4 ವಿಕೆಟ್‌ಗಳನ್ನು ಕಬಳಿಸಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.

ಮತ್ತೊಂದೆಡೆ, ಶ್ರೀಲಂಕಾ ತಂಡ ಧರ್ಮಶಾಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆದರೆ, ಆ ಬಳಿಕ ನಡೆದ ಪಂದ್ಯಗಳಲ್ಲಿ ಹೋರಾಟವನ್ನೇ ನೀಡದೇ ಸುಲಭವಾಗಿ ಶರಣಾಯಿತು.

ಆ್ಯಂಜೆಲೊ ಮ್ಯಾಥ್ಯೂಸ್ ಅಜೇಯ 111 ರನ್ ಸಹಿತ ಒಟ್ಟು 153 ರನ್ ಗಳಿಸಿದರು. ನಾಯಕ ತಿಸಾರ ಪೆರೇರ ಎರಡೂ ಸರಣಿಯಲ್ಲಿ ಒಟ್ಟು 8 ವಿಕೆಟ್‌ಗಳನ್ನು ಕಬಳಿಸಿದರು. ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News