ಏನೂ ತೋರದಿದ್ದಷ್ಟು ಪಾರದರ್ಶಕ!

Update: 2018-01-26 19:07 GMT

ಇನ್ನು ಹದಿನಾಲ್ಕು ತಿಂಗಳುಗಳೊಳಗೆ ಕೇಂದ್ರ ಸರಕಾರ ತನ್ನ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಲಿದೆ.

 ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಕೇಂದ್ರ ಸರಕಾರದ ಆಶ್ವಾಸನೆ ಈ ನಾಲ್ಕು ವರ್ಷಗಳ ಅವಧಿಯಲ್ಲಿ ಎಷ್ಟು ಹೆಜ್ಜೆ ಯಾವ ದಿಕ್ಕಿನಲ್ಲಿ ಇಟ್ಟಿದೆ ಎಂಬುದನ್ನು ವಿಶ್ಲೇಷಿಸುವ ಪ್ರಯತ್ನ ಇದು.

 ಆದಾಯ ತೆರಿಗೆ ಇಲಾಖೆ, ಸಿಬಿಐ, ಎನ್ಫೋರ್ಸ್‌ಮೆಂಟ್ ಡೈರೆಕ್ಟೋರೇಟ್ ಎಂಬ ಮೂರು ಶಕ್ತಿಶಾಲಿ ಅಸ್ತ್ರಗಳನ್ನು ಹೊಂದಿರುವ ಸರಕಾರಕ್ಕೆ ಹೋಲಿಸಿದರೆ, ಪಕ್ಷದ ಲೂಸ್ ಕ್ಯಾನನ್ ಎಂದೇ ಗುರುತಿಸಲಾಗುವ ಡಾ. ಸುಬ್ರಮಣಿಯನ್‌ಸ್ವಾಮಿ ಏಕಾಂಗಿಯಾಗಿ ಒಂದಿಡೀ ಸರಕಾರಕ್ಕಿಂತ ಮುಂದಿದ್ದಾರೆ! ಆದರೆ ಅವರ ಕೃಸೇಡ್ ಇರುವುದು ಒಂದು ಕುಟುಂಬದ ವಿರುದ್ಧ. ಅದು ಕಾಂಗ್ರೆಸ್‌ನ ಮೊದಲ ಕುಟುಂಬ ಆಗಿರುವುದು ಕೂಡ ಕಾಕತಾಳೀಯವೇನಲ್ಲ.

ಇನ್ನೊಂದೆಡೆ 2014ರ ಚುನಾವಣೆಯಲ್ಲಿ ಭ್ರಷ್ಟಾಚಾರ ಆದ್ಯತೆಯ ಸಂಗತಿ ಅಗುವುದಕ್ಕೆ ತಳಪಾಯ ಹಾಕಿಕೊಟ್ಟು ನಿದ್ದೆಗೆ ಶರಣಾಗಿದ್ದ ರಾಲೇಗಾಂವ್‌ಸಿದ್ದಿಯ ಅಭಿನವ ಮಹಾತ್ಮ ಅಣ್ಣಾ ಹಝಾರೆ ಹೊಸ ವರ್ಷದ ಲೆಕ್ಕಕ್ಕೆ ಹಠಾತ್ತಾಗಿ ಎದ್ದು ಕುಳಿತು, ಮಾರ್ಚ್ ಅಂತ್ಯಕ್ಕೆ ಜನಲೋಕಪಾಲದ ಹೆಸರಲ್ಲಿ ಮತ್ತೆ ಧರಣಿ ಕುಳಿತುಕೊಳ್ಳುವುದಾಗಿ ಘರ್ಜಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಸರಕಾರ ಜನಲೋಕಪಾಲರ ನೇಮಕ ಮಾಡಿಲ್ಲ ಎಂಬುದು ಅವರಿಗೆ ಈಗ ನೆನಪಾಗಿದೆ.

ಜನಲೋಕಪಾಲ ನೇಮಕ ಮಾಡದಿರುವುದಕ್ಕೆ ಕೇಂದ್ರ ಸರಕಾರದ ಬಳಿ ಇರುವುದು ಕೇವಲ ಕುಂಟು ನೆಪ. ನೇಮಕದ ಸಮಿತಿಯಲ್ಲಿ ಪ್ರಧಾನಿ, ಸ್ವೀಕರ್, ಪ್ರತಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಅಥವಾ ಅವರಿಂದ ನೇಮಕಗೊಂಡ ನ್ಯಾಯಮೂರ್ತಿ ಸದಸ್ಯರಾಗಿರುತ್ತಾರೆ.

ಈಗ ನೇಮಕ ಮಾಡದಿರುವುದಕ್ಕೆ ಸರಕಾರ ಕೊಟ್ಟಿರುವ ಕಾರಣ, ಪ್ರಮುಖ ಪ್ರತ್ರಿಪಕ್ಷ ಕಾಂಗ್ರೆಸ್ ಬಳಿ ಅಧಿಕೃತವಾದ ಪ್ರತಿಪಕ್ಷ ನಾಯಕ ಹುದ್ದೆಗೆ ಬೇಕಾದಷ್ಟು ಸಂಖ್ಯೆ ಇಲ್ಲ. ಹಾಗಾಗಿ ಪ್ರತಿಪಕ್ಷ ನಾಯಕ ಹುದ್ದೆ ತುಂಬಿಲ್ಲ. ಹಾಗಾಗಿ ಜನಲೋಕಪಾಲ ನೇಮಕ ಮಾಡಿಲ್ಲ! ಬರೀಯ ಒಂದು ಪುಟ್ಟ ಕಾನೂನು ತಿದ್ದುಪಡಿ ಮೂಲಕ ಸರಿಪಡಿಸಬಹುದಾದ ಸಮಸ್ಯೆ ಇದು. ಆದರೆ ನಿದ್ದೆಯಲ್ಲಿದ್ದವರನ್ನು ಎಚ್ಚರಿಸಬಹುದೇ ಹೊರತು ನಿದ್ದೆಯ ನಾಟಕವಾಡುತ್ತಿರುವವರನ್ನು ಎಚ್ಚರಿಸಲಾಗದು.

ಹಾಲಿ ಕೇಂದ್ರ ಸರಕಾರ ಸಾರ್ವಜನಿಕ ರಂಗದಲ್ಲಿ ಭ್ರಷ್ಟಾಚಾರದ ತಡೆಯ ಹೆಸರಿನಲ್ಲಿ ಮುಸುಕಿನ ಗುದ್ದುಗಳಲ್ಲಿ ನಿರತವಾಗಿದೆಯೇ ಹೊರತು ನೇರ, ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಸಿಬಿಐ, ಇಡಿ, ಐಟಿಯಂತಹ ಅಸ್ತ್ರಗಳು ವಿರೋಧಿಗಳನ್ನು ಹಣಿಯುವುದಕ್ಕೆ ಹೆಚ್ಚು ಬಳಕೆ ಆಗುತ್ತಿವೆಯೇ ಹೊರತು ಭ್ರಷ್ಟಾಚಾರ ನಿವಾರಣೆಗೆ ಅಲ್ಲ. ಉನ್ನತ ಮಟ್ಟದಲ್ಲಿ ಭ್ರಷ್ಟಾಚಾರ ಇನ್ನೂ ಉಳಿದಿದೆ ಎಂಬುದಕ್ಕೆ ನೂರಾರು ಉದಾಹರಣೆಗಳು ಪ್ರತಿದಿನ ಸಿಗುತ್ತಿವೆ, ಆದರೆ ಆಳುವ ಧಣಿಗಳ ಮಡಿಲು ಸೇರಿರುವ ಬಹುಸಂಖ್ಯಾತ ಮಾಧ್ಯಮಗಳು ಅನ್ನದ ಋಣಕ್ಕಾಗಿ ಅವನ್ನೆಲ್ಲ ಮೊದಲಿನಂತೆ ವರದಿ ಮಾಡುತ್ತಿಲ್ಲ.

ಮಧ್ಯಪ್ರದೇಶದ ವ್ಯಾಪಂ ಹಗರಣ ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಾಗಿದೆ. ಸ್ವತಃ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಅಮಿತ್ ಬಾಯಿ ಶಾ ಅವರ ‘ಟೆಂಪಲ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್’ ಒಂದೇ ವರ್ಷದಲ್ಲಿ 16,000 ಪಟ್ಟು ಬೆಳೆದು ನಿಂತ ಬಗ್ಗೆ (ವಾರ್ಷಿಕ ಆದಾಯ ಒಂದೇ ವರ್ಷದಲ್ಲಿ 56,000ದಿಂದ 80 ಕೋಟಿ ರೂ.ಗೆ ಏರಿದ್ದು!) ಮಾಧ್ಯಮಗಳು ಬಾಯಿ ಬಿಡುತ್ತಿಲ್ಲ.

ಇಂತಹ ನೂರಾರು ಪ್ರಕರಣಗಳು ಅಲ್ಲಲ್ಲಿ ತಲೆ ಎತ್ತುತ್ತಿದ್ದರೂ ಅವನ್ನು ಹತ್ತಿಕ್ಕಲಾಗುತ್ತಿದೆ, ಸಾರ್ವಜನಿಕರ ಗಮನಕ್ಕೆ ಬರದಂತೆ ತಡೆಯಲಾಗುತ್ತಿದೆ. ಮಾತನಾಡುತ್ತಿರುವ ರಾಜಕಾರಣಿಗಳ, ಮಾಧ್ಯಮಗಳ, ವಿಸಿಲ್ ಬ್ಲೋವರ್ಸ್ ಗಳ ಬಾಯಿ ಮುಚ್ಚಿಸಲು ಸರಕಾರಿ ಯಂತ್ರ ಬಳಕೆ ಆಗುತ್ತಿರುವ ಆಪಾದನೆಗಳು ಕೇಳಿಬರುತ್ತಿವೆ.

ಹಾಲಿ ಸ್ಥಿತಿ ಹೀಗಿರುವಾಗ ಈಗಿನ ಸರಕಾರ ಅಧಿಕಾರಕ್ಕೆ ಬರಲು ಕಾರಣ ವಾದ, ಕಾಂಗ್ರೆಸ್‌ನ ಹೆಸರಲ್ಲಿರುವ ಹಳೆಯ ಹಗರಣಗಳ ಕಥೆ ಏನು ಎಂದು ನೋಡಿದರೆ, ಅವು ತಮ್ಮ ಲಾಜಿಕಲ್ ಅಂತ್ಯ ಕಾಣುವ ಬದಲು ಅಗತ್ಯಕ್ಕೆ ತೆಗೆದು ಬೆದರಿಸಲು ಬಳಸುವ ಬೆದರು ಬೊಂಬೆಗಳಾಗಿ ಆಳುವವರ ಮುಷ್ಟಿಯಲ್ಲಿ ಉಳಿದುಕೊಂಡಿವೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಒಂದು ದಶಕದಲ್ಲಿ ಈ ಪ್ರಕರಣಗಳು ಅಲ್ಲಲ್ಲೇ ಅಟಕಾಯಿಸಿಕೊಂಡು ದಿನ ದೂಡುತ್ತಿವೆ.

ಇಂತಹ ಕೆಲವು ಹಳೆಯ ಲೆಕ್ಕಾಚಾರಗಳನ್ನು ಕೇಸುವಾರು ನೋಡೋಣ:

ಬೊರ್ಫೋಸ್ ಹಗರಣ: ಕಾಂಗ್ರೆಸ್‌ಗೆ ಕಳೆದ 32 ವರ್ಷಗಳಿಂದ ಬೆಂಬಿಡದ ಭೂತ ಇದು. ಅದರ ಆಪಾದಿತರಲ್ಲಿ ಹೆಚ್ಚಿನವರು ಈ ಲೋಕದಲ್ಲಿ ಉಳಿದಿಲ್ಲ. ಆದರೂ ಪ್ರಕರಣ ಇನ್ನೂ ಇತ್ಯರ್ಥ ಆಗಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ಸಿಬಿಐ, ಈ ಪ್ರಕರಣದಲ್ಲಿ ಖಾಸಗಿ ಪತ್ತೆದಾರ ಮೈಕಲ್ ಹರ್ಷ್ಮನ್ ಬಹಿರಂಗ ಪಡಿಸಿರುವ ಹೊಸ ವಿಚಾರಗಳ ಸಹಿತ ಎಲ್ಲ ವಿಚಾರಗಳನ್ನು ಮರುಪರಿಶೀಲಿಸುವ ವಿಚಾರವನ್ನು ಪ್ರಕಟಿಸಿದೆ. ಇದು ಬಹುತೇಕ 2019ರ ಚುನಾವಣೆಗೆ ಭೂತವೊಂದರ ತಯಾರಿ.

ನ್ಯಾಷನಲ್ ಹೆರಾಲ್ಡ್: ಕಾಂಗ್ರೆಸ್‌ನ ಪ್ರಥಮ ಕುಟುಂಬದ ಮೇಲೆ 5,500 ಕೋಟಿ ರೂ. ಮೌಲ್ಯದ ಭೂಕಬಳಿಕೆ ಆಪಾದನೆ ಇರುವ ಈ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದ್ದು, ಬಹುತೇಕ ಡಾ. ಸುಬ್ರಮಣಿಯನ್ ಸ್ವಾಮಿ ಅವರ ಆಸಕ್ತಿಯ ಮೇಲೆ ಇಂಚಿಂಚೇ ಮುನ್ನಡೆದಿದೆ. ಇದೊಂದು ಪ್ರಕರಣ ಮಾತ್ರ ಚಲನಶೀಲವಾಗಿದ್ದು, ಕಳೆದ ವಾರಾಂತ್ಯಕ್ಕೆ, ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪ್ರಥಮ ಕುಟುಂಬಕ್ಕೆ 400ಕೋಟಿಗಳಷ್ಟು ದಂಡ ತೆರಿಗೆ ವಿಧಿಸಿದೆ.

ರಾಬರ್ಟ್ ವಾದ್ರಾ: ಕಾಂಗ್ರೆಸ್ ಕುಟುಂಬದ ಅಳಿಯ ರಾಬರ್ಟ್ ವಾದ್ರಾ ಮೇಲಿನ ಭೂಕಬಳಿಕೆ ಹಗರಣದಲ್ಲೂ ನ್ಯಾಯಮೂರ್ತಿ ಧಿಂಗ್ರಾ ಸಮಿತಿಯ ವರದಿ ಹರ್ಯಾಣ ಸರಕಾರಕ್ಕೆ ಬಂದಿದ್ದು, ಪ್ರಕರಣ ಲಾಜಿಕಲ್ ಅಂತ್ಯ ತಲುಪುವ ಬದಲು ಮಾಧ್ಯಮಗಳಿಗೆ ಸೋರಿಕೆ ಆಗಿರುವ ಗುಲ್ಲು ಎದ್ದಿದೆ. ಅಂದ ಹಾಗೆ, ಇದು 2011ರ ಸುಮಾರಿಗೆ ವಾದ್ರಾ ಅವರ ಸ್ಕೈಲೈಟ್ ಹಾಸ್ಪಿಟಾಲಿಟಿ ಮತ್ತು ಡಿಎಲ್‌ಎಫ್‌ಗಳು ಜೊತೆಯಾಗಿ ನಡೆಸಿದ ಸುಮಾರು 250 ಭೂಖರೀದಿಗಳಿಗೆ ಸಂಬಂಧಿಸಿದ ಗದ್ದಲ. 2017 ಜೂನ್‌ನಲ್ಲೇ ಈ ವರದಿ ಸಲ್ಲಿಕೆ ಆಗಿದೆ. ಈ ಪ್ರಕರಣ ರಾಜಕೀಯ ತಡೆಗೋಡೆ ಆಗಿಯೇ ಹೆಚ್ಚು ಚಾಲ್ತಿಯಲ್ಲಿದೆ.

ಚಿದಂಬರ ಕುಟುಂಬ: ಏರ್ಸೆಲ್-ಮಾಕ್ಸಿಸ್, ಐಎನ್‌ಎಕ್ಸ್ ಮೀಡಿಯಾ, 14 ದೇಶಗಳಲ್ಲಿ ಅಕ್ರಮ ಸಂಪತ್ತು ಹೀಗೆ ಹಲವು ಪ್ರಕರಣಗಳಲ್ಲಿ ಪಿ. ಚಿದಂಬರಂ ಮತ್ತವರ ಪುತ್ರ ಕಾರ್ತಿ ಚಿದಂಬರಂ ಹೆಸರು ತಳಕು ಹಾಕಿಕೊಂಡಿದೆ. ಪ್ರಕ್ರರಣದ ತನಿಖೆ ಆಮೆಗತಿಯಲ್ಲಿದ್ದು. ರಾಜಕೀಯ ಅಗತ್ಯಗಳಿರುವಾಗ ಮಾತ್ರ ಸದ್ದು ಮಾಡಿ, ಮತ್ತೆ ತಣ್ಣಗೆ ಕೂತಿರುತ್ತದೆ.

ಅಹ್ಮದ್ ಪಟೇಲ್: ಗುಜರಾತ್ ಚುನಾವಣೆ ಹತ್ತಿರವಿದ್ದಾಗ ಪದೇಪದೇ ಸದ್ದು ಮಾಡುತ್ತಿದ್ದ ಸ್ಟರ್ಲಿಂಗ್ ಬಯೋಟೆಕ್‌ನ 5,000 ಕೋಟಿ ಸಾಲ ವಂಚನೆ-ಲಂಚ ಪ್ರಕರಣದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಅಹ್ಮದ್ ಪಟೇಲ್ ಮತ್ತವರ ಅಳಿಯನ ಹೆಸರು ತಳಕು ಹಾಕಿಕೊಂಡಿದೆ. ಆದರೆ, ಗುಜರಾತ್ ಚುನಾವಣೆ ಮುಗಿಯುತ್ತಲೇ ಈ ಪ್ರಕರಣ ಕೋಲ್ಡ್ ಸ್ಟೋರೇಜಿಗೆ ಹೋಗಿದೆ.

ಎನ್‌ಡಿಟಿವಿ: ಪ್ರಣಯ್ ರಾಯ್ ಅವರ ಎನ್‌ಡಿಟಿವಿ ಮೇಲೆ 5,000 ಕೋಟಿ ರೂ.ಗಳ ಅಕ್ರಮ ಹಣ ಹಸ್ತಾಂತರದ ಆಪಾದನೆ ಇದೆ. ಇದರಲ್ಲಿ ಪಿ. ಚಿದಂಬರಂ ಸೇರಿದಂತೆ ಹಲವು ಹೆಸರುಗಳು ತಳಕು ಹಾಕಿಕೊಂಡಿವೆ. ಈ ಪ್ರಕರಣ ಕೂಡ ಆಮೆಗತಿಯಲ್ಲಿದ್ದು, ರಾಜಕೀಯ ಅಗತ್ಯಗಳಿರುವಾಗ ಕೆಲವು ದಿನ ಸದ್ದು ಮಾಡಿ ಮತ್ತೆ ಕೋಲ್ಡ್ ಸ್ಟೋರೇಜ್ ಸೇರುತ್ತದೆ.

ಅಗಸ್ಟಾ ವೆಸ್ಟ್ ಲ್ಯಾಂಡ್: 2010ರಲ್ಲಿ ನಡೆದ 12 AW101 ಹೆಲಿಕಾಪ್ಟರ್ ಖರೀದಿಯಲ್ಲಿ ಬೊಕ್ಕಸಕ್ಕೆ 2,666 ಕೋಟಿ ರೂಪಾಯಿ ನಷ್ಟ ಆಗಿದೆ ಎಂಬ ಆಪಾದನೆಯ ಹಿನ್ನೆಲೆಯಲ್ಲಿ ನಿವೃತ್ತ ಏರ್ ಚೀಫ್ ಮಾರ್ಷಲ್ ಎಸ್‌ಪಿ ತ್ಯಾಗಿ ಅವರ ಮೇಲೆ ಸಿಬಿಐ ಮೊನ್ನೆ ಸೆಪ್ಟಂಬರ್‌ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ.

ಕಾಮನ್ ವೆಲ್ತ್ ಗೇಮ್ಸ್: 2010ರ ಕಾಮನ್ ವೆಲ್ತ್ ಗೇಮ್ಸ್ ಗುತ್ತಿಗೆ ಹಗರಣದಲ್ಲಿ ಸುರೇಶ್ ಕಲ್ಮಾಡಿ ವಿರುದ್ಧ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಪಾರ್ಲಿಮೆಂಟರಿ ಸಮಿತಿ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಕ್ಲೀನ್ ಚಿಟ್ ಕೊಟ್ಟಿದೆ. ಈ ಪ್ರಕರಣ ಕೂಡ ಕ್ಷಿಪ್ರ ಅಂತ್ಯ ಕಾಣುವ ಬದಲು ಆಯಕಟ್ಟಿನ ಜಾಗಗಳಲ್ಲಿ ತಲೆ ಎತ್ತಲು ಕೋಲ್ಡ್ ಸ್ಟೋರೇಜಿನಲ್ಲಿ ಕುಳಿತಿದೆ.

ಆದರ್ಶ: ಅಪಾರ್ಟ್ ಮೆಂಟ್‌ಗಳ ಉಡುಗೊರೆ ಪಡೆದು ಕಾನೂನು ಉಲ್ಲಂಘನೆಗೆ ಅವಕಾಶ ಮಾಡಿಕೊಟ್ಟ ಆಪಾದನೆ ಎದುರಿಸಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾನ್ 2010ರಲ್ಲಿ ರಾಜೀನಾಮೆ ಕೊಡಬೇಕಾಗಿ ಬಂದಿತ್ತು. ಈ ಪ್ರಕರಣದಲ್ಲಿ ಮೋದಿ ಸರಕಾರ ಬಂದ ಬಳಿಕ ರಾಜ್ಯಪಾಲರು ಅಂದಿನ ಮುಖ್ಯಮಂತ್ರಿ ವಿರುದ್ಧ ತನಿಖೆ ನಡೆಸುವುದಕ್ಕೆ ಸಿಬಿಐಗೆ ಒಪ್ಪಿಗೆ ನೀಡಿದ್ದರು, ಆದರೆ ಮೊನ್ನೆ ಡಿಸೆಂಬರ್ ಹೊತ್ತಿಗೆ, ಅದನ್ನು ಮಹಾರಾಷ್ಟ್ರ ಹೈಕೋರ್ಟ್ ರದ್ದುಮಾಡಿದೆ. ಪ್ರಕರಣ ಇನ್ನೂ ತನಿಖೆಯ ಹಂತದಲ್ಲೇ ಬಾಕಿ ಇದೆ.

2ಎ: ಮೊನ್ನೆ ಈ ಪ್ರಕರಣದಲ್ಲಿ ಎ. ರಾಜಾ, ಕನಿಮೊಳಿ ಮೊದಲಾದವರೆಲ್ಲ ನಿರಪರಾಧಿಗಳೆಂದು ನ್ಯಾಯಾಲಯ ಹೇಳಿದೆ. ತಮಿಳುನಾಡಿನ ರಾಜಕೀಯ ಸನ್ನಿವೇಶವನ್ನು ಗಮನದಲ್ಲಿರಿಸಿಕೊಂಡು ಈ ಪ್ರಕರಣಕ್ಕೆ ಅಂತ್ಯ ಹಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗ ಸಿಬಿಐ, ಈ ಪ್ರಕರಣದಲ್ಲಿ ಅಪೀಲು ಹೋಗಲು ಕಾನೂನು ಇಲಾಖೆಯ ಅನುಮತಿ ಪಡೆದುಕೊಂಡಿದ್ದು, ತಮಿಳುನಾಡಿನ ರಾಜಕೀಯ ನಾಯಕರ ಮೇಲೆ ತನ್ನದೊಂದು ಹಿಡಿತ ಉಳಿಸಿಕೊಳ್ಳಲು ಕೇಂದ್ರ ಸರಕಾರಕ್ಕೆ ಅವಕಾಶ ಸಿಕ್ಕಿದೆ.

ಕಲ್ಲಿದ್ದಲು: ಲಾಜಿಕಲ್ ಅಂತ್ಯ ತಲುಪಿರುವ ಒಂದು ಪ್ರಕರಣ ಇದು. ಜಾರ್ಖಂಡ್ ರಾಜ್ಯದ ರಾಜಹರಾ ಉತ್ತರ ಕಲ್ಲಿದ್ದಲು ಗಣಿಯನ್ನು ಕೋಲ್ಕತಾ ಮೂಲದ ಖಾಸಗಿ ಕಂಪೆನಿಯೊಂದಕ್ಕೆ ಭ್ರಷ್ಟ ಹಾದಿಯಲ್ಲಿ ನೀಡಿದ್ದಕ್ಕಾಗಿ ಜಾರ್ಖಂಡ್ ಮುಖ್ಯಮಂತ್ರಿ ಮಧು ಕೋಡಾ, ಅಂದಿನ ಕೇಂದ್ರ ಕಲ್ಲಿದ್ದಲು ಕಾರ್ಯದರ್ಶಿ ಎಚ್‌ಸಿ ಗುಪ್ತಾ ಸೇರಿದಂತೆ ಕೆಲವು ಹಿರಿಯ ಅಧಿಕಾರಿಗಳು ಜೈಲುಪಾಲಾಗಿದ್ದಾರೆ. ಅಂದಿನ ಕಲ್ಲಿದ್ದಲು ಸಚಿವರಾಗಿದ್ದ ಪ್ರಧಾನಿ ಮನಮೋಹನ್ ಸಿಂಗ್ ನಿರ್ದೋಷಿ ಎಂದು ನ್ಯಾಯಾಲಯ ಹೇಳಿದೆ.

ಕೃಪೆ: avadhimag.com

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News