ಸೇನಾತ್ಮಕ ರಾಷ್ಟ್ರವಾದವನ್ನು ವಿರೋಧಿಸಬೇಕು

Update: 2018-01-29 18:39 GMT

ಜಿಯೋನಿಸಂ (ಯಹೂದಿಗಳ ಪ್ರತ್ಯೇಕ ರಾಷ್ಟ್ರವಾದ) ಎಂಬುದು ಯಹೂದಿ ಧರ್ಮವನ್ನಾಗಲೀ ಹಿಂದುತ್ವ ಎಂಬುದು ಹಿಂದೂಧರ್ಮವನ್ನಾಗಲೀ ಪ್ರತಿನಿಧಿಸುವುದಿಲ್ಲ ಎಂಬುದನ್ನು ನಾವು ಮರೆಯಬಾರದು.


ಎರಡನೇ ಪ್ರಪಂಚ ಯುದ್ಧದ ನಂತರ ಅಮೆರಿಕ ಮತ್ತು ರಶ್ಯಾಗಳ ನಡುವೆ ದೀರ್ಘಕಾಲ ಶೀತಲ ಸಮರ ನಡೆಯಿತು. ಆದರೆ 1991ರಲ್ಲಿ ಸೋವಿಯತ್ ಒಕ್ಕೂಟದ ಪತನದೊಂದಿಗೆ ಈ ಯುದ್ಧದಲ್ಲಿ ಅಮೆರಿಕ ವಿಜಯವನ್ನು ಗಳಿಸಿತು ಮತ್ತು ಅದು ಹಲವಾರು ಅಂತಾರಾಷ್ಟ್ರೀಯ ಪರಿಣಾಮಗಳಿಗೆ ದಾರಿ ಮಾಡಿತು. 1992ರಲ್ಲಿ ಭಾರತವು ಇಸ್ರೇಲ್‌ನೊಂದಿಗೆ ಕಡಿತಗೊಡಿಸಿಕೊಂಡಿದ್ದ ರಾಜತಾಂತ್ರಿಕ ಸಂಬಂಧವು ಮರುಸ್ಥಾಪನೆಗೊಂಡಿತು.

ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧವು ಸ್ಥಾಪನೆಗೊಂಡ 25 ವರ್ಷಗಳ ನಂತರ ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಅವರು ಇತ್ತೀಚೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದರು. ಕಳೆದ ವರ್ಷ ಜುಲೈ 4-6ರವರೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್‌ಗೆ ಭೇಟಿ ನೀಡಿದ್ದರು. ಬ್ರಿಟಿಷ್ ವಸಾಹತುಶಾಹಿಗಳು 1917ರಲ್ಲಿ ಫೆಲೆಸ್ತೀನ್‌ನಲ್ಲಿ ಪ್ರತ್ಯೇಕ ‘ಯಹೂದಿ ರಾಷ್ಟ್ರ’ ನಿರ್ಮಾಣ ಮಾಡುವುದಾಗಿ ಜಿಯೋನಿಸ್ಟ್‌ಗಳಿಗೆ (ಯಹೂದಿ ಪ್ರತ್ಯೇಕ ರಾಷ್ಟ್ರವಾದಿಗಳು)ಭರವಸೆ ನೀಡುತ್ತಾ ಮಾಡಿದ ಬೆಲ್ಫೋರ್ ಘೋಷಣೆಗೆ 2017ಕ್ಕೆ 100 ವರ್ಷ ತುಂಬಿದ ನೆನಪು ಸಹ ಮೋದಿಯವರ ಇಸ್ರೇಲ್ ಭೇಟಿಗೆ ಹಿನ್ನೆಲೆಯನ್ನು ಒದಗಿಸಿತ್ತು.

1948ರ ಮೇ 14ರಂದು ಜಿಯೋನಿಸ್ಟರ ನಾಯಕತ್ವದಲ್ಲಿ ಮಾಡಲಾದ ಪ್ರತ್ಯೇಕ ಇಸ್ರೇಲ್ ಘೋಷಣೆಗೆ ಈಗ 70 ವರ್ಷವಾಗುತ್ತದೆ. ಆಗ ಜಗತ್ತಿನಲ್ಲಿ ವಸಾಹತುಶಾಹಿ ಆಳ್ವಿಕೆಯ ಸಾಮೂಹಿಕ ಕಹಿ ನೆನಪು ಎಲ್ಲರಲ್ಲೂ ಬಲವಾಗಿತ್ತು. ಆ ನೆಹರೂ ಯುಗದಲ್ಲಿ ಇಸ್ರೇಲ್‌ನ ನಿರ್ಮಾಣಕ್ಕಾಗಿ ಸ್ಥಳೀಯ ಫೆಲೆಸ್ತೀನಿಯನ್ನರನ್ನು ಬರ್ಬರ ದಮನದ ಮೂಲಕ ತಾಯ್ನೆಲದಿಂದ ಎತ್ತಂಗಡಿ ಮಾಡಿದ ಕ್ರಮವನ್ನು ಭಾರತವು ಅಧಿಕೃತವಾಗಿ ಗಮನಕ್ಕೆ ತೆಗೆದುಕೊಂಡಿತ್ತು. ಜಿಯೋನಿಸಂ (ಪ್ರತ್ಯೇಕ ಯಹೂದಿ ರಾಷ್ಟ್ರವಾದ) ಎಂದರೇನೆಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ- ಜಿಯೋನಿಸಂ ಎಂಬುದು ಒಂದು ವಸಾಹತುಶಾಹಿ ಮತ್ತು ಜನಾಂಗೀಯವಾದಿ ಸಿದ್ಧಾಂತವಾಗಿದ್ದು ಸ್ಥಳೀಯ ಅರಬ್ ಜನರನ್ನು ಬಲಾತ್ಕಾರದಿಂದ ಎತ್ತಂಗಡಿ ಮಾಡುವುದನ್ನು ಹಾಗೂ ಅರಬ್ ಜನರ ಮಾನವ ಹಕ್ಕುಗಳ ಹರಣವನ್ನು ಸಮರ್ಥಿಸಿಕೊಳ್ಳುತ್ತದೆ. ಹೀಗಾಗಿ ಜಿಯೋನಿಸಂ ಅನ್ನು ವಿರೋಧಿಸುವುದೆಂದರೆ ಯಹೂದಿಗಳನ್ನು ವಿರೋಧಿಸಿದಂತೇನಲ್ಲ; ಅಥವಾ ಯಹೂದಿ ವಿರೋಧ ವಾದವೂ (ಆ್ಯಂಟಿ-ಸೆಮಿಟಿಸಂ) ಅಲ್ಲ.

ತಾನು ಪ್ಯಾಲೆಸ್ತೀನಿಯನ್ನರ ವಿರುದ್ಧ ನಡೆಸುತ್ತಿರುವ ಎಲ್ಲಾ ಕ್ರೂರ ಕಾರ್ಯಾಚರಣೆಗಳನ್ನು ವಿಶ್ವದ ಎಲ್ಲಾ ಯಹೂದಿಗಳ ಹಿತಾಸಕ್ತಿಯಿಂದಲೇ ನಡೆಸುತ್ತಿದ್ದೇನೆ ಎಂದು ಸಮರ್ಥಿಸಿಕೊಳ್ಳುವ ಮೂಲಕ ಇಸ್ರೇಲ್ ವಿಶ್ವದ ಎಲ್ಲಾ ಯಹೂದಿಗಳಿಗೂ ಆತಂಕವನ್ನು ಹುಟ್ಟುಹಾಕಿದೆ. ಜಿಯೋನಿಸ್ಟರ ನೇತೃತ್ವದ ಇಸ್ರೇಲ್ ಫೆಲೆಸ್ತೀನ್ ಅನ್ನು ಬಲಾತ್ಕಾರದಿಂದ ವಶಪಡಿಸಿಕೊಡಿರುವ ದುರಾಕ್ರಮಿಯಾಗಿದೆ. ಇಸ್ರೇಲ್‌ನ ಪ್ರಭುತ್ವ ಫೆಲೆಸ್ತೀನಿಯರನ್ನು ಸಮಾನ ನಾಗರಿಕರೆಂದು ಪರಿಗಣಿಸಲು ನಿರಾಕರಿಸುತ್ತದೆ. ಹೀಗಾಗಿ ಇಸ್ರೇಲ್ ಉಪ ಸಾಮ್ರಾಜ್ಯಶಾಹಿಯ ವಿರುದ್ಧ ಫೆಲೆಸ್ತೀನಿಯರು ನಡೆಸುತ್ತಿರುವ ವಿಮೋಚನಾ ಹೋರಾಟವು ಸಾಮ್ರಾಜ್ಯಶಾಹಿಗಳ ವಿರುದ್ಧ ಮತ್ತು ಅವರೊಡನೆ ಕೈಗೂಡಿಸಿರುವ ಪ್ರತಿಗಾಮಿ ಅರಬ್ ಶಕ್ತಿಗಳ ವಿರುದ್ಧ ನಡೆಯುತ್ತಿರುವ ಹೋರಾಟಗಳ ಭಾಗವೇ ಆಗಿದೆ. ಅಮೆರಿಕದ ಬೆಂಬಲದೊಂದಿಗೆ 1948, 1967 ಮತ್ತು 1973ರಲ್ಲಿ ನಡೆಸಿದ ಯುದ್ಧಗಳ ಮೂಲಕ ಈಗ ಇಸ್ರೇಲ್ ಜೋರ್ಡಾನ್ ನದಿಯ ಪಶ್ಚಿಮ ಭಾಗಕ್ಕಿರುವ ಇಡೀ ಪ್ರದೇಶವನ್ನು ವಶಪಡಿಸಿಕೊಂಡಿದೆ. ಅಷ್ಟು ಮಾತ್ರವಲ್ಲದೆ, ಅದು ಫೆಲೆಸ್ತೀನಿಯರನ್ನು ಅತ್ಯಂತ ಬರ್ಬರವಾಗಿ ನಿಯಂತ್ರಿಸುತ್ತಾ ಅಧೀನರನ್ನಾಗಿಸಿಕೊಂಡಿದೆ. ಫೆಲೆಸ್ತೀನಿಯರು ತಮ್ಮದೇ ಪ್ರದೇಶಗಳಲ್ಲಿ ಓಡಾಡುವುದಕ್ಕೂ ನಿರ್ಬಂಧವನ್ನು ಹೇರಿದೆ.

ವಾಸ್ತವವಾಗಿ ನೆಹರೂ ನಂತರದ ಭಾರತದ ರಾಜಕಾರಣಿಗಳು ಬಾಯಲ್ಲಿ ಏನೇ ಮಾತನಾಡಿದರೂ ಅವರ ಅಸಲಿ ಚಹರೆಯೇನೆಂಬುದು 1991ರ ನಂತರದಲ್ಲಿ ಸ್ಪಷ್ಟವಾಗಿ ಬಯಲಾಗುತ್ತಾ ಹೋಯಿತು. ವಾಸ್ತವವಾಗಿ 1991ರಲ್ಲಿ ವಿಶ್ವಸಂಸ್ಥೆಯು ಜಿಯೋನಿಸಂ ಅನ್ನು ಜನಾಂಗೀಯವಾದಕ್ಕೆ ಸಮೀಕರಿಸಿ ಒಂದು ನಿರ್ಣಯವನ್ನು ಪ್ರಸ್ತಾಪ ಮಾಡಿತ್ತು. 1970ರ ಮಧ್ಯಭಾಗದಲ್ಲಿ ವಿಶ್ವಸಂಸ್ಥೆಯು ಮಾಡಿದ ಇಂಥದ್ದೇ ನಿರ್ಣಾಯವನ್ನು ಭಾರತ ಬೆಂಬಲಿಸಿತ್ತು. ಆದರೆ 1991ರಲ್ಲಿ ಮಾತ್ರ ಆ ನಿರ್ಣಯದ ವಿರುದ್ಧ ತನ್ನ ಮತ ಚಲಾಯಿಸಿತು. ಕಳೆದ 25 ವರ್ಷದಲ್ಲಿ ಭಾರತವು ಇಸ್ರೇಲ್‌ನೊಂದಿಗೆ ಪ್ರಧಾನವಾಗಿ ಸೈನಿಕ ಸಂಬಂಧವನ್ನು ಬೆಳೆಸಿಕೊಂಡಿದೆ.

ಇಸ್ರೇಲ್‌ನಿಂದ ಶಸ್ತ್ರಾಸ್ತ್ರಗಳನ್ನು ಕೊಂಡುಕೊಂಡಿರುವುದು ಮಾತ್ರವಲ್ಲದೆ ಆಂತರಿಕ ಬಂಡಾಯವನ್ನು ಹತ್ತಿಕ್ಕುವ ಮತ್ತು ನಾಗರಿಕರ ಮೇಲೆ ಬೇಹುಗಾರಿಕೆ ನಡೆಸುವಂಥ ಆಂತರಿಕ ಭದ್ರತೆಯ ವಿಷಯದಲ್ಲೂ ಇಸ್ರೇಲ್‌ನ ಜೊತೆ ಸಮಾಲೋಚನೆ ಮತ್ತು ಸಹಕಾರಗಳನ್ನು ಪಡೆದುಕೊಂಡಿದೆ. ಇಸ್ರೇಲ್‌ನ ಶಸ್ತ್ರಾಸ್ತ್ರ ಮಾರುಕಟ್ಟೆಗೆ ಭಾರತವು ಈಗ ಅತಿದೊಡ್ಡ ಮಾರುಕಟ್ಟೆಯಾಗಿದೆ. ‘ಜೇನ್ಸ್ ಟೆರರಿಸಂ ಆ್ಯಂಡ್ ಸೆಕ್ಯುರಿಟಿ ಮಾನಿಟರ್’ ಎಂಬ ಪತ್ರಿಕೆಯ ಹಲವು ಸಂಚಿಕೆಗಳಲ್ಲಿ ವರದಿಯಾಗಿರುವಂತೆ ಭಾರತದ ಸೇನಾಧಿಕಾರಿಗಳು ಮತ್ತು ಗೂಢಚರ್ಯೆ ಸಿಬ್ಬಂದಿ ಪ್ಯಾಲೆಸ್ತೀನಿಯರನ್ನು ಹತ್ತಿಕ್ಕುವಲ್ಲಿ ಇಸ್ರೇಲ್ ಸೇನೆ ಮತ್ತು ಅವರ ಗೂಢಚರ್ಯೆ ಸಿಬ್ಬಂದಿ ಯಾವ ಪದ್ಧತಿಗಳನ್ನು ಬಳಸಿದರೋ ಅದೇ ಪದ್ಧತಿಗಳನ್ನು ಕಾಶ್ಮೀರಿ ಬಂಡಾಯವನ್ನು ಹತ್ತಿಕ್ಕುವಲ್ಲಿ ಬಳಸುವಂತೆ ಭಾರತದ ಭದ್ರತಾ ಸಿಬ್ಬಂದಿ ತರಬೇತಿ ಪಡೆದಿದ್ದಾರೆ.

ನೇತನ್ಯಾಹು ಅವರ ಭೇಟಿಯ ಸಂದರ್ಭದಲ್ಲಿ ಯಾವುದೇ ಹೊಸ ರಕ್ಷಣಾ ಒಪ್ಪಂದ ಅಥವಾ ಯೋಜನೆಗಳು ಘೋಷಿತವಾಗದಿದ್ದರೂ ರಕ್ಷಣಾ ಉತ್ಪಾದನೆಯಲ್ಲಿ ಭಾರತವು ತನ್ನ ‘ಭಾರತದಲ್ಲಿ ಉತ್ಪಾದಿಸಿ’ ಯೋಜನೆಯ ಭಾಗವಾಗಿ ಇಸ್ರೇಲ್‌ನಿಂದ ತಂತ್ರಜ್ಞಾನವನ್ನು ಪಡೆದುಕೊಳ್ಳಲು ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿತು (ಭಾರತ-ಇಸ್ರೇಲ್ ಜಂಟಿ ಹೇಳಿಕೆ, ಜನವರಿ 15, 2018). ನಮ್ಮ ಸ್ವಂತ ರಕ್ಷಣಾ ತಂತ್ರಜ್ಞಾನ ಮತ್ತು ಸಂಶೋಧನಾ ಕೇಂದ್ರಗಳು ಸ್ವದೇಶಿ ಶಸ್ತ್ರಾಸ್ತ್ರಗಳ ಉತ್ಪಾದನೆ ಮಾಡುವ ತನಕ ಕಾಯದ ಸರಕಾರವು ಈಗಾಗಲೇ ಇಸ್ರೇಲ್‌ನಿಂದ ಉನ್ನತೀಕರಿಸಿದ ರಫೇಲ್ ರಕ್ಷಣಾ ವ್ಯವಸ್ಥೆಯನ್ನು ಮತ್ತು ಟ್ಯಾಂಕ್ ಧಾಳಿ ನಿರೋಧಕ ದೂರ ನಿರ್ದೇಶಿತ ಸ್ಪೈಕ್ ಅಸ್ತ್ರಗಳನ್ನು ಕೊಂಡುಕೊಳ್ಳಲು ಒಲವನ್ನು ತೋರಿಸಿರುವುದರಿಂದ ಆ ನಿಟ್ಟಿನಲ್ಲಿ ಒಂದು ಅಂತರ್‌ಇಲಾಖಾ ಮಟ್ಟದ ಒಪ್ಪಂದವಾದರೂ ಆಶ್ಚರ್ಯ ಪಡಬೇಕಿಲ್ಲ.

ಭಾರತದ ಸೇನೆಗಾಗಿ ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಯೋಜಿಸಿರುವ ಮಧ್ಯಮ ದೂರದ ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳ ಉತ್ಪಾದನೆ, ಕಳೆದ ವರ್ಷ ಇಸ್ರೇಲ್ ವಾಯುಪಡೆ ಆಯೋಜಿಸಿದ ವಾಯುದಾಳಿ ಕವಾಯತಿನಲ್ಲಿ ಭಾರತದ ವಾಯುಪಡೆ ಭಾಗವಹಿಸಿದ್ದು, ಮತ್ತೀಗ ಸಮಗ್ರ ಭಯೋತ್ಪಾದನಾ ನಿಗ್ರಹ ಸಹಕಾರದ ಒಪ್ಪಂದಗಳು-ಒಟ್ಟಿನಲ್ಲಿ ಪ್ರಖರ ಹಿಂದೂತ್ವವಾದಿಗಳ ಸರಕಾರದ ನಾಯಕತ್ವದಲ್ಲಿ ಭಾರತ ಮತ್ತು ಇಸ್ರೇಲ್ ದೇಶಗಳ ನಡುವಿನ ಸೈನಿಕ ಮತ್ತು ವ್ಯೆಹಾತ್ಮಕ ಮೈತ್ರಿಯು ಹಿಂದೆಂದೂ ಇಲ್ಲದಷ್ಟು ತೀವ್ರಗತಿಯನ್ನು ಪಡೆದುಕೊಂಡಿದೆ. ಭಾರತದ ಹಿಂದುತ್ವವಾದಿಗಳು ಜಿಯೋನಿಸ್ಟರ ಸೈನಿಕ ರಾಷ್ಟ್ರವಾದವನ್ನು ಬೆರಗಿನಿಂದ ಮೆಚ್ಚಿಕೊಂಡಿದ್ದಾರೆ.

ಆದರೆ ಈಗ ಒಂದು ಸಮಗ್ರ ಭಯೋತ್ಪಾದನಾ ನಿಗ್ರಹ ಸಹಕಾರ ಒಪ್ಪಂದವಾಗಿರುವ ಹಿನ್ನೆಲೆಯಲ್ಲಿ ಜಿಯೋನಿಸ್ಟರು ಹೇಗೆ ಫೆಲೆಸ್ತೀನಿಯರನ್ನು ದಮನ ಮಾಡುತ್ತಿದ್ದಾರೋ ಅದೇ ರೀತಿಯಲ್ಲಿ ಭಾರತವು ಕಾಶ್ಮೀರಿಗಳ ಬಗ್ಗೆ ತನ್ನ ನೀತಿಯನ್ನು ಬದಲಿಸಿಕೊಳ್ಳುತ್ತದೆಯೇ? ಆದರೆ ಹೇಗೆ? ಯಹೂದಿತನವನ್ನು ಜಿಯೋನಿಸಂನಿಂದ ಬೇರ್ಪಡಿಸಿ ನೋಡಬೇಕೋ ಅದೇ ರೀತಿ ಹಿಂದೂಧರ್ಮವನ್ನು ಹಿಂದುತ್ವದಿಂದ ಬೇರ್ಪಡಿಸಿ ನೋಡಬೇಕು. ಹಿಂದೂ ಧರ್ಮವು ಆಧ್ಯಾತ್ಮಿಕ ಮೋಕ್ಷವನ್ನು ಪಡೆದುಕೊಳ್ಳುವ ಉದ್ದೇಶದಿಂದ ಸಮ್ಮಿಳಿತವಾಗಿರುವ ವಿವಿಧ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಗಳಾಗಿದ್ದರೆ ‘ಹಿಂದುತ್ವ’ ಆನ್ನುವುದು ಒಂದು ಫ್ಯಾಶಿಸ್ಟ್ ಸಿದ್ಧಾಂತವಾಗಿದೆ.

ಅದು ನಾಜೀವಾದದ ಭಾರತೀಯ ಮಾದರಿಯಾಗಿದೆ. ಹೇಗೆ ಜಿಯೋನಿಸಂ ಎಂಬುದು ಯಹೂದಿತನಕ್ಕೆ ತದ್ವಿರುದ್ಧವಾದ ಸಂಗತಿಯಾಗಿದೆಯೋ ಹಾಗೆ ಹಿಂದುತ್ವವೂ ಸಹ ಹಿಂದೂಧರ್ಮದ ತದ್ವಿರುದ್ಧವಾದ ಸಂಗತಿಯಾಗಿದೆ. ಹೇಗೆ ಯಹೂದಿಗಳು ಜಿಯೋನಿಸ್ಟರು ತಮ್ಮನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳುವ ಅಗತ್ಯವಿದೆಯೋ ಅದೇ ರೀತಿ ಹಿಂದೂಗಳು ಸಹ ಹಿಂದೂತ್ವವಾದಿಗಳು ತಮ್ಮನ್ನು ಪ್ರತಿನಿಧಿಸುವುದಿಲ್ಲ ಎಂದು ಗಟ್ಟಿಯಾಗಿ ಹೇಳುವ ಅಗತ್ಯವಿದೆ. ಈ ಹೋರಾಟದಲ್ಲಿ ಹಿಂದೂಗಳು, ಯಹೂದಿಗಳು ಮತ್ತು ಮುಸ್ಲಿಮರು ಎಲ್ಲರೂ ಒಂದಾಗಿ ಮಾನವತೆ ಮತ್ತು ಫೆಲೆಸ್ತೀನಿಯರ ಪರವಾಗಿ, ಮಾನವತೆ ಮತ್ತು ಕಾಶ್ಮೀರಿಗಳ ಪರವಾಗಿ ನಿಂತು ಯಹೂದಿಗಳ ಬಗ್ಗೆ, ಮುಸ್ಲಿಮರ ಬಗ್ಗೆ ಮತ್ತು ಫೆಲೆಸ್ತೀನೀಯರ ಬಗ್ಗೆ ಇರುವ ಎಲ್ಲ ಪೂರ್ವಗ್ರಹಗಳನ್ನು ಮತ್ತು ಪ್ರತಿರೋಧಗಳನ್ನು ಕೊನೆಗಾಣಿಸಬೇಕಿದೆ.

ಕೃಪೆ:  Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News