ಇದು ಅದಕ್ಕಿಂತಲೂ ‘ಚತುರ ವಿಂಕು’
ಪ್ರಿಯಾ ವಾರಿಯರ್ ಕಣ್ಣು ಮಿಣ್ಕಿಸಿದ್ದೇ ಅಲ್ಟಿಮೇಟು ಅಂದುಕೊಂಡ್ರಾ .. ಅದಕ್ಕಿಂತ ಕೌಶಲಭರಿತ ವಿಂಕುಗಳು ದಿಲ್ಲಿ ರಾಜಕೀಯದ ಓಣಿಗಳಲ್ಲಿ 2016ರಿಂದೀಚೆಗೆ ನಡೆದಿವೆ. ಪ್ರಜಾತಂತ್ರದ ಮೂಲತಳಕಟ್ಟಾದ ಪಾರದರ್ಶಕತೆಯನ್ನೇ ಕಣ್ಣು ಮಿಟುಕಿಸಿ ಕಳೆದಿರುವ ಕೇಂದ್ರ ಸರಕಾರ ತನ್ನ ಪಕ್ಷವಾದ ಬಿಜೆಪಿಯ ಕತ್ತಿಗೆ ದಿಲ್ಲಿ ಹೈಕೋರ್ಟು ಬಿಗಿದಿದ್ದ ಹಗ್ಗವನ್ನು ಬೆಣ್ಣೆಯಿಂದ ಕೂದಲ ಎಳೆಯನ್ನು ಬೇರ್ಪಡಿಸಿದಷ್ಟೇ ನಾಜೂಕಾಗಿ ಸರಿಸಿಕೊಂಡಿದೆ ಮತ್ತು ಇದಕ್ಕೆ ಕಾಂಗ್ರೆಸ್ ಕೂಡ ಮೂಕ ಸಹಾಯ ನೀಡಿದೆ.
ಇಡಿಯ ಕಥೆ ಆರಂಭವಾಗುವುದು 2014ರಲ್ಲಿ, ದಿಲ್ಲಿ ಹೈಕೋರ್ಟಿನಲ್ಲಿ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿರುವಾಗ 2014 ಮಾರ್ಚ್ 29ರಂದು ದಿಲ್ಲಿ ಹೈಕೋರ್ಟಿನ ವಿಭಾಗಪೀಠವೊಂದು (ಜಸ್ಟೀಸ್ ಪ್ರದೀಪ್ ನಂದ್ರಜೋಗ್ ಮತ್ತು ಜಸ್ಟೀಸ್ ಜಯಂತ ನಾಥ್) ತೀರ್ಪು ನೀಡಿ, ವಿದೇಶಿ ದೇಣಿಗೆಗಳ (ನಿಯಂತ್ರಣ) ಕಾಯ್ದೆ 1976 (FCRA)ನ್ನು ಉಲ್ಲಂಘಿಸಿ ದೇಣಿಗೆ ಸ್ವೀಕರಿಸಿದ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಮತ್ತು ಕೇಂದ್ರ ಗ್ರಹ ಖಾತೆಗೆ ಸೂಚನೆ ನೀಡುತ್ತದೆ.
ಇಂಗ್ಲೆಂಡ್ ಮೂಲದ ಅನಿಲ್ ಅಗರ್ವಾಲ್ ಅವರಿಗೆ ಸೇರಿದ ವೇದಾಂತ ಗುಂಪು ಮತ್ತದರ ಮರಿಕಂಪೆನಿಗಳಾದ ಸೆಸಾ ಹಾಗೂ ಸ್ಟರ್ಲೈಟ್ ಗಳಿಂದ ಈ ಎರಡು ಪಕ್ಷಗಳು ಸ್ವೀಕರಿಸಿದ ದೇಣಿಗೆ ಸ್ಪಷ್ಟವಾಗಿ FCRA ಉಲ್ಲಂಘನೆ ಎಂದು ಹೇಳುತ್ತದೆ. ಚುನಾವಣಾ ಆಯೋಗ ಈ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ.
ಚುನಾವಣೆ ನಡೆದು, ಬಿಜೆಪಿ ಅಧಿಕಾರಕ್ಕೇರಿ, ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾಗುತ್ತಾರೆ. ಅವರು 2016ರ ಡಿಸೆಂಬರ್ 19ರಂದು ಕಾನ್ಪುರದಲ್ಲಿ ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾ ಡುತ್ತಾ, ಕಾಂಗ್ರೆಸ್ಸಿನ ಹಣಕಾಸು ಲೆಕ್ಕಾಚಾರಗಳನ್ನು ‘‘ನ ಖಾತಾ, ನ ವಹೀ; ಜೋ ಕೇಸರೀಜೀ ಕಹೇ ವೋಹೀ ಸಹೀ’’ ಎಂದು ಗೇಲಿ ಮಾಡುತ್ತಾರೆ ಮತ್ತು ತಮ್ಮ ಪಕ್ಷ ಕಾಂಗ್ರೆಸ್‌ನದೇ ಕಾಲದ ಕಾಯ್ದೆಯನ್ನು ಪಾಲಿಸುತ್ತಿದೆ, ಅದ ರಲ್ಲಿ ಒಂದು ಕೊಮಾ ಅಥವಾ ಫುಲ್ಸ್ಟಾಪನ್ನೂ ಬದಲಾಯಿಸಿಲ್ಲ ಆದರೂ ಕಾಂಗ್ರೆಸ್ ನಮ್ಮ ಹೆಸರು ಹಾಳುಮಾಡುತ್ತಿದೆ ಎಂದು ಘೋಷಿಸುತ್ತಾರೆ!
ವಾಸ್ತವದಲ್ಲಿ, ಮೋದಿಯವರು ಅಲ್ಲಿ ಹೇಳಿದ್ದು ಸುಳ್ಳು. ಯಾಕೆಂದರೆ, 2016ಮೇ 5ರಂದು ಸಂಸತ್ತು ಅಂಗೀಕರಿಸಿದ ಹಣಕಾಸು ಮಸೂದೆ 2016 ರಲ್ಲಿ ಮೋದಿ ಸರಕಾರ ಒಂದು ತಂತ್ರಗಾರಿಕೆಯ ತಿದ್ದುಪಡಿ ಮಾಡಿರುತ್ತದೆ. ಅದು ವಿದೇಶಿ ಕಂಪೆನಿಯ ವ್ಯಾಖ್ಯೆಯನ್ನೇ ಬದಲಾಯಿಸುವ ತಿದ್ದುಪಡಿ. ಈ ತಿದ್ದುಪಡಿಯ ಪ್ರಕಾರ ಯಾವ ಕಂಪೆನಿಯ ಶೇ. 50ಕ್ಕಿಂತ ಕಡಿಮೆ ಪ್ರಮಾಣದ ಶೇರುಗಳನ್ನು ವಿದೇಶಿ ಕಂಪೆನಿ ಹೊಂದಿರುತ್ತದೋ ಆ ಕಂಪೆನಿ ವಿದೇಶಿ ಮೂಲದ ಕಂಪೆನಿ ಅಲ್ಲ.
ಇದಲ್ಲದೇ FCRA ತಿದ್ದುಪಡಿ ಕಾಯ್ದೆ 2010 ಜಾರಿಗೆ ಬಂದಂದಿನಿಂದಲೇ ಈ ಹೊಸ ನಿಯಮ ಪೂರ್ವಾನ್ವಯ ಎಂದೂ ತಿದ್ದುಪಡಿಯಲ್ಲಿ ಹೇಳಲಾಗುತ್ತದೆ. ಅಂದರೆ, ರಾಜಕೀಯ ಪಕ್ಷಗಳಿಗೆ ಅವು 2010-16 ನಡುವಿನ ವಿದೇಶಿ ನಿಧಿ ಸ್ವೀಕಾರದ ಲೆಕ್ಕಾಚಾರಗಳು ನ್ಯಾಯಾಲಯದ ಪರಿಗಣನೆಗೆ ಬರುವುದಿಲ್ಲ.
ಈ ತಿದ್ದುಪಡಿಯನ್ನು ಕೇಂದ್ರ ಸರಕಾರ ಅಂಗೀಕರಿಸಿದ ಬೆನ್ನಿಗೇ ಒಂದು ಪವಾಡ ನಡೆಯುತ್ತದೆ. ಅದೇನೆಂದರೆ, ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ, ದಿಲ್ಲಿ ಹೈಕೋರ್ಟಿನ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳನ್ನು 2016 ನವೆಂಬರ್ 29ರಂದು ಏಕಕಾಲಕ್ಕೆ ಹಿಂದೆ ಪಡೆಯುತ್ತವೆ!
ಈ ತಿದ್ದುಪಡಿಯ ಲಾಭ ಏನೆಂದರೆ, ವೇದಾಂತ ಮತ್ತದರ ಮರಿಕಂಪೆನಿಗಳು ಈ ತಿದ್ದುಪಡಿಯ ಪರಿಣಾಮವಾಗಿ ವಿದೇಶಿ ಕಂಪೆನಿಗಳಾಗಿ ಉಳಿಯುವುದಿಲ್ಲ.
ಈ ನಡುವೆ, ಕಾಂಗ್ರೆಸ್-ಬಿಜೆಪಿ ಮತ್ತಿತರ ಪಕ್ಷಗಳ ವಿರುದ್ಧ ಕ್ರಮ ಆರಂಭಿಸದ ಕೇಂದ್ರ ಸರಕಾರಕ್ಕೆ ದಿಲ್ಲಿ ಹೈಕೋರ್ಟು ಪೀಠವು ( ಜಸ್ಟೀಸ್ ಗೀತಾ ಮಿತ್ತಲ್ ಮತ್ತು ಜಸ್ಟೀಸ್ ಹರಿಶಂಕರ್) ಕಳೆದ ಅಕ್ಟೋಬರ್ 9, 2017ರಂದು ಚಾಟಿ ಬೀಸಿ, ಆರು ತಿಂಗಳೊಳಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡುತ್ತದೆ. ಸರಕಾರದ ಪರ ವಕೀಲರು 2018 ಮಾರ್ಚ್ 31ರ ತನಕ ಅವಕಾಶ ಕೇಳುತ್ತಾರೆ. ಅದಕ್ಕೆ ನ್ಯಾಯಾಲಯ ಒಪ್ಪುತ್ತದೆ.
ಈಗ ಮೊನ್ನೆ ಬಜೆಟ್ ಅಧಿವೇಶನದ ವೇಳೆ ಹಣಕಾಸು ಮಸೂದೆ 2018ನ್ನು ಮಂಡಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇನ್ನೂ ಒಂದು ಹೆಜ್ಜೆ ಮುಂದುವರಿದು, ವಿದೇಶಿ ಕಂಪೆನಿಗಳ ಬದಲಾದ ವ್ಯಾಖ್ಯೆ ಕೇವಲ 2010ರಿಂದೀಚೆಗೆ ಅಲ್ಲ, ಬದಲಾಗಿ 1976ರಿಂದ ಈಚೆಗೆ ಪರಿಗಣಿತವಾಗಲಿದೆ ಎಂದು ಹೇಳಿದ್ದಾರೆ.
ಅಂದರೆ, ಕಾಂಗ್ರೆಸಾಗಲೀ, ಬಿಜೆಪಿಯಾಗಲೀ 1976ರಿಂದೀಚೆಗೆ ಸ್ವೀಕರಿಸಿದ ಯಾವುದೇ ವಿದೇಶಿ ಮೂಲದ ಕಂಪೆನಿಯ ಚುನಾವಣಾ ದೇಣಿಗೆ ಅಕ್ರಮ ಆಗುವುದಿಲ್ಲ!
* * *
ರಾಜಕೀಯ ಪಕ್ಷಗಳಿಂದ ಯಾರಿಗೂ ಈಗೀಗ ಪ್ರಾಮಾಣಿಕತೆಯ ನಿರೀಕ್ಷೆ ಇಲ್ಲವಾದರೂ, ತಾನು ಪ್ರಾಮಾಣಿಕ ಎಂದು ಕ್ಲೇಮು ಮಾಡಿಕೊಂಡ ಪಕ್ಷವೊಂದು ಈ ಆಟದಲ್ಲಿ ತೊಡಗಿಕೊಂಡಿರುವುದು ತಮಾಷೆಯಾಗಿದೆ.
ಹಾಲಿ ಕೇಂದ್ರ ಸರಕಾರದ ರಾಜಕೀಯ ದೇಣಿಗೆಗಳ ಆಟ ಇಷ್ಟಕ್ಕೇ ಮುಗಿದಿಲ್ಲ. 2016ರಲ್ಲಿ ನೋಟುರದ್ದತಿಯ ಬಳಿಕ, ರಾಜಕೀಯ ಪಕ್ಷಗಳ ನಗದು ದೇಣಿಗೆ ಮಿತಿಯನ್ನು ಕೇಂದ್ರ ಸರಕಾರ 20 ಸಾವಿರದಿಂದ 2 ಸಾವಿರಕ್ಕೆ ಇಳಿಸಿತ್ತು. ಆಗ 1999 ರೂಪಾಯಿಗಳ ಹಲವು ದೇಣಿಗೆಗಳು ಹರಿದು ಬರತೊಡಗಿ, ಉದ್ದೇಶ ಈಡೇರಲಿಲ್ಲ!
ಈ ಬಾರಿ ಬಜೆಟ್‌ನಲ್ಲಿ ಆ ಮಿತಿಯನ್ನು ತೆಗೆದುಹಾಕಿದ ಜೇಟ್ಲಿಯವರು, ಚುನಾವಣಾ ಬಾಂಡ್‌ಗಳನ್ನು ಜಾರಿಗೆ ತರುವ ಮೂಲಕ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಉದ್ಯಮಿಗಳಿಗೆ ಗೌಪ್ಯತೆಯ ಕವಚ ಒದಗಿಸಿದ್ದಾರೆ.
ಪ್ರಜಾತಂತ್ರದ ತಳಪಾಯ ಆಗಿರುವ ಒಬ್ಬ ಪ್ರಜೆಯ ಮಟ್ಟಿಗೆ ಇವೆಲ್ಲವೂ ಆತನಿಗೆ ವಂಚನೆಯೇ. ಹೀಗೆ ವಂಚನೆ ಮಾಡುವಲ್ಲಿ ಪಕ್ಷಗಳ ನಡುವೆ ಭಿನ್ನಮತ ಇಲ್ಲ ಅವರೆಲ್ಲರೂ ಒಂದೇ.
ಬಡಪಾಯಿಗಳಿಗೆ ಪ್ರಿಯಾ ವಾರಿಯರ್ ಕಣ್ಮಿಣ್ಕಿಸಿದ್ದನ್ನು ನೋಡಿ ಖುಷಿಪಟ್ಟದ್ದಷ್ಟೇ ಲಾಭ!
ಕೃಪೆ: avadhimag.com