ಅಮೆರಿಕದ ಗಣ್ಯರ ನಿವಾಸಗಳಿಗೆ ಬಾಂಬ್ ರವಾನೆ: ಆರೋಪಿಗೆ ಟ್ರಂಪ್ ಸ್ಫೂರ್ತಿ

Update: 2018-10-28 18:06 GMT

ಫ್ಲೋರಿಡ, ಅ.28: ಅಮೆರಿಕದ ಡೆಮಾಕ್ರಾಟಿಕ್ ಪಕ್ಷದ ನಾಯಕರಿಗೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಾಕಾರರಿಗೆ ಸುಧಾರಿತ ಸ್ಫೋಟಕಗಳನ್ನು ರವಾನಿಸಿದ್ದ ಆರೋಪಿ ಸೀಝರ್ ಸಯೊಕ್‌ಗೆ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರೇ ಸ್ಫೂರ್ತಿ ಎಂದು ಆರೋಪಿಯ ಸ್ನೇಹಿತರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ರಾಜಕೀಯದಲ್ಲಿ ಯಾವುದೇ ಆಸಕ್ತಿ ಹೊಂದಿರದ ಸೊಯಾಕ್, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಪದವಿಗೆ ಸ್ಪರ್ಧಿಸಿದ ಸಂದರ್ಭದಲ್ಲಿ ರಾಜಕೀಯದ ಬಗ್ಗೆ ಒಲವು ವ್ಯಕ್ತಪಡಿಸಲು ಆರಂಭಿಸಿದ್ದ ಎಂದು ಆತನ ಗೆಳೆಯರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಟ್ರಂಪ್ ಭಾಷಣಗಳನ್ನು ಕೇಳುತ್ತಿದ್ದ ಸಯೊಕ್ ಅವರ ಅನೇಕ ಸಭೆಗಳಲ್ಲಿ ಭಾಗವಹಿಸಿದ್ದ. ಟ್ರಂಪ್ ಉಮೇದುವಾರಿಕೆ ಆತನಲ್ಲಿ ತನ್ನ ಪರವೂ ಯಾರೋ ಇದ್ದಾರೆ ಎಂಬ ಭಾವ ಮೂಡಿಸಿತ್ತು ಎಂದು ಆರೋಪಿ ಗೆಳೆಯರು ತಿಳಿಸಿರುವುದಾಗಿ ಪತ್ರಿಕಾ ವರದಿಗಳು ತಿಳಿಸಿವೆ.

ಕ್ಷಮೆಯಾಚಿಸಿದ ಟ್ವಿಟರ್

ಹಿಲರಿ ಕ್ಲಿಂಟನ್ ಸೇರಿದಂತೆ ಅನೇಕ ಡೆಮಾಕ್ರಾಟಿಕ್ ನಾಯಕರಿಗೆ ಸ್ಫೋಟಕಗಳನ್ನು ರವಾನಿಸಿದ ಆರೋಪದಲ್ಲಿ ಬಂಧಿತನಾಗಿರುವ ಸೀಝರ್ ಸಯೊಕ್ ಬೆದರಿಕೆಯೊಡ್ಡುವ ಪೋಸ್ಟ್‌ಗಳನ್ನು ಹಾಕುತ್ತಿದ್ದರೂ ಅದನ್ನು ನಿರ್ಲಕ್ಷಿಸಿರುವ ತಪ್ಪಿಗೆ ಸಾಮಾಜಿಕ ಮಾಧ್ಯಮ ಟ್ವಿಟರ್ ರವಿವಾರ ಕ್ಷಮೆ ಕೋರಿದೆ.

ಹೀಗೆ ಯಾಕಾಯಿತು ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಟ್ವಿಟರ್‌ನಲ್ಲಿ ಯಾರಾದರೂ ಅಪಾಯದ ಎಚ್ಚರಿಕೆಯನ್ನು ನೀಡಿದರೆ ಅದನ್ನು ನಿಭಾಯಿಸುವ ನಮ್ಮ ಕಾರ್ಯಶೈಲಿಯನ್ನು ಇನ್ನಷ್ಟು ಉತ್ತಮಗೊಳಿಸುತ್ತೇವೆ ಎಂದು ಟ್ವಿಟರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಕ್ಟೋಬರ್ 11ರಂದು ಮಾಜಿ ಕಾಂಗ್ರೆಶನಲ್ ಕಾರ್ಯದರ್ಶಿ ರೋಶೆಲ್ ರಿಚಿ ಕುರಿತು ಟ್ವೀಟ್ ಮಾಡಿದ್ದ ಆರೋಪಿ, ನಿನ್ನನ್ನು ಒಂದು ಕೈ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ಬಗ್ಗೆ ರಿಶೆಲ್ ಟ್ವಿಟರ್‌ಗೆ ದೂರು ನೀಡಿದ್ದರು. ರಿಶೆಲ್ ಭಾವಚಿತ್ರವನ್ನು ಹಾಕಿದ್ದ ಆರೋಪಿ, ಪ್ರತಿ ಬಾರಿ ನೀನು ಮನೆಯಿಂದ ಹೊರಬರುವಾಗ ನಿಮ್ಮ ಪ್ರೀತಿಪಾತ್ರರನ್ನು ಗಟ್ಟಿಯಾಗಿ ತಬ್ಬು ಎಂದು ಟ್ವೀಟ್ ಮಾಡಿದ್ದ. ಆದರೆ ರಿಶೆಲ್ ನೀಡಿದ ದೂರನ್ನು ನಿರ್ಲಕ್ಷಿಸಿದ್ದ ಟ್ವಿಟರ್, ಈ ಟ್ವೀಟ್‌ಗಳಲ್ಲಿ ಟ್ವಿಟರ್‌ನ ಅವಮಾನಕಾರಿ ವರ್ತನೆಯ ನಿಯಮಗಳನ್ನು ಉಲ್ಲಂಘಿಸಲಾಗಿಲ್ಲ ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News