ರನಿಲ್ ವಿಕ್ರಮಸಿಂಘೆ ವಜಾ ಹಿಂದಿನ ಕಾರಣ ತಿಳಿಸಿದ ಲಂಕಾ ಅಧ್ಯಕ್ಷ

Update: 2018-10-29 16:58 GMT
ಮೈತ್ರಿಪಾಲ ಸಿರಿಸೇನ 

ಕೊಲಂಬೊ, ಅ. 29: "ನನ್ನ ಹತ್ಯೆಯ ಪಿತೂರಿಯಲ್ಲಿ ಸಂಪುಟ ಸಚಿವರೊಬ್ಬರು ಶಾಮೀಲಾಗಿರುವುದು, ಪ್ರಧಾನಿ ರನಿಲ್ ವಿಕ್ರಮಸಿಂಘೆ ಯನ್ನು ನಾನು ವಜಾಗೊಳಿಸಲು ಪ್ರಮುಖ ಕಾರಣವಾಗಿದೆ" ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ರವಿವಾರ ಹೇಳಿದ್ದಾರೆ.

 "ನನ್ನನ್ನು ಮತ್ತು ಮಾಜಿ ರಕ್ಷಣಾ ಕಾರ್ಯದರ್ಶಿಯೊಬ್ಬರನ್ನು ಹತ್ಯೆಗೈಯಲು ರೂಪಿಸಲಾಗಿದೆಯೆನ್ನಲಾದ ಸಂಚಿನಲ್ಲಿ ಓರ್ವ ಸಚಿವ ಶಾಮೀಲಾಗಿದ್ದಾರೆ ಎಂಬುದನ್ನು ವ್ಯಕ್ತಿಯೋರ್ವ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ" ಎಂದು ದೇಶವನ್ನುದ್ದೇಶಿಸಿ ಮಾಡಿದ ಟೆಲಿವಿಶನ್ ಭಾಷಣದಲ್ಲಿ ಸಿರಿಸೇನ ಹೇಳಿದರು.

‘‘ಈ ಪರಿಸ್ಥಿತಿಯಲ್ಲಿ ನನಗಿದ್ದ ಏಕೈಕ ಆಯ್ಕೆಯೆಂದರೆ, ರನಿಲ್ ವಿಕ್ರಮಸಿಂಘೆಯನ್ನು ವಜಾಗೊಳಿಸುವುದು ಹಾಗೂ ಪ್ರಭಾವಿ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸರನ್ನು ನೂತನ ಪ್ರಧಾನಿಯಾಗಿ ನೇಮಿಸುವುದು’’ ಎಂದರು.

‘‘ತನಿಖಾಧಿಕಾರಿಗಳು ನೀಡಿದ ಮಾಹಿತಿಯಲ್ಲಿ ಹಲವು ವಿವರಗಳಿವೆ ಹಾಗೂ ಆ ವಿವರಗಳು ಈವರೆಗೆ ಬಹಿರಂಗಗೊಂಡಿಲ್ಲ’’ ಎಂದರು.

‘‘ನನ್ನನ್ನು ಕೊಲ್ಲುವ ಪಿತೂರಿಯಲ್ಲಿ ಸಂಪುಟ ಸಚಿವರೊಬ್ಬರು ಶಾಮೀಲಾಗಿದ್ದಾರೆ ಎಂಬುದಾಗಿ ಮಾಹಿತಿದಾರ ಹೇಳಿಕೆ ನೀಡಿದ್ದಾನೆ’’ ಎಂದು ಸಿರಿಸೇನ ತಿಳಿಸಿದರು.

ಆದಾಗ್ಯೂ, ಆ ಸಚಿವರ ಹೆಸರನ್ನು ಸಿರಿಸೇನ ಬಹಿರಂಗಪಡಿಸಿಲ್ಲ.

ಸಿರಿಸೇನ ಶುಕ್ರವಾರ ರಾತ್ರಿ ಪ್ರಧಾನಿ ವಿಕ್ರಮಸಿಂಘೆಯನ್ನು ವಜಾಗೊಳಿಸಿ, ನೂತನ ಪ್ರಧಾನಿಯನ್ನಾಗಿ ಮಹಿಂದ ರಾಜಪಕ್ಸರನ್ನು ನೇಮಿಸಿರುವುದನ್ನು ಸ್ಮರಿಸಬಹುದಾಗಿದೆ.

ಆದರೆ, ಈ ನಿರ್ಧಾರದ ವಿರುದ್ಧ ಬಂಡಾಯ ಎದ್ದಿರುವ ವಿಕ್ರಮಸಿಂಘೆ ಅಧಿಕಾರದಿಂದ ಕೆಳಗಿಳಿಯಲು ನಿರಾಕರಿಸಿದ್ದಾರೆ.

ಸಂಸತ್ತಿನ ತುರ್ತು ಅಧಿವೇಶನ ಕರೆಯುವಂತೆ ವಿಕ್ರಮಸಿಂಘೆ ಸ್ಪೀಕರ್‌ರನ್ನು ಒತ್ತಾಯಿಸಿದ ಹಿನ್ನೆಲೆಯಲ್ಲಿ, ಅಧ್ಯಕ್ಷರು ನವೆಂಬರ್ 16ರವರೆಗೆ ಸಂಸತ್ತನ್ನು ಅಮಾನತಿನಲ್ಲಿಟ್ಟಿದ್ದಾರೆ.

ರಾಜಪಕ್ಸ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ

ಪ್ರಧಾನಿ ರನಿಲ್ ವಿಕ್ರಮಸಿಂಘೆಯನ್ನು ಅತ್ಯಂತ ಅನಿರೀಕ್ಷಿತ ಕ್ರಮವೊಂದರಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಶುಕ್ರವಾರ ವಜಾಗೊಳಿಸಿದ ಬಳಿಕ, ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ಸೋಮವಾರ ದೇಶದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

ಪ್ರಧಾನಿ ಕಾರ್ಯಾಲಯದಲ್ಲಿ ರಾಜಪಕ್ಸ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಅವರ ಶ್ರೀಲಂಕಾ ಪೀಪಲ್ಸ್ ಪಾರ್ಟಿ (ಎಸ್‌ಎಲ್‌ಪಿಪಿ)ಯ ಅಧಿಕಾರಿಗಳು ತಿಳಿಸಿದ್ದಾರೆ.

ವಜಾಗೊಂಡ ಪ್ರಧಾನಿ ರನಿಲ್ ವಿಕ್ರಮಸಿಂಘೆ ಈ ಕಚೇರಿಯನ್ನು ಬಳಸುತ್ತಿಲ್ಲ.

ಕೆಲವು ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಅಧಿಕಾರಿಗಳು ಹೇಳಿದರು.

‘‘ಹಣಕಾಸು, ಕಾನೂನು ಮತ್ತು ವ್ಯವಸ್ಥೆ, ವಿದೇಶ ಮತ್ತು ಗೃಹ ವ್ಯವಹಾರಗಳ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಾರೆ’’ ಎಂದು ಪಕ್ಷದ ವಕ್ತಾರರೊಬ್ಬರು ನುಡಿದರು.

ವಜಾಗೊಂಡಿರುವ ರನಿಲ್ ವಿಕ್ರಮಸಿಂಘೆ, ಪ್ರಧಾನಿಯ ಅಧಿಕೃತ ನಿವಾಸ ಮತ್ತು ಕಚೇರಿ ‘ಟೆಂಪಲ್ ಟ್ರೀಸ್’ನಲ್ಲಿನ ವಾಸ್ತವ್ಯವನ್ನು ಮುಂದುವರಿಸಿದ್ದಾರೆ.

ತುರ್ತು ಸಂಸತ್ ಅಧಿವೇಶನ ಕರೆಯಲು ಅಮೆರಿಕ ಕರೆ

ತಮ್ಮ ಸರಕಾರದ ನೇತೃತ್ವವನ್ನು ಯಾರು ವಹಿಸಬೇಕೆನ್ನುವುದನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರತಿನಿಧಿಗಳು ನಿರ್ಧರಿಸಲು ಸಾಧ್ಯವಾಗುವಂತೆ ತುರ್ತಾಗಿ ಸಂಸತ್ತಿನ ಅಧಿವೇಶನವನ್ನು ಕರೆಯುವಂತೆ ಅಮೆರಿಕ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನರಿಗೆ ಕರೆ ನೀಡಿದೆ.

‘‘ಸ್ಪೀಕರ್ ಜೊತೆ ಸಮಾಲೋಚನೆ ನಡೆಸಿ ತುರ್ತಾಗಿ ಸಂಸತ್ತಿನ ಅಧಿವೇಶನವನ್ನು ಕರೆಯುವಂತೆ ಹಾಗೂ ಸರಕಾರದ ಮುಖ್ಯಸ್ಥರು ಯಾರಾಗಬೇಕು ಎನ್ನುವುದನ್ನು ನಿರ್ಧರಿಸಲು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರತಿನಿಧಿಗಳಿಗೆ ಅವಕಾಶ ನೀಡುವಂತೆ ನಾವು ಅಧ್ಯಕ್ಷರಿಗೆ ಕರೆ ನೀಡುತ್ತೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಹೆದರ್ ನೋವರ್ಟ್ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲೂ ಕಳವಳ

ಶ್ರೀಲಂಕಾದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿಶ್ವಸಂಸ್ಥೆಯೂ ಕಳವಳ ವ್ಯಕ್ತಪಡಿಸಿದೆ.

ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಂವಿಧಾನಿಕ ವಿಧಿಗಳು ಮತ್ತು ಪ್ರಕ್ರಿಯೆಗಳನ್ನು ಗೌರವಿಸುವಂತೆ ಹಾಗೂ ಕಾನೂನಿನ ಆಡಳಿತವನ್ನು ಎತ್ತಿಹಿಡಿಯುವಂತೆ ಹಾಗೂ ಎಲ್ಲ ಶ್ರೀಲಂಕನ್ನರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುವಂತೆ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಶ್ರೀಲಂಕಾ ಸರಕಾರಕ್ಕೆ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News