ಲಂಕಾ: ಸಂಸತ್ತಿಗೆ ಚಾಲನೆ ನೀಡಲು ಪ್ರಧಾನ ತಮಿಳು ಪಕ್ಷ ಆಗ್ರಹ

Update: 2018-11-05 17:05 GMT

ಕೊಲಂಬೊ, ನ. 5: ಸಂಸತ್ತಿಗೆ ಚಾಲನೆ ನೀಡಿ ಹಾಗೂ ಹದಗೆಡುತ್ತಿರುವ ರಾಜಕೀಯ ಬಿಕ್ಕಟ್ಟನ್ನು ಕೊನೆಗೊಳಿಸಿ ಎಂಬುದಾಗಿ ಶ್ರೀಲಂಕಾದ ಪ್ರಧಾನ ತಮಿಳು ಪಕ್ಷ ತಮಿಳ್ ನ್ಯಾಶನಲ್ ಅಲಯನ್ಸ್ (ಟಿಎನ್‌ಎ) ರವಿವಾರ ಅಧ್ಯಕ್ಷ ಮೈತ್ರಿಪಾಲ ಸಿರಿಸೇನರನ್ನು ಒತ್ತಾಯಿಸಿದೆ.

ಹಿಂದೂ ಮಹಾಸಾಗರ ದ್ವೀಪ ರಾಷ್ಟ್ರದಲ್ಲಿ ನಡೆಯುತ್ತಿರುವ ಅಧಿಕಾರಕ್ಕಾಗಿನ ಹಗ್ಗಜಗ್ಗಾಟದಲ್ಲಿ ಅಲ್ಪಸಂಖ್ಯಾತ ತಮಿಳು ಪಕ್ಷಗಳು ನಿರ್ಣಾಯಕ ಪಾತ್ರ ವಹಿಸಲಿವೆ.

ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ತನ್ನ ಮಾಜಿ ಮಿತ್ರ ಹಾಗೂ ಪ್ರಧಾನಿ ರನಿಲ್ ವಿಕ್ರಮೆಸಿಂಘೆ ಯನ್ನು ಅಕ್ಟೋಬರ್ 26ರಂದು ವಜಾಗೊಳಿಸಿ, ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸರನ್ನು ಪ್ರಧಾನಿಯಾಗಿ ನೇಮಿಸಿದ ಬಳಿಕ ದೇಶದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ನೆಲೆಸಿದೆ.

ರನಿಲ್ ವಿಕ್ರಮೆಸಿಂಘೆ ಅಧಿಕೃತ ಪ್ರಧಾನಿ ನಿವಾಸ ‘ಟೆಂಪಲ್ ಟ್ರೀಸ್’ನ್ನು ತೆರವುಗೊಳಿಸಲು ನಿರಾಕರಿಸಿದ್ದು, ಈಗಲೂ ತಾನೇ ಪ್ರಧಾನಿ ಎಂದು ಹೇಳಿಕೊಳ್ಳುತ್ತಿದ್ದಾರೆ.

ಅದೇ ವೇಳೆ, ಮಹಿಂದ ರಾಜಪಕ್ಸ ಈಗಾಗಲೇ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

 ಸಂಸತ್ತಿನ ಅಧಿವೇಶನ ಕರೆದರೆ ತಾನು ರಾಜಪಕ್ಸ ವಿರುದ್ಧ ಮತ ಚಲಾಯಿಸುವುದಾಗಿ ಟಿಎನ್‌ಎ ಈಗಾಗಲೇ ಹೇಳಿದೆ.

ಎರಡೂ ಬಣಗಳು ಈಗ ತೆರೆಮರೆಯಲ್ಲಿ ತಮ್ಮ ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳುವ ಕಸರತ್ತಿನಲ್ಲಿ ತೊಡಗಿವೆ. ಇದರಿಂದ ಅಸಮಾಧಾನಗೊಂಡಿರುವ ನಾಗರಿಕ ಸಂಘಟನೆಗಳು ರವಿವಾರ ಕುದುರೆ ವ್ಯಾಪಾರದ ವಿರುದ್ಧ ಕೊಲಂಬೊದಲ್ಲಿ ಪ್ರತಿಭಟನೆ ನಡೆಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News