ಇರಾನ್ ಮೇಲೆ ಅಮೆರಿಕ ದಿಗ್ಬಂಧನ ಜಾರಿ: ಕೆಲವು ದೇಶಗಳಿಗೆ ವಿನಾಯಿತಿ

Update: 2018-11-05 17:53 GMT

ವಾಶಿಂಗ್ಟನ್, ನ. 5: ಅಮೆರಿಕ ಸೋಮವಾರ ಇರಾನ್ ತೈಲ ಖರೀದಿಯ ಮೇಲಿನ ದಿಗ್ಬಂಧನಗಳನ್ನು ಮರುಜಾರಿಗೊಳಿಸಿದೆ. ಆದಾಗ್ಯೂ, ಏಶ್ಯದ ಕೆಲವು ದೇಶಗಳಿಗೆ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ಅವಕಾಶ ನೀಡಿದೆ.

ಇರಾನ್ ಜೊತೆಗೆ ಏರ್ಪಟ್ಟ 2015ರ ಪರಮಾಣು ಒಪ್ಪಂದದಿಂದ ಅಮೆರಿಕವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವರ್ಷದ ಮೇ ತಿಂಗಳಲ್ಲಿ ಹೊರತಂದಿದ್ದರು ಹಾಗೂ ಆರ್ಥಿಕ ದಿಗ್ಬಂಧನಗಳನ್ನು ಮರುಹೇರುವ ಎಚ್ಚರಿಕೆ ನೀಡಿದ್ದರು.

ಇರಾನ್‌ನ ಆರ್ಥಿಕತೆಗೆ ಮರ್ಮಾಘಾತ ನೀಡುವುದಕ್ಕಾಗಿ ಆ ದೇಶದ ತೈಲ, ಹಡಗುಯಾನ, ವಿಮೆ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳನ್ನೊಳಗೊಂಡ 300 ಹೊಸ ಸಂಸ್ಥೆಗಳನ್ನು ಅಮೆರಿಕ ಈ ಬಾರಿ ದಿಗ್ಬಂಧನಗಳ ಪಟ್ಟಿಯಲ್ಲಿ ಸೇರಿಸಿದೆ. ವಿದೇಶಗಳು ಈ ಸಂಸ್ಥೆಗಳೊಂದಿಗೆ ವ್ಯವಹಾರ ಮಾಡಬಾರದು ಎನ್ನುವುದು ಇದರ ಉದ್ದೇಶವಾಗಿದೆ.

ದಿಗ್ಬಂಧನಗಳ ಹೊರತಾಗಿಯೂ ಎಂಟು ದೇಶಗಳಿಗೆ ಇರಾನ್‌ನಿಂದ ಸದ್ಯಕ್ಕೆ ತೈಲ ಆಮದು ಮಾಡಿಕೊಳ್ಳಲು ಅಮೆರಿಕ ಅವಕಾಶ ನೀಡಿದೆ.

ಆದಾಗ್ಯೂ, ಯಾರಿಗೆ ವಿನಾಯಿತಿ ನೀಡಲಾಗಿದೆ ಎಂಬುದನ್ನು ಅಮೆರಿಕ ತಿಳಿಸಿಲ್ಲ. ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯ ಮತ್ತು ಟರ್ಕಿಗಳಿಗೆ ವಿನಾಯಿತಿ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಯುದ್ಧದಂಥ ಪರಿಸ್ಥಿತಿ: ರೂಹಾನಿ

ಇರಾನ್ ಅಮೆರಿಕದ ಆರ್ಥಿಕ ದಿಗ್ಬಂಧನವನ್ನು ಸೋಮವಾರ ವಾಯು ರಕ್ಷಣೆ ತಾಲೀಮಿನೊಂದಿಗೆ ಸ್ವಾಗತಿಸಿದೆ ಹಾಗೂ ತನ್ನ ದೇಶವು ಯುದ್ಧದಂಥ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂಬುದಾಗಿ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ.

‘‘ಇಂದು ಇರಾನ್‌ಗೆ ತನ್ನ ತೈಲವನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿದೆ ಹಾಗೂ ಮುಂದೆಯೂ ಅದು ಮಾರಾಟ ಮಾಡುವುದನ್ನು ಮುಂದುವರಿಸುತ್ತದೆ’’ ಎಂದು ರೂಹಾನಿ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News