ಖಶೋಗಿಯ ಶವವನ್ನು ಕರಗಿಸಿ ಚರಂಡಿಗೆ ಸುರಿದರು: ಟರ್ಕಿ ಪತ್ರಿಕೆ

Update: 2018-11-10 17:23 GMT

ಅಂಕಾರ (ಟರ್ಕಿ), ನ. 10: ಅಮೆರಿಕದಲ್ಲಿ ನೆಲೆಸಿದ್ದ ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ಹಂತಕರು, ಅವರನ್ನು ಕೊಂದ ಬಳಿಕ ದೇಹವನ್ನು ಆ್ಯಸಿಡ್ ನಲ್ಲಿ ಕರಗಿಸಿ ದ್ರಾವಣವನ್ನು ಚರಂಡಿಗೆ ಸುರಿದಿದ್ದಾರೆ ಎಂದು ಟರ್ಕಿಯ ಪತ್ರಿಕೆ ‘ಸಬಾ’ ವರದಿ ಮಾಡಿದೆ.

ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯ ಪಕ್ಕದ ಚರಂಡಿಯಿಂದ ಪಡೆದ ಮಾದರಿಗಳಲ್ಲಿ ಆಮ್ಲದ ಅಂಶಗಳು ಪತ್ತೆಯಾಗಿವೆ ಎಂದು ಪತ್ರಿಕೆ ಯಾವುದೇ ಮೂಲಗಳನ್ನು ಉಲ್ಲೇಖಿಸದೆ ತಿಳಿಸಿದೆ.

ಹಾಗಾಗಿ, ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ ರ ಕಟು ಟೀಕಾಕಾರರಾಗಿದ್ದ ಪತ್ರಕರ್ತನ ಶವವನ್ನು ದ್ರವ ರೂಪದಲ್ಲಿ ಚರಂಡಿಯ ಮೂಲಕ ವಿಲೇವಾರಿ ಮಾಡಲಾಗಿದೆ ಎಂಬ ನಿರ್ಧಾರಕ್ಕೆ ತನಿಖಾಧಿಕಾರಿಗಳು ಬರಬೇಕಾಗಿದೆ ಎಂದಿದೆ.

ತನ್ನ ಹಿಂದಿನ ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ತರಲು ಖಶೋಗಿ ಅಕ್ಟೋಬರ್ 2ರಂದು ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯನ್ನು ಪ್ರವೇಶಿಸಿದ್ದರು. ಅಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ ಎಂಬುದನ್ನು ತಡವಾಗಿ ಸೌದಿ ಅರೇಬಿಯ ಒಪ್ಪಿಕೊಂಡಿದೆ. ಆದರೆ, ಅವರ ದೇಹ ಇನ್ನೂ ಪತ್ತೆಯಾಗಿಲ್ಲ. ದೇಹವನ್ನು ಏನು ಮಾಡಲಾಗಿದೆ ಎನ್ನುವುದನ್ನು ಸೌದಿ ಅರೇಬಿಯ ಹೇಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News