ಖಶೋಗಿ ಹತ್ಯೆಗೆ ಆದೇಶ ನೀಡಿದ್ದು ಸೌದಿ ರಾಜಕುಮಾರ : ಸಿಐಎ

Update: 2018-11-17 14:39 GMT

ವಾಷಿಂಗ್ಟನ್, ನ. 17: ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯಲ್ಲಿ ಸೌದಿ ಅರೇಬಿಯಾದ ಪ್ರಭಾವಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಕೈವಾಡವಿದೆ ಎಂಬ ನಿರ್ಧಾರಕ್ಕೆ ಅಮೆರಿಕದ ಕೇಂದ್ರೀಯ ಗುಪ್ತಚರ ಏಜೆನ್ಸಿ (ಸಿಐಎ) ಬಂದಿದೆ ಎಂದು ಅಮೆರಿಕದ ಪತ್ರಿಕೆಗಳು ವರದಿ ಮಾಡಿವೆ.

ಈ ಸಿಐಎ ನಿರ್ಧಾರ, ಕ್ರೂರ ಹತ್ಯೆಯಲ್ಲಿ ರಾಜಕುಮಾರನ ಕೈವಾಡ ಸಾಧ್ಯತೆಯನ್ನು ಸ್ಪಷ್ಟವಾಗಿ ಅಲ್ಲಗಳೆದಿರುವ ಸೌದಿ ಅರೇಬಿಯಾದ ಪ್ರಾಸಿಕ್ಯೂಟರ್ ಹೇಳಿಕೆಗೆ ತದ್ವಿರುದ್ಧವಾಗಿದೆ.

ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, "15 ಮಂದಿ ಏಜೆಂಟರು ಸರ್ಕಾರಿ ವಿಮಾನದಲ್ಲಿ ಇಸ್ತಾಂಬುಲ್‌ಗೆ ಬಂದು, ಖಶೋಗಿಯನ್ನು ಸೌದಿ ಕಾನ್ಸುಲೇಟ್‌ನಲ್ಲಿ ಹತ್ಯೆ ಮಾಡಿದ್ದಾರೆ ಎನ್ನುವುದು ಸಿಐಎಗೆ ದೃಢಪಟ್ಟಿದೆ". ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಐಎ ನಿರಾಕರಿಸಿದೆ.

ಟರ್ಕಿ ಯುವತಿಯನ್ನು ವಿವಾಹವಾಗಲು ಅಗತ್ಯವಿದ್ದ ದಾಖಲೆಗಳನ್ನು ಪಡೆಯಲು ಖಶೋಗಿ ಕಾನ್ಸುಲೇಟ್‌ಗೆ ಹೋಗಿದ್ದಾಗ ಈ ಘಟನೆ ನಡೆದಿತ್ತು. ಖಶೋಗಿ ಹತ್ಯೆ ನಡೆದ ಅ. 2ರ ಬಳಿಕ ಪದೇ ಪದೇ ಹೇಳಿಕೆ ಬದಲಿಸುತ್ತಿರುವ ಸೌದಿ ಅರೇಬಿಯಾ, ಸಿಐಎ ನಿರ್ಧಾರವನ್ನು ಕೂಡಾ ಅಲ್ಲಗಳೆದಿದೆ. ಮೊದಲು ಖಶೋಗಿ ಚಲನ ವಲನಗಳ ಬಗ್ಗೆ ಮಾಹಿತಿಯೇ ಇಲ್ಲ ಎಂದು ಹೇಳಿಕೆ ನೀಡಿದ್ದ ಸೌದಿ ಸರಕಾರ ಕೊನೆಗೆ, ಕಾನ್ಸುಲೇಟ್ ಕಚೇರಿಯಲ್ಲಿ ನಡೆದ ವಾಗ್ವಾದದ ಬಳಿಕ ಖಶೋಗಿ ಹತ್ಯೆಯಾಗಿದೆ ಎಂದು ಹೇಳಿತ್ತು.

ಸೌದಿ ಪ್ರಾಸಿಕ್ಯೂಟರ್ ಗುರುವಾರ ನೀಡಿದ ಹೇಳಿಕೆಯಂತೆ, "ಖಶೋಗಿಯ ಮನವೊಲಿಸಿ ಇಸ್ತಂಬೂಲ್‌ನಿಂದ ಕರೆತರಲು 15 ಮಂದಿ ತಂಡವನ್ನು ಕಳುಹಿಸಲಾಗಿತ್ತು. ಆದರೆ ಇದು ಖಶೋಗಿ ಹತ್ಯೆಯಲ್ಲಿ ಮುಕ್ತಾಯವಾಯಿತು"

ಇಸ್ತಾಂಬುಲ್‌ಗೆ ಹೋಗಲು ಯುವರಾಜನ ಸಹೋದರ ಖಶೋಗಿಗೆ ಹೇಳಿದ್ದರೇ?

ಯುವರಾಜರ ಸಹೋದರ ಹಾಗೂ ಅಮೆರಿಕಕ್ಕೆ ಸೌದಿ ರಾಯಭಾರಿ ಖಾಲಿದ್ ಬಿನ್ ಸಲ್ಮಾನ್ ಮತ್ತು ಖಶೋಗಿ ನಡುವಿನ ಫೋನ್ ಕರೆ ಸೇರಿದಂತೆ, ಖಶೋಗಿ ಹತ್ಯೆಯ ತನಿಖೆಯಲ್ಲಿ ಸಿಐಎ ಹಲವಾರು ಗುಪ್ತಚರ ಮೂಲಗಳನ್ನು ಜಾಲಾಡಿದೆ ಎಂದು ‘ವಾಶಿಂಗ್ಟನ್ ಪೋಸ್ಟ್’ ಹೇಳಿದೆ.

ಇಸ್ತಾಂಬುಲ್‌ನಲ್ಲಿರುವ ಸೌದಿ ಕೌನ್ಸುಲೇಟ್ ಕಚೇರಿಗೆ ಸುರಕ್ಷಿತವಾಗಿ ಹೋಗಿ ದಾಖಲೆಪತ್ರಗಳನ್ನು ತರಬಹುದು ಎಂಬುದಾಗಿ ಸೌದಿ ರಾಯಭಾರಿ ಖಶೋಗಿಗೆ ಹೇಳಿದ್ದರು ಎನ್ನಲಾಗಿದೆ.

ಆದರೆ, ಇದನ್ನು ಸೌದಿ ರಾಯಭಾರ ಕಚೇರಿಯ ವಕ್ತಾರರೊಬ್ಬರು ನಿರಾಕರಿಸಿದ್ದಾರೆ. ಖಾಲಿದ್, ಖಶೋಗಿ ಜೊತೆ ಟರ್ಕಿಗೆ ಹೋಗುವುದಕ್ಕೆ ಸಂಬಂಧಿಸಿದ ಏನನ್ನೂ ಚರ್ಚಿಸಿಲ್ಲ ಎಂದು ರಾಯಭಾರಿ ಟ್ವಿಟರ್ ಖಾತೆಯಲ್ಲಿ ಹಾಕಿದ ಹೇಳಿಕೆಯಲ್ಲಿ ವಕ್ತಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News