ಲಂಕಾ ಸಂಸತ್ತು 5 ನಿಮಿಷದಲ್ಲೇ ಮುಂದೂಡಿಕೆ

Update: 2018-11-19 16:25 GMT

ಕೊಲಂಬೊ, ನ. 19: ಶ್ರೀಲಂಕಾ ಸಂಸತ್ತನ್ನು ಸೋಮವಾರ ಆರಂಭಗೊಂಡ ಐದೇ ನಿಮಿಷಗಳಲ್ಲಿ ಮುಂದೂಡಲಾಯಿತು.

ಸಂಸತ್ತಿನ ಕಾರ್ಯಸೂಚಿ ಸಿದ್ಧಪಡಿಸುವ ಸಮಿತಿಯೊಂದರ ರಚನೆ ಬಗ್ಗೆ ಒಮ್ಮತಕ್ಕೆ ಬರಲು 225 ಸದಸ್ಯ ಬಲದ ಸಂಸತ್ತು ವಿಫಲವಾದ ಬಳಿಕ ಅಧಿವೇಶನವನ್ನು ಮುಂದೂಡಲಾಯಿತು. ಇನ್ನು ಸಂಸತ್ ಶುಕ್ರವಾರ ಸಭೆ ಸೇರಲಿದೆ.

ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅಕ್ಟೋಬರ್ 26ರಂದು ಅನಿರೀಕ್ಷಿತ ಕ್ರಮವೊಂದರಲ್ಲಿ ಪ್ರಧಾನಿ ರನಿಲ್ ವಿಕ್ರಮೆಸಿಂಘೆಯನ್ನು ವಜಾಗೊಳಿಸಿ, ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸರನ್ನು ನೂತನ ಪ್ರಧಾನಿಯಾಗಿ ನೇಮಿಸಿದ ಬಳಿಕ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ನೆಲೆಸಿದೆ.

ಸಂಸತ್ತಿನಲ್ಲಿ ರಾಜಪಕ್ಸ ಸರಕಾರದ ವಿರುದ್ಧ ಈವರೆಗೆ ಎರಡು ಅವಿಶ್ವಾಸ ನಿರ್ಣಯಗಳನ್ನು ಮಂಡಿಸಲಾಗಿದ್ದು, ಎರಡರಲ್ಲಿಯೂ ಅವರು ಸೋತಿದ್ದಾರೆ. ಕಳೆದ ವಾರ ಸಂಸತ್ತಿನಲ್ಲಿ ಎದುರಾಳಿ ಪಕ್ಷಗಳಿಗೆ ಸೇರಿದ ಸಂಸದರು ಕೈಕೈಮಿಲಾಯಿಸಿದ್ದರು.

ಸಂಸತ್ತಿನ ಅವಿಶ್ವಾಸ ನಿರ್ಣಯಗಳನ್ನು ಸ್ವೀಕರಿಸಲು ಸಿರಿಸೇನ ನಿರಾಕರಿಸಿದ್ದಾರೆ. ಅದೇ ವೇಳೆ, ಪ್ರಧಾನಿಯ ಅಧಿಕೃತ ನಿವಾಸವನ್ನು ತೊರೆಯಲು ವಿಕ್ರಮೆಸಿಂಘೆ ನಿರಾಕರಿಸಿದ್ದಾರೆ.

ದೇಶದ ರಾಜಕೀಯದಲ್ಲಿ ನೆಲೆಸಿರುವ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಉಭಯ ಬಣಗಳು ರವಿವಾರ ರಾತ್ರಿ ಸಿರಿಸೇನ ಜೊತೆ ಮಾತುಕತೆ ನಡೆಸಿದವು. ಆದರೆ, ಮಾತುಕತೆಗಳು ವಿಫಲವಾದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News