ಸಿರಿಯದಲ್ಲಿ ವಿಷಾನಿಲ ದಾಳಿ: 50 ಜನರು ಅಸ್ವಸ್ಥ

Update: 2018-11-25 17:35 GMT

ಡಮಾಸ್ಕಸ್ (ಸಿರಿಯ), ನ. 25: ಉತ್ತರ ಸಿರಿಯದ ಸರಕಾರಿ ನಿಯಂತ್ರಣದ ಅಲೆಪ್ಪೊ ನಗರದಲ್ಲಿ ಬಂಡುಕೋರ ಗುಂಪುಗಳು ನಡೆಸಿದ ಶಂಕಿತ ವಿಷಾನಿಲ ದಾಳಿಯ ಬಳಿಕ ಕನಿಷ್ಠ 50 ನಾಗರಿಕರಿಗೆ ಶನಿವಾರ ಚಿಕಿತ್ಸೆ ನೀಡಲಾಯಿತು ಎಂದು ಸಿರಿಯ ಸರಕಾರಿ ಮಾಧ್ಯಮ ವರದಿ ಮಾಡಿದೆ.

ಆಸ್ಪತ್ರೆಗೆ ದಾಖಲಾದವರ ಪೈಕಿ ಹೆಚ್ಚಿನವರು ಉಸಿರಾಟ ಹಾಗೂ ಮಂದ ದೃಷ್ಟಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವೈದ್ಯರು ಸರಕಾರಿ ಟೆಲಿವಿಶನ್‌ಗೆ ತಿಳಿಸಿದ್ದಾರೆ.

ಒಂದು ಮಗು ಸೇರಿದಂತೆ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು.

 ಅಲೆಪ್ಪೊ ನಗರದಲ್ಲಿ ಕ್ಷಿಪಣಿಯೊಂದು ಹಾರಿದ ಬಳಿಕ ಅನಿಲದ ವಾಸನೆ ಹರಡಿತು ಎಂದು ಬ್ರಿಟನ್‌ನಲ್ಲಿ ನೆಲೆಸಿರುವ ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದುರ್ರಹ್ಮಾನ್ ತಿಳಿಸಿದರು.

ಸರಕಾರ, ಬಂಡುಕೋರರ ನಡುವೆ ಕೈದಿ ವಿನಿಮಯ: ಟರ್ಕಿ

ಸಿರಿಯ ಸರಕಾರ ಮತ್ತು ಬಂಡುಕೋರರು ಶನಿವಾರ ಕೈದಿಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಟಕಿ ವಿದೇಶ ಸಚಿವಾಲಯ ಶನಿವಾರ ತಿಳಿಸಿದೆ.

ರಶ್ಯ-ಇರಾನ್-ಟರ್ಕಿ ಮಧ್ಯಸ್ಥಿಕೆಯ ಶಾಂತಿ ಪ್ರಕ್ರಿಯೆಯಡಿ ಯುದ್ಧನಿರತ ಬಣಗಳ ನಡುವೆ ವಿಶ್ವಾಸ ನಿರ್ಮಿಸುವಲ್ಲಿ ಮೊದಲ ಮಹತ್ವದ ಹೆಜ್ಜೆ ಇದಾಗಿದೆ ಎಂದು ಅದು ಹೇಳಿದೆ.

ವಾಯುವ್ಯ ಸಿರಿಯದಲ್ಲಿ ಅಲೆಪ್ಪೊಗೆ ಸಮೀಪದಲ್ಲಿರುವ ಅಲ್ ಬಬ್ ಪಟ್ಟಣದ ಸಮೀಪ ಕೆಲವು ಕೈದಿಗಳನ್ನು ಏಕಕಾಲದಲ್ಲಿ ವಿನಿಮಯ ಮಾಡಲಾಯಿತು ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News