ಎಲ್ಲ ಭಾರತೀಯ ರಾಯಭಾರ ಕಚೇರಿಗಳಲ್ಲಿ 48 ಗಂಟೆಯಲ್ಲಿ ವೀಸಾ: ಸಹಾಯಕ ವಿದೇಶ ಸಚಿವ ವಿ.ಕೆ. ಸಿಂಗ್

Update: 2018-11-25 17:40 GMT

ವಾಶಿಂಗ್ಟನ್, ನ. 25: ಪ್ರಪಂಚದಾದ್ಯಂತವಿರುವ ಭಾರತೀಯ ರಾಯಭಾರ ಕಚೇರಿಗಳು ವಿದೇಶಗಳಲ್ಲಿರುವ ನಾಗರಿಕರಿಗೆ 48 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಪಾಸ್‌ಪೋರ್ಟ್‌ಗಳನ್ನು ನೀಡುತ್ತವೆ ಎಂದು ವಿದೇಶ ವ್ಯವಹಾರಗಳ ಖಾತೆಯ ಸಹಾಯಕ ಸಚಿವ ವಿ.ಕೆ. ಸಿಂಗ್ ಹೇಳಿದ್ದಾರೆ.

ವಾಶಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಶನಿವಾರ ‘ಪಾಸ್‌ಪೋರ್ಟ್ ಸೇವಾ’ ಯೋಜನೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಸಚಿವರು, ಭಾರತೀಯ ರಾಯಭಾರ ಕಚೇರಿಗಳಲ್ಲಿರುವ ಪಾಸ್‌ಪೋರ್ಟ್ ಕಚೇರಿಗಳನ್ನು ಭಾರತದಲ್ಲಿರುವ ದತ್ತಾಂಶ ಕೇಂದ್ರದೊಂದಿಗೆ ಜೋಡಿಸಲಾಗಿದೆ ಎಂದು ಹೇಳಿದರು. ಇದು ಪಾಸ್‌ಪೋರ್ಟ್ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು ಎಂದರು.

ಇದಕ್ಕೂ ಕೆಲವು ದಿನಗಳ ಮೊದಲು, ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕೌನ್ಸುಲೇಟ್ ಕಚೇರಿಯು 48 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಪಾಸ್‌ಪೋರ್ಟ್‌ಗಳನ್ನು ನೀಡಿರುವುದನ್ನು ಸ್ಮರಿಸಬಹುದಾಗಿದೆ.

 ‘‘ಇದು ಪ್ರಪಂಚದಾದ್ಯಂತ ಜಾರಿಗೆ ಬರಲಿದೆ’’ ಎಂದು ನೂತನ ಯೋಜನೆಯನ್ವಯ ನೀಡಲಾದ ಪಾಸ್‌ಪೋರ್ಟ್‌ಗಳನ್ನು ವಿದೇಶದಲ್ಲಿರುವ ನಾಗರಿಕರಿಗೆ ಹಸ್ತಾಂತರಿಸುತ್ತಾ ಸಿಂಗ್ ಹೇಳಿದರು.

ಪಾಸ್‌ಪೋರ್ಟ್‌ಗಳ ಡಿಜಿಟಲ್ ಪರಿಶೀಲನೆ

‘‘ಮುಂಬರುವ ದಿನಗಳಲ್ಲಿ, ಭಾರತವು ಪ್ರಪಂಚದಲ್ಲೇ ಶ್ರೇಷ್ಠ ಪಾಸ್‌ಪೋರ್ಟ್ ಸೇವೆಗಳನ್ನು ನೀಡುವುದು. ಪಾಸ್‌ಪೋರ್ಟ್ ಅರ್ಜಿದಾರರಿಗೆ ಅನ್ವಯಿಸುವ ನಿಯಮಾವಳಿಗಳನ್ನು ಹೆಚ್ಚು ಸರಳೀಕರಣಗೊಳಿಸಲಾಗಿದೆ ಹಾಗೂ ಅರ್ಜಿದಾರರ ಹೆಚ್ಚಿನ ಮಾಹಿತಿಗಳ ಪರಿಶೀಲನೆಯನ್ನು ಡಿಜಿಟಲ್ ಮೂಲಕವೇ ಮಾಡಲಾಗುವುದು’’ ಎಂದು ಸಚಿವರು ತಿಳಿಸಿದರು.

‘ಪಾಸ್‌ಪೋರ್ಟ್ ಸೇವಾ’ ಯೋಜನೆಯನ್ನು ಮೊದಲು ಬ್ರಿಟನ್‌ನಲ್ಲಿ ಕಳೆದ ತಿಂಗಳು ಆರಂಭಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News