ಮಕ್ಕಳು, ಮಹಿಳೆಯರೆಂದು ನೋಡದೆ ವಲಸಿಗರತ್ತ ಅಶ್ರುವಾಯು ಪ್ರಯೋಗಿಸಿದ ಅಮೆರಿಕಾ ಭದ್ರತಾ ಸಿಬ್ಬಂದಿ

Update: 2018-11-27 09:55 GMT

ಟಿಜುವಾನ, ಮೆಕ್ಸಿಕೋ, ನ.27: ಅಮೆರಿಕಾ ಹಾಗೂ ಮೆಕ್ಸಿಕೋ ನಡುವೆ ಸ್ಯಾನ್ ಡಿಯಾಗೋದಲ್ಲಿರುವ ಪ್ರಮುಖ ಗಡಿ ದಾಟುವ ಪ್ರದೇಶದಲ್ಲಿ ಮೆಕ್ಸಿಕೋ ಕಡೆಯಿಂದ ಅಮೆರಿಕಾಗೆ ನುಗ್ಗಲು ಯತ್ನಿಸಿದ ವಲಸಿಗರ ಗುಂಪೊಂದನ್ನು ಓಡಿಸುವ ಸಲುವಾಗಿ ಗಡಿ ಭದ್ರತಾ ಸಿಬ್ಬಂದಿ ಅಶ್ರುವಾಯು ಪ್ರಯೋಗಿಸಿ ಗಡಿಯನ್ನು ಗಂಟೆಗಳ ಕಾಲ ಮುಚ್ಚಿದ ಘಟನೆ ನಡೆದಿದೆ.

ರವಿವಾರ ಅಪರಾಹ್ನದ ಹೊತ್ತಿಗೆ ಸ್ಯಾನ್ ಯಸಿದ್ರೊ ಪ್ರವೇಶ ದ್ವಾರದ ಸಮೀಪ ಸುಮಾರು 500 ವಲಸಿಗರು ಬ್ಯಾರಿಕೇಡುಗಳನ್ನು ದಾಟಿ ನುಗ್ಗಲು ಯತ್ನಿಸಿದಾಗ ಅಶ್ರುವಾಯು ಪ್ರಯೋಗಿಸಲಾಗಿದೆ. ಮಹಿಳೆಯರೂ ಮಕ್ಕಳೂ ಸೇರಿದಂತೆ ನೂರಾರು ಮಂದಿ ಅಶ್ರುವಾಯುವಿನಿಂದ ತಪ್ಪಿಸಿಕೊಳ್ಳಲು ಎದ್ದು ಬಿದ್ದು ಓಡುತ್ತಿರುವ ದೃಶ್ಯಗಳು ಅಲ್ಲಿ ಕಂಡು ಬಂದವು. ಕೆಲ ವಲಸಿಗರು ಭದ್ರತಾ ಸಿಬ್ಬಂದಿಯತ್ತ ಕಲ್ಲುಗಳನ್ನು ಎಸೆದಿದ್ದಾರೆಂದು ಆರೋಪಿಸಲಾಗಿದೆ.

ಈ ಘಟನೆಯಿಂದ ವಾಹನ ದಟ್ಟಣೆಯಿರುವ ಸ್ಯಾನ್ ಯಸಿದ್ರೊ ಪ್ರವೇಶ ದ್ವಾರ ಬಂದ್ ಆಗಿ ಹಲವಾರು ಮಂದಿಗೆ ಅನಾನುಕೂಲ ಸೃಷ್ಟಿಯಾಗಿತ್ತು. ಅಮೆರಿಕಾದ ಗಡಿ ದಾಟಿ ನುಗ್ಗಲು ಯತ್ನಿಸಿದ ಸುಮಾರು 100 ಮಂದಿ ಸೆಂಟ್ರಲ್ ಅಮೆರಿಕನ್ ವಲಸಿಗರನ್ನು ದೇಶದಿಂದ ಹೊರಗಟ್ಟಿದ್ದಾಗಿ ಮೆಕ್ಸಿಕೋ ಹೇಳಿದೆ.

ಬ್ಯಾರಿಕೇಡುಗಳನ್ನು ದಾಟಿ ಅಮೆರಿಕಾ ಪ್ರವೇಶಿಸಿದ 42 ಮಂದಿಯನ್ನು ಬಂಧಿಸಲಾಗಿದೆ ಎಂದು ಅಮೆರಿಕಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವಲಸಿಗರು ಹೆಚ್ಚಾಗಿ ಹೊಂಡುರಾಸ್, ಗ್ವಾಟೆಮಾಲ ಹಾಗೂ ಈ ಸಾಲ್ವದೋರ್‍ನ ನಿವಾಸಿಗಳಾಗಿದ್ದು ತಮ್ಮ ತವರು ದೇಶಗಳಲ್ಲಿನ  ಹಿಂಸೆಯಿಂದ ಬೆದರಿ ತಮಗೂ ತಮ್ಮ ಕುಟುಂಬಗಳಿಗೂ ಉತ್ತಮ ಜೀವನ ಅರಸಿ ಅಮೆರಿಕಾ ಪ್ರವೇಶಿಸಲೆತ್ನಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News