ಲಯನ್ ಏರ್ ವಿಮಾನ ಪತನಕ್ಕೂ ಮುನ್ನ 26 ಬಾರಿ ಈ ಘಟನೆ ನಡೆದಿತ್ತು…

Update: 2018-11-28 17:49 GMT

 ಜಕಾರ್ತ, ನ. 28: ಇತ್ತೀಚೆಗೆ ಜಾವಾ ಸಮುದ್ರದಲ್ಲಿ ಪತನಗೊಳ್ಳುವ ಮೊದಲು, ಇಂಡೋನೇಶ್ಯದ ಲಯನ್ ಏರ್ ವಿಮಾನವನ್ನು ನಿಯಂತ್ರಣದಲ್ಲಿಡಲು ಪೈಲಟ್‌ಗಳು ಕಷ್ಟಪಡುತ್ತಿದ್ದರು ಹಾಗೂ ವಿಮಾನವು ಸ್ವಯಂಚಾಲಿತ ಚಾಲನಾ ವ್ಯವಸ್ಥೆಯಲ್ಲಿದ್ದಾಗ ಅದರ ಮೂತಿ ಪದೇ ಪದೇ ಕೆಳಗೆ ವಾಲುತ್ತಿತ್ತು ಎನ್ನುವುದು ತಿಳಿದು ಬಂದಿದೆ.

ಅಕ್ಟೋಬರ್ 29ರಂದು ಸಂಭವಿಸಿದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನದ ಪತನದ ಬಗ್ಗೆ ತನಿಖೆ ನಡೆಸುತ್ತಿರುವ ಇಂಡೋನೇಶ್ಯದ ಅಧಿಕಾರಿಗಳು ಸಿದ್ಧಪಡಿಸಿದ ಕರಡು ಪ್ರಾಥಮಿಕ ವರದಿ ಈ ವಿಷಯವನ್ನು ಬಹಿರಂಗಪಡಿಸಿದೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 189 ಮಂದಿ ಮೃತಪಟ್ಟಿದ್ದಾರೆ.

ಸೆನ್ಸರ್‌ಗಳಿಂದ ಬರುತ್ತಿದ್ದ ತಪ್ಪು ಮಾಹಿತಿಗಳಿಂದಾಗಿ ವಿಮಾನದ ಸ್ವಯಂಚಾಲಿತ ವ್ಯವಸ್ಥೆಯು ಮೂತಿಯನ್ನು ಕೆಳಗೆ ತಳ್ಳುತ್ತಿತ್ತೆ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

 ಬೋಯಿಂಗ್ ಕಂಪೆನಿಯ ಜನಪ್ರಿಯ 737 ಜೆಟ್‌ಲೈನರ್ ಸರಣಿಯ ನೂತನ ಮಾದರಿಯ ‘ಮ್ಯಾಕ್ಸ್’ ವಿಮಾನವು ಸ್ವಯಂಚಾಲಿತ ವ್ಯವಸ್ಥೆಯೊಂದನ್ನು ಹೊಂದಿದೆ. ವಿಮಾನದ ಮೂತಿಯು ತೀರಾ ಮೇಲಕ್ಕೆ ಚಾಚಿರುವುದನ್ನು ಸೆನ್ಸರ್‌ಗಳು ಪತ್ತೆಹಚ್ಚಿದರೆ ಸ್ವಯಂಚಾಲಿತ ವ್ಯವಸ್ಥೆಯು ಅದನ್ನು ಕೆಳಗೆ ತಳ್ಳುತ್ತದೆ.

ಭಯಾನಕ ಕಣ್ಣಾಮುಚ್ಚಾಲೆ ಆಟ

ಅಲ್ಲೊಂದು ‘ಭಯಾನಕ ಕಣ್ಣಾಮುಚ್ಚಾಲೆ ಆಟ’ವೇ ನಡೆಯುತ್ತಿತ್ತು ಎಂಬುದಾಗಿ ವಾಯುಯಾನ ಮತ್ತು ಉಪಗ್ರಹ ಸಂವಹನ ಪರಿಣತ ಪೀಟರ್ ಲೆಮ್ ತನ್ನ ಬ್ಲಾಗ್‌ನಲ್ಲಿ ಬರೆದಿದ್ದಾರೆ.

 ವಿಮಾನದ ‘ಫ್ಲೈಟ್ ಡಾಟಾ ರೆಕಾರ್ಡರ್’ನಿಂದ ಪಡೆದ ಮಾಹಿತಿಗಳ ವಿಶ್ಲೇಷಣೆ ನಡೆಸಿದ ಬಳಿಕ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

ವಿಮಾನದ ಸ್ವಯಂಚಾಲಿತ ವ್ಯವಸ್ಥೆಯು ವಿಮಾನದ ಮೂತಿಯನ್ನು ಕೆಳಗೆ ತಳ್ಳುತ್ತಿತ್ತು. ಆಗ ಪೈಲಟ್‌ಗಳು ಮಧ್ಯಪ್ರವೇಶಿಸಿ ವಿಮಾನದ ಮೂತಿಯನ್ನು ಮೇಲಕ್ಕೆತ್ತುತ್ತಿದ್ದರು. ಆದರೆ, ಐದು ಸೆಕಂಡ್‌ಗಳ ಬಳಿಕ ಮತ್ತೆ ವಿಮಾನದ ಮೂತಿ ಕೆಳಗೆ ವಾಲುತ್ತಿತ್ತು ಹಾಗೂ ಪೈಲಟ್‌ಗಳು ಅದನ್ನು ಮೇಲಕ್ಕೆ ಎತ್ತುತ್ತಿದ್ದರು.

ಹೀಗೆ 26 ಬಾರಿ ಆಗಿತ್ತು. ಆದರೆ, ಏನಾಗುತ್ತಿದೆ ಎನ್ನುವುದು ಪೈಲಟ್‌ಗಳಿಗೆ ತಿಳಿಯಲಿಲ್ಲ. ಹಾಗಾಗಿ, ಸ್ವಯಂಚಾಲಿತ ಸುರಕ್ಷಾ ವ್ಯವಸ್ಥೆಯು ತನ್ನಿಂತಾನೆ ಚಾಲನೆಗೊಳ್ಳುವುದನ್ನು ನಿಲ್ಲಿಸುವಲ್ಲಿ ಅವರು ವಿಫಲರಾದರು ಎಂಬುದಾಗಿ ಲೆಮ್ ಹೇಳಿದ್ದಾರೆ.

ಹಿಂದಿನ ಹಾರಾಟದ ಸಮಸ್ಯೆ ಪೈಲಟ್‌ಗಳಿಗೆ ಗೊತ್ತಿರಲಿಲ್ಲ

ಸೆನ್ಸರ್ ನೀಡುವ ಮಾಹಿತಿಯು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸುವ ಸುಲಭ ವಿಧಾನಗಳು ಲಭ್ಯವಿಲ್ಲದಿರುವುದು ದೊಡ್ಡ ದುರಂತಕ್ಕೆ ಕಾರಣವಾಯಿತು ಎಂಬುದಾಗಿ ವಾಯುಯಾನ ಮತ್ತು ಉಪಗ್ರಹ ಸಂವಹನ ಪರಿಣತ ಪೀಟರ್ ಲೆಮ್ ಹೇಳುತ್ತಾರೆ.

ಅದೂ ಅಲ್ಲದೆ, ಹಿಂದಿನ ಹಾರಾಟಗಳಲ್ಲಿ ಇಂಥದೇ ಸಮಸ್ಯೆಗಳು ತಲೆದೋರಿತ್ತು ಹಾಗೂ ಅದನ್ನು ಸರಿಪಡಿಸಲಾಗಿಲ್ಲ ಎಂಬ ಎಚ್ಚರಿಕೆಯನ್ನು ವಿಮಾನದ ಪೈಲಟ್‌ಗಳಿಗೆ ನೀಡಿರುವಂತೆ ತೋರುತ್ತಿಲ್ಲ ಎಂದು ಅವರು ಹೇಳಿದ್ದಾರೆ.

‘‘ಈ ಸಮಸ್ಯೆಗಳನ್ನು ಸರಿಪಡಿಸಿದ್ದರೆ ವಿಮಾನ ಸಮುದ್ರದಲ್ಲಿ ಪತನಗೊಳ್ಳುತ್ತಿರಲಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News