ಸಿರಿಯದಲ್ಲಿ ಐಸಿಸ್ ಸೋಲಿಸಿದ್ದೇವೆ: ಟ್ರಂಪ್

Update: 2018-12-20 14:05 GMT

ವಾಶಿಂಗ್ಟನ್, ಡಿ. 20: ಸಿರಿಯದಲ್ಲಿ ಐಸಿಸ್ ಭಯೋತ್ಪಾದಕ ಗುಂಪನ್ನು ಅಮೆರಿಕ ಸೋಲಿಸಿದ್ದು, ಆ ದೇಶದಿಂದ ಸಂಪೂರ್ಣವಾಗಿ ಹಿಂದೆಗೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಸೇನೆಗೆ ಆದೇಶಿಸಿದ್ದಾರೆ.

ಟ್ರಂಪ್ ಆದೇಶವನ್ನು ಕ್ಷಿಪ್ರವಾಗಿ ಪಾಲಿಸಲು ಅಮೆರಿಕ ಸೇನೆಯು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘‘ನಾವು ಸಿರಿಯದಲ್ಲಿ ಐಸಿಸನ್ನು ಸೋಲಿಸಿದ್ದೇವೆ. ಟ್ರಂಪ್ ಆಡಳಿತಾವಧಿಯಲ್ಲಿ ನಮ್ಮ ಸೇನೆ ಅಲ್ಲಿರುವುದಕ್ಕೆ ನಮ್ಮ ಏಕೈಕ ಕಾರಣ ಐಸಿಸ್ ಆಗಿತ್ತು’’ ಎಂದು ಟ್ರಂಪ್ ಬುಧವಾರ ಟ್ವಿಟರ್‌ನಲ್ಲಿ ಹೇಳಿದ್ದಾರೆ.

 ಸಿರಿಯದಿಂದ ಸೇನಾ ವಾಪಸಾತಿಯು ಅಮೆರಿಕ ನೀತಿಗೆ ತದ್ವಿರುದ್ಧವಾಗಿದೆ. ಇದು ಅಮೆರಿಕದ ಕುರ್ದಿಶ್ ಮಿತ್ರರನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. ಕುರ್ದಿಶ್ ಹೋರಾಟಗಾರರನ್ನು ಟರ್ಕಿ ಸೇನೆಯು ಭಯೋತ್ಪಾದಕರು ಎಂಬುದಾಗಿ ಪರಿಗಣಿಸಿದೆ.

ಆದರೆ, ಐಸಿಸನ್ನು ಸೋಲಿಸಲಾಗಿದೆ ಎಂಬುದನ್ನು ಅಮೆರಿಕ ಆಡಳಿತದ ಅಧಿಕಾರಿಗಳು ಕಳೆದ ವಾರವೂ ನಿರಾಕರಿಸಿದ್ದರು ಹಾಗೂ ಸಿರಿಯದಲ್ಲಿ ಅಮೆರಿಕ ಸೇನೆಯು ಮುಂದುವರಿಯುವುದು ಎಂಬುದಾಗಿ ಹೇಳಿದ್ದರು.

‘‘ಈ ಎಲ್ಲಾ ವರ್ಷಗಳಲ್ಲಿ ನಾವು ಕಲಿತ ಒಂದು ಪಾಠವೆಂದರೆ, ಇಂಥ ಭಯೋತ್ಪಾದಕ ಗುಂಪಿನ ದೈಹಿಕ ಉಪಸ್ಥಿತಿಯನ್ನು ಸೋಲಿಸಿ ನಾವು ಹೊರ ಹೋಗುವಂತಿಲ್ಲ. ಅದು ಅದರ ಖಾಯಂ ಸೋಲು ಅಲ್ಲ’’ ಎಂಬುದಾಗಿ ಜಾಗತಿಕ ಮಿತ್ರಕೂಟಕ್ಕೆ ಅಮೆರಿಕ ಆಡಳಿತದ ವಿಶೇಷ ರಾಯಭಾರಿ ಬ್ರೆಟ್ ಮೆಕ್‌ಗರ್ಕ್ ಡಿಸೆಂಬರ್ 11ರಂದು ಹೇಳಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News