ಮತ್ತೊಮ್ಮೆ ಅಮೆರಿಕ ಸರಕಾರ ಬಂದ್

Update: 2018-12-22 16:14 GMT

ವಾಶಿಂಗ್ಟನ್, ಡಿ. 22: ಮೆಕ್ಸಿಕೊ ಗಡಿಯಲ್ಲಿ ತಡೆಗೋಡೆ ಕಟ್ಟಲು 5 ಬಿಲಿಯ ಡಾಲರ್ (ಸುಮಾರು 35,000 ಕೋಟಿ ರೂಪಾಯಿ) ಕೊಡಬೇಕೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇಡಿಕೆಗೆ ಅಮೆರಿಕ ಸಂಸತ್ತು ಜಗ್ಗದ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆಯಿಂದ ಅಮೆರಿಕ ಸರಕಾರ ಆಂಶಿಕವಾಗಿ ಸ್ಥಗಿತಗೊಂಡಿದೆ.

ಸರಕಾರ ನಡೆಯಲು ಬಜೆಟ್ ಒದಗಿಸುವುದಕ್ಕೆ ಸಂಬಂಧಿಸಿದ ಮಾತುಕತೆ ಶುಕ್ರವಾರ ವಿಫಲವಾಯಿತು. ಆದಾಗ್ಯೂ, ಕ್ರಿಸ್ಮಸ್ ರಜೆ ಆರಂಭಗೊಳ್ಳುವುದಕ್ಕೆ ಮುನ್ನ ಸರಕಾರಿ ಯಂತ್ರಕ್ಕೆ ಚಾಲನೆ ಒದಗಿಸುವ ನಿಟ್ಟಿನಲ್ಲಿ ವಾರಾಂತ್ಯದಲ್ಲಿ ಮಾತುಕತೆ ಮುಂದುವರಿಸಲು ಸಂಸತ್ತು ನಾಯಕರು ಮತ್ತು ಶ್ವೇತಭವನದ ಪ್ರತಿನಿಧಿಗಳು ನಿರ್ಧರಿಸಿದ್ದಾರೆ.

ವಾರದ ಆದಿ ಭಾಗದಲ್ಲಿ, ಸರಕಾರಿ ಯಂತ್ರ ಸ್ಥಗಿತಗೊಳ್ಳುವುದನ್ನು ತಪ್ಪಿಸಲು ಕಿರು ಅವಧಿಯ ಬಜೆಟ್ ಅಂಗೀಕರಿಸುವ ಒಪ್ಪಂದಕ್ಕೆ ಪ್ರತಿಪಕ್ಷ ಡೆಮಾಕ್ರಟಿಕ್ ಮತ್ತು ಆಡಳಿತಾರೂಢ ಪಕ್ಷ ರಿಪಬ್ಲಿಕನ್ ಸೆನೆಟರ್‌ಗಳು ಬಂದಿದ್ದರು. ಆದರೆ, ಈ ಬಜೆಟ್‌ನಲ್ಲಿ ತನ್ನ ನೆಚ್ಚಿನ ಮೆಕ್ಸಿಕೊ ಗೋಡೆಗೆ 5 ಬಿಲಿಯ ಡಾಲರ್ ಹಣ ಇಲ್ಲದಿರುವುದನ್ನು ನೋಡಿ ಈ ಒಪ್ಪಂದವನ್ನು ಅಧ್ಯಕ್ಷ ಟ್ರಂಪ್ ತಿರಸ್ಕರಿಸಿದರು.

ರಿಪಬ್ಲಿಕನ್ನರ ಪ್ರಾಬಲ್ಯದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮೆಕ್ಸಿಕೊ ಗೋಡೆಗೆ 5 ಬಿಲಿಯ ಡಾಲರ್ ನೀಡುವ ಮಸೂದೆಯೊಂದನ್ನು ಅಂಗೀಕರಿಸಲಾಯಿತಾದರೂ, ಪ್ರತಿಪಕ್ಷ ಡೆಮಾಕ್ರಟಿಕರ ಪ್ರಾಬಲ್ಯದ ಸೆನೆಟ್‌ನಲ್ಲಿ ಅದು ಸಿಕ್ಕಿಹಾಕಿಕೊಂಡಿದೆ. ಹಾಗಾಗಿ, ಶುಕ್ರವಾರ ಮಧ್ಯರಾತ್ರಿಯಿಂದ ಅಮೆರಿಕವಿಡೀ ಆಂಶಿಕ ಬಂದ್ ಆಗಿದೆ.

ಬಂದ್‌ನ ಪರಿಣಾಮಗಳೇನು?

ಅಮೆರಿಕದ ಆಡಳಿತ ಯಂತ್ರ ಸ್ಥಗಿತಗೊಳ್ಳುವುದರಿಂದ ಕೇಂದ್ರ ಸರಕಾರದ 8 ಲಕ್ಷಕ್ಕೂ ಅಧಿಕ ಉದ್ಯೋಗಿಗಳ ಕೆಲಸದಲ್ಲಿ ಏರುಪೇರಾಗುತ್ತದೆ. ಅವರ ಪೈಕಿ ಅರ್ಧಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಸಂಬಳವಿಲ್ಲದೆ ಕೆಲಸ ಮಾಡಬೇಕಾಗುತ್ತದೆ.

 ಸಾಮಾಜಿಕ ಭದ್ರತೆ ಕಾರ್ಯಕ್ರಮದ ತಪಾಸಣೆಗಳು ನಡೆಯುವುದಿಲ್ಲ. ಆದರೆ, ಸೈನಿಕರು ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ. ವೈದ್ಯರು ಮತ್ತು ಆಸ್ಪತ್ರೆಗಳಿಗೆ ಮೆಡಿಕೇರ್ ಮತ್ತು ಮೆಡಿಕೇಡ್ ಮರುಪಾವತಿಗಳು ದೊರೆಯುತ್ತವೆ.

ರಜೆಯ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಪ್ಯಾಕೇಜ್ ವಿತರಣೆಯಲ್ಲಿ ತೊಡಗಿರುವ ಅಂಚೆ ಸೇವೆಯು ಸ್ವತಂತ್ರ ಸಂಸ್ಥೆಯಾಗಿದೆ, ಹಾಗಾಗಿ ಅದರ ಮೇಲೆ ಪರಿಣಾಮವಾಗುವುದಿಲ್ಲ.

ವಾಸ್ತವವಾಗಿ, ಎಫ್‌ಬಿಐ, ಗಡಿ ಗಸ್ತು ಮತ್ತು ತಟರಕ್ಷಣಾ ಪಡೆ ಮುಂತಾದ ಸರಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಸಾರಿಗೆ ಭದ್ರತೆ ಆಡಳಿತದ ಅಧಿಕಾರಿಗಳು ವಿಮಾನ ನಿಲ್ದಾಣ ತಪಾಸಣಾ ಠಾಣೆಗಳಲ್ಲಿ ಕೆಲಸ ಮುಂದುವರಿಸುತ್ತಾರೆ.

ವಾಯು ಸಾರಿಗೆ ನಿಯಂತ್ರಣ ವ್ಯವಸ್ಥೆ, ಆಹಾರ ತಪಾಸಣೆ, ವೈದ್ಯಕೀಯ ಚಿಕಿತ್ಸೆ, ಹಿರಿಯದ ಆರೋಗ್ಯ ರಕ್ಷೆ ಹಾಗೂ ಇತರ ಹಲವಾರು ಪ್ರಮುಖ ಸರಕಾರಿ ಕಾರ್ಯಕ್ರಮಗಳು ಸಾಮಾನ್ಯ ರೀತಿಯಲ್ಲಿ ನಡೆಯುತ್ತವೆ.

ಆಂತರಿಕ ಭದ್ರತೆ ಇಲಾಖೆಯ ಬಹುತೇಕ ಎಲ್ಲ 2,40,000 ಉದ್ಯೋಗಿಗಳು ಕರ್ತವ್ಯದಲ್ಲಿರುತ್ತಾರೆ. ಯಾಕೆಂದರೆ, ಈ ಸೇವೆಯನ್ನು ಅಗತ್ಯ ಎಂಬುದಾಗಿ ಪರಿಗಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News