ಕಾರಿಡಾರ್ ಆರ್ಥಿಕ ಯೋಜನೆ; ಸೇನಾ ಉದ್ದೇಶಗಳಿಲ್ಲ: ಪಾಕ್

Update: 2018-12-28 15:05 GMT

ಇಸ್ಲಾಮಾಬಾದ್, ಡಿ. 28: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ದ್ವಿಪಕ್ಷಿಯ ಆರ್ಥಿಕ ಯೋಜನೆಯಾಗಿದೆಯೇ ಹೊರತು ಅದಕ್ಕೆ ಸೇನಾ ಆಯಾಮಗಳಿಲ್ಲ ಎಂದು ಪಾಕಿಸ್ತಾನ ಹೇಳಿದೆ.

ಇಲ್ಲಿ ಗುರುವಾರ ನಡೆದ ವಾರದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ವಿದೇಶ ಕಚೇರಿಯ ವಕ್ತಾರ ಮುಹಮ್ಮದ್ ಫೈಸಲ್ ಈ ಮಾತನ್ನು ಹೇಳಿದ್ದಾರೆ.

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನ ಭಾಗವಾಗಿ, ಪಾಕಿಸ್ತಾನದಲ್ಲಿ ಯುದ್ಧ ವಿಮಾನಗಳು ಮತ್ತು ಇತರ ಸೇನಾ ಉಪಕರಣಗಳನ್ನು ತಯಾರಿಸುವ ಗುಪ್ತ ಯೋಜನೆಯನ್ನು ಚೀನಾ ಹೊಂದಿದೆ ಎಂಬ ‘ನ್ಯೂಯಾರ್ಕ್ ಟೈಮ್ಸ್’ ವರದಿಯೊಂದರ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

ಪಾಕಿಸ್ತಾನಿ ವಾಯುಪಡೆ ಮತ್ತು ಚೀನಾ ಅಧಿಕಾರಿಗಳು ಗುಪ್ತ ಸೇನಾ ಯೋಜನೆಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ ಎಂಬುದಾಗಿ ಇಸ್ಲಾಮಾಬಾದ್‌ನಿಂದ ಮಾಡಲಾದ ವರದಿ ಹೇಳಿದೆ.

ಚೀನಾ ಕಳೆದ ವಾರ ಈ ವರದಿಯನ್ನು ‘ಸುಳ್ಳು’ ಎಂದು ಬಣ್ಣಿಸಿ ತಳ್ಳಿಹಾಕಿದೆ.

‘‘ಪಾಕಿಸ್ತಾನದ ಆರ್ಥಿಕತೆಯನ್ನು ಸುಧಾರಿಸುವಲ್ಲಿ ಸಿಪಿಇಸಿ ನೆರವು ನೀಡಿದೆ. ಈ ಯೋಜನೆಯ ಅಡಿಯಲ್ಲಿ ಮುಖ್ಯವಾಗಿ ಇಂಧನ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಪಾಕಿಸ್ತಾನ ಪ್ರಗತಿ ಸಾಧಿಸಿದೆ. ಸಿಪಿಇಸಿಯು ದ್ವಿಪಕ್ಷೀಯ ಆರ್ಥಿಕ ಯೋಜನೆಯಾಗಿದ್ದು, ಯಾವುದೇ ದೇಶದ ವಿರುದ್ಧವಾಗಿಲ್ಲ’’ ಎಂದು ಫೈಸಲ್ ಹೇಳಿರುವುದಾಗಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News