ಚಂದ್ರನ ಕತ್ತಲ ಭಾಗದಲ್ಲಿ ಇಳಿದ ಚೀನಾ ಶೋಧ ನೌಕೆ

Update: 2019-01-03 16:36 GMT

ಬೀಜಿಂಗ್, ಜ. 3: ಚೀನಾದ ಬಾಹ್ಯಾಕಾಶ ಶೋಧ ನೌಕೆ ‘ಚಾಂಗ್’ಇ-4’ ಗುರುವಾರ ಚಂದ್ರನ ಭೂಮಿಗೆ ಕಾಣದ ಇನ್ನೊಂದು ಭಾಗದ ಮೇಲೆ ಇಳಿದಿದೆ. ಚಂದ್ರನ ಈ ಭಾಗದಲ್ಲಿ ಇಳಿದ ಮೊದಲ ಬಾಹ್ಯಾಕಾಶ ನೌಕೆ ಅದಾಗಿದೆ.

ಚಂದ್ರನ ಕತ್ತಲ ಭಾಗದಲ್ಲಿ ಈ ಬಾಹ್ಯಾಕಾಶ ನೌಕೆ ಇಳಿದಿರುವುದು ಚೀನಾದ ಬಾಹ್ಯಾಕಾಶ ಕಾರ್ಯಕ್ರಮದ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ ಎಂದು ಚೀನಾದ ಸರಕಾರಿ ಮಾಧ್ಯಮಗಳು ಬಣ್ಣಿಸಿವೆ.

ಈ ಹಿಂದಿನ ಬಾಹ್ಯಾಕಾಶ ಶೋಧ ನೌಕೆಗಳು ಚಂದ್ರನ ಕತ್ತಲ ಭಾಗವನ್ನು ನೋಡಿವೆ, ಆದರೆ, ಅಲ್ಲಿ ಇಳಿದಿಲ್ಲ.

ಇದು ಚಂದ್ರನ ಇನ್ನೊಂದು ಭಾಗದ ಮೇಲಿದ್ದ ರಹಸ್ಯ ಪರದೆಯನ್ನು ಸರಿಸಿದೆ ಹಾಗೂ ಮಾನವನ ಚಂದ್ರ ಶೋಧದಲ್ಲಿ ನೂತನ ಅಧ್ಯಾಯವೊಂದನ್ನು ತೆರೆದಿದೆ ಎಂದು ಚೀನಾದ ಸರಕಾರಿ ಟಿವಿ ಬಣ್ಣಿಸಿದೆ.

‘ಚಾಂಗ್’ಇ-4 ನೌಕೆಯು 8 ಉಪಕರಣಗಳನ್ನು ಒಯ್ದಿದೆ. ಅವುಗಳು ನೆಲದ ಲಕ್ಷಣ ಹಾಗೂ ನೆಲದ ನಮೂನೆಗಳನ್ನು ಪರೀಕ್ಷಿಸುತ್ತವೆ, ಖನಿಜ ಸಂಗ್ರಹವನ್ನು ಪತ್ತೆಹಚ್ಚುತ್ತವೆ ಹಾಗೂ ನ್ಯೂಟ್ರಾನ್ ವಿಕಿರಣಗಳನ್ನು ಅಳೆಯುತ್ತವೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಡಿಸೆಂಬರ್ 7ರಂದು ಉಡಾಯಿಸಲಾದ ಶೋಧ ನೌಕೆಯು ಭಾರತೀಯ ಸಮಯ ಬೆಳಗ್ಗೆ 7:56ಕ್ಕೆ ನಿಧಾನವಾಗಿ ಚಂದ್ರನ ಮೇಲೆ ಇಳಿಯಿತು ಹಾಗೂ ಚಂದ್ರನ ಇನ್ನೊಂದು ಬದಿಯ ಮೊದಲ ಸಮೀಪದ ಚಿತ್ರವನ್ನು ಕಳುಹಿಸಿತು ಎಂದು ಟಿವಿ ಹೇಳಿದೆ.

‘‘ಚಂದ್ರನ ಮೇಲ್ಮೈಗಿಂತ 100 ಮೀಟರ್ ಎತ್ತರದಲ್ಲಿ ಶೋಧ ನೌಕೆಯು ಹಾರಾಡುತ್ತಾ ಅಡೆತಡೆಗಳನ್ನು ಗುರುತಿಸಿತು ಹಾಗೂ ಇಳಿಜಾರುಗಳನ್ನು ಅಳೆಯಿತು. ಅಡೆತಡೆಗಳನ್ನು ನಿವಾರಿಸಿಕೊಂಡ ಬಳಿಕ, ಅದು ಇರುವುದರಲ್ಲೇ ಸಮತಟ್ಟು ಜಾಗವನ್ನು ಆರಿಸಿಕೊಂಡು ನೇರವಾಗಿ ಮತ್ತು ನಿಧಾನವಾಗಿ ಇಳಿಯಿತು’’ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News