ಥಾಯ್ಲೆಂಡ್: ಸೌದಿ ತರುಣಿ ವಿಶ್ವಸಂಸ್ಥೆಯ ಆರೈಕೆಯಲ್ಲಿ

Update: 2019-01-08 15:58 GMT

ಬ್ಯಾಂಕಾಕ್, ಜ. 8: ಬ್ಯಾಂಕಾಕ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಆಶ್ರಯಕ್ಕಾಗಿ ಹತಾಶ ಮನವಿ ಮಾಡಿರುವ ಸೌದಿ ಅರೇಬಿಯದ 18 ವರ್ಷದ ತರುಣಿ ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆಯ ಆರೈಕೆಯಲ್ಲಿದ್ದಾರೆ ಎಂದು ಥಾಯ್ಲೆಂಡ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ನನ್ನ ಕುಟುಂಬ ಸದಸ್ಯರು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು, ಹಾಗಾಗಿ, ಕುವೈತ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅವರಿಂದ ತಪ್ಪಿಸಿಕೊಂಡು ಬಂದೆ” ಎಂದು ರಹಾಫ್ ಮುಹಮ್ಮದ್ ಮೋತ್ಲಕ್ ಅಲ್-ಕುನೂನ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

“ನಾನು ಆಸ್ಟ್ರೇಲಿಯದಲ್ಲಿ ಆಶ್ರಯ ಪಡೆಯುವ ಉದ್ದೇಶ ಹೊಂದಿದ್ದೆ ಎಂದು ಅವರು ಹೇಳಿದರು. ಥಾಯ್ಲೆಂಡ್ ವಲಸೆ ಅಧಿಕಾರಿಗಳು ನನ್ನನ್ನು ಸೌದಿ ಅರೇಬಿಯಕ್ಕೆ ಗಡಿಪಾರು ಮಾಡಿದರೆ ಅವರು ನನ್ನನ್ನು ಕೊಲ್ಲುತ್ತಾರೆ.” ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದರು.

ರವಿವಾರ ಕುವೈತ್‌ನಿಂದ ಬ್ಯಾಂಕಾಕ್ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಆಸ್ಟ್ರೇಲಿಯಕ್ಕೆ ಹೋಗುವ ವಿಮಾನ ಹತ್ತುವ ಮೊದಲು ಥಾಯ್ಲೆಂಡ್ ಅಧಿಕಾರಿಗಳು ರಹಾಫ್‌ರನ್ನು ತಡೆದಿದ್ದರು.

ಟ್ವಿಟರ್‌ನಿಂದಾಗಿ ಜಾಗತಿಕ ಮಟ್ಟದಲ್ಲಿ ಸುದ್ದಿ

ಸೌದಿ ತರುಣಿಯನ್ನು ವಾಪಸ್ ಕಳುಹಿಸುವುದಾಗಿ ಥಾಯ್ ಅಧಿಕಾರಿಗಳು ರವಿವಾರ ಹೇಳಿದ್ದರು.

ಆದರೆ, ನನಗೆ ಸಹಾಯ ಮಾಡುವಂತೆ ತರುಣಿಯು ವಿವಿಧ ದೇಶಗಳಿಗೆ ಟ್ವಿಟರ್ ಮೂಲಕ ಹತಾಶ ಮನವಿ ಮಾಡಿದ ಬಳಿಕ, ಈ ಘಟನೆಯ ಜಾಗತಿಕ ಮಟ್ಟದಲ್ಲಿ ಸುದ್ದಿಯಾಯಿತು.

ಈ ಹಿನ್ನೆಲೆಯಲ್ಲಿ, ವಾಪಸ್ ಹೋಗುವಂತೆ ರಹಾಫ್‌ರನ್ನು ಬಲವಂತಪಡಿಸುವುದಿಲ್ಲ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.

‘‘ಅವರು ಯುಎನ್‌ಎಚ್‌ಸಿಆರ್‌ನ ಆರೈಕೆಯಲ್ಲಿದ್ದಾರೆ. ಆದರೆ, ನಾವು ಥಾಯ್ಲೆಂಡ್ ಭದ್ರತೆಯನ್ನೂ ಒದಗಿಸಿದ್ದೇವೆ’’ ಎಂದು ಥಾಯ್ಲೆಂಡ್ ವಲಸೆ ವಿಭಾಗದ ಮುಖ್ಯಸ್ಥ ಸುರಚಟೆ ಹಕ್‌ಪರ್ನ್ ಸೋಮವಾರ ತಡ ರಾತ್ರಿ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News