ಕವಲು ದಾರಿಯಲ್ಲಿ ಬ್ರಿಟನ್; ಪ್ರಧಾನಿ ತೆರೇಸಾ ಸ್ಥಿತಿ ಅನಿಶ್ಚಿತ

Update: 2019-01-16 16:17 GMT

ಲಂಡನ್, ಜ. 16: ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರ ‘ಬ್ರೆಕ್ಸಿಟ್’ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದು) ಒಪ್ಪಂದಕ್ಕೆ ಸಂಸತ್ತು ಹೌಸ್ ಆಫ್ ಕಾಮನ್ಸ್‌ನಲ್ಲಿ ಮಂಗಳವಾರ ಸೋಲಾಗಿದೆ.

ಇದು ತೆರೇಸಾ ಮೇ ಹಾಗೂ ಬ್ರಿಟನ್‌ನ ಭವಿಷ್ಯದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳನ್ನು ಎತ್ತಿದೆ. ಬ್ರೆಕ್ಸಿಟ್ ಒಪ್ಪಂದಕ್ಕೆ ಆಗಿರುವ ಸೋಲಿನೊಂದಿಗೆ ಬ್ರಿಟನ್ ಈ ಹಿಂದೆಂದೂ ಕಾಣದ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂಬುದಾಗಿ ಮೇ ಹೇಳಿದ್ದಾರೆ.

ಅವರ ಬ್ರೆಕ್ಸಿಟ್ ಒಪ್ಪಂದದ ಪರವಾಗಿ 202 ಮತಗಳು ಚಲಾವಣೆಯಾದರೆ, ವಿರೋಧವಾಗಿ 432 ಮತಗಳು ಬಿದ್ದವು. ಇದು ಬ್ರಿಟನ್‌ನ ಇತ್ತೀಚಿನ ಇತಿಹಾಸದಲ್ಲಿ ಸರಕಾರವೊಂದು ಸಂಸತ್ತಿನಲ್ಲಿ ಅನುಭವಿಸಿದ ಅತ್ಯಂತ ಹೀನಾಯ ಸೋಲಾಗಿದೆ.

ಅವರದೇ ಪಕ್ಷದ ಹಲವಾರು ಸಂಸದರು ಬ್ರೆಕ್ಸಿಟ್ ಒಪ್ಪಂದದ ವಿರುದ್ಧವಾಗಿ ಮತ ಚಲಾಯಿಸಿದರು.

ಈ ಸೋಲಿನ ಬಳಿಕ, ತೆರೇಸಾ ಮೇ ಸೋಮವಾರ ಬ್ರೆಕ್ಸಿಟ್ ಪ್ರಕ್ರಿಯೆಯನ್ನು ಮುಂದುವರಿಸುವ ಇನ್ನೊಂದು ಯೋಜನೆಯೊಂದಿಗೆ ಸಂಸತ್ತಿಗೆ ಮರಳಲಿದ್ದಾರೆ.

ಬ್ರೆಕ್ಸಿಟ್ ಒಪ್ಪಂದಕ್ಕೆ ಸೋಲಾಗುತ್ತಿದ್ದಂತೆಯೇ, ಪ್ರತಿಪಕ್ಷ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯೊಂದನ್ನು ಮಂಡಿಸಿದರು. ಈ ಗೊತ್ತುವಳಿಯ ಬಗ್ಗೆ ಬುಧವಾರ ಚರ್ಚೆ ನಡೆಯುತ್ತಿದೆ.

ಐರೋಪ್ಯ ಒಕ್ಕೂಟದಿಂದ ಹೊರಬರುವ ಪ್ರಕ್ರಿಯೆಗಳನ್ನು ಬ್ರಿಟನ್ ಮಾರ್ಚ್ 29ರ ಒಳಗೆ ಮುಗಿಸಬೇಕಾಗಿದೆ. ಬ್ರಿಟನ್ ಈಗ ಅತ್ಯಂತ ದೊಡ್ಡ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದೆ. ಅದು 1973ರಲ್ಲಿ ಐರೋಪ್ಯ ಒಕ್ಕೂಟಕ್ಕೆ ಸೇರ್ಪಡೆಯಾಗಿತ್ತು.

2016 ಜೂನ್‌ನಲ್ಲಿ ನಡೆದ ಬ್ರೆಕ್ಸಿಟ್ ಜನಮತಗಣನೆಯಲ್ಲಿ, ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದರ ಪರವಾಗಿ 52 ಶೇಕಡ ಹಾಗೂ ವಿರುದ್ಧವಾಗಿ 48 ಶೇಕಡ ಮಂದಿ ಮತ ಚಲಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News