ಪಾಕಿಸ್ತಾನಕ್ಕೆ ಸೌದಿಯಿಂದ 1 ಬಿಲಿಯ ಡಾಲರ್ ಸಾಲ

Update: 2019-01-25 15:33 GMT

ಇಸ್ಲಾಮಾಬಾದ್, ಜ. 25: ಪಾಕಿಸ್ತಾನ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಯುಎಇ ನೀಡಿರುವ 3 ಬಿಲಿಯ ಡಾಲರ್ (ಸುಮಾರು 21,360 ಕೋಟಿ ಭಾರತೀಯ ರೂಪಾಯಿ) ನೆರವಿನ ಮೊದಲ ಕಂತನ್ನು ಪಾಕಿಸ್ತಾನ ಸ್ವೀಕರಿಸಿದ ಒಂದು ದಿನದ ಬಳಿಕ, ಶುಕ್ರವಾರ ಸೌದಿ ಅರೇಬಿಯ ಪಾಕಿಸ್ತಾನಕ್ಕೆ ಒಂದು ಬಿಲಿಯ ಡಾಲರ್ (ಸುಮಾರು 7,120 ಕೋಟಿ ಭಾರತೀಯ ರೂಪಾಯಿ) ಸಾಲ ನೀಡಿದೆ.

ಪಾಕಿಸ್ತಾನ ಮತ್ತು ಅಬುಧಾಬಿ ಅಭಿವೃದ್ಧಿ ನಿಧಿ ನಡುವೆ ಈ ತಿಂಗಳು ಏರ್ಪಟ್ಟ ಒಪ್ಪಂದದ ಪ್ರಕಾರ, ಯುಎಇಯು ಮೊದಲ ಹಂತದಲ್ಲಿ ಪಾಕಿಸ್ತಾನಕ್ಕೆ ಒಂದು ಬಿಲಿಯ ಡಾಲರ್ (ಸುಮಾರು 7,120 ಕೋಟಿ ರೂಪಾಯಿ) ಮೊತ್ತವನ್ನು ಹಸ್ತಾಂತರಿಸಿದೆ ಎಂದು ಗುರುವಾರ ಟ್ವಿಟರ್‌ನಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ಪಾಕಿಸ್ತಾನದ ಕೇಂದ್ರೀಯ ಬ್ಯಾಂಕ್ ತಿಳಿಸಿದೆ.

ಈವರೆಗೆ ಯುಎಇ ಮತ್ತು ಸೌದಿ ಅರೇಬಿಯದಿಂದ ಪಾಕಿಸ್ತಾನಕ್ಕೆ ಲಭಿಸಿದ ಒಟ್ಟು ಮೊತ್ತ 4 ಬಿಲಿಯ ಡಾಲರ್ (ಸುಮಾರು 28,480 ಕೋಟಿ ರೂಪಾಯಿ) ಆಗಿದೆ ಎಂದು ಅದು ತಿಳಿಸಿದೆ.

ಈ ಮೊತ್ತವು ಪಾಕಿಸ್ತಾನದ ಮೀಸಲು ನಿಧಿ ಪರಿಸ್ಥಿತಿಯನ್ನು ಉತ್ತಮಗೊಳಿಸುತ್ತದೆ.

 ಅದೂ ಅಲ್ಲದೆ, ಪಾಕಿಸ್ತಾನಕ್ಕೆ ಸಾಲ ರೂಪದಲ್ಲಿ ಮೂರು ಬಿಲಿಯ ಡಾಲರ್ (ಸುಮಾರು 21,360 ಕೋಟಿ ರೂಪಾಯಿ) ಮೊತ್ತದ ತೈಲ ಪೂರೈಸುವ ಭರವಸೆಯನ್ನೂ ರಿಯಾದ್ ನೀಡಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನ ಸಾಲ ಮರುಪಾವತಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News