ಭಾರತದ ರಾಷ್ಟ್ರಧ್ವಜ ಸುಟ್ಟುಹಾಕಿದ ಘಟನೆಗೆ ಬ್ರಿಟನ್ ತೀವ್ರ ಖಂಡನೆ

Update: 2019-01-28 17:46 GMT

ಲಂಡನ್,ಜ.28: ಗಣರಾಜ್ಯೋತ್ಸವ ದಿನದಂದು ಲಂಡನ್‌ನಲ್ಲಿರುವ ಭಾರತೀಯ ಹೈಕಮೀಶನ್ ಕಚೇರಿಯ ಹೊರಗಡೆ ಬ್ರಿಟಿಶ್ ಸಿಖ್ಖ್ ಹಾಗೂ ಕಾಶ್ಮೀರಿ ಪ್ರತ್ಯೇಕತಾವಾದಿಗಳೆನ್ನಲಾದವರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಕಾರರು ಭಾರತದ ರಾಷ್ಟ್ರಧ್ವಜವನ್ನು ಸುಟ್ಟುಹಾಕಿದ ಘಟನೆಯನ್ನು ಬ್ರಿಟನ್ ಸೋಮವಾರ ಖಂಡಿಸಿದೆ.

ಈ ವಿಷಯದ ಕುರಿತು ತನಿಖೆ ನಡೆಸುತ್ತಿರುವುದಾಗಿ ಬ್ರಿಟನ್‌ನ ವಿದೇಶಾಂಗ ಹಾಗೂ ಕಾಮನ್‌ವೆಲ್ತ್ ಕಚೇರಿಯು ತಿಳಿಸಿರುವುದಾಗಿ ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ. ‘‘ 26 ಜನವರಿಯಂದು ಅಲ್ಡ್‌ವಿಚ್‌ನಲ್ಲಿರುವ ಭಾರತೀಯ ಭವನದ ಹೊರಗೆ ನಡೆದ ಪ್ರತಿಭಟನೆಯ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವುದು ನಮಗೆ ತಿಳಿದಿದೆ ’’ ಎಂದು ಬ್ರಿಟಿಶ್ ವಕ್ತಾರರು ತಿಳಿಸಿದ್ದಾರೆ. ಈ ಅಪರಾಧಕ್ಕೆ ಸಂಬಂಧಿಸಿ ಯಾವುದೇ ದೂರನ್ನು ದಾಖಲಿಸಲಾಗಿಲ್ಲ’’ ಎಂದವರು ಹೇಳಿದ್ದಾರೆ.

ಗಣರಾಜ್ಯೋತ್ಸವವಾಗಲಿ ಇತರ ಯಾವುದೇ ದಿನವಾದರೂ ಭಾರತದ ರಾಷ್ಟ್ರಧ್ವಜವನ್ನು ಸುಟ್ಟಲ್ಲಿ ನಮಗೆ ಬೇಸರವಾಗುತ್ತದೆ. ಈ ಘಟನೆಯಿಂದಾದ ನೋವಿಗೆ ನಾವು ವಿಷಾದಿಸುತ್ತೇವೆ’’ ಎಂದವರು ಹೇಳಿದ್ದಾರೆ.

ಲಂಡನ್‌ನಲ್ಲಿ ಭಾರತ ರಾಷ್ಟ್ರಧ್ವಜವನ್ನು ಅವಮಾನಿಸಿದ ಘಟನೆ ನಡೆದಿದ್ದುದು ಇದು ಮೊದಲ ಸಲವೇನಲ್ಲ. 2018ರ ಎಪ್ರಿಲ್‌ನಲ್ಲಿ ಖಲಿಸ್ತಾನ್ ಪರ ಹಾಗೂ ಕಾಶ್ಮೀರದ ಪ್ರತ್ಯೇಕವಾದಿ ಗುಂಪುಗಳಿಗೆ ಸೇರಿದವರೆನ್ನಲಾದ ಕೆಲವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲಂಡನ್‌ನ ಸಂಸತ್ ಚೌಕದ ಬಳಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿಯೂ ಭಾರತದ ತ್ರಿವರ್ಣಧ್ಜವನ್ನು ಹರಿದುಹಾಕಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News