ಭಾರತ-ಪಾಕಿಸ್ತಾನ ಸಂಯಮದಿಂದ ವರ್ತಿಸಬೇಕು: ಅಮೆರಿಕ ಸಲಹೆ

Update: 2019-02-27 06:08 GMT

 ವಾಶಿಂಗ್ಟನ್,ಫೆ.27: ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಉಗ್ರರ ತರಬೇತಿ ಶಿಬಿರದ ಮೇಲೆ ಭಾರತದ ವಾಯು ಸೇನೆ ದಾಳಿ ನಡೆಸಿದ ಮರುದಿನ ಪ್ರತಿಕ್ರಿಯೆ ನೀಡಿರುವ ಅಮೆರಿಕ, ಪಾಕಿಸ್ತಾನವು ಉಗ್ರ ಸಂಘಟನೆಯ ನಿಗ್ರಹಕ್ಕೆ 'ಅರ್ಥಪೂರ್ಣ ಕ್ರಮ' ಕೈಗೊಳ್ಳಬೇಕೆಂದು ಬುದ್ದಿಮಾತು ಹೇಳಿದೆ.

ಭಾರತದ ವಾಯು ಸೇನೆಯು ಪಾಕ್‌ನೊಳಗೆ ನುಗ್ಗಿ ಸರ್ಜಿಕಲ್‌ ಸ್ಟ್ರೈಕ್ ನಡೆಸಿದ ಬಳಿಕ ಉಭಯ ದೇಶಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಉದ್ಭವಿಸಿದೆ. ಇದನ್ನು ಗಮನಿಸಿರುವ ಡೊನಾಲ್ಡ್ ಟ್ರಂಪ್ ಆಡಳಿತದ ಅಮೆರಿಕ, ಉಭಯ ದೇಶಗಳು ಸಂಯಮದಿಂದ ವರ್ತಿಸಬೇಕೆಂದು ಸಲಹೆ ನೀಡಿದೆ.

‘‘ಸಂಯಮ ವಹಿಸುವಂತೆ ನಾವು ಭಾರತ ಹಾಗೂ ಪಾಕಿಸ್ತಾನಕ್ಕೆ ಉತ್ತೇಜನ ನೀಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ದುಬಾರಿಯಾಗುವ ಕೆಲಸಕ್ಕೆ ಕೈ ಹಾಕಬೇಡಿ’’ ಎಂದು ಅಮೆರಿಕದ ಕಾರ್ಯದರ್ಶಿ ಮೈಕ್ ಪೊಂಪೆ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಅಮೆರಿಕದ ಕಾರ್ಯದರ್ಶಿ ಮೈಕ್ ಅವರು ಭಾರತದ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಹಾಗೂ ಪಾಕ್ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದು, ನೇರ ಮಾತುಕತೆಗೆ ಆದ್ಯತೆ ನೀಡಿ, ಮತ್ತಷ್ಟು ಮಿಲಿಟರಿ ಚಟುವಟಿಕೆಯನ್ನು ತಪ್ಪಿಸಿ ಎಂದು ಇಬ್ಬರೂ ಸಚಿವರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News