ಎರಡನೇ ಶೃಂಗ ಸಭೆಯಲ್ಲಿ ಕಿಮ್-ಟ್ರಂಪ್ ಭೇಟಿ

Update: 2019-02-27 18:36 GMT

ಹನೊಯಿ,ಫೆ.27: ವಿಯೇಟ್ನಂನ ಹನೊಯಿಯಲ್ಲಿ ನಡೆದ ಎರಡನೇ ಶ್ರಂಗ ಸಭೆಯಲ್ಲಿ ಬುಧವಾದ ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಉತ್ತರ ಕೊರಿಯ ನಾಯಕ ಕಿಮ್ ಜೊಂಗ್ ಉನ್ ಅವರನ್ನು ಭೇಟಿಯಾದರು. ಆದರೆ ಇದೇ ವೇಳೆ, ಉತ್ತರ ಕೊರಿಯದ ಪರಮಾಣು ನಿಶಸ್ತ್ರೀಕರಣದ ಬಗೆಗಿನ ಬೇಡಿಕೆಯಿಂದ ಅಮೆರಿಕ ಹಿಂದೆ ಸರಿಯಬಹುದು ಎಂಬ ವರದಿಯನ್ನು ಟ್ರಂಪ್ ಅಲ್ಲಗಳೆದಿದ್ದಾರೆ. ವಿಯೇಟ್ನಂ ರಾಜಧಾನಿ ಹನೊಯಿಯ ಮೆಟ್ರೊಪೊಲ್ ಹೋಟೆಲ್‌ನಲ್ಲಿ ಭೇಟಿಯಾದ ಟ್ರಂಪ್ ಮತ್ತು ಕಿಮ್ ಪರಸ್ಪರ ಹಸ್ತಲಾಘವ ಮಾಡಿದರು.

ಕಳೆದ ವರ್ಷ ಜೂನ್‌ನಲ್ಲಿ ಸಿಂಗಾಪುರದಲ್ಲಿ ನಡೆದ ಶೃಂಗ ಸಭೆಯಲ್ಲಿ ಟ್ರಂಪ್ ಮತ್ತು ಕಿಮ್ ಪರಮಾಣುನಿಶಸ್ತ್ರೀಕರಣ ಮತ್ತು ಕೊರಿಯ ಉಪಖಂಡದಲ್ಲಿ ಶಾಶ್ವತ ಶಾಂತಿ ನೆಲೆಸಲು ಕೈಜೋಡಿಸುವುದಾಗಿ ನಿರ್ಣಯ ಕೈಗೊಂಡಿದ್ದರು. ಉತ್ತರ ಮತ್ತು ದಕ್ಷಿಣ ಕೊರಿಯದ ಮಧ್ಯೆ 1950-53ರ ಸಂಘರ್ಷದ ದಿನಗಳಿಂದ ತಾಂತ್ರಿಕವಾಗಿ ಯುದ್ಧ ನಡೆಯುತ್ತಿದ್ದು ಅಮೆರಿಕ ದಕ್ಷಿಣ ಕೊರಿಯವನ್ನು ಬೆಂಬಲಿಸುತ್ತಾ ಬಂದಿದೆ. ಕೊರಿಯದ ಯುದ್ಧಕ್ಕೆ ಔಪಚಾರಿಕ ಅಂತ್ಯ ನೀಡಲಾಗುವುದೇ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, ಮುಂದೆ ನೋಡುವ ಎಂದಷ್ಟೇ ಟ್ರಂಪ್ ಉತ್ತರಿಸಿದ್ದಾರೆ.

ಉತ್ತರ ಕೊರಿಯ ಅರ್ಥಪೂರ್ಣವಾದ ಯಾವುದಾದರೂ ನಿರ್ಧಾರವನ್ನು ತೆಗೆದುಕೊಂಡರೆ ಅದರ ಮೇಲೆ ಹೇರಲಾಗಿರುವ ನಿರ್ಬಂಧವನ್ನು ಸಡಿಲಗೊಳಿಸುವ ಸಾಧ್ಯತೆಯನ್ನು ಮುಕ್ತವಾಗಿರಿಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. ಸಭೆಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿರುವ ಕಿಮ್, ಈ ಸಮ್ಮೇಳನವನ್ನು ನಡೆಸಲು ನಾವು ಹಲವು ಅಡೆತಡೆಗಳನ್ನು ಮೀರಿ ಬಂದಿದ್ದೇವೆ. ಸದ್ಯ ನಾವು ಎರಡನೇ ಬಾರಿ ಭೇಟಿಯಾಗುತ್ತಿದ್ದು ಎಲ್ಲರೂ ಸ್ವಾಗತಿಸುವಂತ ಉತ್ತಮ ಪ್ರತಿಫಲ ಪಡೆಯುವ ಭರವಸೆ ನನಗಿದೆ ಮತ್ತು ಆ ನಿಟ್ಟಿನಲ್ಲಿ ನಾನು ನನಗೆ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News