ಟ್ರಂಪ್-ಕಿಮ್ ಶೃಂಗ ಸಭೆ ಹಠಾತ್ ಕೊನೆ: ಯಾವುದೇ ಒಪ್ಪಂದವಿಲ್ಲ; ಜಂಟಿ ಹೇಳಿಕೆಯಿಲ್ಲ

Update: 2019-02-28 17:15 GMT

ಹನೋಯಿ (ವಿಯೆಟ್ನಾಮ್), ಫೆ. 28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ ವಿಯೆಟ್ನಾಮ್ ರಾಜಧಾನಿ ಹನೋಯಿಯಲ್ಲಿ ನಡೆದ ಎರಡು ದಿನಗಳ ಶೃಂಗ ಸಮ್ಮೇಳನ ಗುರುವಾರ ಹಠಾತ್ತನೆ ಕೊನೆಗೊಂಡಿದೆ.

ಉಭಯ ನಾಯಕರು ತಮ್ಮ ಮಾತುಕತೆಗಳನ್ನು ಕಡಿತಗೊಳಿಸಿದರು ಹಾಗೂ ಒಪ್ಪಂದವೊಂದಕ್ಕೆ ಬರಲು ವಿಫಲರಾದರು.

ಉಭಯ ನಾಯಕರ ನಡುವಿನ ಶೃಂಗ ಸಮ್ಮೇಳನವು ಕಳೆದ ವರ್ಷದ ಜೂನ್‌ನಲ್ಲಿ ನಡೆದ ಮೊದಲ ಶೃಂಗ ಸಮ್ಮೇಳನದ ಮುಂದುವರಿದ ಭಾಗವಾಗಿತ್ತು. ಆದರೆ, ಟ್ರಂಪ್ ಮತ್ತು ಕಿಮ್‌ಗೆ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ, ನಿಗದಿತ ಕಾರ್ಯಕ್ರಮದಂತೆ, ಜಂಟಿ ಹೇಳಿಕೆಯೊಂದಕ್ಕೆ ಅವರು ಸಹಿ ಹಾಕಲಿಲ್ಲ.

‘‘ಕೆಲವು ಸಲ ನಾವು ನಡೆಯಬೇಕಾಗುತ್ತದೆ. ಇದು ಅಂಥ ಒಂದು ನಡಿಗೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

ಉತ್ತರ ಕೊರಿಯದೊಂದಿಗಿನ ಮಾತುಕತೆ ಮುರಿದು ಬಿದ್ದ ಹಿನ್ನೆಲೆಯಲ್ಲಿ, ಪರಮಾಣು ನಿಶ್ಶಸ್ತ್ರೀಕರಣ ಒಪ್ಪಂದವೊಂದಕ್ಕೆ ಬರುವ ಸಮಯ ಕೂಡಿಬಂದಿಲ್ಲ ಎಂದರು.

ಉತ್ತರ ಕೊರಿಯದ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಆ ದೇಶದ ಮೇಲೆ ವಿಧಿಸಲಾಗಿರುವ ಆರ್ಥಿಕ ದಿಗ್ಬಂಧನಗಳು ಮಾತುಕತೆಯಲ್ಲಿ ಅಡ್ಡ ಬಂದವು ಎಂದು ಅವರು ತಿಳಿಸಿದರು.

‘‘ಆರ್ಥಿಕ ದಿಗ್ಬಂಧನಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು ಎನ್ನುವುದು ಅವರ ಬೇಡಿಕೆಯಾಗಿತ್ತು. ಆದರೆ, ನಾವು ಹಾಗೆ ಮಾಡುವಂತಿಲ್ಲ’’ ಎಂದರು.

ಆದಾಗ್ಯೂ, ಇದಕ್ಕೂ ಮೊದಲು ಹಾಗೂ ಈ ಶೃಂಗಸಮ್ಮೇಳನದಲ್ಲಿ ನಾವು ಸಾಧಿಸಿರುವ ಪ್ರಗತಿಯ ಅಡಿಗಲ್ಲಿನ ಆಧಾರದಲ್ಲಿ, ಮುಂದೆ ಉತ್ತಮ ಫಲಿತಾಂಶವನ್ನು ನಾವು ಪಡೆಯಬಹುದಾಗಿದೆ ಎಂದು ಟ್ರಂಪ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News