ವಿಶ್ವಸಂಸ್ಥೆಯ ಉಗ್ರ ಪಟ್ಟಿಗೆ ಲಾದನ್ ಪುತ್ರ ಸೇರ್ಪಡೆ

Update: 2019-03-03 07:25 GMT

ವಿಶ್ವಸಂಸ್ಥೆ, ಮಾ. 2: ಅಲ್ ಖಾಯಿದ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಒಸಾಮ ಬಿನ್ ಲಾದನ್‌ನ ಮಗ ಹಂಝ ಬಿನ್ ಲಾದನ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ.

ಹಂಝ ಬಿನ್ ಲಾದನ್‌ನನ್ನು ಅಲ್-ಖಾಯಿದದ ಈಗಿನ ನಾಯಕ ಐಮನ್ ಅಲ್-ಝವಾಹಿರಿಯ ‘ಅತ್ಯಂತ ಸಂಭಾವ್ಯ ಉತ್ತರಾಧಿಕಾರಿ’ಯಾಗಿ ಗುರುತಿಸಲಾಗಿದೆ ಎಂದು ಭದ್ರತಾ ಮಂಡಳಿಯು ಹೇಳಿದೆ.

ನಿಷೇಧದ ಹಿನ್ನೆಲೆಯಲ್ಲಿ ಅವನ ಪ್ರಯಾಣದ ಮೇಲೆ ನಿಷೇಧ ವಿಧಿಸಲಾಗುತ್ತದೆ, ಅವನ ಸಂಪತ್ತುಗಳನ್ನು ಮುಟ್ಟುಗೋಲು ಹಾಕಲಾಗುತ್ತದೆ ಹಾಗೂ ಶಸ್ತ್ರಾಸ್ತ್ರ ವ್ಯವಹಾರ ನಿಷೇಧ ಜಾರಿಗೆ ಬರುತ್ತದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ‘1267 ಐಸಿಸ್ ಮತ್ತು ಅಲ್-ಖಾಯಿದ ದಿಗ್ಬಂಧನ ಸಮಿತಿ’ಯು 29 ವರ್ಷದ ಹಂಝನನ್ನು ಗುರುವಾರ ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸಿತು.

 ಭಯೋತ್ಪಾದಕ ದಾಳಿಗಳನ್ನು ನಡೆಸುವಂತೆ ಹಂಝ ಬಿನ್ ಲಾದನ್ ಅಲ್-ಖಾಯಿದ ಅನುಯಾಯಿಗಳಿಗೆ ಕರೆ ನೀಡಿದ್ದಾನೆ. ಅವನು ಅಲ್-ಝವಾಹಿರಿಯ ಅತ್ಯಂತ ಸಂಭಾವ್ಯ ಉತ್ತರಾಧಿಕಾರಿಯಾಗಿದ್ದಾನೆ ಎಂದು 15 ಸದಸ್ಯರ ಭದ್ರತಾ ಮಂಡಳಿ ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಹಂಝನ ಮೇಲೆ ವಿಶ್ವಸಂಸ್ಥೆ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ, ಎಲ್ಲ ಸರಕಾರಗಳು ವಿಳಂಬವಿಲ್ಲದೆ ಅವನ ಹಣ ಮತ್ತು ಇತರ ಹಣಕಾಸು ಸೊತ್ತುಗಳನ್ನು ಅಥವಾ ಆರ್ಥಿಕ ಸಂಪನ್ಮೂಲಗಳನ್ನು ಮುಟ್ಟುಗೋಲು ಹಾಕಬೇಕಾಗಿದೆ.

ಹಂಝ ತಲೆಗೆ 7.10 ಕೋಟಿ ರೂ. ಬಹುಮಾನ

ಇದಕ್ಕೂ ಒಂದು ದಿನ ಮೊದಲು, ಅವನ ಬಗ್ಗೆ ಮಾಹಿತಿ ನೀಡುವವರಿಗೆ ಒಂದು ಮಿಲಿಯ ಡಾಲರ್ (ಸುಮಾರು 7.10 ಕೋಟಿ ರೂಪಾಯಿ) ನಗದು ಬಹುಮಾನವನ್ನು ನೀಡುವುದಾಗಿ ಅಮೆರಿಕ ಪ್ರಕಟಿಸಿರುವುದನ್ನು ಸ್ಮರಿಸಬಹುದಾಗಿದೆ.

ಅದೇ ವೇಳೆ, ಹಂಝ ಬಿನ್ ಲಾದನ್‌ನ ಪೌರತ್ವವನ್ನು ನವೆಂಬರ್‌ನಲ್ಲಿ ರಾಜಾಜ್ಞೆಯ ಮೂಲಕ ಹಿಂದಕ್ಕೆ ಪಡೆಯಲಾಗಿದೆ ಎಂದು ಸೌದಿ ಅರೇಬಿಯ ಶುಕ್ರವಾರ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News